ಹೀಗಿದ್ದರು ನನ್ನಪ್ಪ…!

ಅಪ್ಪನ ದಿನ

ಹೀಗಿದ್ದರು ನನ್ನಪ್ಪ…!

ಅನಿತಾ ಪಿ. ತಾಕೊಡೆ

ಜೀವನದಲ್ಲಿ ತನ್ನ ಪಾಲಿನ ಜವಾಬ್ದಾರಿಗಳಿಗೆ ಹೆಗಲು ಕೊಡುವ ಜೀವ ಅದನ್ನು ನಿಭಾಯಿಸುವ ಸಲುವಾಗಿ ಪಡುವ ಪಾಡು ಅಷ್ಟಿಷ್ಟಲ್ಲ. ಅಮ್ಮನ ಸಹಕಾರವಿದ್ದರೂ ಅಪ್ಪನೆನಿಸಿಕೊಂಡವನೇ ಈ ಪಾತ್ರವನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸುವವನು. ತನ್ನನ್ನು ಅವಲಂಬಿಸಿದವರ ಇಷ್ಟಾರ್ಥಗಳ ಪೂರೈಕೆಗೆ ಯಾವ ಊರಿಗಾದರೂ ಸರಿ; ಹೋಗಿ ಎಂಥ ಕೆಲಸವನ್ನೂ ಮಾಡಲು ಸಿದ್ಧನಾಗುವವನೂ ಅವನೇ.  ಹೀಗೆ ಜೀವನ ಪರ್ಯಂತ ದುಡಿಮೆಯಲ್ಲಿಯೇ ಅಪ್ಪನ ಆಯಸ್ಸು ಕಳೆದು ಹೋಗುತ್ತದೆ. ತನ್ನ  ತ್ಯಾಗಮಯ ಬದುಕನ್ನು ತನ್ನವರು ಅರ್ಥ ಮಾಡಿಕೊಳ್ಳಬೇಕೆನ್ನುವ ಹಂಬಲದಲ್ಲಿಯೇ ಒಂದು ದಿನ ಆ ಜೀವ ತೆರೆಮರೆಗೆ ಸರಿದು ಬಿಡುತ್ತದೆ. ‘ಹೀಗಿದ್ದರು ನನ್ನಪ್ಪ…!’ ಅನ್ನುವ ಭಾವ ಮಾತ್ರ ಉಳಿದುಬಿಡುತ್ತದೆ.

ದುಡಿಮೆಯ ಸಲುವಾಗಿ ನನ್ನಪ್ಪ ಇಪ್ಪತ್ತೈದು ವರ್ಷಗಳ ಕಾಲ ಕೇರಳದಲ್ಲಿಯೇ ನೆಲೆಸಿದ್ದು, ಆರು ತಿಂಗಳಿಗೊಮ್ಮೆ ಮಾತ್ರ ಊರಿಗೆ ಬಂದು ಹೋಗುತ್ತಿದ್ದರು. ನನ್ನ ತಂಗಿಯ ಮದುವೆಯ ನಂತರ ಅವರು ಖಾಯಂ ಆಗಿ ಊರಿನಲ್ಲಿ ನೆಲೆಸುವ ಮನಸ್ಸು ಮಾಡಿದರು. “ಇಷ್ಟರವರೆಗೆ ದುಡಿದು ನಮ್ಮನ್ನೆಲ್ಲ ಸಾಕಿ ಬೆಳೆಸಿದಿರಿ. ಇನ್ನು ದುಡಿಯುವುದು ಬೇಡ ಅಪ್ಪಾ…!” ಎಂದರೂ ಕೇಳದೆ, ನಮ್ಮ ಊರಿನಲ್ಲಿಯೇ ಸಣ್ಣ ಹೊಟೇಲನ್ನು ಖರೀದಿಸಿ ನಡೆಸಲಾರಂಭಿಸಿದರು. ಅವರ ಖರ್ಚಿಗಾಗುವಷ್ಟು ವ್ಯಾಪಾರವಾಗುತ್ತೋ ಬಿಡುತ್ತೋ…? ಹೊಟೇಲಿಗೆ ಬರುವ ಗ್ರಾಹಕರ ಜೊತೆಗಿನ ಒಡನಾಟ ಅವರಿಗೆ ಖುಷಿ ನೀಡುತ್ತಿತ್ತು. ಹಾಗಾಗಿ ಅಪ್ಪನ ಇಚ್ಛೆಗೆ ಅಡ್ಡಿಯಾಗಲು ಮನಸ್ಸು ಒಪ್ಪುತ್ತಿರಲಿಲ್ಲ. ಹೊಟೇಲಿನ ದುಡಿಮೆಯಿಂದ ಲಾಭದ ಬದಲು ನಷ್ಟವನ್ನೇ ಭರಿಸಬೇಕಾದಾಗ ಕೆಲವೊಮ್ಮೆ, “ಅಪ್ಪ ಸಾಕು ದುಡಿದಿದ್ದು. ಮನೆಯಲ್ಲಿಯೇ ಇರಿ. ನಿಮ್ಮ ಖರ್ಚಿಗೆ ನಾವು ಕೊಡುತ್ತೇವೆ…!” ಎಂದರೆ ಅವರದೊಂದೇ ಮಾತು, “ಕೈಕಾಲು ಗಟ್ಟಿ ಇರುವವರೆಗೆ ನನ್ನ ಖರ್ಚಿಗೆ ನಾನೇ ಸಂಪಾದಿಸಬೇಕು ಮಗಾ. ನನಗೆ ಯಾರ ಎದುರು ಕೈ ಚಾಚೋಕೆ ಇಷ್ಟವಿಲ್ಲ” ಅಂದಾಗ ಏನೂ ಹೇಳಲಾಗದೆ ಸುಮ್ಮನಾಗುತ್ತಿದ್ದೆವು. ಅವರ ಅಂಥ ಸ್ವಾಭಿಮಾನದ ಬದುಕಿನ ಪಾಠ, ಅವರ ಐವರು ಮಕ್ಕಳ ಮೇಲೂ ಗಾಢವಾದ ಪ್ರಭಾವ ಬೀರಿ ದಾರಿದೀಪವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.

ಗ್ರಾಹಕರ ನಡುವಿನ ಬಾಂಧವ್ಯ

ಅಪ್ಪನ ಹೊಟೇಲಿಗೆ ಬಂದವರು ಕಾಸಿಲ್ಲದಿದ್ದರೂ ಚಹಾ ತಿಂಡಿಯನ್ನು ಅಪೇಕ್ಷಿಸಿದರೆ ಅವರು ಇಲ್ಲವೆನ್ನುತ್ತಿರಲಿಲ್ಲ. ಹಳ್ಳಿಯ ಪರಿಸರವಾದ್ದರಿಂದ ಹೆಚ್ಚಿನವರು ‘ನಾಳೆ ಕೊಡುತ್ತೇನೆ’ ಎಂದು ಹೇಳಿ ಹೋಗುವವರೇ ಹೆಚ್ಚು. ಆನಂತರ ಅವರು ಕೊಡುತ್ತಾರೋ, ಇಲ್ಲವೋ…? ಅದಕ್ಕೆಲ್ಲ ಅಪ್ಪ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಪ್ಪನಿಗೆ ಚಿಕ್ಕ ಮಕ್ಕಳೆಂದರೆ ಪ್ರೀತಿ. ಅಂಥ ಮಕ್ಕಳೇನಾದರೂ ಹೊಟೇಲಿಗೆ ಬಂದರೆ ಅವರಿಗೆ ಗೋಳಿಬಜೆ, ಪೂರಿ ತಿನ್ನಿಸಿ ಕಳುಹಿಸುತ್ತಿದ್ದರು. ನನ್ನ ಪರಿಚಿತರು ಯಾರಾದರೂ ಹೊಟೇಲಿಗೆ  ಹೋಗಿ, “ನಿಮ್ಮ ಮಗಳ ಫ್ರೆಂಡ್ ನಾನು” ಎಂದು ಹೇಳಿದರೆ ಸಾಕು; ಅವರಿಗೆ ಬರ್ಜರಿ ಆತಿಥ್ಯ. ಹೊಟೇಲಿಗೆ ಹೋಗಿ ಬಂದವರೆಲ್ಲ ನನ್ನ ಅಪ್ಪನ ಗುಣಗಾನ ಮಾಡುವಾಗ ನನಗೂ ಹೆಮ್ಮೆಯೆನಿಸುತ್ತಿತ್ತು. ಸಂಬಂಧಿಕರೇನಾದರೂ ಬಂದರೆ ಅವರಿಗೆ ಚಹಾ ತಿಂಡಿಯ ಜೊತೆಗೆ ಮನೆಗೆ ಕೊಂಡು ಹೋಗಲು ಪಾರ್ಸೆಲ್ ಕೂಡ ಸಿಗುತ್ತಿತ್ತು. ಸಂಜೆ ಉಳಿದ ತಿಂಡಿಯನ್ನು ತಿನ್ನಲು ಕಾಯುವ ಮಕ್ಕಳಿಗೆ ಅವರೆಂದೂ ನಿರಾಶೆ ಮಾಡುತ್ತಿರಲಿಲ್ಲ. ಚೌತಿ, ದೀಪಾವಳಿ, ಯುಗಾದಿಯ ದಿನದಂದು ಹೊಟೇಲಿನಲ್ಲಿ ಪಾಯಸ ಮಾಡಿ ಬಂದ ಗ್ರಾಹಕರಿಗೆಲ್ಲ ಉಚಿತವಾಗಿ ಕೊಡುವುದರ ಮೂಲಕ ಅಪ್ಪ ಹೊಟೇಲಿನಲ್ಲಿಯೂ ಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತಿದ್ದರು. ಆಗೆಲ್ಲ ನಾವು ಹೊಟೇಲಿನಲ್ಲಾಗುವ ನಷ್ಟವನ್ನು ಲೆಕ್ಕ ಹಾಕುತ್ತಿದ್ದರೆ ಅಪ್ಪನಿಗೆ ಅದು ಯಾವುದರ ಪರಿವೆಯೇ ಇರುತ್ತಿರಲಿಲ್ಲ.

ಮೂಕ ಜೀವಿಗಳ ಮೇಲಿನ ಪ್ರೀತಿ

ಪ್ರಾಣಿಗಳ ಜೊತೆಗೆ ಅಪ್ಪನ ಒಡನಾಟ  ಬೆರಗು ಮೂಡಿಸುವಂಥದ್ದು. ಕಾಗೆ,ಗುಬ್ಬಚ್ಚಿ ಮತ್ತು ಗೀಜಗ ಪಕ್ಷಿಗಳು ಪ್ರತಿನಿತ್ಯ ಬೆಳಿಗ್ಗೆ ಆರು ಗಂಟೆಗೆ  ಅಪ್ಪ ಹೊಟೇಲು  ತೆರೆಯುವುದನ್ನೇ ಕಾಯುತ್ತಿದ್ದವು. ಅವರು ನೀಡುವ ಅಕ್ಕಿ ಕಾಳುಗಳನ್ನು ತಿಂದು ಅಲ್ಲೇ ಪಕ್ಕದ ಗಿಡಮರಗಳಲ್ಲಿ ಚಿಣ್ಣಾಟವಾಡುತ್ತಿದ್ದವು. ಹೊಟೇಲಿಗೆ ಬರುವ ಖಾಯಂ ಅತಿಥಿಗಳೆಂದರೆ ಮೂರು ಹಸುಗಳು. ಒಂದು ಒಂಬತ್ತು ಗಂಟೆ ಸುಮಾರಿಗೆ ಬಂದರೆ, ಮತ್ತೊಂದು ಹತ್ತೂವರೆಯ ಹೊತ್ತಿಗೆ ಬರುತ್ತಿತ್ತು. ಮೂರನೆಯದು ಹನ್ನೆರಡರ ಒಳಗೆ ಬರುತ್ತಿತ್ತು. ಅವುಗಳು ಬರುವ ಸಮಯವನ್ನು ಅಪ್ಪನೂ ಕಾಯುತ್ತಿದ್ದರು. ಒಳಗಡೆ ಕೆಲಸ ಮಾಡುವಾಗಲೂ ಅಪ್ಪನ ದೃಷ್ಟಿ ಬಾಗಿಲಿನತ್ತಲೇ ಇರುತ್ತಿತ್ತು. ಪ್ರತಿದಿನ ಇದೇ ಸಮಯಕ್ಕೆ ಆ ಹಸುಗಳು ರಾಜಮರ್ಜಿಯಲ್ಲಿ  ಬಂದು ಬಾಗಿಲಿನ ಬಳಿ ನಿಂತು ಗಾಂಭೀರ್ಯದಿಂದ ಅಂಬಾ…! ಎಂದು ಕರೆಯುತ್ತಿದ್ದವು. ಅಪ್ಪ ಅವುಗಳ ಬಾಯಿಗೆ ಕೊಡುವ ಗೋಳಿಬಜೆ, ವಡೆ ಮತ್ತು ಪೂರಿಯನ್ನು ತಿಂದು ಖುಷಿಯಿಂದ ಹೊರಟು ಹೋಗುತ್ತಿದ್ದವು. ಮೂಕ ಜೀವಿಗಳಾದ ಅವುಗಳ ಸಮಯಪ್ರಜ್ಞೆ ಮತ್ತು ಯಾವುದಾದರೂ ಒಂದು ತಿಂಡಿಯನ್ನು ತಿನ್ನಿಸಿದರೆ ಸಾಕು, ಅಷ್ಟಕ್ಕೆ ತೃಪ್ತಿ ಪಟ್ಟುಕೊಂಡು ಹೊರಟು ಹೋಗುವ ಅವುಗಳ ನಿಯತ್ತು ನಿಜಕ್ಕೂ ಸೋಜಿಗವೆನಿಸುತ್ತಿತ್ತು. ಹೊಟೇಲಿನ ಹೊರಬದಿಯಲ್ಲಿ ಬೇರೆಯವರ ಮನೆಯ ಎರಡು ನಾಯಿಗಳು ಅಪ್ಪನ ಕೈಯ ಅನ್ನ  ತಿಂದ ಋಣಕ್ಕೆ ದಿನವಿಡೀ ಕಾಯುತ್ತಿದ್ದವು. ಆದರೆ ಹೊಟೇಲಿಗೆ ಬರುವ ಗ್ರಾಹಕರಿಗೆ ಯಾವುದೇ ತೊಂದರೆಯನ್ನು ಮಾಡುತ್ತಿರಲಿಲ್ಲ. ಹೊಟೇಲನ್ನೇ ಪರ್ಮನೆಂಟ್ ವಾಸಸ್ಥಾನವನ್ನಾಗಿ ಮಾಡಿಕೊಂಡ ಪ್ರಾಣಿಗಳೆಂದರೆ  ಮೂರು ಬೆಕ್ಕುಗಳು. ಅಪ್ಪ ತಂದು ಸಾಕಿದ್ದಲ್ಲ. ತಾವಾಗಿ ಬಂದು ಠಿಕಾಣಿ ಹೂಡಿದವುಗಳು. ಬೆಳಿಗ್ಗೆಯಿಂದ ಸಂಜೆಯವರೆಗೆ ಅಪ್ಪ ಮಾಡುವ ಎಲ್ಲ ತಿಂಡಿಗಳೂ ಅವುಗಳಿಗೆ ಸಿಗುತ್ತಿತ್ತು. ಜೊತೆಗೆ ಇಲಿ, ಹಲ್ಲಿಗಳನ್ನು ತಿಂದು ದಷ್ಟಪುಷ್ಟವಾಗಿ ಬೆಳೆದಿದ್ದವು. ಅಪ್ಪನ ಹೊಟೇಲು ನಮ್ಮ ಮನೆಯಿಂದ ಕೇವಲ ಒಂದು ಕಿಲೋಮೀಟರ್ ಮಾತ್ರವೇ ದೂರವಿದ್ದುದರಿಂದ  ಊರಿಗೆ ಹೋದಾಗ ಅವರಿಗೆ ಸಹಾಯ ಮಾಡಲು ಹೊಟೇಲಿಗೆ ಹೋಗುತ್ತಿದ್ದೆ. ಹಾಗಾಗಿಯೇ ಅಪ್ಪನ ಇಂಥ ಗುಣ ಸ್ವಭಾವವನ್ನು ಹೆಚ್ಚು ಹತ್ತಿರದಿಂದ ತಿಳಿಯಲು ಸಾಧ್ಯವಾಯಿತು.

ಸಾಮಾಜಿಕ ವಿಷಯಗಳ ಬಗೆಗಿನ ಆಸಕ್ತಿ

ಹೊಟೇಲಿಗೆ ಪ್ರತಿದಿನ ಮೂರು ಕನ್ನಡ ಪತ್ರಿಕೆಗಳು ಬರುತ್ತಿದ್ದವು. ಅವುಗಳಲ್ಲಿ ಬರುವ ಎಲ್ಲ ವಿಷಯಗಳನ್ನು ಅಪ್ಪ ಓದುತ್ತಿದ್ದರು. ಮಾತ್ರವಲ್ಲ, ಹೊಟೇಲಿಗೆ ಬರುವ ಗ್ರಾಹಕರೊಂದಿಗೆ ಕೆಲವೊಂದು ವಿಷಯಗಳ ಕುರಿತು ಚರ್ಚೆಯೂ ನಡೆಯುತ್ತಿತ್ತು.  ಪತ್ರಿಕೆ ಓದಲೆಂದೇ ಕೆಲವರು ಪ್ರತಿದಿನ ಬರುತ್ತಿದ್ದರು. ಅಲ್ಲೊಂದು ಚರ್ಚಾಕೂಟವೇ ಸೃಷ್ಟಿಯಾಗುತ್ತಿತ್ತು. ಹೆಚ್ಚು ಹೊತ್ತು ಕುಳಿತು ಚರ್ಚೆಯಲ್ಲಿ ಪಾಲ್ಗೊಂಡವರಿಗೆ ಉಚಿತ ಚಹಾ ಸಿಗುತ್ತಿತ್ತು. ನನ್ನ ಕತೆ, ಲೇಖನಗಳೇನಾದರೂ ಪತ್ರಿಕೆಯಲ್ಲಿ ಬಂದರೆ ಅಪ್ಪನ ಆನಂದಕ್ಕೆ ಪಾರವೇ ಇಲ್ಲ. ಹೊಟೇಲಿಗೆ ಬರುವವರಿಗೆಲ್ಲ ಓದಲು ಕೊಟ್ಟು ತನ್ನ ಮಗಳ ಗುಣಗಾನವನ್ನು ಮಾಡುತ್ತಿದ್ದರು. ಅವರ ಖುಷಿ ಅಷ್ಟಕ್ಕೆ ತಣಿಯುತ್ತಿರಲಿಲ್ಲ. ಮನೆಗೆ ಹೋಗಿ ಅಮ್ಮನಿಗೂ ತೋರಿಸಿ ಇಬ್ಬರೂ ಓದಿ ಆದ ಮೇಲೆ ನನಗೆ ಕರೆ ಮಾಡುತ್ತಿದ್ದರು. ತಮ್ಮ ಮೆಚ್ಚುಗೆಯ ಜೊತೆಗೆ ಇತರರು ಓದಿ ಹೇಳಿದ ಅಭಿಪ್ರಾಯಗಳನ್ನೂ ನನಗೆ ಹೇಳುತ್ತಿದ್ದರು. ಆಗ ನನಗೂ ಖುಷಿಯಾಗುತ್ತಿತ್ತು. ಅಪ್ಪ ಅಮ್ಮನ ಸಲುವಾಗಿಯೇ ಊರಿನ ಪತ್ರಿಕೆಗಳಿಗೆ ನನ್ನ ಬರಹಗಳನ್ನು ಕಳುಹಿಸುತ್ತಿದ್ದೆ. ಅವರ ಸಂಭ್ರಮ ನನಗೆ ಸಾರ್ಥಕ್ಯಭಾವವನ್ನು ಮೂಡಿಸುತ್ತಿತ್ತು.

ಹೊಟೇಲು ಮುಚ್ಚಲೇಬೇಕಾದ ಪರಿಸ್ಥಿತಿ

ನಾಲ್ಕು ವರ್ಷಗಳ ಹಿಂದೆ ಸಕ್ಕರೆ ಕಾಯಿಲೆಯಿಂದ ಅಪ್ಪನ ದೇಹದ ಸ್ಥಿತಿ ಹದಗೆಟ್ಟು  ಹೊಟೇಲು ನಡೆಸಲು ಕಷ್ಟವಾಗಿ ಮುಚ್ಚಲೇಬೇಕಾಯ್ತು. ಇನ್ನಾದರೂ ಅಪ್ಪ ಮನೆಯಲ್ಲಿ ಹಾಯಾಗಿ ಇರಲೆಂದು ನಾವು ಆಶಿಸಿದ್ದೆವು. ಆದರೆ ಅವರ ಖಾಯಿಲೆ ಉಲ್ಭಣಿಸುತ್ತಲೇ ಹೋಯಿತು. ನಿರಂತರ ಚಟುವಟಿಕೆಯಲ್ಲಿಯೇ ಇದ್ದ ಅಪ್ಪ, ಮನೆಯಲ್ಲಿದ್ದರೂ ಹೊಟೇಲು ಮುಚ್ಚಿದ ಚಿಂತೆ ಅವರನ್ನು ಕಾಡುತ್ತಲೇ ಇತ್ತು. ದಿನ ಕಳೆದಂತೆ ದೃಷ್ಟಿಯೂ ಮಂದವಾಗಿ ಪತ್ರಿಕೆಯನ್ನು ಓದಲಾಗದೆ ದೂರದರ್ಶನದಲ್ಲಿ ಬರುವ ಸುದ್ದಿಯನ್ನೇ ಕೇಳಲಾರಂಭಿಸಿದರು. ಆದರೆ ನನ್ನ ಬರಹಗಳು ಊರಿನ ಪತ್ರಿಕೆಯಲ್ಲಿ ಪ್ರಕಟವಾದಾಗ ಅವರಿಗೆ ಓದಲಾಗದಿದ್ದರೂ ಅಮ್ಮನಲ್ಲಿ ಓದಲು ಹೇಳಿ ನಾನೇನು ಬರೆದಿರುವೆನೆಂದು ತಿಳಿದುಕೊಳ್ಳುತ್ತಿದ್ದರು. ಮುಂಬೈಯಲ್ಲಿ ಏನೇ ಅನಾಹುತಗಳು ನಡೆದರೂ ನನಗಿಂತ ಮೊದಲು ಅಪ್ಪನಿಗೆ ತಿಳಿಯುತ್ತಿತ್ತು. ಮರುಕ್ಷಣವೇ ಕರೆ ಮಾಡಿ ನನ್ನ ಯೋಗಕ್ಷೇಮವನ್ನು  ತಿಳಿದುಕೊಳ್ಳುತ್ತಿದ್ದರು. ನಾನು ಕರೆ ಮಾಡಿದಾಗಲೆಲ್ಲ ರಾಜಕೀಯ ಹಾಗೂ ಸಮಾಜದಲ್ಲಿ ನಡೆಯುವಂಥ ರೋಚಕ ವಿಚಾರಗಳ ಕುರಿತು ಚರ್ಚಿಸುತ್ತಿದ್ದರು. ಅವರು ಹೇಳಿದ್ದನ್ನು ನಾನೂ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದೆ. ದೂರದರ್ಶನದಲ್ಲಿ ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ, ದೇಶ ವಿದೇಶಗಳ ಸುದ್ದಿ ಸಮಾಚಾರಗಳನ್ನು ನೋಡುತ್ತ, ನಂತರದ ದಿನಗಳಲ್ಲಿ  ಹೊಟೇಲಿನ ಚಿಂತೆಯನ್ನು ನಿಧಾನವಾಗಿ ಮರೆಯತೊಡಗಿದರು.

ನನ್ನಪ್ಪನೆಂದರೆ ಊರಿನವರೆಲ್ಲರಿಗೂ ಅಕ್ಕರೆ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಅವರಿದ್ದ ರೀತಿಯೇ ಹಾಗೆ. ನೋವು ಮಾಡಿದವರಿಗೂ ಕೇಡು ಬಯಸುತ್ತಿರಲಿಲ್ಲ. ಅವರು ಲಾಭ ನಷ್ಟಗಳ ಬಗ್ಗೆ ಲೆಕ್ಕಾಚಾರವನ್ನು ಇಟ್ಟುಕೊಳ್ಳದೆ, ಜೀವನದ ವಾಸ್ತವತೆಯನ್ನು ಅರಿತುಕೊಂಡವರು. ಇಲ್ಲಿ ಯಾವುದು ಮುಖ್ಯ? ನಮ್ಮ ಆಸೆ ಆಕಾಂಕ್ಷೆಗಳ ಮಿತಿಗಳೆಷ್ಟು? ಈ ಸಮಾಜದ ಜನರ ಜೊತೆಗೆ ಯಾವ ರೀತಿ ಬದುಕಬೇಕು? ನಾವು ಅಳಿದ ಮೇಲೂ ಇಲ್ಲಿ ಶಾಶ್ವತವಾಗಿ ಉಳಿಯುವಂಥದ್ದು ಏನು…! ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡು ಸಾರ್ಥಕತೆಯ ಬಾಳನ್ನು ಜೀವಿಸಿದವರು. ಹಳ್ಳಿಯಲ್ಲಿ ಹೊಟೇಲು ಆರಂಭಿಸಿ ಹಣ ಗಳಿಸದಿದ್ದರೂ ನೂರಾರು ಜನರ ಪ್ರೀತಿ ವಿಶ್ವಾಸವನ್ನು  ಗಳಿಸಿ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸಿರುವ ಅವರು ಸ್ವಭಾವತಃ ಶ್ರೀಮಂತರು. ಅವರ ಜೀವನ ಪ್ರೀತಿ ಎಲ್ಲರಿಗೂ ಆದರ್ಶಪ್ರಾಯವಾದುದು.  ಇಂದಿಗೂ ಊರ ಜನರೆಲ್ಲ ನನ್ನ ಅಪ್ಪನನ್ನು ಹೊಗಳುವಾಗ ನಾನು ಅವರ ಮಗಳು ಎಂಬ ಖುಷಿ ಒಂದೆಡೆಯಾದರೆ, ಅವರೀಗ ನಮ್ಮ ಜೊತೆ ಇಲ್ಲವಲ್ಲಾ…! ಎನ್ನುವ ದುಃಖವೂ ಕಾಡುತ್ತದೆ.


*****************************

5 thoughts on “ಹೀಗಿದ್ದರು ನನ್ನಪ್ಪ…!

  1. ಒಳ್ಳೆಯ ಚಿತ್ರಣ…
    ನನ್ನ ತಂದೆಯ ಬಗ್ಗೆಯೂ ಬರೆಯಬೇಕು ಬರೆಯಬೇಕು ಎಂದುಕೊಂಡಿದ್ದೆ.. ಇನ್ನೂ ಆಗಿಲ್ಲ…ಅಪ್ಪ ಇರುವಾಗ ತಿಳಿದುಕೊಂಡದ್ದಕ್ಕಿಂತ ಅವರು ತೀರಿಕೊಂಡ ಬಳಿಕ ಅಮ್ಮ ಆಗಾಗ ಒಂದಿಷ್ಟು ಮಾಹಿತಿ ನೀಡಿದುದರಲ್ಲೇ ನನಗೆ ಅಪ್ಪ ಹೇಗಿದ್ದರು…ಅವರ ತಾಯಿ ತಂದೆ ಒಡಹುಟ್ಟಿದವರಿಗಾಗಿ ಅವರು ಮಾಡಿದ್ದ ತ್ಯಾಗ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವಂತಾಗಿತ್ತು.
    ಅಪ್ಪ ಹೋಗಿ ಕಳೆದ ಎಪ್ರಿಲ್ ಗೆ ಇಪ್ಪತ್ತೊಂದು
    ಅಮ್ಮ ಇನ್ನಿಲ್ಲವಾಗಿ ಕಳೆದ ಫೆಬ್ರವರಿಗೆ ಹತ್ತು

    ವರ್ಷಗಳೇ ಸಂದಿವೆ.

    ಅಪ್ಪ, ಅಮ್ಮ ನ ದಿನಾಚರಣೆ ಯ
    ನೆಪ ಬಿಟ್ಟಾದರೂ ಒಮ್ಮೆ ಬರೆಯಬೇಕು

    ಬರೆಯಬೇಕು

    ಅಂತ ಒಳಗೊಳಗೇ ಒತ್ತಾಸೆ ಇದೆ….

    1. ತುಂಭ ಅದ್ಭುತವಾದ ಬರಹ ಕಣ್ಣು ತುಂಬಿ ಬಂತು ಮನಸಿನ ಭಾವನೆಗಳು ಬರವಣಿಗೆಯಲ್ಲಿ ಹೊರ ಬಂದಾಗ ಮನಸು ಎಷ್ಟು ಹಗುರ ಎನಿಸುತ್ತದೆ ಅನ್ನೋದು ಒಬ್ಬ ಲೇಖಕನಿಗೆ ಮಾತ್ರ ಗೊತ್ತು… ಕೆಲವರು ತಮ್ಮದುಃಖ್ಖವನ್ನು ಇನ್ನೊಬ್ಬರಲ್ಲಿ ಹೇಳಿ ಮನಸು ಹಗುರ ಮಾಡಿದರೆ ಲೇಖಕರು ತಮ್ಮ ಬರವಣಿಗೆಯಲ್ಲಿ ತಮ್ಮ ದುಃಖ್ಖ ವನ್ನು ಹೇಳಿ ಮನಸು ಹಗುರ ಮಾಡುತ್ತಾರೆ.. ಲೇಖಕರಿಗೆ ಬರಹವೇ ಸ್ನೇಹಿತ…

  2. ಅನಿತಾ, ಅಪ್ಪನ ಬಗ್ಗೆ ಸೊಗಸಾಗಿ ಬರೆದಿದ್ದೀರಿ.

    ಶ್ರೀನಿವಾಸ್ ಅಣ್ಣ ಯಾವಾತೂ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ.

  3. ನಿಮ್ಮ ಮತ್ತು ಅಪ್ಪನವರ ಮಧುರ ಭಾಂಂದವ್ಯಾ ತುಂಬಾ ಖುಷಿಯಾಗಿ ಮೂಡಿ ಬಂದಿದೆ. Father’s Day ಈ ಶುಭ ಮಾಹುರತದಲ್ಲಿ ನಿಮ್ಮ ಲೇಖನ ಸಮಾಯೋಚಿತವಾಗಿದೆ. ಧನ್ವವಾದದಗಳು ಅನಿತರವರೇ Adv R.M. Bhandari, Mumbai.

  4. ಉತ್ತಮ ಲೇಖನ..ಅಪ್ಪನ ಬಗ್ಗೆ ವರ್ಣಿಸಲು ಪದಗಳೆ ಸಾಲದು..ನಾನೂ ಒಮ್ಮೆ ಅವರನ್ನು ಭೇಟಿಯಾಗಿದ್ದೆ.

Leave a Reply

Back To Top