ಪೂರ್ವಿಯ ವಿಮಾನಯಾನ

ಪುಸ್ತಕ ಸಂಗಾತಿ

ಪೂರ್ವಿಯ ವಿಮಾನಯಾನ

ವಿಮಾನ ಯಾನದ ಮೂಲಕ

ಮಕ್ಕಳನ್ನು ಖುಷಿಯಲ್ಲಿ

ತೊಯ್ಯಿಸಿದ್ದಾರೆ...

ಜೂನ ಅಂದರೆ ಮಳೆ ಪ್ರಾರಂಭ. ಮಳೆ ಹನಿಗಳು ಪಟಪಟ ಬೀಳತೊಡಗಿ ದೋದೋ ಎಂದು ಹೊಯ್ಯುತ್ತಿದ್ದರೆ ಗಿಡಗಳ ಎಲೆಗಳೆಲ್ಲ ಸ್ನಾನ ಮಾಡಿಕೊಳ್ಳುತ್ತ ಫಳ ಫಳ ಹೊಳೆಯುತ್ತ ಇರುತ್ತವೆ. ನೀರು ಕೊಳೆಗಳನ್ನೆಲ್ಲ ಕೊಚ್ಚಿಕೊಂಡು ಹೋಗಿ ನೆಲವನ್ನೆಲ್ಲ ಶುಚಿ ಗೊಳಿಸುತ್ತಿದ್ದಹಾಗೆ ಹಸಿರು ಚಿಗುರಿ ಬಯಲೆಲ್ಲ ಹಸಿರಾಗಿ ಕಂಗೊಳಿಸುತ್ತದೆ. ಈ ಬಯಲನ್ನು ನೋಡಿದರೆ ಶಾಲೆಯ ಆಟದ ಮೈದಾನದ ತುಂಬಾ ಮಕ್ಕಳು ಆಟವಾಡುತ್ತಿರುವಾಗ ಎಷ್ಟು ಖುಷಿಯಾಗುತ್ತದೋ ಅಷ್ಟು ಖುಷಿಯಾಗುತ್ತದೆ. ಹಾಂ, ಮಕ್ಕಳು ಅಂದಕೂಡಲೆ ಅಲ್ಲೆಲ್ಲ ಖುಷಿಯೇ ತುಂಬಿರೋದು. ಅವರು ನಗಲಿ ಅಳಲಿ ಹಟಮಾಡಲಿ ಜುಟ್ಟು ಹಿಡಿದು ತಲೆಯ ಹತ್ತಿ ಕುಣಿಯಲಿ… ಅವಕ್ಕೆ ಹೊರಗೆ ಏನೇ ಪ್ರತಿಕ್ರಿಯೆ ತೋರಿಸಿದರೂ ಒಳಗೆಲ್ಲಾ ತುಂಬಿಕೊಂಡಿರುವುದು ಖುಷಿ. ಎಲ್ಲರಿಗೂ ಬಾಲ್ಯ ನೆನಸಿಕೊಂಡಾಗ ಒಂದು ರೀತಿಯ ಚೈತನ್ಯ ನಮ್ಮಲ್ಲಿ ಮೂಡುತ್ತದೆ ಎಂದು ನನಗೆ ಅನಿಸುತ್ತದೆ. ಬಾಲ್ಯದ ಏನೆಲ್ಲಾ ಕಸರತ್ತುಗಳು, ಆಟ, ಗೆಳೆತನ, ಪ್ರೀತಿ ಎಲ್ಲ ನಮಗೆ ಏನೇನೋ ಶಕ್ತಿ ಮದ್ದನ್ನು ತಿನ್ನಿಸುತ್ತಿರುತ್ತದೆ. ಹಾಗಾಗಿಯೇ ಬಾಲ್ಯವನ್ನು ನೆನಪಿಸಿಕೊಳ್ಳುತ್ತ… ಈಗಿನ ಮಕ್ಕಳನ್ನು ನೋಡುತ್ತ ಬಾಲ್ಯದ ಬಯಲಿನಲ್ಲಿ ಓಡಾಡಿ ಒಂದಿಷ್ಟು ಮೂಟೆ ಕಟ್ಟಿಕೊಂಡು ಮಕ್ಕಳ ಮುಂದೆ ಇಡುವುದೊಂದು ಸಂಭ್ರಮ.

  ಇದೆಲ್ಲಾ ಯಾಕೆ ಬರೆದೆನೆಂದರೆ ಕನ್ನಡದ ಮಕ್ಕಳಿಗೆ ತುಂಬಾ ಆಪ್ತವಾಗುವ ಹೆಸರು ಟಿ.ಎಸ್.ನಾಗರಾಜ ಶೆಟ್ಟಿ ಅವರು. ಅವರ ಪದ್ಯಗಳು ಮಕ್ಕಳ ಮನದ ಕಪಾಟಿನಲ್ಲಿ… ಪಾಟಿಚೀಲದಲ್ಲಿ… ಅವರ ತಿಂಡಿ ಡಬ್ಬದಲೂ ತುಂಬಿಕೊಂಡಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡುವ ಬಾಲಸಾಹಿತ್ಯ ಪುರಸ್ಕಾರದವರೆಗೂ ವಿವಿಧ ಪುರಸ್ಕಾರಗಳನ್ನು ಹೊಂದಿ ಗೌರವಿಸಲ್ಪಟ್ಟಿರುವ ಶೆಟ್ಟಿ ಅವರು ಈಗ ತನ್ನ ಮೊಮ್ಮಗಳಾದ ಪೂರ್ವಿಯೊಂದಿಗೆ ವಿಮಾನ ಯಾನ ಮಾಡುತ್ತ ಮಳೆಯ ಹನಿ ಹೇಗೆ ಎಲ್ಲೆಡೆ ಹರಡಿ ತೊಯ್ಯಿಸುತ್ತಿದೆಯೋ ಹಾಗೆ ಮಕ್ಕಳನ್ನು ಖುಷಿಯಲ್ಲಿ ತೊಯ್ಯಿಸುವ ಪ್ರಯತ್ನ  ಮಾಡಿದ್ದಾರೆ. ಹೌದು ನಾನು ಅವರು ಇತ್ತೀಚೆಗೆ ಪ್ರಕಟಿಸಿರುವ ‘ಪೂರ್ವಿಯ ವಿಮಾನಯಾನ’ ಮಕ್ಕಳ ಕವನಸಂಕಲನದ ಕುರಿತು ಹೇಳುತ್ತಿದ್ದೇನೆ.

 ಹಳ್ಳಿಯ ಮಕ್ಕಳಿಗೆ ತಮ್ಮ ಆಟ ಓಟಗಳಿಗೆ ವಿಸ್ತಾರವಾದ ಪರಿಸರ ದೊರೆಯುತ್ತದೆ. ಅವರು ಗುಡ್ಡ ಹತ್ತಿ ಮರ ಏರಿ ಕೆರ ಈಜಿ ಏನೇನೋ ಮಾಡುತ್ತಾರೆ. ಆದರೆ ಪೇಟೆಯ ಪರಿಸರದಲ್ಲಿ ಇವೆಲ್ಲ ಸಿಗುವುದು ಕಷ್ಟ. ಹಳ್ಳಿಯವರಾಗಲಿ ಪೇಟೆಯವರಾಗಲಿ ಮಕ್ಕಳು ಮಕ್ಕಳೇ. ಮಕ್ಕಳು ತಮಗೆ ಸಿಕ್ಕಿದ ಪರಿಸರವನ್ನೇ ತಮ್ಮ ಆಟದ ಅಂಗಳವಾಗಿಸುವ, ಅಲ್ಲೇ ಖುಷಿ ಹೊಂದುವ ಚಟುವಟಿಕೆ ಮಾಡಿಯೇ ಮಾಡುತ್ತಾರೆ. ನಾಗರಾಜ ಶೆಟ್ಟರು ಪೇಟೆಯ ಮಕ್ಕಳ ಇಂತಹ ಚಟುವಟಿಉಕೆ ಗಮನಿಸುತ್ತಾ… ‘ಕಾರಿನಲ್ಲಿ ಪಾರು’ ಎನ್ನುವ ಪದ್ಯ ಬರೆದಿದ್ದಾರೆ. ಇಲ್ಲಿ ಮಗು ಪಾರು ತನ್ನ ಅಪ್ಪನ ಕಾರನ್ನೇ ಆಟದ ಪ್ರಪಂಚಕ್ಕೆ ಬಳಸಿಕೊಂಡಿದ್ದಾಳೆ. ಕಾರಿನೊಳಗೇ ವಾಕು ನಾಯಿಮರಿ ಸಂಗಡ ಟಾಕು ಎಲ್ಲ ನಡೆಯುತ್ತದೆ. ತನ್ನ ಪುಟ್ಟ ನಾಯಿಯೊಂದಿಗೆ ಕಾರಿನಲ್ಲಿ ಕುಳಿತಿರುವ ಮಗು ಕಾರಿನ ಕಿಟಕಿ ತೆಗೆದು ಬೊಗಳುವುದು, ಕಾರಿನಲ್ಲಿರುವ ಪೋರ್ಟಬಲ ಟಿವಿ ನೋಡುವುದು ಎಲ್ಲ ಮಾಡುತ್ತ ಮ್ಯೂಸಿಕ್ ಕೂಡಾ ಕೇಳುತ್ತ ಖುಷಿಹೊಂದುತ್ತಾಳೆÉ.

ಪ್ಲೇಯರನ್ನು ಆನ ಮಾಡಿ

ಕೇಳಿಸ ಬೇಕು ಮ್ಯೂಸಿಕ್ಕು

ಪ್ಲೇ ಮಾಡೋ ಸಿಡಿ ಮಾತ್ರ

ಆಗಿರಬೇಕು ಕ್ಲಾಸಿಕ್ಕು

ಎನ್ನುತ್ತ ಮಕ್ಕಳನ್ನು ಕ್ಲಾಸಿಕ್ ಮ್ಯೂಸಿಕ್ ಕೇಳಲು ಪರೋಕ್ಷವಾಗಿ ಕರೆದಿದ್ದಾರೆ. ‘ರೈಲು ಬಂತು ರೈಲು’ ಪದ್ಯದಲ್ಲಿ ರೈಲನ್ನು ಮಕ್ಕಳ ಕಣ್ಣಿನಿಂದಲೇ ನೋಡುತ್ತ ಖುಷಿ ಖುಷಿಯಾಗಿ ರೈಲಿನ ಚಿತ್ರ ಮನಸ್ಸಿನಲ್ಲಿ ಮೂಡಿಸುವ ಹಾಗೂ ರೈಲಿನ ಕುರಿತಾಗಿ ಹೆಚ್ಚು ಪ್ರೀತಿಯುಂಟಾಗಿಸುವ ಪ್ರಯತ್ನ ಮಾಡಿದ್ದಾರೆ.

ರನ್ನಿಂಗ್ ಟರ್ನಿಂಗ್ ಸ್ಪರ್ಧೆಯಲ್ಲಿ

ಸೋತು ಹೋಯ್ತು ನಾಗರ ಹಾವು

ಹಾದಿ ಬದಿಯ ಹೊಂಗೆ ಮೆಚ್ಚಿ

ತೂರುತಿತ್ತು ತನ್ನ ಹೂವು!’

ಎಂದು ಹೇಳುತ್ತ ಹಾವು ಮತ್ತು ರೈಲಿನ ಚಿತ್ರ ಒಟ್ಟಿಗೆ ಇಡುತ್ತ ರೈಲಿಗೆ ಹೊಂಗೆಯ ಹೂವು ತೂರಿ ಸಂತಸ ಹೆಚ್ಚಿಸಿದ್ದಾರೆ.

ವೆಚ್ಚ ಕೂಡ ಬಹಳ ಕಡಿಮೆ

ಕೊಂಚ ಕೂಡ ಹೆದರ ಬೇಡಿ

ರೈಲು ಬರುವ ಮುಂಚೆ ನೀವು

ಚೀಟಿ ತಕ್ಕೊಂಡು ಕಾದು ಕೂಡಿ!

ಎಂದು ಹೇಳಿ ಮಗು ರೈಲು ಹತ್ತುವಂತೆ ಮಾಡಿದ್ದಾರೆ… ರೈಲಿನ ಪ್ರೀತಿ ಹೆಚ್ಚಿಸಿದ್ದಾರೆ. ‘ಹೂವಿನ ಸಂತೆ’ ಪದ್ಯದಲ್ಲಿ ಹೂವಿನ ಮೆರವಣಿಗೆ ಮಾಡಿಸಿರುವ ಶೆಟ್ಟರು ‘ತಕರಾರು’ ಪದ್ಯದಲ್ಲಿ ಮಜ ಮಜವಾಗಿಯೇ ತರಕಾರಿಗಳನ್ನು ಮಕ್ಕಳ ಮುಂದೆ ಇಟ್ಟಿದ್ದಾರೆ. ‘ನರಿಯಣ್ಣನ ಅಂಗಡಿ’ ಪದ್ಯದಲ್ಲಿ ಬಹಳ ಸರಳವಾಗಿ ಅಂಗಡಿಕಾರನೊಬ್ಬನ ಕಷ್ಟಗಳನ್ನು ತಾನೇ ತಾನಾಗಿ ತಿಳಿಯುವಂತೆ ಹೇಳಿರುವುದು ಬಹಳ ಸೊಗಸಾಗಿದೆ.

ರಾತ್ರಿ ವೇಳೆ ಹೆಗ್ಗಣ ಬಂದು

ನುಣ್ಣಗೆ ತಿಂದವು ಕರಬೂಜ

ಹಣ್ಣುಗಳೆಲ್ಲವ ಎಂಜಲು ಮಾಡಿ

ನೆಲದ ತುಂಬ ಬರಿ ಬೀಜ

ಹಣ್ಣಿನ ಅಂಗಡಿಯಲ್ಲಿ ನಾವು ಕಾಣದೇ ಇರುವ ಮಾರಾಟಗಾರನ ಬೇರೊಂದು ಕಷ್ಟ ಬಹು ಚನ್ನಾಗಿ ಹೇಳಿದ್ದಲ್ಲದೇ

ಗಿರಾಕಿ ಜನರು ಬೆಲೆಯನು ಕೇಳುತ

ಬರಿ ಚೌಕಾಶಿಯ ಮಾಡಿದರು

ಕೊಳ್ಳಲೇ ಇಲ್ಲ ಕರುಬುತ ಎಲ್ಲ

ಜಾಗವ ಖಾಲಿ ಮಾಡಿದರು!’

ಎಂದು ಸಣ್ಣ ಅಂಗಡಿಕಾರರೊಂದಿಗೆ ಗಿರಾಕಿಗಳ… ಚೌಕಾಶಿಯ ಚಿತ್ರ ಕೂಡಾ ನೀಡಿದ್ದಾರೆ. ಮಕ್ಕಳು ಆಪ್ತವಾಗಿ ಓದುತ್ತಲೇ ಸುತ್ತಲಿನ ಪರಿಸರದ ಅನುಭವ ಅವರದಾಗುವುದು ಅವರ ವಿಸ್ತಾರಕ್ಕೆ ಅಗತ್ಯ.

ನಾಗರಾಜ ಶೆಟ್ಟರ ‘ಪೂರ್ವಿಯ ವಿಮಾನಯಾನ’ ಪುಸ್ತಕದಸಲ್ಲಿ ‘ಪೂರ್ವಿ ಪಾಪು ಪದ್ಯಗಳು’ ಎನ್ನುವ ಇನ್ನೊಂದು ಭಾಗ ಮಾಡಿ ಒಂದಿಷ್ಟು ಪದ್ಯಗಳನ್ನು ನೀಡಿದ್ದಾರೆ. ಅವರು ತಮ್ಮ ಮೊಮ್ಮಗಳು ಪೂರ್ವಿಯೊಂದಿಗೆ ಕಾಲ ಕಳೆಯುತ್ತ ಅವಳ ಮಗುತನವನ್ನು ತನ್ನದೂ ಆಗಿಸಿಕೊಳದ್ಳುತ್ತ ತುಂಬಾ ಖುಷಿಯಿಂದ ಪೂರ್ವಿಯ ದಿನಚರಿಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬರೆದ ಪದ್ಯಗಳು ಇಲ್ಲಿವೆ. ಹೀಗೆ ಬರೆದ ಪದ್ಯಗಳು ನಮಗೆಲ್ಲ ನಮ್ಮ ಸುತ್ತಲಿನ ಮಕ್ಕಳನ್ನು ನಮ್ಮ, ಮುಂದೆ ತಂದಿಡುತ್ತಾ… ಆಪ್ತವಾಗುತ್ತವೆ.

ಅಜ್ಜನ ಮೀಸೆಯ ಕೂದಲು ಕಿತ್ತು

ಮೂಗಿನ ಕೆಳಗಡೆ ಹಾಗೇ ಇರಿಸಿ

ಪೂರ್ವಿ ಚಪ್ಪಾಳೆ ತಟ್ಟಿದಳು

ಅವಳು ಅಜ್ಜಿಯನ್ನೂ ಬಿಡುವವಳಲ್ಲ. ಎಲ್ಲರೊಂದಿಗೂ ಮಕ್ಕಳ ಆಟ ಇದ್ದೇ ಇದೆ. ಅದು ಹೇಗೇ ಇದ್ದರೂ ಸಿಹಿ ಉಂಡೆಯೇ.

ಅಜ್ಜಿಯ ಕಣ್ಣನು ಕೈಯಲಿ ಮುಚ್ಚಿ

ಬಾಯಿಯ ತೆರೆದು ಲಾಡು ಇರಿಸಿ

ಪೂರ್ವಿ ಚಪ್ಪಾಳೆ ತಟ್ಟಿದಳು

ಆದರೆ ಇಲ್ಲಿ ಅಜ್ಜಿಯ ಬಾಯಿಗೆ ಲಾಡುವೇ ಸಿಕ್ಕಿದ್ದು ನಮಗೂ ಲಾಡು ತಿಂದಂತೆಯೇ ಅನಿಸುತ್ತದೆ. ಪ್ರತಭಾನ್ವಿತ ಕಲಾವಿದ ಸಂತೋಷ ಸಸಿಹಿತ್ಲು ಅವರ ಚಿತ್ರಗಳು ಹಾಗೂ ಮುಖಪುಟ ಆಕರ್ಷಕ ವಾಗಿವೆ. ಈ ಸಂಕಲನದಲ್ಲಿ ಇಪ್ಪತ್ತೈದು ಪದ್ಯಗಳಿದ್ದು ಎಲ್ಲವೂ ಮಕ್ಕಳಿಗೆ ಮತ್ತು ಹಿರಿಯರಿಗೆ ಆಪ್ತವಾಗುತ್ತವೆ. ನಾಗರಾಜ ಶೆಟ್ಟರು ತಮ್ಮ ಮೊಮ್ಮಗಳೊಂದಿಗೆ ಕಾವ್ಯ ವಿಮಾನ ಏರಿ ಪ್ರೀತಿಯ ಮಳೆಗರೆಯುತ್ತಾ ಸಾಗಿದ್ದರೆ.

ಗಿಡಗಳು ಮರಗಳು ತೋಟಗಳೆಲ್ಲ

ಹಸುರಿನ ಹಸುರಿನ ಚುಕ್ಕಿಗಳು

ಅತ್ತ ಇತ್ತ ಎರಡೂ ಪಕ್ಕ

ಹಾರುವ ಮೋಡದ ಹಕ್ಕಿಗಳು

ಮಕ್ಕಳ ಕಲ್ಪನೆಯ ವಿಸ್ತಾರಕ್ಕೆ ಇಂತಹ ಸಾಲುಗಳನ್ನು ನೀಡುತ್ತ…. ಮಕ್ಕಳು ಖುಷಿಯ ಹಾಡು ಹಾಡುತ್ತ ಮೋಡದ ರೆಕ್ಕೆಯ ಮೇಲೇರುವ ಸೋಜಿಗದ ವಿಸ್ತಾರಕ್ಕೆ ತೆರೆದುಕೊಳ್ಳುವಂತೆ ಮಾಡುತ್ತಿರುವ ನಾಗರಾಜ ಶೆಟ್ಟರಿಗೆ ವಂದಿಸುತ್ತ ಪೂರ್ವಿಯೊಂದಿಗಿನ ವಿಮಾನಯಾನದ ಅನುಭವ ಹಾಗೂ ಸಂತಸ ಕನ್ನಡದ ಎಲ್ಲ ಮಕ್ಕಳಿಗೂ ಸಿಗಲಿ ಎಂದು ಆಶಿಸುತ್ತೇನೆ.

**********************************

ತಮ್ಮಣ್ಣ ಬೀಗಾರ.

13 thoughts on “ಪೂರ್ವಿಯ ವಿಮಾನಯಾನ

  1. ಬಹಳ ಚೆಂದದ ವಿಮರ್ಶೆ ಸರ್. ನಾಗರಾಜ ಶೆಟ್ಟರ ಶಿಶುಗೀತೆಗಳು
    ಬಹಳ ಆಕರ್ಷಣೀಯವಾಗಿವೆ. ಪುಟಾಣಿ ಮಕ್ಕಳಿಗೆ ಖುಷಿ ನೀಡುತ್ತವೆ. ಅಭಿನಂದನೆಗಳು ನಿಮಗೆ.

  2. ವಿಶಿಷ್ಟ ಪದ್ಯಗಳು ಎನಿಸಿತು. ಪರಿಚಯಿಸಿದ ರೀತಿಯೂ ಸೊಗಸಾಗಿದೆ.

  3. ಪೂರ್ವಿಯೊಂದಿಗೆ ವಿಮಾನಯಾನ ಅನುಭವ ಚೆಂದದ ವಿಮರ್ಶೆ. ಅಭಿನಂದನೆಗಳು

  4. ತುಂಬಾ ತುಂಬಾ ಇಷ್ಟ ಆಯಿತು.ಅಭಿನಂದನೆಗಳು ಗುರುಗಳೇ

Leave a Reply

Back To Top