ಅಂಕಣ ಬರಹ

ದೀಪದ ನುಡಿ

ಸಹಜೀವಿಗಳಿಗೆ ಬೆಳಕಾಗುವ

two person's arms

ನಮ್ಮಲ್ಲೊಂದು ಗಾದೆಯಿದೆ.

ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂದು.ತಾವು ಮಾಡಿದ ದಾನ ಅಥವಾ ಉಪಕಾರ ಹತ್ತು ಜನರಿಗೆ ಪ್ರೇರೇಪಿಸುವಂತಿದ್ದರೆ ಬಲಗೈಲಿ ಕೊಟ್ಟದ್ದು ಎಡಗೈಗೇನು ಇಡಿ ಲೋಕಕ್ಕೆ ತಿಳಿಯಬಹುದು.

          ಮನುಷ್ಯ ಮನುಷ್ಯನಿಗಾಗದೆ ಮತ್ತಾರಿಗಾಗುತ್ತಾನೆ? ಸಂಬಂಧಿಗಳು, ಸ್ನೇಹಿತರೆಂದ ಮೇಲೆ ಒಂದಲ್ಲ ಒಂದು ಸಂದರ್ಭದಲ್ಲಿ ಪರಸ್ಪರರಿಗೆ ಸಹಾಯಮಾಡಲೇಬೇಕಾಗುತ್ತದೆ.ಆ ಸಹಾಯ ಭೌತಿಕ ವಸ್ತುವಿನ ರೂಪದಲ್ಲಿರಬಹುದು ಅಥವಾ ಮಾನಸಿಕ ಸಾಂತ್ವನದ ರೂಪದಲ್ಲಿರಬಹುದು. ಇದರಲ್ಲಿ ಅಚ್ಚರಿಯೇನೂ ಇಲ್ಲ

ಮೊದಲೆಲ್ಲ LIVE & LET LIVE ಎನ್ನುತ್ತಿದ್ದ ನಾವುಗಳು ಈಗ NOT ONLY LIVE & LET LIVE BUT ALSO HELP TO LIVE  ಎಂಬ ಸಿದ್ಧಾಂತವನ್ನು ರೂಢಿಸಿಕೊಳ್ಳಲೇಬೇಕಿದೆ.

         ಗಿಡವೊಂದಕ್ಕೆ ನೀರು ಹಾಕಿ ಆರೈಕೆ ಮಾಡಿದರೆ ಅದು ಹೆಮ್ಮರವಾಗಿ ಬೆಳೆದು ನೆರಳು ಹೂ ಹಣ್ಣು ಕೊಡುತ್ತದೆ.ಶಕ್ತಿ ಕುಂದಿ ಮರಣಿಸಿದರೂ ಮನೆಯ ಬಾಗಿಲಾಗಿಯೋ ,ಮೇಜಾಗಿಯೋ ರೂಪು ತಳೆದು ಮನುಷ್ಯನ ಜೊತೆಗಿರುತ್ತದೆ.ಇಲ್ಲಿ ಮನುಷ್ಯನೇನಾದರೂ ಮರಕ್ಕೆ ನಾನು ನಿನಗೆ ನೀರು ಹಾಕಿದ್ದು ನಿನ್ನ ನೆರಳೆಲ್ಲಾ ನನಗೆ ಮಾತ್ರಾ , ನಿನ್ನ ಹಣ್ಣೆಲ್ಲಾ ನನ್ನ‌ ಪಾಲಿಗೆ ಮಾತ್ರಾ ಎನ್ನಲಾಗುತ್ತದೆಯೆ? ಇಷ್ಟೆಲ್ಲ ಕೊಟ್ಟ ಮರ ಕೊನೆಗೆ ಮನುಷ್ಯ ಕೊಡಲಿ ಹಾಕಿದಾಗಲೂ ನಾನದು ಕೊಟ್ಟೆ ಇದು ಕೊಟ್ಟೆ ನೀನದನ್ನು ಮರೆತು ಈಗ ಕೊಡಲಿ ಹಾಕುತ್ತಿರುವೆ ಎಂದು ದೂರುವುದಿಲ್ಲ.

         ಹಾಗಾದರೆ ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದು ಸರಿ ಎಂದು ಸಮರ್ಥಿಸಲಾಗುತ್ತದೆಯೆ? ಖಂಡಿತಾ ಇಲ್ಲ.ಇಲ್ಲಿ ಹೇಳಬಯಸುವುದು ಸ್ಪಷ್ಟ. ಉಪಕಾರಿಸಬೇಕಾದ ಉಪಕರಿಸಿ ,ಉಪಚರಿಸಿ .ಅದನ್ನು ಆದರೆ ಉಪಕೃತನಾದವನು ಸದಾ  ಉಪಕಾರ ಸ್ಮರಣೆ ಮಾಡುತ್ತಾ  ಹಂಗಿನಲ್ಲಿಯೇ ಇರಬೇಕೆಂದು ಉಪಕಾರ ಮಾಡಿದವನು ಬಯಸಿದರೆ ಅದು ನಿಜಕ್ಕೂ ತಪ್ಪಾಗುತ್ತದೆ.

         ಬಡವ ಮತ್ತು ಸಿರಿವಂತ ಎಂಬ ಇಬ್ಬರು ಸ್ನೇಹಿತರಿದ್ದರು.ಬಡವನಿಗೆ ಸಿರಿವಂತ ಆಗಾಗ ಮನೆಗೆ ಕರೆದೊಯ್ದು ಉಪಚರಿಸುತ್ತಿದ್ದ ಬಡವನೋ ಸಿರಿವಂತನಿಗೆ ನೈತಿಕ ಬೆಂಬಲ ನೀಡುತ್ತಾ ಅವನ ಅಳಲುಗಳನೆಲ್ಲ ಆಲಿಸುತ್ತಾ ಸಂತೈಸುತ್ತಿದ್ದ.ಇಲ್ಲಿ ಯಾರು ಯಾರಿಗೆ ಉಪಕಾರ ಮಾಡಿದರೆಂದು ಲೆಕ್ಕ ಹಾಕಿದರೆ ಉತ್ತರ ಸಿಗುವುದಿಲ್ಲ. ಸಂಬಂಧಗಳಲ್ಲೂ ಹಾಗೇ.ಆಯಾ ಸಂದರ್ಭ ,ಸನ್ನಿವೇಶ, ಅನುಕೂಲ, ಮನಸ್ಥಿತಿ ,ಸಂಬಂಧದ ಗಾಢತೆಯನ್ನಾಧರಿಸಿ ಪರಸ್ಪರ ಕೈಲಾದ ಸಹಾಯ ಅಥವಾ ಸಾಂತ್ವನ‌ ನೀಡುವುದು ತೀರಾ ಸಹಜ.ಹಾಗಲ್ಲದಿದ್ದರೆ ನಾವು ಮನುಷ್ಯರೇ ಅಲ್ಲ. ಹಾಗೆಂದು ಇಬ್ಬರೂ ಪರಸ್ಪರರ ಹಂಗಿನಲ್ಲೇ ಇರಬೇಕೆಂದು ನಿರೀಕ್ಷೆ ಮಾಡಲಾಗದು.ಕೆಲವರಿಗೆ ಕೊರಗಿರುತ್ತದೆ.ಮಾತು ಮಾತಿಗೂ ತಮ್ಮ‌ ದೊಡ್ಡತನ ಹೇಳಿಕೊಂಡು ಇತರರ ಬಗ್ಗೆ ಹಳಿಯುವುದು.ಇಲ್ಲಿ ನಡೆಯುವುದೆಲ್ಲಾ ಮೊದಲೇ ನಿರ್ಧರಿತವಾಗಿರುತ್ತದೆ.ಋಣಗಳನ್ನು ತೀರಿಸುತ್ತಲೇ ನಾವು ಬದುಕಬೇಕಾಗುತ್ತದೆ.ಏನಾದರೂ ಕೊಟ್ಟಿರೋ ಮತ್ತೆ ಅದರ ಬೆನ್ನ ಹಿಂದೆ ಯಾವ ನಿರೀಕ್ಷೆ ಇರಿಸಿಕೊಳ್ಳದೆ ಮುಂದುವರೆವುದೆ ಜಾಣತನ.ಸಹಾಯ, ಉಪಕಾರ ಇವೆಲ್ಲ ಒಂದು ರೀತಿ ಸರಪಳಿ ಕ್ರಿಯೆಯಂತೆ.ನಾವೊಬ್ಬರಿಗೆ ಮಾಡಿದರೆ ಮತ್ತಾರೋ ಮತ್ತಾವುದೋ ಸಂದರ್ಭದಲ್ಲಿ ನಮಗೆ ಆಪದ್ಭಾಂದವರಾಗಿ ಇದ್ದೇ ಇರುತ್ತಾರೆ .ಇದೇ ಬದುಕು .ಇದನ್ನು ಅರಿಯಲು ನಮಗೆ ಯಾವ ದೊಡ್ಡ ಓದು ಅಥವಾ ಉಪದೇಶದ ಅವಶ್ಯಕತೆ ಇರುವುದಿಲ್ಲ.

        ಸಾಧ್ಯವಾದರೆ ನಮ್ಮಿಂದಾಗಬಹುದಾದ ಸಹಾಯವನ್ನೋ ಸಾಂತ್ವನವನ್ನೋ ನೀಡೋಣ.ಆಗದಿದ್ದರೆ ಸುಮ್ಮನಿದ್ದುಬಿಡೋಣ.ಕೆಡುಕು ಮಾಡುವುದೂ ,ಕೆಡುಕು ಬಯಸುವುದೂ ಎರಡೂ ಮರೆತುಬಿಡೋಣ .ಹಾಗೇ ಮಾಡಿದ ಸಹಾಯವನ್ನೂ ಸಹಾ. ನಾನಿಷ್ಟು ಮಾಡಿದೆ..ನಾನಷ್ಟು ಮಾಡಿದೆ ..ಎಂದು ಹಲುಬುತ್ತಾ ಉಪಕಾರ ಸ್ಮರಣೆಯಿಲ್ಲವೆಂದು ಹೀಗಳೆಯುತ್ತ ಕುಳಿತರೆ ಮಾಡಿದ ಪುಣ್ಯವೂ ಕೈ ತಪ್ಪಿಹೋಗುತ್ತದಷ್ಟೆ.

    ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ

  ಎಂನಬ ಬಸವಣ್ಣನವರ ಮಾತು ಈ‌ ಸಂದರ್ಭಕ್ಕೆ  ಸರಿಯಾಗಿ ಅನ್ವಯಿಸುತ್ತದೆನಿಸುತ್ತದೆ.

ಉಪಕಾರ ಸ್ಮರಿಸಬೇಕಾದವರು ಉಪಕೃತರೇ ಹೊರತು ಉಪಕಾರ ಮಾಡಿದವರಲ್ಲ.ಒಂದು ವೇಳೆ ಉಪಕೃತರು ಸ್ಮರಿಸದಿದ್ದರೆ ಅದು ಅವರ ಹಣೆಬರಹ ಎಂದುಕೊಂಡು ಸುಮ್ಮನಿದ್ದು ಬಿಡುವುದೇ ಲೇಸು. ನಾ ಮಾಡಿದೆ ಮಾಡಿದೆ ಎಂದು ಸದಾ ಹೇಳುತ್ತಿದ್ದರೆ ಮಾಡಿದುದರ ಅರ್ಥ ಕಳೆದುಹೋಗುತ್ತದಷ್ಟೆ.

          ನಮ್ಮ ನಿಮ್ಮ ಮನೆಗಳಲ್ಲಿ ಉಂಡದ್ದನ್ನೂ ನೆನಪಿಸಿಕೊಂಡು ಉಂಡ ನೆನಪೇ ಇಲ್ಲ ಅವರಿಗೆ ಎಂದು ಹಲುಬುವವರಿದ್ದಾರೆ.ಬದುಕು ಬಹಳ ಸಂಕೀರ್ಣ .ಮುಂದೆ ಮುಂದೆ ಸಾಗುತ್ತಿದ್ದಂತೆ ಯಾರನ್ನು ಯಾವ ಸನ್ನಿವೇಶದಲ್ಲಿ ,ಯಾವ ಸಂದಿಗ್ಧದಲ್ಲಿ ಸಿಲುಕಿದುತ್ತದೋ ತಿಳಿದವರಿಲ್ಲ.ಅವರವರದೇ ಬದುಕಿನ ವ್ಯೂಹಗಳಲಿ ಸಿಲುಕಿ ಒದ್ದಾಡುವ ಸ್ಥಿತಿಯಲ್ಲಿ ಬಹಳ ಜನರಿರುತ್ತಾರೆ .ಹೀಗಿದ್ದಾಗ ಅಂತವರು ಸದಾ ನಮ್ಮ‌ ಉಪಕಾರ ಸ್ಮರಣೆ ಮಾಡಲಿ ಎಂದು ಬಯಸಬಾರದು.

ಆಡದೇ ಕೊಡುವವನು ರೂಢಿಯೊಳಗುತ್ತಮನು

ಆಡಿ ಕೊಡುವವನು ಮಧ್ಯಮನಧಮ ತಾ

ನಾಡಿ ಕೊಡದವನು ಸರ್ವಜ್ಞ ||

      ಮಹಾದಾನಿ ಕರ್ಣನನ್ನು ನೆನಪಿಸಿಕೊಳ್ಳಿ .ಎದುರು ನಿಂತಿರುವುದು ಯಾರು ಮತ್ತು ಅವರ ಉದ್ದೇಶ ಏನು ಎಂದು ತಿಳಿದಿದ್ದರೂ ಸಹ ತನ್ನ ಕವಚ ,ಕುಂಡಲಗಳನ್ನು ನಿರ್ಭಾವುಕವಾಗಿ‌ ಕಳಚಿ ಕೊಡುತ್ತಾನೆ. ಸಂತನ ಹಸಿವು ತಣಿಸಲು ಭಕ್ತ ಸಿರಿಯಾಳ  ದಂಪತಿಗಳು ತನ್ನ ಮಗನ ತಲೆಯನ್ನೇ ಒರಳಲ್ಲಿ ಕುಟ್ಟಿ ಆಹಾರ ತಯಾರಿಸುತ್ತಾರೆ.ಈ. ಎರಡೂ ಕಥೆಗಳು ನಾವು ಕಾಣದ ಕತೆಗಳು .ಈಗಿನ ಕಾಲಕ್ಕೆ ಅತಿರೇಕ ಎನಿಸಬಹುದು.ಆದರೆ ಗಮನಿಸಬೇಕಾದ ಅಂಶವೆಂದರೆ ಕರ್ಣನಿಗಾಗಲಿ‌, ಭಕ್ತ ಸಿರಿಯಾಳನಿಗಾಗಲಿ ತಾವು ಮಾಡಿದ ದಾನ ,ತ್ಯಾಗಗಳ ಬಗ್ಗೆ ಪಶ್ಚಾತ್ತಾಪವಾಗಲೀ‌, ಅಥವಾ ಅಹಂಕಾರವಾಗಲೀ ಆದದರ ಬಗ್ಗೆ ಕಥೆಗಳಲ್ಲಿಯೂ ಪ್ರಸ್ತಾಪ ಇಲ್ಲ.

       ಹೀಗೇ ..ಇಷ್ಟು ಅತಿರೇಕಕ್ಕೆ ನಾವು ಹೋಗುವುದು ಬೇಡ.ಕಥೆಗಳಿಗೂ ಬದುಕಿಗೂ ಬಹಳ ವ್ಯತ್ಯಾಸವಿದೆ ನಿಜ.ಆದರೆ ಕಥೆಯ ನೀತಿ ಮಾತ್ರಾ ನಿಜ ಬದುಕಿಗೇ ಅನ್ವಯವಾಗುತ್ತದೆ.

        ನಾವು ಒಬ್ಬರಿಗೆ ಮಾಡಿದ ಒಳಿತು , ಸಹಾಯ ,ದಾನ. ಏನಾದರಿರಲಿ ಅದು ಮತ್ತಾವುದೋ ಸಂದರ್ಭದಲ್ಲಿ ಮತ್ತಾರಿಂದಲೋ ಮತ್ತಾವುದೋ ರೂಪದಲ್ಲಿ ಹಿಂದಿರುಗಿ ಬಂದೇ ಬರುತ್ತದೆ. ಆದ್ದರಿಂದ ಅವಶ್ಯಕತೆ ಬಂದಾಗ  ಸಹಜೀವಿಗಳಿಗೆ ಸಹಾಯ ಮಾಡೋಣ ,ಸಾಂತ್ವನ ನೀಡೋಣ.ಮತ್ತು ಅದರ ಬಗ್ಗೆ ಅಹಂ ಅಥವಾ ಪಶ್ಚಾತ್ತಾಪಕ್ಕೆ ಎಡೆಗೊಡದಂತೆ ನಡೆದುಕೊಳ್ಳೋಣ.

           ಒಂದು ದೀಪ ಆರಿಹೋದರೆ ಅದನ್ನು ಹಚ್ಚಲು  ಮತ್ತೊಂದು ದೀಪವೂ ಆ ದೀಪವನ್ನು ಹಿಡಿದ ಕೈ ಇದ್ದೇ ಇರುತ್ತವೆ.ಸಾಧ್ಯವಾದರೆ ದೀಪವಾಗೋಣ .ಅಥವಾ ದೀಪ ಹಚ್ಚುವ ಕೈಯಾಗೋಣ ..ದೀಪ ಹಚ್ಚುವ ಮನಸ್ಸು ಬೆಳೆಸಿಕೊಳ್ಳೋಣ .

*********************************

                   ‌‌              ದೇವಯಾನಿ

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ

4 thoughts on “

  1. ಉಪಕಾರಿಗಳು ಮತ್ತು ಉಪಕೃತರ ಮನಸ್ಥಿತಿಗಳು ಹೇಗಿರಬೇಕು ಎಂಬ ಚಿಂತನಾರ್ಹ ಲೇಖನ

  2. ಈ ವಿಚಾರ ಬದಲಾಗದ ಮೌಲ್ಯ.ನಮ್ಮ ಧರ್ಮದವರು ಮಾತ್ರವಲ್ಲದೆ ಇದು ಎಲ್ಲ ಧರ್ಮದವರೂ ಪ್ರತಿಪಾದಿಸಿಕೊಂಡು ಬಂದ ಸನ್ನಡತೆಯಿದು.
    ಈಗಲೂ ದಾನವೆಂಬುದು ಇದ್ದೇ ಇದೆ.ಆದರೆ ಅದರ ಜೊತೆಗೆ ಮಾಡಿದವನ ಚಿತ್ರ, ದಾನದ ವಸ್ತುವಿನ ವರ್ಣನೆ, ಅದರ ಬೆಲೆಗಳೆಲ್ಲ ಮೂರ್ಲೋಕಕ್ಕೆ ತಿಳಿಯಬೇಕೆಂಬ ಭಾವವಿದೆ….
    ಏನೇ ಆಗಲಿ, ದಾನದ ಮಹತ್ವ ಉಳಿದೇ ಉಳಿಯುತ್ತದೆ. ಆದರೆ ಪಾತ್ರರಿಗೆ ಅದು ದೊರಕಿದಾಗ ಅದರ ಸದ್ವಿನಿಯೋಗವೆನಿಸುತ್ತದೆ.ಇಲ್ಲದಿದ್ದರೆ ಆ ದಾನ ವ್ಯರ್ಥವಾಗಿ ದಾನದ ಪುಣ್ಯ ದೊರಕದೆ ಹೋಗುತ್ತದೆ.
    ಇಂತಹ ಮೌಲ್ಯಗಳ ಬಗ್ಗೆ ಬರೆಹಗಳ ಮೂಲಕ ಯಾವಾಗಲು ಚಿಂತಿಸುತ್ತಿರುತ್ತೀರಿ.ಅದಕ್ಕಾಗಿ ಅಭಿನಂದನೆಗಳು.

    1. ಧನ್ಯವಾದಗಳು ಸರ್, ನೀವು ನೀಡುವ ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಪ್ರೇರಣೆ ನೀಡುತ್ತವೆ..

Leave a Reply

Back To Top