ಒಂದು ನೆನಪು

ಅನಿಸಿಕೆ

ಒಂದು ನೆನಪು

ಲಕ್ಷ್ಮೀ ನಾರಾಯಣ ಕಜೆಗದ್ದೆ

Noted Kannada poet Siddalingaiah passes away at 67 | Deccan Herald

ಸುಮಾರು 20 ವರ್ಷಗಳ ಹಿಂದೆ ಬೆಂಗಳೂರಿನ ಯಂ.ಜಿ ರಸ್ತೆಯ ಪುಟ್ ಪಾತ್ ನಲ್ಲಿ  ಪ್ರಜಾವಾಣಿ ಕಚೇರಿ ಎದುರು ನಡೆದುಕೊಂಡು ಹೋಗುತ್ತಿದ್ದೆ. ಪತ್ರಿಕಾ ಕಚೇರಿ ಎದುರುಗಡೆ ಒಂದು ಟವೆಲ್ ಹಾಸಿ ಅದರ ಮೇಲೆ ಕುರುಚಲು ಗಡ್ಡದ , ದುಂಡು ಮುಖದ ವ್ಯಕ್ತಿಯೊಬ್ಬರು ಕುಳಿತು  ನನಿಗೆ ಅನ್ಯಾಯ ಆಗಿದೆ ಅಂತ ಪ್ರತಿಭಟಿಸುತ್ತಿದ್ದರು .

ಪ್ರತಿಭಟನೆ ಅಂದ್ರೆ  ನೂರಾರು ಜನ ಸೇರಬೇಕು , ಘೋಷಣೆ ಕೂಗ್ಬೇಕು ಅಂತಾ ನಾನು ನಂಬಿದ್ದ ಕಾಲವದು. ಹಾಗಾಗಿ ಇದೆಂಥಾ ಪ್ರತಿಭಟನೆ ಅಂತಾ ಮನಸಿನಲ್ಲಿ ನಕ್ಕು ಮುಂದೆ ಸಾಗಿದೆ. ಆದರೆ ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯ ಮುಖ ಎಲ್ಲೋ ನೋಡಿದ ಹಾಗೆ  ಇದೆಯಲ್ಲಾ ಅಂತಾ ಸ್ವಲ್ಪ ಹೊತ್ತು ಯೋಚಿಸುತ್ತಾ ಇದ್ದೆ. ಆದ್ರೆ ಯಂ.ಜಿ ರೋಡ್ ,ಬ್ರಿಗೇಡ್ ರೋಡ್ ನ  ಉಳಿದ  ಆಕರ್ಷಣೆಯ ಮಧ್ಯೆ ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮರೆತುಬಿಟ್ಟೆ.

ಮರುದಿನ ಬೆಳಿಗ್ಗೆ ದಿನಪತ್ರಿಕೆ ತಿರುವುತ್ತಿದ್ದಾಗ ನಿನ್ನೆಯ ಪ್ರತಿಭಟನೆ ಬಗ್ಗೆ  ನ್ಯೂಸ್ ಇತ್ತು. ಓದಿದ ನಂತರ ಗೊತ್ತಾಯ್ತು, ನಿನ್ನೆ ನಾನು ನೋಡಿದ ವ್ಯಕ್ತಿ ಕವಿ ಸಿದ್ದಲಿಂಗಯ್ಯ ಅಂತಾ. ‘ಛೆ’ ಎಂತಹಾ ಅವಕಾಶ ಮಿಸ್ ಮಾಡ್ಕೊಂಡೆ ಅಂತಾ ಬೇಸರ ಆಯಿತು. ಆಗ  ಅವರ ಕವಿತೆಗಳನ್ನು ನಾನು ಹೆಚ್ಚು ಓದಿರಲಿಲ್ಲ.ಆದರೆ

ಯಾರಿಗೆ ಬಂತು ಎಲ್ಲಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯ

ಟಾಟಾ ಬಿರ್ಲ ಜೋಬಿಗೆ ಬಂತು

ಜನಗಳ ತಿನ್ನುವ ಬಾಯಿಗೆ ಬಂತು

ನಲವತ್ತೇಳರ ಸ್ವಾತಂತ್ರ್ಯ

ಮತ್ತು

ಮಾಟ ಆಗಿತ್ತು

ದೇಶಕ್ಕೆ ಮಾಟ ಆಗಿತ್ತು  

ಹಾಡು ಮಾತ್ರ ಗೊತ್ತಿತ್ತು

      ನಂತರ ದಿವಸಗಳಲ್ಲಿ ಅವರನ್ನ ನಾನು ನೋಡಿದ್ದು ರವಿಂದ್ರ ಕಲಾಕ್ಷೇತ್ರದ ಹಿಂದೆ  ಸಂಸ ಬಯಲು ರಂಗಮಂದಿರದಲ್ಲಿ . ಆಗ ಸಿ.ಜಿ ಕೃಷ್ಣ ಸ್ವಾಮಿಯವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರ ಜೊತೆ ಕುಳಿತು ಹರಟೆ ಹೊಡಿತಾ ಇದ್ರು . ಅಷ್ಟೊತ್ತಿಗೆ ನಾನು ಆರೆಸೆಸ್ಸಿನ ಪ್ರಚಾರಕರಾದ ವಾದಿರಾಜರಿಂದಾಗಿ ಸಿದ್ದಲಿಂಗಯ್ಯರ ಆತ್ಮಕಥನ ‘ಊರುಕೇರಿ’ ಕವನ ಸಂಕಲನ ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಓದಿಕೊಂಡಿದ್ದೆ. ಹಾಗಾಗಿ ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗಿತ್ತು.

ಅಗಲಿಕೆಯ ಈ ಹೊತ್ತು ಅವರ ಕೆಲವು ಕವಿತೆಗಳ ಸಾಲುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಯತ್ನ.

ಅವರ ‘ಬೆಲ್ಚಿಯ’ ಹಾಡು

ನನ್ನನ್ನು ಬೆಚ್ಚಿಬೀಳಿಸಿದ್ದು ಸುಳ್ಳಲ್ಲ. ನೀವು ಒಮ್ಮೆ ಓದಿ.

ದೊಡ್ಡ ಗೌಡರ ಬಾಗಿಲಿಗೆ

ನಮ್ಮ ಮೂಳೆಯ ತ್ವಾರಣ

ನಮ್ಮ ಜನಗಳ ಕಾಲು ಕಯ್ಯ

ಕಂಬ ಅವರ ಹಟ್ಟಿಗೆ .

ಅವರ ಬೇಟೆಗೆ ನಾವು ಮೊಲಗಳು

ನಮ್ಮ ಬಾಳೇ ಬಂಗಲೆ

ಅವರ ಬಂಗಲೆಯಂಗಳಕ್ಕೆ

ನಮ್ಮ ರಕ್ತದ ರಂಗಾಲೆ

ಅವರ ತೋಟದ ತೆಂಗಿನಲ್ಲಿ

ನಮ್ಮ ರಕ್ತದ ಎಳನೀರು.

ಅವರ ಅಮಲಿನ ಗುಂಗಿನಲ್ಲಿ

ಕೂಲಿ ಹೆಣ್ಣಿನ ಕಣ್ಣೀರು.

ಯಾವ ಪಾಪವ ಮಾಡಲಿಲ್ಲ

ಯಾರ ತಲೆಯನು ಹೊಡೆಯಲಿಲ್ಲ

ಕರಗಿ ನಮ್ಮಯ ಬಾಳಕತ್ತಲು

ಕಾಣಲಾರದೆ ಹಗಲನು

ಇವತ್ತಿಗೂ ಎಳನೀರು ಕಂಡಾಗಲೆಲ್ಲ‘ಅವರ ತೋಟದ ತೆಂಗಿನಲ್ಲಿ ನಮ್ಮ ರಕ್ತದ ಎಳನೀರು’

ಸಾಲು ನೆನಪಾಗುತ್ತಿದೆ.

‘ಒಂದು ದನದ ಪದ’ ಕವಿತೆಯ ಕೆಲವು ಸಾಲು ಕೇಳಿ

ಕೊಟ್ಟಿಗೇಲಿ ಕಟ್ಟಿ ನನ್ನ ಮಾತೆ ಮಾತೆ ಅನ್ನುತ್ತಾರೆ

ಮಾತಿಗೊಂದು ತೂಕಬ್ಯಾಡವ

ಗಟ್ಟಿಹಾಲ ಕರದರೂನೆ ಹಾಲಿಗೆಲ್ಲ ನೀರಬೆರಸಿ

ಮಾರುತಾರಲ್ಲೊ ಮುಂದೇನೆ ಮಾರುತಾರಲ್ಲೊ

ಗಾಡಿದೊಂದು ಮರದ ತೂಕ ಇವರದೊಂದು ಭೀಮ ತೂಕ

ಹೆಜ್ಜೆ ಹಾಕೊ ಬಸವಣ್ಣ ಅನ್ನುತಾರಲ್ಲೊ

“ಅಂಬೆಡ್ಕರ್” ಕವನದಲ್ಲಿ

ಮಹರಾಷ್ಟ್ರದ ಮಣ್ಣಿನಲ್ಲಿ

ಮೂಡಿಬಂದ ಗುಡುಗು ಸಿಡಿಲೆ

ಮಳೆಯನೇಕೆ ತಾರಲಿಲ್ಲ

ಮಿಂಚು ಮಾಯ ಅಷ್ಟೆಯೇ

ಅಭಿಮಾನದ ನೇಗಿಲಿನಿಂದ

ಬಂಜರು ನೆಲ ಉತ್ತವನೆ

ಪಾತಿಮಾಡಿ ನಾಟಿಹಾಕಿ

ಬೆಳೆಯ ಕಾಣದೋದವನೆ

ಕವಿತೆಯಲ್ಲಿ  ಅನ್ಯಾಯ, ಆಕ್ರೋಶ ವ್ಯಕ್ತ ಪಡಿಸಿದ ಕವಿ ಸುಟ್ಟಾವು ಬೆಳ್ಳಿಕಿರಣದಲ್ಲಿ  ಪ್ರೇಮವನ್ನು ವ್ಯಕ್ತಿ ಪಡಿಸಿದ ಬಗೆ  ಈ ರೀತಿ

ಆ ಬೆಟ್ಟದಲ್ಲಿ  ಬೆಳದಿಂಗಳಲ್ಲಿ

ಸುಳಿದಾಡಬೇಡ ಗೆಳತಿ

ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ

ಸುಟ್ಟಾವು ಬೆಳ್ಳಿ ಕಿರಣ

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ

ನೀ ಇಳಿಯ ಬೇಡ ಗೆಳತಿ

ತತ್ತರಿಸುವಂತೆ ಕಾಲಲ್ಲಿ ಕಮಲ

ಮುತ್ತುವವು ಮೊಲದ ಹಿಂಡು.

ಇಕ್ರಲಾ ವದೀರ್ಲಾ

ಈ  ನನ್ ಮಕ್ಕಳ ಚರ್ಮ ಎಬ್ರಲಾ

ಅಂತಾ ಕವನದಲ್ಲಿ ಸಾರಿದ ಕವಿ ನಿಜ ಚರ್ಯೆಯಲ್ಲಿ ತುಂಬಾ  ಸಂಯಮೀಯಾಗಿ  ಕಾಣುತ್ತಿದ್ದರು. ಬದುಕಿನಲ್ಲಿ ಹೆಚ್ಚು ಸಮಯ ದಲಿತ ಮತ್ತು ಕಮ್ಯುನಿಷ್ಟ್  ಸಂಘಟನೆಗಾಗಿ ದುಡಿದ ಸಿದ್ದಲಿಂಗಯ್ಯರು ನಾನು ‘ನಗರ ನಕ್ಸಲ್’ ಅಂತಾ ಹೇಳಿಕೊಳ್ಳಬಹುದಿತ್ತು. ಹಾಗೆ ಹೇಳದೆ ಪಥ ಬದಲಿಸಿ ಸಾಮರಸ್ಯದ ಹಾದಿಯಲ್ಲಿ ಹೆಜ್ಜೆ ಇಟ್ಟು ಎಲ್ಲರ ಹೆಗಲ ತಬ್ಬಿ ನಡೆದದ್ದು ಕನ್ನಡದ ಭಾಗ್ಯ.

 ಸಿದ್ದಲಿಂಗಯ್ಯರ  ಆತ್ಮ ಚರಿತ್ರೆ ‘ಊರುಕೇರಿ’ ಯಲ್ಲಿ  ಹಿನ್ನುಡಿ ಬರೆದ ಡಾ. ಡಿ.ಆರ್ ನಾಗರಾಜ್ ರ  ಈ ಮಾತನ್ನು  ನೀವೊಮ್ಮೆ ಓದಿ, ಹಾಗಾಗಿ ಯಥವತ್ತಾಗಿ ಕೊಟ್ಟಿದ್ದೇನೆ.

‘ಊರುಕೇರಿ’ಯ ಕಡೆಯ ಭಾಗದಲ್ಲಿ ನಾನು ಒಂದು ಚಿಕ್ಕ ಪಾತ್ರವಾಗಿ ಕಾಣಿಸಿ ಕೊಂಡಿದ್ದೇನೆ. ಅಂಥ ವಕ್ರೀಕರಣಕ್ಕೆ ಒಳಗಾಗದೆ ಕಾಣಿಸಿಕೊಂಡಿದ್ದೇನೆ ಎನ್ನುವುದು ನಮ್ಮ ಕವಿಯ ಕೃಪೆ. 70ರ ದಶಕದ  ಆ ವರ್ಷಗಳು ಇಲ್ಲಿ ರೇಖೆಗಳಾಗಿ ಕಾಣಿಸಿಕೊಂಡಿವೆ . ನಮ್ಮ ತಲೆಮಾರಿನ ಅನೇಕರು ಇಲ್ಲಿ ಸುತ್ತಿ ಸುಳಿದು ಹೋಗುತ್ತಾರೆ. ಈ ತಲೆಮಾರಿನ ಬಗ್ಗೆ ತೌಲನಿಕವಾಗಿ ತೀರ್ಪು ನೀಡುವವರಿಗೆ ಈ ಕೃತಿ ಒಂದು ಗಣಿ. ಯಾವುದರ ಬಗ್ಗೂ ತೀವ್ರ ರಾಗವೇಶ ಸಾಧ್ಯವಾಗದೆ ಸದಾ ತುಂಟತನ, ಕೊಂಕು, ನಗು, ಸಂಶಯದಲ್ಲೇ ಸುತ್ತಿ ಬೆಳೆದ ತಲೆಮಾರು ಅದು . ನಾವು ಅರ್ಧ ನಂಬಿಕೆ, ಅರ್ಧ ಸಂಶಯಲ್ಲಿ ಹೇಳುತ್ತಿದ್ದದನ್ನು ಅನೇಕ ಹುಂಬರು ಪೂರ್ಣ ಆವೇಶದಿಂದ ಸ್ವೀಕರಿಸಿ ಕಳೆದೆರಡು ದಶಕಗಳಲ್ಲಿ ಅನೇಕ ಅನಾಹುತಗಳನ್ನು ಉಂಟುಮಾಡಿದರು. ಸದಾ ಹುಡುಗಾಟಿಕೆಯಲ್ಲೇ ಎಲ್ಲವನ್ನು ನಡೆಸುತ್ತಿದ್ದ ನಮ್ಮ ಗೆಳೆಯರ ಗುಂಪಿನ ಕಾರ್ಯಗಳು ಸಮಕಾಲೀನ ಬದುಕಿನಲ್ಲಿ ಕೆಲವು ಒಳ್ಳೆಯದನ್ನು ಮಾಡಿದವು. ಆದರೆ ಕೆಲವು ದೊಡ್ಡಗಂಟಲಿನ ಮುಗ್ದ ಗುಗ್ಗುಗಳು ಮುಂದೆ ಸಾಹಿತ್ಯ ಕಂಟಕರಾಗಿ ಪರಿವರ್ತನೆಯಾದದ್ದು ನಮ್ಮ ಸಹವಾಸದಿಂದಲೇ. ಅವರು ಸಿದ್ದಾಂತಗಳಿಂದ ಚಿತ್ತಾಗಿ ಹುಚ್ಚುಚ್ಚಾಗಿ ಕುಣಿದು ವಿಕಟವಿಟ ಗಣದಂತೆ ಮೆರೆವಾಗಲೆ ನಮ್ಮ ಕವಿ ಹೊರಗೆ ಬಂದು ಪ್ರಸನ್ನ ಚಿತ್ತರಾಗಿ ಈ ಕೃತಿ ಬರೆದಿದ್ದಾರೆ.

                     ಅದಕ್ಕಾಗಿ ಕನ್ನಡಿಗರು ಸಿದ್ದಲಿಂಗಯ್ಯನವರಿಗೆ ಋಣಿಗಳು

****************************

20 thoughts on “ಒಂದು ನೆನಪು

  1. ಸಕಾಲಿಕ,ಅರ್ಥಪೂರ್ಣ ಬರಹ ಕಜೆಗದ್ದೆ ಅಣ್ಣಾ.

    1. ಸಿದ್ಧಲಿಂಗಯ್ಯ ಅವರ ಆಯ್ದ ಕವನದ ಸಾಲುಗಳು ನಿಮ್ಮ ಅನುಭವದೊಂದಿಗೆ ಚೆನ್ನಾಗಿ ಮೂಡಿ ಬಂದಿವೆ.ಸಕಾಲಿಕ

  2. ಶ್ರೀ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರೇ, ಈ ಮೊದಲು ಸಂಗಾತಿಯಲ್ಲಿ ನಿಮ್ಮ ಬರಹ ಓದಿದ ನೆನಪಿಲ್ಲ ಅಥವಾ ನಿಮ್ಮ ಬಗ್ಗೆ – ನೀವು ಬರೆದಿರುವುದರ ಬಗ್ಗೆ ಓದಿಕೊಂಡಿಲ್ಲದಿರುವುದು ನನ್ನ ಅಲ್ಪ ಜ್ಞಾನ ಆಗಿರಲೂಬಹುದು. ನಿಮ್ಮ ಈ ಲೇಖನವು ನಿಮ್ಮೊಳಗೊಬ್ಬ ಅದ್ಭುತ ಬರಹಗಾರ ಇರುವುದನ್ನು ತೋರಿಸಿದೆ. ಇಲ್ಲಿ ನೀವು ದಾಖಲಿಸಿದ ಕೆಲವು ವಿಚಾರಗಳು ಹೊಸ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿರುವ ಸಾಧ್ಯತೆ ಇರುವುದರಿಂದ ದಯಮಾಡಿ ಹೆಚ್ಚು ಬರೆಯಿರೆಂದು ಕೋರುವೆ…

    1. ಧನ್ಯವಾದಗಳು ಸರ್
      ಇದು ನನ್ನ ಮೊದಲ ಬರಹ, ಹಾಗಾಗಿ ನನ್ನ ಪರಿಚಯ ಇರಲಿಕ್ಕಿಲ್ಲ. ಸ್ಮಿತಾ ಅಮೃತರಾಜ್ ರ ಒತ್ತಾಯಕ್ಕೆ ಬರೆದೆ.

  3. ಲಕ್ಷ್ಮೀನಾರಾಯಣ ಕಜೆಗದ್ದೆಯವರು ಕವಿ ಸಿದ್ದಲಿಂಗಯ್ಯನವರಿಗೆ ಅವರ ಹೆಸರಾಂತ ಕವನಗಳ ಮುಖಾಂತರ ಚಿಕ್ಕವಾಗಿ ಚೊಕ್ಕವಾಗಿ
    ತುಂಬಾ ಚೆನ್ನಾಗಿ ಬರಹದ ನುಡಿ ನಮನದ ಗೌರವ ಸಲ್ಲಿಸಿದ್ದಾರೆ.

  4. ಸೊಗಸಾದ ಬರಹ , ವಂದನೆಗಳು…ಸಿದ್ದಲಿಂಗಯ್ಯನವರಿಗೆ ನಮನಗಳು…

  5. ಸಂಕ್ಷಿಪ್ತ ರೂಪದಲ್ಲಿ ಕವಿಯನ್ನು ಸಂಪೂರ್ಣವಾಗಿ ಪರಿಚಯಿಸಿದ ಪರಿ ಅರ್ಥಪೂರ್ಣವಾಗಿದೆ ಅಭಿನಂದನೆಗಳು ಅಣ್ಣಾ

  6. ಸಂಕ್ಷಿಪ್ತ ರೂಪದಲ್ಲಿ ಕವಿಯನ್ನು ಸಂಪೂರ್ಣವಾಗಿ ಪರಿಚಯಿಸಿದ ಪರಿ ಅರ್ಥಪೂರ್ಣವಾಗಿದೆ ಅಭಿನಂದನೆಗಳು ಅಣ್ಣಾ

  7. ಸಮಯೋಚಿತ ಬರಹ….
    ನಿಮ್ಮೊಳಗೆ ಒಬ್ಬ ಕವಿಯೂ ಇದ್ದಾನೆ…

  8. ಲಕ್ಚ್ಮೀ ನಾರಾಯಣ ಕಜೆಗದ್ದೆಯವರು ಕವಿ ಸಿದ್ಧಲಿಂಗಯ್ಯರ ಬಗ್ಗೆ ಬರೆದ ಮಾತುಗಳು ಚೆನ್ನಾಗಿವೆ. ಸಿದ್ಧಲಿಂಗಯ್ಯನವರ ಹಾಡುಗಳೆಲ್ಲ ಓದುಗರಿಗೆ ರೋಮಾಂಚನ. ಅಂತಹ ಕೆಲವು ಪದ್ಯಗಳನ್ನು ನೆನಪಿಸುತ್ತಾ ಕಜೆಗದ್ದೆಯವರು ಅವರ ವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ. ನಿಮ್ಮ ಓದಿನೊಳಗೊಬ್ಬ ಬರಹಗಾರ ಇದ್ದಾನೆ ಸರ್. ಆತನನ್ನು ಇನ್ನಷ್ಟು ಚೇತನಗೊಳಿಸಿ.

  9. ಸಮಯೋಚಿತ ಮತ್ತು ಅದ್ಭುತ ಸ್ಮರಣೆ..ಮತ್ತೊಮ್ಮೆ ಓದು ಮತ್ತು ಚಿಂತನೆಗೆ ಒಡ್ಡಿದಿರಿ..ನಿಮ್ಮೊಳಗೂ ಒಬ್ಬ ಪ್ರಬುದ್ಧ ಬರಹಗಾರನಿದ್ದಾನೆ..

Leave a Reply

Back To Top