ದಾರಾವಾಹಿ
ಆವರ್ತನ
ಅದ್ಯಾಯ-20
ಅಂದು ಸೋಮವಾರ. ಏಕನಾಥರು ಶಂಕರನ ಜಾಗದ ನಾಗ ಪರಿವಾರ ದೈವಗಳಿಗೆ ಸಂಬಂಧಪಟ್ಟು ಸಂಜೆ ವಿಶೇಷ ಪೂಜೆ ಮತ್ತು ಹೋಮವನ್ನು ಹಮ್ಮಿಕೊಂಡಿದ್ದರು. ಆ ಶುಭಕಾರ್ಯದ ಮೂಲಕವೇ ತಮ್ಮ ಸ್ವತಂತ್ರ ದುಡಿಮೆಗೂ ನಾಂದಿ ಹಾಡಲಿದ್ದರು. ಆದ್ದರಿಂದ ಅಂದು ಮುಂಜಾನೆ ಅರುಣೋದಯಕ್ಕಿಂತ ಮುಂಚೆಯೇ ಎದ್ದರು. ಆದರೆ ಆಹೊತ್ತು ಏನೋ ಅಶಾಂತಿ, ಯೋಚನೆಗಳು ಅವರನ್ನು ಮುತ್ತಿಕೊಂಡಿದ್ದವು. ಅದೇ ಗುಂಗಿನಲ್ಲಿ ನಿತ್ಯಕರ್ಮ ಮುಗಿಸಿದರು. ಹಾಗೆಯೇ ಸ್ನಾನಾದಿ ಸಂಧ್ಯಾವಂದನೆಯೂ ನಡೆಯಿತು. ತನ್ನ ಗಂಡ ಇವತ್ತು ಬಹಳ ಬೇಗನೇ ಎದ್ದವರು ಯಾವುದೋ ಚಿಂತೆಯಲ್ಲಿ ಮುಳುಗಿದ್ದುದನ್ನು ಗಮನಿಸಿದ ದೇವಕಿಗೆ ಕಳವಳವಾಯಿತು.
‘ರೀ, ಏನಾಯ್ತೂರೀ…, ಏನೋ ಚಿಂತೆ ಮಾಡುತ್ತಿದ್ದೀರಿ. ಇಷ್ಟು ಬೇಗನೆದ್ದು ದೂರ ಹೊರಟಿದ್ದೀರಿ…?’ ಎಂದಳು ಮೃದುವಾಗಿ.
ಆಗ ಏಕನಾಥರು ವಾಸ್ತವಕ್ಕೆ ಬಂದರು. ‘ಹ್ಞಾಂ! ಏನಿಲ್ಲ ಮಾರಾಯ್ತೀ. ಏನೇನೋ ಯೋಚನೆಗಳು ಓಡಾಡುತ್ತಿವೆ. ಇಷ್ಟು ವರ್ಷಗಳ ಕಾಲ ನಮ್ಮ ಬದುಕು ಯಾವುದೇ ಗೊತ್ತುಗುರಿಯಿಲ್ಲದೆ ಸಣ್ಣದೊಂದು ಭದ್ರತೆಯೂ ಇಲ್ಲದೆ ಹೇಗ್ಹೇಗೋ ಸಾಗುತ್ತ ಇಲ್ಲಿತನಕ ಬಂದು ನಿಂತಿತು. ಆದರೆ ಇಷ್ಟು ಕಾಲವಾದರೂ ನಿನ್ನನ್ನೂ ಮಕ್ಕಳನ್ನೂ ಒಂದಿಷ್ಟು ಚೆನ್ನಾಗಿ ನೋಡಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ ನೋಡು. ಇವತ್ತು ನನ್ನ ಸ್ನೇಹಿತನ ದೆಸೆಯಿಂದಾಗಿ ಒಂದು ಸ್ವತಂತ್ರ ಕೆಲಸವೇನೋ ಸಿಕ್ಕಿದೆ. ಅದರಿಂದಲಾದರೂ ದೇವರು ನಮ್ಮ ಮೇಲೆ ಕರುಣೆ ತೋರಿಸುತ್ತಾನೋ ನೋಡಬೇಕು. ಅದರ ಸಲುವಾಗಿ ಸ್ವಲ್ಪ ಓಡಾಟವಿದೆ. ಅಂದಹಾಗೆ ರಾತ್ರಿ ಒಂದು ವಿಶೇಷ ಹೋಮವಿದೆ ಮಾರಾಯ್ತಿ. ಅದಕ್ಕೆ ಬೇಕಾದ ಸಾಮಾನುಗಳನ್ನು ಸಂಜೆ ಹಿಂದಿರುಗುತ್ತ ತರುತ್ತೇನೆ. ಅಷ್ಟರೊಳಗೆ ಮನೆಯ ಯಾವುದಾದರೊಂದು ಕೋಣೆಯನ್ನು ಗುಡಿಸಿ ಸ್ವಚ್ಛ ಮಾಡಿಡು ಆಯ್ತಾ!’ ಎಂದು ಹೆಂಡತಿಗೆ ಸೂಚಿಸಿದರು.
ಗಂಡನ ಮಾತು ಕೇಳಿದ ದೇವಕಿಗೆ ಸಮಾಧಾನವಾಯಿತು. ‘ಅಯ್ಯೋ ದೇವರೇ! ಹಾಗೆಲ್ಲ ಏನೇನೋ ಯೋಚಿಸಬೇಡಿ. ಇಷ್ಟರವರೆಗೆ ನಿಮ್ಮ ಶಕ್ತಿ ಮೀರಿ ನಮ್ಮನ್ನು ನೋಡಿಕೊಂಡಿದ್ದೀರಿ. ಇನ್ನು ಮುಂದೆಯೂ ದೇವರು ನಮ್ಮ ಕೈಬಿಡೋದಿಲ್ಲ. ನಿಶ್ಚಿಂತೆಯಿಂದ ಹೋಗಿಬನ್ನಿ!’ ಎಂದಾಗ ಏಕನಾಥರ ಮುಖದಲ್ಲಿ ನೆಮ್ಮದಿಯ ನಗೆ ಮೂಡಿತು. ದೇವಕಿ ಒಳಗೆ ಹೋಗಿ ಉಪಹಾರ ತಂದು ಗಂಡನ ಮುಂದಿಟ್ಟಳು. ಸ್ತ್ರೀಸಹಜ ಆಸೆ, ವ್ಯಾಮೋಹಗಳಿಲ್ಲದ ದೇವಕಿಯಂಥ ಮುಗ್ಧ ಹೆಣ್ಣೊಬ್ಬಳು ತಮಗೆ ಹೆಂಡತಿಯಾಗಿ ಸಿಕ್ಕಿದ್ದು ತಮ್ಮ ಪೂರ್ವಜನ್ಮದ ಪುಣ್ಯವೇ ಇರಬೇಕು ಎಂದುಕೊಂಡ ಏಕನಾಥರು ಅವಳನ್ನು ಹೆಮ್ಮೆಯಿಂದ ದಿಟ್ಟಿಸಿದರು. ಗಂಡನ ನೋಟದಲ್ಲಿದ್ದ ಪ್ರೀತಿಯನ್ನು ಕಂಡ ದೇವಕಿ ಮುಗುಳ್ನಕ್ಕಳು. ಉಪಹಾರ ಸೇವಿಸಿದ ಏಕನಾಥರು ದೇವಕಿಗೆ ತಿಳಿಸಿ ಹೊರಗೆ ಹೊರಟರು.
ಗಂಡ ಹೋದ ದಿಕ್ಕನ್ನೇ ನೋಡುತ್ತ ನಿಂತ ದೇವಕಿಯಲ್ಲೂ ಹಳೆಯ ನೆನಪುಗಳು ಒಂದೊಂದಾಗಿ ಬಿಚ್ಚಿಕೊಂಡವು. ಹೌದು, ಇವರು ಹೇಳಿದ್ದು ನಿಜ. ಈ ಬಡತನದ ಬದುಕು ಇಂದು ನಿನ್ನೆಯದ್ದಲ್ಲ. ಇವರಂತೆ ತಾನೂ ಬಾಲ್ಯದಿಂದಲೂ ಬಡತನವನ್ನೇ ಉಂಡುಟ್ಟುಕೊಂಡು ಬೆಳೆದವಳಲ್ಲವಾ! ಅಮ್ಮ ತೀರಿ ಹೋದ ಮೇಲಂತೂ ಪಾಪದ ಅಪ್ಪ ನಾವು ಮೂವರು ಹೆಣ್ಣು ಮಕ್ಕಳನ್ನು ಬೆಳೆಸಲು ಮತ್ತು ಮದುಮೆ ಮಾಡಿಕೊಡಲು ಪಟ್ಟ ಪಡಿಪಾಟಲು ಎಂಥದ್ದೆಂಬುದು ಕೊನೆಯವಳಾದ ನಾನು ಮಾತ್ರವೇ ಕಣ್ಣಾರೆ ಕಂಡವಳು. ಹಾಗಾಗಿ ಅವರು ಶಕ್ತಿ ಮೀರಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಗ ಅವರು ತೋರಿಸಿದ ಗಂಡನ್ನು ವಿರೋಧವಿಲ್ಲದೆ ಒಪ್ಪಿಕೊಳ್ಳುವುದೂ ನನ್ನ ಜವಾಬ್ದಾರಿಯಾಗಿತ್ತು. ಹೀಗಾಗಿ ಅಪ್ಪನಿಗೆ ಸಿಕ್ಕಿದ ಮೂವರು ಅಳಿಯಂದಿರೂ ನಮ್ಮಷ್ಟೇ ಕಡು ಬಡವರು! ಆದರೆ ಇನ್ನಿಬ್ಬರು ಅಕ್ಕಂದಿರಿಗಿಂತಲೂ ಬಹಳ ಹೀನಸ್ಥಿತಿಯಲ್ಲಿರುವವರು ಮಾತ್ರ ನಾವೇ! ಗಂಡನ ಮನೆಗೆ ಬರುವಾಗ ನಾನೇನು ಶ್ರೀಮಂತಿಕೆಯ ಕನಸು ಕಟ್ಟಿಕೊಂಡು ಬಂದವಳಲ್ಲ. ಅಂಥ ಆಸೆಯನ್ನು ಕಟ್ಟಿಕೊಳ್ಳಲು ಬಹುಶಃ ಬಡತನವೇ ಅವಕಾಶ ಕೊಡಲಿಲ್ಲವೇನೋ? ನನ್ನ ಮನೆಯಲ್ಲಿ ಯಾವಾಗಲೂ ಹೊಟ್ಟೆಗೆ ಅಥವಾ ಬಟ್ಟೆಗೆ ಕೊರತೆಯಾಗುತ್ತಿದ್ದುದು. ಹಾಗಾಗಿ ಗಂಡನ ಮನೆಯಲ್ಲಿ ಅದಕ್ಕೆ ತೊಂದರೆಯಾಗದಂಥ ಜೀವನ ಸಿಕ್ಕಿದರೆ ಸಾಕು ಎಂದಷ್ಟೇ ಯೋಚಿಸಿ ಬಂದಿದ್ದೆ. ಆದರೆ ಇಲ್ಲಿಯೂ ನನ್ನ ತವರಿನ ಸ್ಥಿತಿಯೇ ಹಿಂಬಾಲಿಸಿ ಬಂತು! ಎಂದುಕೊಂಡ ದೇವಕಿಯ ಕಣ್ಣಾಲಿಗಳು ತುಂಬಿದವು. ಅಳುತ್ತಲೇ ದೇವರ ಕೋಣೆಗೆ ಹೋಗಿ, ‘ದೇವರೇ, ಇವರು ಹೋದ ಕೆಲಸ ಯಶಸ್ವಿಯಾಗಲಪ್ಪಾ. ಇನ್ನಾದರೂ ನಮ್ಮ ಬದುಕು ಹಸನಾಗುವಂತೆ ಮಾಡು ದೇವಾ!’ ಎಂದು ಭಕ್ತಿಯಿಂದ ಡೊಗ್ಗಾಲು ಬಿದ್ದು ಪ್ರಾರ್ಥಿಸಿದಳು.
***
ಏಕನಾಥರು ದೈವದ ಓಣಿಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರವಿದ್ದ ಬಸ್‍ನಿಲ್ದಾಣಕ್ಕೆ ನಡೆದೇ ಹೋದವರು ಅಲ್ಲಿ ಆಗಷ್ಟೇ ಶೀಂಬ್ರಗುಡ್ಡೆಯತ್ತ ಹೊರಟಿ ನಿಂತಿದ್ದ ಬಸ್ಸು ಹತ್ತಿ ಕುಳಿತರು. ಅರ್ಧಗಂಟೆಯಲ್ಲಿ ಬಸ್ಸು ಶೀಂಬ್ರಗುಡ್ಡೆಗೆ ತಲುಪಿತು. ಬಸ್ಸಿನಿಂದಿಳಿದವರು ಬಿಸಿಲನ್ನು ಸಹಿಸಲಾಗದೆ ತನ್ನಪ್ಪನ ಬಣ್ಣ ಮಾಸಿದ ಕೊಡೆಯನ್ನು ಬಿಚ್ಚಿ ಹೆಗಲಿಗೇರಿಸಿಕೊಂಡು ಮರಳಿ ಕಾಲ್ನಡಿಗೆಯಲ್ಲಿ ಹೊರಟರು. ಸೂರ್ಯ ನೆತ್ತಿಗೆ ಏರುವವರೆಗೆ ಶೀಂಬ್ರಗುಡ್ಡೆಯ ಗ್ರಾಮದೊಳಗೂ ಮತ್ತು ಬಾಕುಡಬೈಲಿನಲ್ಲೂ ಸಂಚರಿಸುತ್ತ ತಮಗೆ ಬೇಕಾದ ಕೆಲವು ಮುಖ್ಯ ಮನೆಗಳನ್ನು ಹೊಕ್ಕರು. ಅಲ್ಲಿನ ಹಲವು ಹಿರಿಯರಿಂದ ಅವಶ್ಯ ಮಾಹಿತಿಗಳನ್ನು ಕಲೆಹಾಕಿದರು. ಬಳಿಕ ಶಂಕರನ ಜಮೀನಿನತ್ತ ಹೋಗಿ ಮತ್ತೊಮ್ಮೆ ದೀರ್ಘವಾಗಿ ಸುತ್ತಾಡಿದವರು ಅಲ್ಲಿನ ನಾಗ, ಪರಿವಾರ ದೈವಗಳಿಗೆ ಆರ್ದರಾಗಿ ಕೈಮುಗಿದು ಹಿಂದಿರುಗಿದರು. ಪೂಜಾ ಸಾಮಾಗ್ರಿಗಳನ್ನು ಕೊಳ್ಳಲು ಎರಡು ಸಾವಿರ ರೂಪಾಯಿಗಳು ಬೇಕಿದ್ದವು. ಅವರ ಕಿಸೆಯಲ್ಲಿ ನೂರು ರೂಪಾಯಿ ಬಿಟ್ಟರೆ ಬೇರಿರಲಿಲ್ಲ. ಆದರೆ ಅದನ್ನೂ ಯೋಚಿಸಿಯೇ ಬಂದಿದ್ದರು. ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿಗೆ ಹೋಗಿ ತಮ್ಮ ಕೈಲ್ಲಿದ್ದ ಒಂದೇ ಒಂದು ನಾಲ್ಕು ಗ್ರಾಮ್‍ನ ಹಳೆಯ ಉಂಗುರವನ್ನು ತೆಗೆದು ಅಡವಿಟ್ಟು ಹಣ ಪಡೆದರು. ಅನಂತೇಶ್ವರ ದೇವಸ್ಥಾನದ ಚೌಕಿಗೆ ಹೋಗಿ ಪೂಜೆಗೆ ಬೇಕಾದ ಸಮಾಗ್ರಿಗಳನ್ನು ಕೊಂಡು ಮನೆಯತ್ತ ಹೆಜ್ಜೆ ಹಾಕಿದರು.
ಅಂದು ಸಂಜೆ ಏಕನಾಥರು ಹೋಮ ಕುಂಡವನ್ನು ಸ್ಥಾಪಿಸಿ ಪೂಜಾವಿಧಿಗೆ ವಿಶೇಷ ಮಂಡಲವನ್ನು ಬರೆದು ಸ್ನಾನ ಮಾಡಿ ಮಡಿಯುಟ್ಟು ಹೋಮ ಕುಂಡದ ಮುಂದೆ ಪದ್ಮಾಸನದಲ್ಲಿ ಕುಳಿತಿದ್ದರು. ದೇವಕಿ ಮತ್ತು ಇಬ್ಬರು ಮಕ್ಕಳು ಸ್ವಲ್ಪದೂರದಲ್ಲಿ ಕುಳಿತು ಪೂಜಾ ಸಾಮಾಗ್ರಿಗಳನ್ನು ಒಪ್ಪವಾಗಿಡುತ್ತ ಪೂಜೆಗೆ ಬೇಕಾದ ವಸ್ತುಗಳನ್ನು ಹೊಂದಿಸುತ್ತಿದ್ದರು. ಶಂಕರನೂ ನಿಗದಿತ ಸಮಯಕ್ಕೆ ಸರಿಯಾಗಿ ಫಲಪುಷ್ಪ ತಾಂಬೂಲಾದಿಗಳು ತುಂಬಿದ ದೊಡ್ಡ ಹರಿವಾಣದೊಂದಿಗೆ ಏಕನಾಥರ ಮನೆಗೆ ಆಗಮಿಸಿದ. ಅವನು ಥಳಥಳ ಹೊಳೆಯುವ ಬಿಳಿಯ ರೇಶ್ಮೆ ಲುಂಗಿಯನ್ನೂ ಅದೇ ಬಣ್ಣದ ಅಂಗಿಯನ್ನೂ ತೊಟ್ಟಿದ್ದ. ಏಕನಾಥರು ಅವನನ್ನೊಮ್ಮೆ ಮೇಲಿಂದ ಕೆಳಗೆ ದಿಟ್ಟಿಸಿದರು. ಕಣ್ಣು ಕೊರೈಸುವ ಅವನ ವೇಷಭೂಷಣವನ್ನು ಕಂಡವರಿಗೆ ಯಾಕೋ ಕಸಿವಿಸಿಯಾಯಿತು. ಆದರೂ ತೋರಿಸಿಕೊಳ್ಳದೆ, ‘ಶಂಕರ ಅಂಗಿ, ಬನಿಯಾನು ತೆಗೆದಿಟ್ಟು ಪೂಜೆಗೆ ಕುಳಿತುಕೋ ಮಾರಾಯಾ!’ ಎಂದು ಹೋಮ ಕುಂಡದತ್ತ ನೋಡುತ್ತ ಅಂದರು. ಆದರೆ ಶಂಕರನಿಗೆ ಅಲ್ಲಿ ಏಕನಾಥರ ಹೆಂಡತಿಯನ್ನು ಕಂಡು ಎಂದೂ ಇಲ್ಲದ ನಾಚಿಕೆಯಾಯಿತು. ಆದರೆ ತನ್ನ ಕೊರಳಿನಲ್ಲೂ ಮೈಕೈಯಲ್ಲೂ ರಾರಾಜಿಸುವ ಚಿನ್ನಾಭರಣಗಳನ್ನು ನೆನೆದವನ ಸಂಕೋಚವು ಮಾರು ದೂರ ಸರಿದು ರಪ್ಪನೆ ಅಹಂಕಾರವು ತಲೆಯೆತ್ತಿತು. ಆದ್ದರಿಂದ ಗಜಗಾಂಭೀರ್ಯದಿಂದ ತನ್ನ ಮೇಲುಡುಪುಗಳನ್ನು ತೆಗೆದಿರಿಸಿದವನು ಹೋಮಕುಂಡದೆದುರು ಚಕ್ಕಳ ಬಕ್ಕಳ ಹಾಕಿ ಎದೆ ಸೆಟೆಸಿ ಕುಳಿತುಕೊಂಡ. ಅವನ ಮೈಮೇಲೆ ಹೊರಳಾಡುತ್ತಿದ್ದ ಚಿನ್ನಾಡಂಭರವನ್ನು ಕಂಡ ಏಕನಾಥ ದಂಪತಿಯ ಮನಸ್ಸುಗಳು ಎತ್ತೆತ್ತಲೋ ಹರಿದಾಡಿದವು. ಆದರೂ ಸ್ಥಿಮಿತಕ್ಕೆ ತಂದುಕೊಂಡು ಪೂಜಾ ಕೈಂಕರ್ಯದತ್ತ ಗಮನ ಹರಿಸಿದರು.
ಬಹಳ ವರ್ಷಗಳ ನಂತರ ಏಕನಾಥರ ಮನೆಯಲ್ಲಿ ಇಂದು ಒಂದು ಗಂಟೆ ಸಮಯದ ಸುದೀರ್ಘ ಹೋಮವೊಂದು ನಡೆಯಿತು. ಆ ಹವನದಿಂದ ಸೃಷ್ಟಿಯಾದ ಸತ್ವಪೂರ್ಣ ಧೂಮವು ಅವರ ಶಿಥಿಲಗೊಂಡ ಮನೆಯ ಒಳಹೊರಗಿನ ಅಣುಅಣುವನ್ನೂ ಬೆಚ್ಚಗೆ ಆವರಿಸಿ ನವಚೈತನ್ಯವನ್ನು ಮೂಡಿಸಿತು. ಮನೆಯ ವಠಾರದಲ್ಲೂ ಮತ್ತು ತೋಟದಲ್ಲೂ ಮನುಷ್ಯರ ಅರಿವಿಗೆ ಬಾರದಂಥ ಸಕಾರಾತ್ಮಕ ಬದಲಾವಣೆಯೊಂದು ಜರಗಿತು. ಅಲ್ಲಿನ ಜನಜೀವನ ಮತ್ತು ಪರಿಸರಕ್ಕೆ ಮಾರಕವೆನಿಸಿದ್ದ ಅಪರಿಮಿತ ಸೂಕ್ಷ್ಮಾಣುಜೀವಿಗಳು ಹೋಮದ ಪ್ರಭಾವಕ್ಕೆ ಸಿಲುಕಿ ಉಸಿರುಗಟ್ಟಿ ನಾಶವಾದವು. ಗಿಡಮರ ಬಳ್ಳಿಗಳು ಚೇತರಿಸಿಕೊಂಡವು. ಪ್ರಾಣಿಪಕ್ಷಿ ಮತ್ತಿತರ ಜೀವರಾಶಿಗಳು ಉಲ್ಲಾಸದಿಂದ ಕಲವರವೆಬ್ಬಿಸುತ್ತ ಸಂಚರಿಸಿದವು. ಪ್ರಾಚೀನ ಋಷಿಮುನಿಗಳು ಮಾನವ ಮತ್ತು ಪ್ರಕೃತಿಯ ಕಲ್ಯಾಣಕ್ಕೆಂದೇ ಆಚರಿಸುತ್ತಿದ್ದ ಧಾರ್ಮಿಕ ವಿಧಿಯಾಚರಣೆಯೊಂದು ಏಕನಾಥರಿಂದಲೂ ನಡೆದ ಪರಿಣಾಮ ಅವರ ಪರಿಸರವು ಪರಿಶುದ್ಧಗೊಂಡಿತು.
ಏಕನಾಥರು ಕೊನೆಯಲ್ಲಿ ಹೋಮಕ್ಕೆ ಪೂರ್ಣಾಹುತಿ ನೀಡಿದರು. ಎದ್ದು ಒಳಗೆ ಹೋಗಿ ಮರಳಿ ಸ್ನಾನ ಮಾಡಿ ಬಂದು ಕುಳಿತರು. ದೇವಕಿ ಆಯ್ದಿಟ್ಟಿದ್ದ ವೀಳ್ಯದೆಲೆಗೆ ಅಂಕೋಲೆ ಬಳ್ಳಿ ಮತ್ತಿತರ ವಸ್ತುಗಳನ್ನು ತೇದು ತಯಾರಿಸಿದ್ದ ಗಂಧವನ್ನು ಕಾಡಿಗೆಯೊಂದಿಗೆ ಲೇಪಿಸಿದರು. ಮಗ ದ್ವಿತೇಶ್ ನನ್ನು ಕರೆದು ಅವನ ಮೂಲಕ ಬಾಲಾಂಜನ ನೋಡಿದರು. ಅವನಿಂದ ಶುಭಸೂಚನೆ ದೊರೆಯಿತು. ಮುಂದಿನ ಮುಖ್ಯ ಪ್ರಯೋಗಕ್ಕೆ ತೊಡಗಿದರು. ಕೆಲವು ಕ್ಷಣ ಅಂಜನವನ್ನು ನೆಟ್ಟ ದೃಷ್ಟಿಯಿಂದ ದಿಟ್ಟಿಸಿದರು. ಅವರ ಮುಖಭಾವವು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು. ಒಮ್ಮೆ ಉಗ್ರವಾದರೆ ಮತ್ತೊಮ್ಮೆ ಅನುಕಂಪ. ಇನ್ನೊಮ್ಮೆ ಭೀತಿ! ಮಗದೊಮ್ಮೆ ಅವೆಲ್ಲದರ ಮಿಶ್ರಭಾವಗಳು ಅವರ ಉಬ್ಬಿದ ಎಣ್ಣೆಗೆಂಪಿನ ಮುಖದಲ್ಲಿ ಕುಣಿಯುತ್ತಿದ್ದವು. ಹಾಗಾಗಿ ತಮ್ಮೊಳಗಿನ ಹೊಯ್ದಾಟವನ್ನು ಹತೋಟಿಗೆ ತರಲು ನಡುನಡುವೆ ಧ್ಯಾನಸ್ಥರಾಗುತ್ತಿದ್ದರು. ಸುಮಾರು ಒಂದು ಗಂಟೆಯಿಂದ ಚಕ್ಕಳ ಬಕ್ಕಳ ಹಾಕಿ ಪೂಜಾವಿಧಿಗಳಲ್ಲಿ ಭಯಭಕ್ತಿಯಿಂದ ಪಾಲುಗೊಂಡಿದ್ದ ಶಂಕರನ ಸೊಂಟ ಮತ್ತು ಕೈಕಾಲುಗಳು ಜೊಂಪು ಹತ್ತಿದ್ದವು. ಅದರ ವೇದನೆಯೊಂದಿಗೆ ಅವನ ಮನಸ್ಸು ಕೂಡಾ ತೀವ್ರ ಗೊಂದಲದ ಗೂಡಾಗಿತ್ತು. ಸ್ವಲ್ಪಹೊತ್ತಿನಲ್ಲಿ ಅಂಜನಶಾಸ್ತ್ರ ಮುಗಿಯಿತು. ಏಕನಾಥರು ಶಾಂತಚಿತ್ತರಾಗಿ ಕಣ್ಣು ತೆರೆದರು. ತಮ್ಮ ಸಂಸಾರವನ್ನು ಒಳಗೆ ಹೋಗುವಂತೆ ಸೂಚಿಸಿದರು. ದೇವಕಿ ಯಜ್ಞದ ಕೆಲವು ಸಾಮಾಗ್ರಿಗಳನ್ನೆತ್ತಿಕೊಂಡು ಮಕ್ಕಳೊಂದಿಗೆ ಒಳಗೆ ಹೋದಳು. ಏಕನಾಥರು ಶಂಕರನೊಂದಿಗೆ ಮಾತಿಗಿಳಿದರು.
‘ನೋಡು ಶಂಕರ, ಮೊನ್ನೆ ನಾವು ಏನೆಲ್ಲ ವಿವರಿಸಿದೆವು ಅಂತ ನೆನಪಿದೆಯಲ್ಲ ನಿನಗೆ…?’ ಎಂದು ಅವನನ್ನು ಗಂಭೀರವಾಗಿ ದಿಟ್ಟಿಸಿದರು. ಆ ಕ್ಷಣ ತಮ್ಮ ಕಾರ್ಯಸಿದ್ಧಿಯ ತಂತ್ರವನ್ನು ಶಂಕರನಿಗೆ ಯಾವ ರೀತಿಯಿಂದ ಮನಮುಟ್ಟುವಂತೆ ವಿವರಿಸುವುದು ಎಂಬ ಆತಂಕದಿಂದಲೋ ಅಥವಾ ತಮ್ಮ ಬದುಕಿಗೆ ಭದ್ರ ನೆಲೆಯೊಂದನ್ನು ಕಂಡುಕೊಳ್ಳುವುದಕ್ಕಾಗಿ ತಮ್ಮ ಅಂತರಾತ್ಮದ ಕೂಗನ್ನು ಬದಿಗೊತ್ತಿ ಅಡ್ಡದಾರಿ ಹಿಡಿಯುತ್ತಿದ್ದೇವೆಂಬ ಭಯದಿಂದಲೋ ಅವರ ಕೆನ್ನೆಗಳು ಸೂಕ್ಷ್ಮವಾಗಿ ಕಂಪಿಸುತ್ತ ತುಟಿಗಳು ಅದುರುತ್ತಿದ್ದವು. ಹಾಗಾಗಿ ಪದೇಪದೇ ಕಣ್ಣು ಮುಚ್ಚುತ್ತ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಹೆಣಗುತ್ತಿದ್ದರು.
‘ಹೌದು ಗುರೂಜಿ ನೆನಪಿದೆ…!’ ಎಂದ ಶಂಕರ ಆತಂಕದಿಂದ.
ಈಗ ಏಕನಾಥರು ಹತೋಟಿಗೆ ಬಂದರು. ‘ಆದರೆ ನಮಗೀಗ ಅಂಜನದಲ್ಲಿ ಇನ್ನಷ್ಟು ಸಂಗತಿಗಳು ಕಂಡು ಬಂದಿವೆ ಮಾರಾಯಾ ಅದನ್ನೂ ಹೇಳುತ್ತೇವೆ ಕೇಳು!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಶಂಕರನ ಚಡಪಡಿಕೆ ಇಮ್ಮಡಿಯಾಗಿ ಏಕನಾಥರ ಮೇಲೆ ಅವನಲ್ಲಿ ಅಸಹನೆ ಹುಟ್ಟಿತು. ಆದರೆ ಅದರ ನಡುವೆಯೂ ‘ಅದೇನಿರಬಹುದು…?’ ಎಂಬ ಆಸಕ್ತಿಯೂ ಕೆರಳಿತು. ‘ಹೌದಾ ಗುರೂಜಿ, ಏನದು ಹೇಳಿ…?’ ಎಂದ ಅವರನ್ನೇ ದಿಟ್ಟಿಸುತ್ತ.
‘ನೀನೀಗ ಕೊಂಡಿರುವ ಜಾಗ ಉಂಟಲ್ಲವಾ ಅದು ಒಂದು ಕಾಲದಲ್ಲಿ ಶೀಂಬ್ರಗುಡ್ಡೆಯ ಜಮೀನ್ದಾರ ಕುರುಡಯ್ಯ ಎಂಬವರದ್ದಾಗಿತ್ತು. ಅದರಲ್ಲಿ ನಾಗಬೆರ್ಮರೊಂದಿಗೆ ಕಾರ್ನಿಕದ ಪಂಜುರ್ಲಿ, ನಂದಿಗೋಣ ಮತ್ತು ರೆಕ್ಕೆಸಿರಿ ಎಂಬ ಪಂಚ ದೈವಗಳು ಇದ್ದವು ಮತ್ತು ದಕ್ಷಿಣಕನ್ನಡ, ಕಾಸರಗೋಡು, ಕೇರಳದಿಂದ ಆ ಕುಟುಂಬದ ಕೆಲವರನ್ನು ಹಿಂಬಾಲಿಸಿ ಬಂದಿದ್ದ ಹಾಗೂ ಅವರ ಕುಟುಂಬದ ಇನ್ನು ಕೆಲವರು ತಾವೇ ಇಷ್ಟಪಟ್ಟು ಕರೆದು ತಂದಿದ್ದ ಒಟ್ಟು ನೂರಾವೊಂದು ದೈವಗಳಿರುವುದು ಇಲ್ಲಿ ಅಂಜನದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ! ಇನ್ನೊಂದು ವಿಶೇಷವೆಂದರೆ ಕುರುಡಯ್ಯನವರ ಮುಂದಿನ ಮನೆತನದವರೂ ಅಷ್ಟು ದೈವಗಳನ್ನು ವರ್ಷಂಪ್ರತಿ ಶ್ರದ್ಧಾಭಕ್ತಿಯಿಂದ, ವೈಭವದ ಆಚರಣೆಗಳಿಂದ ಪೂಜಿಸಿಕೊಂಡು ಬರುತ್ತಿದ್ದರು. ಹಾಗಾಗಿ ಆ ದೈವಗಳು ಕೂಡಾ ಅವರ ಅಂದಿನ ತಲೆಮಾರಿಗೆ ಯಥೇಚ್ಛ ಸುಖಭೋಗವನ್ನು ನೀಡುತ್ತ ಬಂದಿದ್ದವು. ಆದರೆ ಆಮೇಲೆ ಕಾಲ ಬದಲಾಯಿತು. ಕುರುಡಯ್ಯನ ಮೊಮ್ಮಕ್ಕಳ ನಂತರದ ವಿದ್ಯಾವಂತ ಪೀಳಿಗೆಯು ಆ ಶಕ್ತಿಗಳ ಮೇಲೆ ಭಕ್ತಿ, ಆಸಕ್ತಿಯನ್ನು ಕಳೆದುಕೊಂಡು ತಂತಮ್ಮೊಳಗೆ ಕಚ್ಚಾಡುತ್ತ ಇದ್ದುದು ಕ್ರಮೇಣ ಹೊಸ ಬದುಕು ಅರಸುತ್ತ ದೇಶಾಂತರ ಹೊರಟು ಹೋಯಿತು.
ಕೊನೆಯಲ್ಲಿ ಅಲ್ಲಿ ಆ ಮನೆತನದ ಕೆಲವು ಹಿರಿಯ ಜೀವಗಳು ಮಾತ್ರವೇ ಉಳಿದರು. ಅವರು ತಾವು ಬದುಕಿರುವವರೆಗೆ ದೈವ ದೇವರುಗಳನ್ನು ನೇಮನಿಷ್ಠೆಯಿಂದ ಪೂಜಿಸಿಕೊಂಡು ಬಂದರು. ಆದರೆ ಮುಂದೊಂದು ಕಾಲಕ್ಕೆ ಅವರೂ ಗತಿಸಿದಾಗ ಆ ದೈವಶಕ್ತಿಗಳಿಗೆ ಹೂ, ನೀರು, ನೆರಳಿಲ್ಲದಂತಾಯಿತು. ಮೊನ್ನೆ ನೀನು ಹೇಳಿದ ಹಾಗೆ ಅವರ ಕುಟುಂಬದವರೆಲ್ಲ ಹೊರದೇಶಗಳಲ್ಲಿ ನೆಲೆಸಿದ್ದಾರೆ ಎನ್ನುವುದು ಕೂಡಾ ಇಲ್ಲಿ (ಅಂಜನದಲ್ಲಿ) ತಿಳಿದು ಬರುತ್ತದೆ. ಆದ್ದರಿಂದ ಆ ನಾಗ, ಪರಿವಾರ ಶಕ್ತಿಗಳು ತಮ್ಮ ನೆಲೆಯ ಜೀರ್ಣೋದ್ಧಾರಕ್ಕಾಗಿ ಎಷ್ಟೋ ಕಾಲದಿಂದ ಕಾಯುತ್ತಿರುವುದು ಗೋಚರಿಸುತ್ತಿದೆ. ಹಾಗಾಗಿ ನಾವು ನಮ್ಮ ಗುರುಗಳೊಂದಿಗೆ ಕಲಿತ ವಿದ್ಯೆಯ ಆಧಾರದ ಮೇಲೆ ನಿನಗೊಂದು ಮಾತು ಹೇಳುತ್ತೇವೆ. ಮನಸ್ಸಿಟ್ಟು ಕೇಳು. ನಾವು ಪೂಜಿಸುವ ನಾಗ, ದೈವಸ್ಥಾನಗಳು ಪಾಳುಬಿದ್ದು ಅದೆಷ್ಟು ಶತಮಾನಗಳು ಕಳೆದರೂ ಆ ಶಕ್ತಿಗಳು ಆ ತಾಣದಿಂದ ಹೊರಟು ಹೋಗುವುದಿಲ್ಲ. ಯಾಕೆಂದರೆ ದೇವರೇ ಅಂಥ ಶಕ್ತಿಗಳನ್ನು ಭೂಮಿಯ ಮೇಲಿನ ಚರಾಚರಗಳ ಸಂರಕ್ಷಣೆಗಾಗಿಯೇ ಕಳುಹಿಸಿರುತ್ತಾನೆ. ಮುಖ್ಯವಾಗಿ ಅವು ಮನುಷ್ಯರೊಳಗಿನ ಕಾಮ, ಕ್ರೋಧ, ಮೋಹ, ಲೋಭ, ಮದ, ಮಾತ್ಸರ್ಯಗಳಂಥ ದುರ್ಗುಣಗಳನ್ನು ನಾಶಮಾಡಿ, ಅವರ ಜೀವನವನ್ನು ಶ್ರೀಮಂತಗೊಳಿಸುವ ಕಾರ್ಯಕ್ಕಾಗಿಯೇ ನೇಮಿಸಲ್ಪಟ್ಟಿರುತ್ತವೆ. ಆದ್ದರಿಂದ ಅವು ನಿಭಾಯಿಸುವ ಸತ್ಕಾರ್ಯಕ್ಕೆ ತಕ್ಕನಾಗಿ ನಮ್ಮಿಂದ ಪೂಜೆ, ಪುನಸ್ಕಾರಗಳನ್ನು ಪಡೆಯುವ ಅರ್ಹತೆಯನ್ನೂ ಪಡೆದಿರುತ್ತವೆ. ಹೀಗಾಗಿ ಅನಾದಿಕಾಲದಿಂದಲೂ ಅವುಗಳನ್ನು ನಂಬಿಕೊಂಡು ಬರುತ್ತಿದ್ದ ಜನರು ಯಾವುದೋ ಒಂದು ಕಾಲಘಟ್ಟದಲ್ಲಿ ತಮ್ಮನ್ನು ಕಡೆಗಣಿಸಿದರೂ ಅವು ನಿರಾಶೆ ಹೊಂದುವುದಿಲ್ಲ. ಎಂದಾದರೊಂದು ದಿನ ತಮ್ಮನ್ನು ಸೇವಿಸುವ ಭಕ್ತಸಮೂಹವೊಂದು ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿ ಅವು ಕಾಲ ಕಳೆಯುತ್ತವೆ ಎಂಬುದು ನಮ್ಮ ಹಿರಿಯರ ನಂಬಿಕೆ.
ಆದರೆ ನಾವೆಲ್ಲ ಇಂಥ ಅಲೌಕಿಕ ವಿಚಾರಗಳನ್ನು ತಿಳಿಯದೆ ಅಥವಾ ತಿಳಿದರೂ ಆ ಶಕ್ತಿಗಳನ್ನು ನಿರ್ಲಕ್ಷ್ಯಿಸಿ ವಕ್ಕಲೆಬ್ಬಿಸಲು ಪ್ರಯತ್ನಿಸಿದೆವು ಎಂದಿಟ್ಟುಕೋ. ಆಮೇಲೆ ಅವುಗಳು ಅಂಥವರ ತಲೆತಲಾಂತರವನ್ನು ನೆಮ್ಮದಿಯಿಂದಿರಲು ಬಿಡುವುದಿಲ್ಲ! ಇದು ನಾವು ನಮ್ಮ ಅನೇಕ ವರ್ಷಗಳ ವೃತ್ತಿಜೀವನದ ಅನುಭವದಿಂದ ಕಂಡ ಸತ್ಯ! ಆದರೆ ನೀನು ಅಂಥದ್ದೊಂದು ಭಯಂಕರ ಹಿನ್ನೆಲೆಯಿರುವ ಜಾಗವನ್ನೇ ಖರೀದಿಸಿಬಿಟ್ಟಿದ್ದಿ. ಹೀಗಿರುವಾಗ ಈಗ ಅದನ್ನು ಉಳಿಸಿಕೊಳ್ಳಲು ಮತ್ತು ವೃದ್ಧಿ ಪಡಿಸಲು ಉಳಿದಿರುವ ಒಂದೇ ಒಂದು ದಾರಿ ಎಂದರೆ ಆ ಶಕ್ತಿಗಳನ್ನು ನೀನೇ ಮರಳಿ ನಂಬುವ ಕಾರ್ಯಕ್ಕೆ ಕೈಹಾಕುವುದು. ಅದಕ್ಕೆ ನೀನು ಮನಸ್ಸು ಮಾಡಿದೆಯೆಂದರೆ ಆ ನಂತರ ಅವು ನಿನ್ನ ಏಳೇಳು ಜನ್ಮದ ಪಾಪಕೃತ್ಯಗಳನ್ನೂ ನಿವಾರಿಸಿಬಿಡುತ್ತವೆಯಲ್ಲದೇ ಮುಂದೆ ನಿನ್ನ ಅನಂತ ಏಳಿಗೆಗೂ ಅವು ಬೆನ್ನೆಲುಬಾಗಿ ನಿಲ್ಲುತ್ತವೆ!’ ಎಂದು ಏಕನಾಥರು ಶಂಕರನ ದೇಹ ಮನಸ್ಸುಗಳೆರಡೂ ಕಂಪಿಸುವಂಥ ಪ್ರವಚನವನ್ನು ನೀಡಿ ಗಂಭೀರವಾದರು.
ಗುರೂಜಿಯ ಮಾತುಗಳನ್ನು ರೋಮಾಂಚಿತನಾಗಿ ಕೇಳಿಸಿಕೊಳ್ಳುತ್ತಿದ್ದ ಶಂಕರನ ಅಲ್ಲಿಯವರೆಗಿನ ಯೋಚನೆ, ಯೋಜನೆಗಳೆಲ್ಲ ಮುಡಮೇಲಾಗಿಬಿಟ್ಟವು! ಅವನು ಅವರನ್ನು ಹುಬ್ಬುಗಂಟಿಕ್ಕಿ ನೋಡಿದವನು, ‘ಎಲಾ, ಬೋಸುಡಿಮಗನೇ…! ನನ್ನ ಬುಡಕ್ಕೇ ಕದನಿ ಪಟಾಕಿ ಇಟ್ಟುಬಿಟ್ಟೆಯಲ್ಲಾ…!’ ಎಂದು ಒಳಗೊಳಗೇ ಬೈಯ್ದುಕೊಂಡನಾದರೂ ವಿಧಿಯಿಲ್ಲದೆ ಸ್ಥಿಮಿತಕ್ಕೆ ಬಂದು ತಾನೂ ಗಂಭೀರವಾಗಿ ಯೋಚಿಸಿದ. ಅತ್ತ ಶಂಕರನ ಮುಖ ತಟ್ಟನೆ ಕಠಿಣವಾದುದನ್ನು ಅಡಿಗಣ್ಣಿಂದಲೇ ಗಮನಿಸಿದ ಏಕನಾಥರು, ‘ಶಂಕರಾ ಈಗ ಬಂದೆ, ಕುಳಿತು ಕೋ….!’ ಎನ್ನುತ್ತ ದೇಹಭಾದೆಯ ಆತುರದಲ್ಲಿದ್ದಂತೆ ಎದ್ದು ಒಳಗೆ ನಡೆದರು.
(ಮುಂದುವರೆಯುವುದು)
***************
ಗುರುರಾಜ್ ಸನಿಲ್
ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.
ಬಡತನದಿಂದ ಬಳಲುತ್ತಿದ್ದ ಏಕನಾಥರ ಕುಟುಂಬ ಒಂದು ಸುವ್ಯವಸ್ಥೆಯ ಹಂತಕ್ಕೆ ಕಾಲಿಡುವುದನ್ನು ನಾವು ಈ ಅಧ್ಯಾಯದಲ್ಲಿ ಕಾಣಬಹುದು. ಹೋಮ ಹವನಗಳು ಪ್ರಕೃತಿಗೆ ಹೇಗೆ ಪೂರಕವಾಗಿವೆಯೆಂಬುದನ್ನು ಕೂಡ ಕಾದಂಬರಿಕಾರರು ಇಲ್ಲಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಅಭಿನಂದನೆಗಳು
ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದ ಅನಿತಾ ಅವರೇ…