ಕಥೆ
ಗೋವಿಂದನ ದಯೆ–
(ಭಾಗ-01)
ಗುರುರಾಜ ಶಾಸ್ತ್ರಿ
ಏನೇ ಹೇಳಿ, ಮಕ್ಕಳಿಗೆ ಅಮೇರಿಕಾ ಸಂಸ್ಕೃತಿ ಅರ್ಥವಾಗುವುದಕ್ಕೆ ಮುಂಚೆ ನಾವು ಭಾರತಕ್ಕೆ ವಾಪಸ್ ಬಂದರೆ, ಸರಿಯಾದ ನಿರ್ಧಾರ ಆಗುತ್ತೆ, ಇಲ್ಲವಾದರೆ, ಭಾರತಕ್ಕೆ ಮರಳಿ ಬರುವುದು ಕನಸಷ್ಟೆ. ಇದರಲ್ಲಿ ಮಕ್ಕಳದ್ದಾಗಲಿ, ಅಮೇರಿಕಾ ದೇಶದ ಸಂಸ್ಕೃತಿಯದ್ದಾಗಲಿ ತಪ್ಪೇನಿಲ್ಲ. ನೀವೇ ನೋಡಿ, ಎಷ್ಟೋಂದು ಜನ ಬೆಂಗಳೂರಿನಲ್ಲಿ ನೆಲೆಸಿರುವವರು, ದೂರದ ಹಳ್ಳಿಗಳಿಂದ ವಲಸೆ ಬಂದವರೇ. ಕೆಲವರು ಇತ್ತೀಚೆಗೆ ಬಂದರೆ, ಮತ್ತೆ ಕೆಲವರು ಎಷ್ಟೋ ತಲೆಮಾರುಗಳಿಗೆ ಮುಂಚೆಯೇ ಬಂದು ನೆಲೆಸಿದರು. ಈಗ ಅವರಿಗೆ ಅವರ ಹಳ್ಳಿಗಳಿಗೆ ಹೋಗಿ ಎಂದರೆ ಹೋಗುತ್ತಾರಾ? ಹಾಗೇ ಅಮೇರಿಕಾ ನೋಡಿದ ಮಕ್ಕಳು ಬೆಂಗಳೂರನ್ನು ನೋಡುವುದು. ಓ ಇದೇನ್ ಯಾರ್ ಕತೆ ಹೇಳಲಿಕ್ಕೆ ಹೊರಟಿದ್ದೀನಿ ಅಂತ ಯೋಚಿಸ್ತಿದ್ದೀರಾ. ಬೇರೆ ಯಾರ ಕತೆಯೂ ಅಲ್ಲ, ನನ್ನದೇ ಕತೆ, ನಾನು ರಾಘವ ಶರ್ಮ.
ಎಲ್ಲಿಂದ ಶುರು ಮಾಡಲಿ ನನ್ನ ಕತೆ, ಅಂತ ಯೋಚಿಸ್ತಿದ್ದೆ. ಮೊದಲು ನಾನು ಈಗ ಏನು ಮಾಡ್ತಾ ಇದೀನಿ ಅಂತ ತಿಳಿಸ್ತೀನಿ. ಸಧ್ಯಕ್ಕೆ ಗಂಟುಮೂಟೆ ಎಲ್ಲಾ ಕಟ್ಕೊಂಡು ಅಮೇರಿಕಾದಿಂದ ಬೆಂಗಳೂರಿಗೆ ಹೋಗಲು ವಿಮಾನಕ್ಕಾಗಿ ಕಾಯ್ತಾ ಇದ್ದೀನಿ. ಜೊತೆಗೆ ನನ್ನ ಹೆಂಡತಿ ವೈಶಾಲಿ ಹಾಗೂ ಇಬ್ಬರು ಗಂಡು ಮಕ್ಕಳು, ವೆಂಕಟೇಶನಿಗೆ ನಾಲ್ಕು ವರ್ಷ ಮತ್ತು ಶ್ರೀನಿವಾಸನಿಗೆ ಎರಡು ವರ್ಷ. ನಮ್ಮ ಜೊತೆ ಬರ್ತಾ ಇರೋ ಇನ್ನಿಬ್ಬರ ಬಗ್ಗೆ ಆಮೇಲೆ ಹೇಳ್ತೀನಿ. ಏನ್, ಎರಡೇ ವರ್ಷದ ಅಂತರದಲ್ಲಿ ಎರಡು ಮಕ್ಕಳೇ ಅಂದ್ರ. ಇಲ್ಲೇ ಮಕ್ಕಳು ಹುಟ್ಟುದ್ರೇ ಅವರಿಗೆ ಅಮೇರಿಕಾ ಪೌರತ್ವ ಸಿಗುತ್ತೆ, ಮುಂದೆ ಯಾವತ್ತಾದ್ರು ಅವರಿಗೆ ಉಪಯೋಗ ಆಗಬಹುದು ಅಂತ ನನ್ನ ಹೆಂಡತಿ ವೈಶಾಲಿಯ ಆಸೆ. ಆದ್ರೆ ಅವಳಿಗೂ ಈ ದೇಶ ಏನು ಹಿಡಿಸಲಿಲ್ಲ. ಅಗ್ರಹಾರದಲ್ಲಿ ಹುಟ್ಟಿ ಬೆಳೆದೋವ್ಳು, ಅಕ್ಕ, ಪಕ್ಕ, ಜನ, ಜಾತ್ರೆ ಎಲ್ಲಾ ಅವ್ಳೀಗೂ ಬೇಕು, ಅದಕ್ಕೆ ನನಗಿಂತ ಹೆಚ್ಚು ಸಂತೋಷ ಅವಳಿಗೇ ಆಗ್ತಾ ಇರೋದು ಇವತ್ತು. ಇಲ್ಲಿಂದ ವಾಪಸ್ ತೆಗೆದುಕೊಂಡುಹೋಗುವಂತ ಸಾಮನು ಏನೂ ಇಲ್ಲ ಬಿಡಿ. ಯಾಕಂದ್ರೆ ಇಲ್ಲಿ ನಮ್ಮದು ಅಂತಾ ಏನೂ ಇರಲಿಲ್ಲ. ಇಷ್ಟು ಸಾಕು ಕತೆ ಪ್ರಾರಂಭಿಸಲಿಕ್ಕೆ. ಸ್ವಲ್ಪ ನಂದೂ ಹಳೇ ಕತೆ ಶುರು ಮಾಡ್ತೀನಿ. ಕೇಳಿ, ಒಂತರಾ ನನಗಂತೂ ನನ್ನ ಕತೆ ಹೇಳ್ಕೊಳಕ್ಕೆ ಮಜಾ ಅನಿಸುತ್ತೆ.
ಪಂಡಿತಸ್ಯ ಪುತ್ರಃ ಶುದ್ಧ ಶುಂಟಿ ಅಂತಾರೆಲ್ಲ ಹಾಗೇ, ನನ್ನ ಅಪ್ಪ ಅಮ್ಮನ ದೊಡ್ಡ ಮಗನಾದ ನನಗೆ ಮಾತ್ರ ಈ ಗಾದೆ ಸರಿಹೊಂದಿದ್ದು. ಹೇಗೋ ಕಷ್ಟ ಪಟ್ಟು ನನ್ನ ಟೀಚರ್‌ಗಳೆಲ್ಲಾ ಏಳನೇ ಕ್ಲಾಸ್ ತನಕ ದಡ ಮುಟ್ಸುದ್ರು. ನನಗೆ ಮೂರನೇ ತರಗತಿ ಪಾಸ್ ಆಗೋ ಯೋಗ್ಯತೇನೇ ಇರಲಿಲ್ಲ ಅಂತ ನನಗೆ, ನಮ್ಮಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಸರಿ, ಸ್ಕೂಲ್ ಫೀಸ್ ಬೇರೆ ದಂಡ ಅಂತ ಹೇಳಿ, ನಮ್ಮಪ್ಪ, ಅವರು ಪೂಜೆ ಮಾಡುತ್ತಿದ್ದ ವೆಂಕಟರಮಣನ ಗುಡಿಯಲ್ಲಿ ಮಂಗಳಾರತಿ, ತೀರ್ಥ, ಪ್ರಸಾದ ಕೊಡಲು ನನ್ನನ್ನು ಬಾಲಕಾರ್ಮಿಕನಾಗಿ ಕೆಲಸಕಿಟ್ಟುಕೊಂಡರು. ಬಾಲ ಕಾರ್ಮಿಕರಿಗಾದ್ರು ಏನೋ ಸ್ವಲ್ಪ ಹಣ ಸಿಗುತ್ತೆ; ನನಗೆ, ದೇವಸ್ಥಾನಕ್ಕೆ ಬಂದೋವ್ರ ಮುಂದೆ ಅಪ್ಪನ ಬೈಗುಳ ಅಷ್ಟೆ. ಮಂತ್ರಕ್ಕಿನ್ನ ಉಗುಳೇ ಜಾಸ್ತಿ ಅಂತಾರೆಲ್ಲ ಹಾಗೇ, ನಮ್ಮಪ್ಪನ ಮಂತ್ರವೆಲ್ಲಾ ದೇವರ ಕಡೆಗೆ, ಆದರೆ ಉಗುಳು ಮಾತ್ರ ನನ್ನ ಕಡೆ. ತನ್ನ ಮೂರನೇ ಹೆರಿಗೆಯಲ್ಲಿ, ಏನೋ ತೊಂದರೆಯಾಗಿ ಅಮ್ಮ ಸತ್ತಿದ್ದಳು. ಮನೆಯಲ್ಲಿ ಸಧ್ಯಕ್ಕೆ ನಾನು, ಅಪ್ಪ, ನನ್ನ ತಮ್ಮ ರಾಜೇಶ ಮತ್ತು ತಂಗಿ ಲಲಿತ ಇದ್ದೀವಿಇ. ಅವರಿಬ್ಬರೂ ನನ್ನ ಹಾಗಲ್ಲ, ತುಂಬಾ ಬುದ್ದಿವಂತರು. ರಾಜೇಶನಂತೂ, ಬೆರಳು ತೋರಿಸಿದ್ರೆ ಹಸ್ತ ನುಂಗೋವ್ರು ಅಂತಾರೆಲ್ಲ ಹಾಗೆ, ಓದಿನಲ್ಲಿ ಪ್ರಚಂಡ. ನನಗಿಂತ ಮೂರು ವರ್ಷ ಚಿಕ್ಕೋವ್ನು, ಆದರೆ ಪರೀಕ್ಷೆಯಲ್ಲಿ ಸ್ಕೂಲಿಗೆ ಯಾವಾಗ್ಲೂ ಅವನೇ ಫಸ್ಟ್ ಬರ್ತಾ ಇದ್ದ. ಲಲಿತಾ ಅವನಷ್ಟು ಪ್ರಚಂಡಳಿಲ್ಲದಿದ್ದರೂ, ತಕ್ಕಮಟ್ಟಿಗೆ ಜಾಣೆಯೇ ಆಗಿದ್ದಳು.
ಮೂರು ವರ್ಷ ದೇವಸ್ಥಾನದಲ್ಲಿ ಭಕ್ತರಿಗೆ ಮಂಗಳಾರತಿ ಕೊಡುತ್ತಾ ಕಳೆದೆ. ಆದರೆ ಈ ಗೋವಿಂದ ಇದಾನಲ್ಲ, ಅದೇ ನಾವು ಪೂಜೆ ಮಾಡೋ ನಮ್ಮ ವೆಂಕಟರಮಣಸ್ವಾಮಿ, ತನ್ನ ಸೇವೆ ಮಾಡೋ ಯಾರನ್ನೂ ಕೈ ಬಿಡಲ್ಲ. ಓ ಅದಕ್ಕೆ ಏನು ಪುರಾವೆ ಅಂತ ಕೇಳುದ್ರಾ. ನಿಜರೂಪದಲ್ಲಿ ನಿಮ್ಮ ಮುಂದೆ ನಾನೇ ಇದ್ದೀನಲ್ಲ ಸ್ವಾಮಿ. ದಿನಾ ಅಪ್ಪ ಹೇಳುತ್ತಿದ್ದ ಮಂತ್ರಗಳು ನನಗೂ ಹಾಗೇ ಯಾವ ಪಾಠವೂ ಇಲ್ಲದೇ ಶ್ರವಣ ಮಾಡುತ್ತಲೇ ಮನನವಾಯಿತು. ಆಗಾಗ ಅಪ್ಪನಿಗೆ ಹುಷಾರಿಲ್ಲ ಅಂದ್ರೆ ನಾನೇ ನಿಭಾಯಿಸಿಬಿಡ್ತಾ ಇದ್ದೆ, ದೇವಸ್ಥಾನದ ಮುಖ್ಯ ಪೂಜಾರಿಯ ಕೆಲಸವನ್ನ. ದೇವಸ್ಥಾನದ ಟ್ರಸ್ಟಿನವರು ಸಂಜೆ ಹೊತ್ತು ವೇದ ಪಾಠ ಶುರು ಮಾಡಲಿಕ್ಕೆ ಆರಂಭಿಸಿದರು. ಅಲ್ಲಿ ವೇದ ಕಲಿಯಲು ಬರುವವರಿಗೆ ಕುಳಿತುಕೊಳ್ಳು ಚಾಪೆ ಹಾಸುವುದು, ದೀಪಗಳೆಲ್ಲಾ ಹಾಕೋದು, ಮೈಕ್ ಸರಿ ಮಾಡೋದು, ಇವೆಲ್ಲಾ ಕೆಲಸ ನನ್ನ ಪಾಲಿಗೆ ಬಂತು. ಪಕ್ಕದಲ್ಲಿದ್ದ ಆಶ್ರಮದಿಂದ ಸಂತೋಷಾನಂದ ಸ್ವಾಮಿಜಿ ಅನ್ನೋವ್ರು ಒಬ್ಬರು ಬಂದು ದಿನಾ ವೇದ ಪಾಠ ಮಾಡ್ತಾ ಇದ್ರು. ನಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ ಹೊತ್ತು ಮಾತ್ರ ನನಗೆ ಜಾಸ್ತಿ ಕೆಲಸ. ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದ ಕೆಲವರು, ಸಂಜೆ ಹೊತ್ತು ದೇವಸ್ಥಾನದಲ್ಲಿ ಪೂಜೆ ಮಾಡಲು ಬರುತ್ತಿದ್ದರು. ಹಾಗಾಗಿ ನಾನು ವೇದ ಪಾಠಕ್ಕೆ ಪೂರ್ತಿ ಸಮಯ ಕೊಡುತ್ತಿದ್ದೆ. ಮೊದ ಮೊದಲು ಕೇವಲ ಲೈಟ್ ಆಫ್ ಮಾಡೋಕ್ಕೆ, ಚಾಪೆ ಹಾಸೋಕ್ಕೆ ಅಂತ ಹೋಗಿದ್ದು, ಆಮೇಲೆ ಗೋವಿಂದನ ದಯೆಯಿಂದ ಸ್ವಾಮೀಜಿಗಳಿಗೆ ಆಪ್ತ ಶಿಷ್ಯನಾದೆ. ಶಾಲೆ ಪಾಠ ತಲೆಗೆ ಹತ್ತದಿದ್ರೂ ಈ ವೇದಪಾಠ ನನಗೆ ಒಲಿದು ಬಿಡ್ತು ನೋಡ್ರಿ. ಮನೇಲಿ ಕಸ ಗುಡಿಸಬೇಕಾದ್ರೆ ಒಂದು ಸೂಕ್ತ, ಅಡುಗೆ ಮಾಡ್ಬೇಕಾದ್ರೆ ಒಂದು ಮಂತ್ರ, ನೆಲ ಒರಿಸಬೇಕಾದ್ರೆ ಒಂದು ಸೂಕ್ತ, ಮನೆಯಿಂದ ದೇವಸ್ಥಾನಕ್ಕೆ ನಡೆದುಕೊಂಡು ಹೋಗೋವಾಗ ಉಪನಿಷತ್ತುಗಳು ಹೀಗೆ ಹೇಳ್ತಾ ಹೇಳ್ತಾ ಎಲ್ಲಾ ಬಾಯ್ಪಾಟ ಆಯ್ತು. ಅದೇನೋ ಹಾಡ್ತಾ ಹಾಡ್ತಾ ರಾಗ ಅಂತಾರೆಲ್ಲಾ, ಹಾಗೆ ನನಗೆ ಹೇಳ್ತಾ ಹೇಳ್ತಾ ವೇದ, ಅಷ್ಟೆ. ಗೋವಿಂದನ ದಯೆ, ಸುಮಾರು ಎಂಟು ವರ್ಷ ವೇದಾಧ್ಯಯನ ಅಡಚಣೆಗಳಿಲ್ಲದೇನೇ ಸಾಗಿತು. ಜೊತೆಗೆ ಸ್ವಾಮೀಜಿಗಳಿಂದ ಸ್ವಲ್ಪ ಸಂಸ್ಕೃತವನ್ನು ಕಲಿತೆ. ಕೆಲವೊಮ್ಮೆ ಸ್ವಾಮೀಜಿ ಸಂಜೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗದಿದ್ದರೆ, ನಾನೇ ತರಗತಿ ತೆಗೆದುಕೊಳ್ತಾ ಇದ್ದೆ.
ನನ್ನ ತಮ್ಮ ರಾಜೇಶ ಆ ವರ್ಷ ಇಂಜಿನಿಯರಿಂಗ್ ಮುಗಿಸಿದ್ದ. ಯೂನಿವರ್ಸಿಟಿಗೆ ಫಸ್ಟ್ ಬಂದಿದ್ದ. ಅಪ್ಪನಿಗೆ ಎಲ್ಲಿಲ್ಲದ ಖುಷಿ. ದೇವಸ್ಥಾನಕ್ಕೆ ಬಂದವರು ಯಾವುದೇ ವಿಷಯ ಮಾತನಾಡಲಿ, ಎಲ್ಲೋ ಒಂದು ಕಡೆ ತನ್ನ ಚಿಕ್ಕ ಮಗನ ಓದಿನ ಬಗ್ಗೆ ಮಾತಿನ ಮಧ್ಯೆ ಅವರಿಗೆ ತಿಳಿಸದಿದ್ರೆ ಅಪ್ಪನಿಗೆ ಸಮಾಧಾನಾನೇ ಇರ್ತಿರ್ಲಿಲ್ಲ. ಯಾವ ತಂದೆಗೆ ತಾನೆ ಖುಷಿಯಾಗಲ್ಲ ಹೇಳಿ.
ಅಮೇರಿಕಾ ನಮ್ಮ ದೇಶದ ಬುದ್ಧವಂತರನೆಲ್ಲಾ ಕೈ ಚಾಚಿ ಕರೆಯುತ್ತಿದ್ದ ಕಾಲ ಅದು. ನಮ್ಮ ದೇಶದಿಂದ ಅಮೇರಿಕಾಗೆ ವಲಸೇ ಹೋಗುತ್ತಿದ್ದ ಬುದ್ಧವಂತರ ಗುಂಪಿನಲ್ಲಿ ರಾಜೇಶನೂ ಒಬ್ಬನಾದ. ಒಂದೆರೆಡು ತಿಂಗಳಲ್ಲಿ ಅಮೇರಿಕಾಗೆ ಕೆಲಸಕ್ಕೆ ಹೊರಟೇ ಬಿಟ್ಟ ರಾಜೇಶ. ಈಗ ಅಪ್ಪನ ಖುಷಿ ದುಪ್ಪಟ್ಟಾಯಿತು. ವಾರಕ್ಕೆ ಒಮ್ಮೆಯಾದರೂ ರಾತ್ರಿ ಹೊತ್ತು ಎಸ್.ಟಿ.ಡಿ. ಭೂತ್‌ನಿಂದ ಮಗನಿಗೆ ಐ ಎಸ್ ಡಿ ಕಾಲ್ ಮಾಡಿ ಮಗನೊಂದಿಗೆ ಮಾತನಾಡದಿದ್ದರೆ ಅವರಿಗೆ ಸಮಾಧಾನಾನೇ ಇಲ್ಲ. ಅವನಿಂದ ಅಮೇರಿಕಾದ ವಿಷಯ ಎಲ್ಲಾ ತಿಳಿದುಕೊಂಡರು ಅಪ್ಪ. ನೀವು ರಸ್ತೆ, ಊಟ, ಬಟ್ಟೆ, ಹಣ ಯಾವುದಾದರ ಬಗ್ಗೆಯಾದರೂ ಅಪ್ಪನ ಹತ್ತಿರ ಮಾತನಾಡಿ, ಅವರು ಅಮೇರಿಕಾ ವಿಷಯ ಪ್ರಸ್ತಾಪಿಸದೇ ಮಾತೇ ಮುಗಿಸುತ್ತಿರಲಿಲ್ಲ. ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ.
ಹೀಗಿರುವಾಗ ಒಂದು ದಿನ ನನ್ನ ಗುರುಗಳು, ಅದೇ, ಸಂತೋಷಾನಂದರು, ನನಗೆ ಯಾವುದಾದರೂ ಹುಡುಗಿಯನ್ನು ನೋಡಿ ಮದುವೆ ಮಾಡಿಕೋ ಎಂದರು. ನಾನು ನಗುತ್ತಾ, ನನಗೆ ಯಾರು ಹುಡುಗಿಯನ್ನ ಕೊಡ್ತಾರೆ, ವಿದ್ಯೆ, ಸಂಪಾದನೆ ಏನೂ ಇಲ್ಲ ಎಂದೆ. ಅದಕ್ಕೆ ಅವರು ನೀನು ಹನುಮಂತನಿದ್ದ ಹಾಗೆ, ನಿನ್ನ ಶಕ್ತಿ ನಿನಗೆ ಗೊತ್ತಿಲ್ಲ ಅಷ್ಟೆ, ಅಂತ ಹೇಳಿ, ನಾನೇ ನಿಮ್ಮಪ್ಪನ ಹತ್ತಿರ ಮಾತಾಡ್ತೀನಿ ಅಂದ್ರು. ನಾನು ತಮಾಷೆ ಮಾಡ್ತಾ ಇದ್ದಾರೆ ಅಂದುಕೊಂಡೆ. ಗುರುಗಳು ದೇವಸ್ಥಾನದ ಟ್ರಸ್ಟೀಗಳ ಹತ್ತಿರ ಮಾತನಾಡಿ. ನನಗೆ ತಿಂಗಳಿಗೆ ಹದಿನೈದು ಸಾವಿರ ರೂಪಾಯಿ ಸಂಬಳ ಬರುವ ಹಾಗೇ ಮಾಡಿದರು, ಹಾಗೇ ದೇವಸ್ಥಾನದ ಕಾಂಪೌಂಡಿನಲ್ಲಿದ್ದ ಗಣೇಶನ ಗುಡಿಗೆ ನನ್ನನ್ನೆ ಪೂರ್ಣ ಸಮಯ ಅರ್ಚಕನನ್ನಾಗಿ ಮಾಡಲು ಹೇಳಿದರು. ಆ ಗಣೇಶನ ಮಂಗಳಾರತಿಗೆ ಬರುವ ಕಾಸೆಲ್ಲಾ ಇನ್ನು ಮುಂದೆ ನಂದೆ.
ಒಂದು ದಿನ ಅಪ್ಪನನ್ನು ಗುರುಗಳು ಕರೆದು, ಮೈಸೂರಿನಲ್ಲಿ ಆಂಜನೇಯ ಗುಡಿಯ ಪೂಜಾರಿಗಳು, ನನ್ನ ಪೂರ್ವಾಶ್ರಮದ ಗೆಳೆಯರು. ಅವರ ಮಗಳು ವೈಶಾಲಿಯನ್ನು ರಾಘವನಿಗೆ ಮದುವೆ ಮಾಡಿಕೊಟ್ಟರೆ ಇವರಿಬ್ಬರ ಜೀವನ ತುಂಬಾ ಸುಂದರವಾಗಿರುತ್ತೇ, ನಾನೇ ಇವರಿಬ್ಬರ ಜಾತಕ ನೋಡಿದ್ದೇನೆ ಎಂದರು ಗುರುಗಳು. ಅವರ ಗೆಳೆಯ ಹಾಗೂ ನನ್ನಪ್ಪ ಇಬ್ಬರನ್ನು ಕರೆಸಿ ಮಾತನಾಡಿಸಿದರು.
ಮದುವೆ ದೇವಸ್ಥಾನದಲ್ಲಿಯೇ ಸಾಧಾರಣವಾಗಿ ನಡೆಯಿತು. ವೈಶಾಲಿ ಅಷ್ಟೇನೂ ಓದಿರಲಿಲ್ಲ. ಆದರೆ ಅವಳಿಗೆ ಏನಾದರೂ ಮಾಡಿ ಹತ್ತನೇ ಕ್ಲಾಸ್ ಪಾಸಾಗಬೇಕೆಂಬ ಆಸೆ. ನಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ಭಕ್ತರು, ಹತ್ತನೇ ಕ್ಲಾಸ್ ಫೈಲ್ ಆದವರಿಗಾಗಿಯೇ ಪ್ರತ್ಯೇಕವಾಗಿ ಮನೆ ಪಾಠ ಮಾಡುತ್ತಿದ್ದರು. ಅವರಿಗೆ ವೈಶಾಲಿ ವಿಷಯ ತಿಳಿಸಿದಾಗ, ಇಬ್ಬರೂ ಹತ್ತನೇ ಕ್ಲಾಸ್‌ಗೆ ಖಾಸಗಿಯಾಗಿ ಸೇರಿಕೊಂಡು ಬಿಡಿ, ಒಟ್ಟಿಗೇ ಪಾಠ ಹೇಳಿಕೊಡುತ್ತೇನೆ ಎಂದರು. ನನಗೆ, ನನ್ನ ಪೆದ್ದುತನವನ್ನು ಅವರ ಮುಂದೆ ಪ್ರದರ್ಶನ ಮಾಡುವುದು ಇಷ್ಟವಿರಲಿಲ್ಲ, ಆದರೆ ವೈಶಾಲಿಯ ಬಲವಂತಕ್ಕೆ ನಾನು ಪಾಠಕ್ಕೆ ಸೇರಿದೆ. ಆಶ್ಚರ್ಯ, ಎಂಟು ವರ್ಷ ವೇದಾಧ್ಯಯನಮಾಡಿದ್ದ ಪ್ರಭಾವವೋ ಏನೋ, ನನ್ನ ಗ್ರಹಿಕೆಯ ಶಕ್ತಿ ಹಾಗೂ ಜ್ಙಾಪಕಶಕ್ತಿ ಹೆಚ್ಚಾಗಿತ್ತು ಮತ್ತು ನನಗೆ ಈಗ ಎಲ್ಲಾ ಪಾಠವೂ ಸುಲಭವಾಗಿ ಅರ್ಥವಾಗತೊಡಗಿತು. ರಾತ್ರಿ ಹೊತ್ತು ನಾವು ಜೊತೆಗೇ ಪಾಠಗಳನ್ನು ಓದಲು ಆರಂಭಿಸಿದೆವು. ಆದರೆ, ನನಗಿಂತ ದಡ್ಡರು ಪ್ರಪಂಚದಲ್ಲಿ ಇರುತ್ತಾರೆಂದು ನನಗೆ ತಿಳಿದದ್ದು ವೈಶಾಲಿಯನ್ನು ನೋಡಿದ ಮೇಲೇ. ಇಬ್ಬರೂ ಪಟ್ಟ ಶ್ರಮಕ್ಕೆ ಮತ್ತು ಗೋವಿಂದನ ದಯೆಯಿಂದ ನಾವು ಹತ್ತನೇ ತರಗತಿ ಮುಗಿಸೇ ಬಿಟ್ಟೆವು. ನನ್ನದು ಶೇಕಡ ಐವತ್ತು ಬಂದರೆ, ವೈಶಾಲಿಯದು ಶೇಕಡ ಮೂವತ್ತೈದು.
ಓದುವುದನ್ನು ಮತ್ತೇ ಪ್ರಾರಂಭಿಸಿದ್ದೀಯಾ, ಹಾಗೇ ಆಗಮ ಪರೀಕ್ಷೆಯನ್ನು ತೆಗೆದುಕೋ, ನಾನು ನಿನಗೆ ಪಾಠ ಹೇಳಿಕೊಡುತ್ತೇನೆ ಎಂದರು ಸಂತೋಷಾನಂದ ಸ್ವಾಮೀಜಿಗಳು. ಆಗಮ ಪರೀಕ್ಷೆ ಪೌರೋಹಿತ್ಯ ಮತ್ತು ವೇದಾಧ್ಯಯನ ಕಲಿತವರ ಜ್ಞಾನಕ್ಕೆ ಒಂದು ಮಾನದಂಡ ಇದ್ದ ಹಾಗೆ. ಜೊತೆಗೆ ಅಪ್ಪನೂ ಆಗಾಗ ಪಾಠ ಹೇಳಿಕೊಡಲು ಒಪ್ಪಿದರು, ಆದರೆ ಒಂದೆರಡು ಸಲಅಪ್ಪನಿಗೆ, ಅವರಿಗಿಂತ ನಾನೇ ಹೆಚ್ಚು ಕಲಿತಿದ್ದೇನೆ ಎಂದೆನಿಸಿ, ಪಾಠ ಹೇಳಿಕೊಡುವುದನ್ನು ನಿಲ್ಲಿಸಿದರು. ಈಚೀಚೆಗೆ, ಅವರಿಗೆ ನನ್ನ ಮತ್ತು ವೈಶಾಲಿಯ ಮೇಲೆ ಏನೋ ಒಂದು ರೀತಿಯ ಹೊಸ ಪ್ರೀತಿ ಮೂಡುತ್ತಿರುವುದು ಅವರ ಮಾತಿನಲ್ಲಿ ನನಗೆ ಗೊತ್ತಾಗುತ್ತಿತ್ತು. ಅದಲ್ಲದೇ ದೇವಸ್ಥಾನದಲ್ಲಿ ಬಂದ ಭಕ್ತರೊಡನೆ ನನ್ನ ಬಗ್ಗೆಯೂ, ಅಲ್ಲ ಅಲ್ಲ ನನ್ನ ಬಗ್ಗೆಯೇ, ಮಾತನಾಡಲು ಪ್ರಾರಂಭಿಸಿದ್ದರು. ಓದಿನ ಮೇಲೆ ಆಸಕ್ತಿ ಹೆಚ್ಚಾಗಿದ್ದರಿಂದ, ಸಂಸಾರ ವಿಸ್ತರಿಸಬೇಕೆಂಬ ಆಸೆಯನ್ನು ನಾವು ಸ್ವಲ್ಪ ಕಾಲ ಮುಂದೂಡಲು ನಿಶ್ಚಯಿಸಿದೆವು. ಆಗಮ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದು ಪಾಸ್ ಆದೆ. ಎಲ್ಲಾ ಗೋವಿಂದನ ದಯೆ ಅನ್ನಿ.
ವೈಶಾಲಿಯ ಅಣ್ಣ ಶ್ರೀನಾಥ, ಎರಡು ವರ್ಷ ಮುಂಚೆಯೇ ಆಗಮ ಪರೀಕ್ಷೆಯಲ್ಲಿ ಪಾಸಾಗಿದ್ದ. ಅವನ ಗೆಳೆಯನೊಬ್ಬ ಅಮೇರಿಕಾದ ವೆಂಕಟರಮಣಸ್ವಾಮಿ ಗುಡಿಯಲ್ಲಿ ಪೂಜೆ ಮಾಡುತ್ತಿದ್ದು, ಶ್ರೀನಾಥನನ್ನು ಅಮೇರಿಕಾಗೆ ಕರೆಸಿಕೊಂಡ. ಅಮೇರಿಕಾಗೆ ಪೂಜಾರಿಯಾಗಿ ಹೋಗಲು ಆಗಮ ಪರೀಕ್ಷೆ ಅತ್ಯಗತ್ಯ.
ವೈಶಾಲಿಗೆ, ನಾವೂ ಅಮೇರಿಕಾಗೆ ಹೋಗಬೇಕು ಎಂಬುವ ಮತ್ತೊಂದಾಸೆ ಶುರುವಾಯಿತು
.
ರಾಜೇಶ ಹಾಗೂ ಶ್ರೀನಾಥ ಇಬ್ಬರೂ ಅಮೇರಿಕಾದಲ್ಲೇ ಇರುವುದರಿಂದ ನಾವು ಹೋಗಿ ಬರಬಹುದೇ ಎಂದು ಸ್ವಾಮೀಜಿಯವರನ್ನು ಕೇಳಿದಳು ವೈಶಾಲಿ. ಸ್ವಾಮೀಜಿಯವರು, ಇದು ನೀನು ಹೇಳುತ್ತಿರುವುದಲ್ಲ, ಆ ಗೋವಿಂದನು ನಿನ್ನ ಮೂಲಕ ಹೇಳಿಸುತ್ತಿದ್ದಾನೆ ಎಂದು ಹೇಳಿ, ಹೋಗಿ ಬನ್ನಿ ಎಂದು ಅನುಮತಿ ಕೊಟ್ಟರು. ಶ್ರೀನಾಥನಿಗೆ ಈ ಬಗ್ಗೆ ತಿಳಿಸಿದಾಗ, ಅಮೇರಿಕಾದಲ್ಲಿ ಇದ್ದ ಒಬ್ಬರು ಪೂಜಾರಿ ಇನ್ನೆರಡು ತಿಂಗಳಲ್ಲಿ ಭಾರತಕ್ಕೆ ಹಿಂದಿರುಗುತ್ತಿದ್ದಾರೆ, ಅವರ ಜಾಗಕ್ಕೆ ನೀನು ಬರುವಂತೆ ಶಿಫಾರಸ್ಸು ಮಾಡುತ್ತೇನೆ, ಎಂದ. ಆದರೆ ಭಾರತದಿಂದ ಇಲ್ಲಿಗೆ ಬರಲು ಪೂಜಾರಿಗಳು ವರ್ಷಗಳಿಂದ ಕಾಯುತ್ತಿದ್ದಾರೆ, ತುಂಬಾ ಡಿಮ್ಯಾಂಡ್ ಇದೆ, ಹಾಗಾಗಿ ಈ ವಿಷಯ ಬಹಳ ಜನಕ್ಕೆ ಗೊತ್ತಾಗುವುದು ಬೇಡ, ಎಂದ ಶ್ರೀನಾಥ. ಹಾಗಾಗಿ ರಾಜೇಶನಿಗೆ ನಾವು ತಿಳಿಸಲು ಹೋಗಲಿಲ್ಲ.
( ಮುಂದುವರೆಯುವುದು)ಮುಂದಿನ ಭಾಗ ಗುರುವಾರದಂದು
************************
ಸುಲಲಿತವಾಗಿ ಓದಿಸಿಕೊಂಡು ಹೋಗುವ ವಾಸ್ತವಿಕ ನೆಲೆಗಟ್ಟಿನ ಕಥೆ
ಗುರುರಾಜ್ ಅಣ್ಣ ಕಥೆ ಚೆನ್ನಾಗಿದದೆ ಓದುತ್ತಾ ಹೋದಂತೆ ಮುಂದೆ ಏನು ಮುಂದೆ ಏನು ಅಂಥ ನೋಡೋದರ ಒಳಗೆ ಕಥೆ. ಮುಗಿದೋಗಿತು
ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಅಮೇರಿಕಾ ಮೋಹ ಬಿಟ್ಟು ಹೋಗುವುದು. ಕತೆ ಬಹಳ ಇಷ್ಟವಾಯಿತು ಗುರುರಾಜ್ ಸರ್. ಅಭಿನಂದನೆಗಳು
ಕತೆ ಬಹಳ ಇಷ್ಟವಾಯಿತು ಗುರುರಾಜ್ ಸರ್. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಅಭಿನಂದನೆಗಳು
ಮುಂದಿನ ಭಾಗ ಓದುವ ಕಾತರ. ಕಥೆ ಬಹಳ ಇಷ್ಟವಾಯಿತು…
Kathe thumba chennagide.
Kathe thumba chennagide.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮುಂದಿನ ಅಂಕಣಕ್ಕೆ ಕಾಯುತಿರುತ್ತೆವೆ…
ಕಣ್ಣಿಗೆ ಕಟ್ಟುವಂತಹ ಬರಹ. ಸೊಗಸಾಗಿದೆ
Kathe chennagi odisikondu hoguthade. Bareyiri.