ಸಂಬಂಧಗಳ ಸಂಭ್ರಮ
ದೀಪಾಜಿ
ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ ಕತ್ತು ಹಿಸುಕಿ ಕೊಂದು ಮತ್ತೆಂದೂ ಒಬ್ಬರಿಗೊಬ್ಬರು ಎದುರಾಬದುರು ನಿಂತು ಅಕ್ಕರೆಯಿಂದ ಮಾತನಾಡಿಸದಂತೆ ಒಂದು ದೊಡ್ಡ ಅಡ್ಡ ಗೋಡೆಯನ್ನೆ ನಿರ್ಮಿಸುತ್ತಿವೆ. ಎದುರಿಗಿರುವವ ಕೂಡಿ ಆಡಿದವ, ಒಂದೇ ವೇದಿಕೆಯ ಮೇಲೆ ದನಿ ಕುಗ್ಗಿದಾಗ ತನ್ನ ದನಿ ಏರಿಸಿ ಹಾಡಿ ಅಂದದ ರಾಗ ಸಂಯೋಜಿಸಿದವ, ನಾಟಕದ ಡೈಲಾಗ್ ಮರೆತಾಗ “ಏಲವೋ ವೈರಿ ಮತ್ತಿನ್ನೆನೋ ಚಿಂತಿಸುತ್ತ ನಿಂತೆ!? ಹೇಳು ಹೇಳು ನಿನ್ನೊಳಗಿನ ಅಂತರಂಗದ ಮಾತು ಬಯಲು ಮಾಡು” ಎಂದು ನೂರಾರು ಮಂದಿಯ ಮುಂದೆ ಬಾಯಿಪಾಠ ಮರೆತು ಹೋದನೆಂಬ ಗೊಂದಲ ಸೃಷ್ಟಿಯಾಗದಂತೆ ತನ್ನ ಪಾತ್ರದ ಜೊತೆ ನಿನ್ನ ಪಾತ್ರವನೂ ಎತ್ತಿ ಹಿಡಿದ ಗೆಳೆಯ, ಮುಟ್ಟಾದ ದಿನಗಳಲ್ಲಿ ನೀನು ಕ್ಲಾಸುಬಿಟ್ಟೆದ್ದು ಬಾರದೆ ಇದ್ದ ಫಜೀತಿ ಕಂಡು ತಾನು ನಿನ್ನೊಡನೆಯ ಉಳಿದುಕೊಂಡ ಗೆಳತಿ, ಓಡಲಾಗದೆ ಬಿದ್ದ ಅಣ್ಣನನ್ನು ಹಿಂದೆ ಬಂದು ಅವನ ಪಾಠಿಚೀಲದೊಂದಿಗೆ ನಿನ್ನ ಪಾಠಿಗಂಟನ್ನು ಮನೆತನಕ ಹೊತ್ತು ತಂದ ತಮ್ಮ, ನಿನ್ನೋದಿಗಾಗಿ ತನ್ನ ಓದು-ಬದುಕು ಎರಡನ್ನು ಮೊಟಕುಗೊಳಿಸಿ ಕುಳಿತಿರುವ ಅಕ್ಕ. ಗದ್ದದಮೇಲೆ ಗಡ್ಡಮೊಳಕೆ ಒಡೆಯುತ್ತಿದ್ದ ಕಾಲದಲ್ಲಿ ಪಕ್ಕಡಿಗೆ ತಿವಿದು ಮೊಟ್ಟಮೊದಲ ರೋಮಾಂಚನಕ್ಕೆ ನಾಂದಿಹಾಡಿದ ಗೆಳತಿ, ಹೀಗೆ ಅಂತ್ಯವೇ ಇರದ ಖುಷಿಗಳನ್ನ ಕೊಟ್ಟ ಸಂಬಂಧಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ..
ಅಪ್ಪ ಅಮ್ಮರಂತೂ ನಮ್ಮ ನಿಮ್ಮ ಚೋಟುದ್ದದ ಬದುಕು ಕಟ್ಟಿಕೊಡಲು ತಮ್ಮ ಬೆವರಿನೊಂದಿಗೆ ರಕ್ತವನ್ನು ಬಸಿದಿದ್ದಾರೆ. ಆದರೂ ಈ ಸ್ವಾವಲಂಬಿ ಬದುಕಿಗಾಗಿ ನಾನು ಅದೆಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ ಎಂಬ ಉದ್ಘಾರವಾಚಕ ಉಸುರುವಾಗ ಇವರೆಲ್ಲ ನೆನಪಾಗುವುದೆ ಇಲ್ಲ. ನಾವ್ಯಾರು ಆಕಾಶದಿಂದ ಉದುರಿ ಬಿದ್ದಿಲ್ಲ ಬದಲಾಗಿ ಹೊಸೆದು ಕೊಂಡ ಕರುಳ ಬಳ್ಳಿ ಕತ್ತರಸಿ ರಕ್ತ ಜೀನುಗದಂತೆ ಗಂಟಾಕಿಸಿಕೊಂಡು ಬಾಣಂತಿಕೊಣೆಯಿಂದ ಆಚೆ ಬಂದವರು. ಬೆಳೆಯುವಾಗಲು ಅಷ್ಟೆ ಅಲ್ಲೆಲ್ಲೊ ನದಿ ಆಚೆಯ ಜುಯ್ಯಗುಡುವ ಕಾಡಿನೊಳಗೆ ಒಬ್ಬೊಬ್ಬರೆ ಹಾಡಿಕೊಂಡು ಕುಣಿದುಕೊಂಡು ಬೆಳೆದವರಲ್ಲ..
ಒಂದೆ ಪೆನ್ಸಿಲ್ಲು, ಅದೆ ಕಂಪಾಸು, ಟಿವಿ ರಿಮೋಟು ಆಶಾ ಚಾಕ್ಲೆಟು, ಪಾಪಡಿ, ಇಂತವಕ್ಕೆಲ್ಲ ಜುಟ್ಹಿಡಿದು ಕಿತ್ತಾಡಿಕೊಂಡು ಕಡೆಗೆ ಅಮ್ಮನಿಂದಲೊ ಸೋದರತ್ತೆಯಿಂದಲೊ ಬಾಸುಂಡೆ ಬರುವಂತೆ ಬಡಿಸಿಕೊಂಡು ಬೆಳೆದವರು. ಬೆಳೆಬೆಳೆಯುತ್ತಲೆ ಬದುಕಿನ ಸಂಬಂಧದ ಕೊಂಡಿಗಳಿಗೆ ಜೋತು ಬಿದ್ದುಕೊಂಡು ಇರುವುದರಲ್ಲೆ ಹಂಚಿಊಣ್ಣುವುದ ಹತ್ತನೇತ್ತ ಬರುವುದರೊಳಗೆ ಕಲಿತು ಇವತ್ತಿನ ಈ ಹೊತ್ತಿಗೆ ಮರೆತು ಕುಳಿತವರು.
ಒಂದೊಂದು ಅಕ್ಷರ ಬರೆಯುವಾಗಲೂ ಸಾವಿರಾರು ರೂಪಾಯಿಯ ಚೆಕ್ಕು,ಡ್ರಾಫ್ಟು, ನೆಫ್ಟು ಬರೆಯುವಾಗಲೂ ಆ ಅಕ್ಷರಗಳ ಹಿಂದೆ ಅವಿತು ಕುಳಿತ ಮೇಷ್ಟ್ರು ಗುರು ಶಿಕ್ಷ-ಕರು ಕಲಿಸಿದ ತತ್ವ ಆದರ್ಶಗಳನ್ನ ಅಲ್ಲೆ ಶಾಲೆಯ ಕಾಂಪೊಂಡಿಗೆ ಆನಿಸಿಬಂದವರು ನಾವು. ಅಂಕಿ ಅಕ್ಷರಗಳನ್ನಷ್ಟೆ ಬದುಕಿನುದ್ದಕ್ಕೂ ತಂದವರು ನಾವು. ಅಕ್ಷರ ತಿಡುವಾಗ ತಿಂದ ಏಟಿನ ರುಚಿಯ ಮರೆತು ನಮ್ಮ ಚೆಂದದ ಬದುಕಿಗಾಗಿ ಶ್ರಮಿಸಿದ ಎಲ್ಲಾ ಸಂಬಂಧಗಳನ್ನು ಎತ್ತಿ ಗಾಳಿಗೆ ತೂರಿ ಹಾಯಾಗಿ ಕುಳಿತವರು ನಾವು.
ಆದರೂ ಯಾರಾದರು ಸಿಕ್ಕು, ಅಥವಾ ಫೊನಾಯಿಸಿ ಹೇಗಿದ್ದಿ? ಹೇಗಿದೆ ಬದುಕು ಎಲ್ಲ ಅರಾಮಾ..? ಎಂಬ ಶಬ್ಧಗಳನ್ನ ಕೇಳಿದೊಡನೆ ಮೈಮೇಲೆ ಹಲ್ಲಿ -ಚೋಳು-ಜಿರಳೆ ಬಿದ್ದವರಂತೆ ಬೆದರಿ.. “ಅಯ್ಯೋ ನಿನ್ನಷ್ಟು ಚೆನ್ನಾಗಿಲ್ಲ ಬಿಡಪ್ಪ ಎನೋ ಸಣ್ಣ ಸ್ಯಾಲರಿಲಿ ಬದುಕಿನ ಬಂಡಿ ಏಳಿತಿದಿನಿ, ನಿನ್ನ ತರ ಸೆಂಟ್ರಲ್ ಗವರ್ನಮೆಂಟ್ ಸ್ಯಾಲರಿ ಅಲ್ಲ, ನಿನ್ನ ತರ ಸಾಫ್ಟವೇರ್ ಎಂಜಿನೀರ್ ಅಲ್ಲ, ನಿನ್ಮ ತರ ದೊಡ್ಡ ಜಮೀನ್ದಾರ ಅಲ್ಲ, ನಿನ್ನ ತರ ಬಿಸನಸ್ಮನ್ ಅಲ್ಲ ನಿನ್ನ ತರ ಯುಜಿಸಿ ಸ್ಕೇಲ್ ಇಲ್ಲ, ನಿನ್ನ ತರ ವರುಷಕ್ಕೇರಡು ವಿದೇಶ ಪ್ರಯಾಣಗಳಿಲ್ಲ.. ಹೀಗೆ ಇಲ್ಲದರ ಅಲ್ಲದರ ಪಟ್ಟಿಗಳೂ ಬೆಳೆಯುತ್ತಲೆ ಹೋಗುತ್ತವೆಯೆ ಹೊರತು ಎಲ್ಲಿದ್ದೆ ಎಲ್ಲಿಗೆ ಬಂದು ತಲುಪಿದೆ ಬದುಕಿನ ಆರಂಭದಲ್ಲಿ ಎಷ್ಟು ಬಂಧನಗಳಿದ್ದವು ಈಗ ಎಷ್ಟೆಲ್ಲ ಗೆಳೆಯ, ಸಹೋದ್ಯೋಗಿ ನೆರೆ ಹೊರೆ ಬೆಳೆದುಕೊಂಡಿದೆ ಎಂಬುದರ ಲೆಕ್ಕಕ್ಕೆ ಅಪ್ಪಿತಪ್ಪಿಯು ಹೋಗುವುದಿಲ್ಲ.
ಒಂದೊಮ್ಮೆ ನಮ್ಮದೆ ಬದುಕಿನ ಇತಿಹಾಸದ ಪುಟಗಳನ್ನ ಮಗುಚಿಹಾಕಿದಾಗ ಸಿಗುವ ಸತ್ಯ ಈ ದಿನಕ್ಕಾಗಿ,ಈ ತಿಂಗಳು ಸಿಗುತ್ತಿರುವ ಆದಾಯಕ್ಕಾಗಿ, ಈ ದಿನ ಕಟ್ಟಿಕೊಂಡಿರುವ ಪುಟ್ಟ ಗೂಡಿಗಾಗಿ ಅದೆಷ್ಟು ವರ್ಷ ನಿದ್ದೆಗೆಟ್ಟು ಕನಸುಕಂಡಿದ್ದೇವೆ..!? ಕನಸು ಕೈಗೂಡಿದ ದಿನ ಇಂತದೊಂದು ಪುಟ್ಟ ಕನಸು ನನ್ನದಾಗಿತ್ತು ಎಂಬುದನ್ನ ಮರೆತು. ಯಾರದೋ ಬದುಕಿನ ಸಾಧ್ಯತೆಗಳನ್ನ ನೋಡಿ ನಮ್ಮದೇನು ಅಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತೇವೆ.
ಜೊತೆಗಿರುವ ಸಂಬಂಧಗಳಲ್ಲಿ ಹೊಂದಾಣಿಕೆ ಇಲ್ಲ ಅಥವಾ ಬೇಡವೊ..!? ಸಿಕ್ಕ ಅವಕಾಶಗಳಿಗಾಗಿ ಸಂತೃಪ್ತಿ ಇಲ್ಲ, ಇಡೇರಿದ ಕನಸುಗಳ ಕುರಿತು ನಿರಾಳತೆಯು ಇಲ್ಲ. ಮುಟ್ಟಿದ ಗುರಿಯ ಬಗ್ಗೆ ಹೆಮ್ಮೆ ಇಲ್ಲ. ಅರ್ಧ ಇಂಚು ಮುಂದಿರುವವನ ಕುರಿತು ಹೊಟ್ಟೆಕಿಚ್ಚಿನ ಹೊರತಾಗಿ ಮತ್ತೇನು ಸಾಧ್ಯವಿಲ್ಲದ ಮನಃಸ್ಥಿತಿಗೆ ಬಂದು ತಲುಪಿದ್ದೇವೆ.
ಇದು ರೋಗಗ್ರಸ್ತ ಮನಃಸ್ಥಿತಿಯ ಲಕ್ಷಣವೆಂದೆನಿಸಿದರೆ ಇಂದೆ ಈ ಕೂಡಲೆ ಕಳೆದು ಹೋದ ಸಂಬಂಧಗಳ ಕೊಂಡಿ ಹುಡುಕಿ ಹೋಗಿ, ಉಳಿದು ಹೋದ ನಾಲ್ಕು ಮಾತು, ಎರಡು ನಗು, ಒಂದುರೊಟ್ಟಿ, ಒಟ್ಟಿಗೆ ಅರ್ದರ್ಧ ಕಪ್ ಚಹಾ ಇವಿಷ್ಟನ್ನು ಗಳಿಸಿ ಬಿಡಿ.. ನೆಮ್ಮದಿಯ ಬದುಕು ನಮ್ಮದಾಗಲೂ ಇನ್ನೇನು ಬೇಕು..
ತುಂಬಾ ಚೆನ್ನಾಗಿದೆ