ಅಂಕಣ ಬರಹ
ತೊರೆಯ ಹರಿವು
ಕರ-ಪುರಾಣ
ಬೊಗಸೆ ತುಂಬಾ ತುಂಬಿಕೊಂಡಿದ್ದ ಜಲರೂಪಿ ಬಾಲ್ಯ. ದಿನಗಳೆದಂತೆ, ನಿಧಾನವಾಗಿ ಹನಿ ಹನಿಯೇ ಸೋರಿ ಸೋರಿ ಕರಗಿ ಮಾಯವಾಗಿ ಹೋಯ್ತು. ಆಗ ದಿಗ್ಗನೆ ದೃಗ್ಗೋಚರವಾಯ್ತು ಅಂಗೈ ಮೇಲೆ ಹತ್ತಾರು ಕವಲೊಡೆದ ಗೆರೆಗಳು. ಆಯುಶ್ಯ, ಹಣ, ವಿದ್ಯೆಗೆ ಒಂದೊಂದು ಗೆರೆಯಂತೆ! ಸಂಸಾರ ಮನೆ ಮಕ್ಕಳು-ಮರಿಗೂ ಹಲವಾರು ರೇಖೆಗಳು!! ಬದುಕು- ಚಲನೆ-ಬವಣೆ ಇತ್ಯಾದಿ ಸೇರಿಸಿಕೊಂಡ ಶಂಖ, ಚಕ್ರದ ಚಿಹ್ನೆಗಳು! ಈ ಪುಟ್ಟ ಕೈಯೊಳಡಗಿದೆಯೇ ನಮ್ಮಿಡೀ ಬದುಕು?ನಮ್ಮ ಹೃದಯವಂತೂ ಮುಷ್ಠಿಯಷ್ಟೇ ಅಂತೆ!
ಜೀವನದಲ್ಲಿ ‘ಕರಾಗ್ರೇ ವಸತೇ..’ ಯಿಂದ ಹಿಡಿದು ಅಂಗೈಯಿಂದ ಎಳ್ಳುನೀರು, ಹಾಲುತುಪ್ಪ, ಅಘ್ಯ್ರಾದಿ ಬಿಡುವವರೆಗೆ; ನೃತ್ಯದಲ್ಲಿ ‘ಅಂಜಲಿಶ್ಚ್ಯ ಕಪೋತಶ್ಚ್ಯ..’ ಕಲಿಯುವುದರಿಂದ ಶುರುವಾಗಿ, ಹೂ ಪಕಳೆ ಹಿಡಿದು ‘ಪುಷ್ಪಾಂಜಲಿ’ ನರ್ತಿಸುತ್ತಾ ವೇದಿಕೆ ಏರುವವರೆಗೂ ಕೈ ಹಿಡಿದ ಗಳಿಗಳೆಷ್ಟೋ.. ಕೈ ಕೊಟ್ಟ ಕ್ಷಣಗಳೆಷ್ಟೋ..
‘ಕೈ ಕೈ ಎಲ್ಹೋಯ್ತು? ಬಾಗಿಲ ಸಂಧಿಗೆ ಹೋಯ್ತು.. ಬಾಗಿಲೇನು ಕೊಡ್ತು..? ಚಕ್ಕೆ ಕೊಡ್ತು..’ ಎಂಬ ಬಾಲ್ಯದಾಟವು ಕೊಡುವ ಮಹತ್ತನ್ನು ಸಾರಿದರೆ, ಕೋಲಾಟ, ಗಿರಿಗಿಟ್ಲೆ, ಚಿನ್ನಿದಾಂಡು, ಚನ್ನೆಮಣೆ ಮೊದಲಾದವನ್ನು ಆಡಲೂ ಜೊತೆಗಾರರ ಕೈ ಬೇಕು ಎಂಬುದನ್ನು ಮಕ್ಕಳಿಗೆ ತಿಳಿಸುತ್ತವೆ.
ಕೈ ಬದುಕು ರೂಪಿಸುತ್ತದೆಂಬುದು ನಿಜ. ಸರಿಯಾಗಿ ನೊಗ ಹಿಡಿಯದ ಕೈ ಹೊಲ ಉಳಲಾರದು, ಜನಕೆ ತುತ್ತನಿಕ್ಕಲಾರದು. ಲೇಖನಿ- ಪುಸ್ತಕ ಹಿಡಿಯದ ಕೈ ಸರಿಯಾಗಿ ಕಲಿಯಲಾರದು. ಸರಿಯಾಗಿ ಉಳಿ ಹಿಡಿಯದ ಕೈ ಚೆಂದದ ಶಿಲ್ಪವನು ಕೆತ್ತಲಾರದು. ನಾರಾಯಣೋ ಹರಿಃ ರೂಪಿಗಳಾಗಿರುವ ವೈದ್ಯರಂತೂ ಶುದ್ಧ ಹಸ್ತರಾಗಿರಲೇಬೇಕು.
ನಿಜವೇ.. ಯಾರಿಗಾದರೂ ಅಷ್ಟೇ.. ಕೈ ಕೆಸರಾದರೇ ಬಾಯ್ಮೊಸರು.
ಹಸ್ತ ತೋರಿ ಅವಲಕ್ಷಣ ಎನಿಸಿದರೂ ಪರವಾಗಿಲ್ಲ, ಹಸ್ತ ಸಾಮುದ್ರಿಕರ ಬಳಿ ಪಾದ ಬೆಳೆಸುತ್ತೇವೆ. ನಮ್ಮ ಕೈಲಾಗದ್ದನ್ನು ಆತನೇನು ಕಡೆದುಕಟ್ಟೆ ಹಾಕಬಹುದು? ಕೈ ಇಲ್ಲದವರೂ ಬದುಕು ಕಟ್ಟಿಕೊಂಡಿಲ್ಲವೇ!? ಇದರಲೆಲ್ಲಾ ಮಂದಿಗೆ ಜಾಣ ಅಲ್ಲಲ್ಲಾ ಅದೊಂದು ರೀತಿಯ ಕೋಣ ಮರೆವು.
‘ಕರುನಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನ್ನು…’ ಎಂದು ಆರ್ದ್ರವಾಗಿ ಬೇಡುವ ಈ ಪ್ರಾರ್ಥನಾ ಪದ್ಯವನ್ನು ಎಷ್ಟು ಬಾರಿ ಕೇಳಿಕೊಂಡರೂ ಮನಸ್ಸು ಅದನ್ನು ಅನುವಾದಿತ ಪದ್ಯ ಎನ್ನುವುದನ್ನು ಒಪ್ಪುವುದಿಲ್ಲ. ಕೈ ಹಿಡಿದು ನಡೆಯದೇ ಮಗು ನಡಿಗೆ ಕಲಿಯಲು ಸಾಧ್ಯವೇ? ಮಗುವಿಗೆ ಬೇಕಾದ ಕೈ ಮುದಿತನಕೂ ಆಸರೆಯಾಗಬೇಕಲ್ಲವೇ. ಇದು ಜೀವನದ ಸಾರ. ಕಾಣದ ಕೈಯ ಮೇಲೆ ಭರವಸೆ ಇಟ್ಟು ಬದುಕುತ್ತಿರುವವರು ಕೋಟಿ ಮಂದಿ ನಮ್ಮೊಡನಿದ್ದಾರೆ. ನಾವೂ ಅವರೊಡನಿದ್ದೀವಿ.
ಪಾಣಿಗ್ರಹಣ ಮಾಡಿಸಿ, ಕೈ ಹಿಡಿಸಿ, ಸಪ್ತಪದಿ ತುಳಿಸಿ ಜೊತೆಜೊತೆಯಾಗಿ ನಡೆಯಿರೆಂದು ನೂರಾರು ವರದಹಸ್ತಗಳು ಅಕ್ಷತೆ ಹಾಕಿ ಹಾರೈಸಿ ಹರಸಿರುವುದಿಲ್ಲವೇ? ಯಾವುದೋ ಕೆಟ್ಟ ಗಳಿಗೆಯಲಿ ಕೈ ಕೈ ಮಿಲಾಯಿಸಿಕೊಂಡು ಚಿಕ್ಕ ಮಕ್ಕಳ ಹಾಗೆ ಕೈ ಬೆರಳುಗಳನು ಮಡಚಿ ತುಟಿಯ ಬಳಿ ತಂದು ಟೂ ಬಿಟ್ಟರೂ, ಅದೇ ಕೈ ಬೆರಳಿನಿಂದಲೇ ರಾಜಿ ಮಾಡಿಸುವುದಿಲ್ಲವೇ?
ಚಿಟಿಕೆ ಹೊಡೆಯಲೂ, ಚಪ್ಪಾಳೆ ತಟ್ಟಲೂ, ಕೆಲವರಿಗೆ ಶಿಳ್ಳೆ ಹಾಕಲೂ ಕೈ – ಬೆರಳು ಬೇಕೇ ಬೇಕು. ಹಾಗೆಯೇ ನಶ್ಯ, ಇಸ್ಪೀಟು, ಸಾರಾಯಿ ಬೀಡಿ- ಸಿಗರೇಟು, ಮದ್ಯಪಾನಾದಿ ಅಮಂಗಳ ಚಟಗಳಿಗೂ ಕೈ ಸೇರಸಿರಲೇಬೇಕು ಹಾಗಲ್ಲದೆ ಮತ್ತವು ಸುಮ್ಮನೆ ಕುತ್ತಿಗೆಗೆ ಗಂಟು ಬೀಳುವವೇ? ಆದ್ದರಿಂದ ಯಾವುದಕ್ಕೇ ಕೈ ಹಾಕುವ ಮುನ್ನ ಒಂದಲ್ಲಾ ನೂರು ಬಾರಿ ಯೋಚಿಸುವುದು ಒಳ್ಳೆಯದೇ…
ದೇವರಿಗೆಂದು ಮಾನವರು ಎರಡು ಕೈ ಎತ್ತಿ ಮುಗಿಯುತ್ತಾರೆ. ಒಂದೇ ಕೈಯಿಂದಲೂ ಎದೆ ಮೇಲೆ ಶಿಲುಬೆ ಗುರುತು ಮಾಡುತ್ತಾರೆ. ಬಾನಿಗೆ ಕೈ ಚಾಚಿ ಅಭಯ ಕೋರುತ್ತಾರೆ. ನಮ್ಮಳತೆಗೆ ಸಿಕ್ಕ ದೇವರಿಗೆ ನಮ್ಮ ಹಾಗೆಯೇ ಎರಡು ಕೈ ಸಾಲದೇನೋ… ಸಾವಿರಾರು ಮಂದಿಗಳನು ದೈವ ತಾ ಪೊರೆಯಬೇಕಲ್ಲಾ? ನಮಗೇನು ನಷ್ಟ! ಕೊಟ್ಟೆವು ಇರಲೆಂದು ನಾಕೆಂಟು ಕೈ. ಹಿಡಿಸಿದೆವು ಅದರೊಳಗೆ ಹೂ, ತ್ರಿಶೂಲ, ಶಂಖ, ಚಕ್ರ, ಗಧೆ, ಶಿಲುಬೆ, ಆಯುಧಾದಿ ಹಲವು ಚಿಹ್ನೆಗಳನು.
ನಮ್ಮ ಅಂಗೈ ಮೇಲಿನ ಹುಣ್ಣಿಗೆ ಕನ್ನಡಿ ಬೇಕೇ? ಆದರೂ, ಬೆಣ್ಣೆ ಕೈಯೊಳಗಿದ್ದರೂ ತುಪ್ಪಕ್ಕಾಗಿ ತಪಿಸುತ್ತಾ ಅಲೆಯುವವರು ನಾವು. ಎಣ್ಣೆ ಬಂದಾಗ ಕಣ್ಮುಚ್ಚಿ ಆಮೇಲೆ ಕೈ ಕೈ ಹೊಸಕುತ್ತೇವೆ.
ಬಲಗೈ ಕೊಟ್ಟುದನ್ನು ಎಡಗೈಗೆ ತಿಳಿಸದಂತಹ ಕರ್ಣನು ಕೊಡುಗೈ ದಾನಿಯಾದನು. ಎಂಜಲು ಕೈಲಿ ಕಾಗೆ ಓಡಿಸಿದರೆಲ್ಲಿ ಅಗುಳು ಕಳಚಿ ಬೀಳುವುದೋ ಎನ್ನುವ ಜಿಪುಣಾಗ್ರೇಸನು ಸಿರಿವಂತನಾದರೂ ಸತ್ತ ಮೇಲೆ ಬರಿಗೈಲೇ ತೆರಳಿದನಂತೆ.
ಜಗದೇಕವೀರ ಅಲೆಗ್ಸಾಂಡರನು ಸಾಯುವಾಗ ‘ತನ್ನ ಶವ ಹೂಳುವಾಗ ಬರಿಗೈ ಮಣ್ಣ ಮೇಲಿರಲಿ’ ಎಂದನಂತೆ. ಸತ್ತವನು ಏನನ್ನೂ ಹೊತ್ತೊಯ್ಯಲಿಲ್ಲ ಎನ್ನುವುದು ಸುತ್ತಾರು ಲೋಕಕ್ಕೆ ತಿಳಿಯಲೆಂದು.
ವೈದ್ಯನ ಕೈ ಗುಣ ರೋಗಿಗೆ ಮರು ಜನ್ಮವನ್ನೇ ನೀಡಿದರೆ, ಅಡುಗೆಯವರ ಕೈ ಗುಣಕೆ ಹಸಿದವರು ಪುನರ್ಜನ್ಮ ಪಡೆದು ಮಣಿದಾರು! ಇಂಥವರನ್ನು ಕರವೀರರೆಂದು ಕರೆಯೋಣವೇ? ಇನ್ನೂ ಕೆಲವರಿರುತ್ತಾರೆ. ಬೆರಳು ತೋರಿದರೆ ಹಸ್ತ ನುಂಗುವ ಜಾತಿಯವರು. ಮತ್ತೂ ಕೆಲವರು ಕೈ ಮುಂದು ಮಾಡಿಯೇ ತಮ್ಮ ಕಾರ್ಯ ಸಿದ್ಧಿಸಿಕೊಳ್ಳುವಂತಹವರು. ಇವರನ್ನು ಏನೆಂದು ಕರೆಯೋಣ?!
ಶಿಕ್ಷೆಗೆ ಕೈ ಒಡ್ಡಿ ಬೆತ್ತದೇಟು ತಿಂದು ಕಲಿತ ನೆನಪು ೭೦-೮೦-೯೦ ರ ದಶಕಗಳಲ್ಲಿ ಹಳ್ಳಿ ಶಾಲೆಗಳಲ್ಲಿ ಕಲಿತ ನಮಗೆ ಮಾತ್ರವೇ ಗೊತ್ತಿರುವುದು. ಈಗ ಶಿಕ್ಷಕರು ಬೆತ್ತ ಹಿಡಿದರೆ ಅವರ ಕೈಗೆ ಕೋಳ ಹಾಕಿಸುವ ಪೋಷಕರಿದ್ದಾರೆ. ಇನ್ನು ಲಾಠಿ ಹಿಡಿವ ಕೈ ಏನಿದ್ದರೂ ಪೊಲೀಸರದ್ದೇ. ಎಲ್ಲೇ ಜನ ಗುಂಪುಗೂಡಿ ದನಿ ಎತ್ತಿದರೆ ಲಾಠಿ ಹಿಡಿದು ಠೀವಿಯಿಂದ ಬರುವ ಖಾದಿಯ ಖದರ್ರು ಗುಂಪನ್ನು ಚದುರಿಸೋವರೆಗೆ ಇಳಿದಿರುವುದಿಲ್ಲ.
ಬಳೆ ತೊಡುವ ಕೈ; ಖಡ್ಗ ಝಳಪಿಸುವ ಕೈ; ತೊಟ್ಟಿಲು ತೂಗುವ ಕೈ; ದೇಶದ ಚುಕ್ಕಾಣಿ ಹಿಡಿವ ಕೈ ಎಂದೂ ಒಂದೇ. ಸರಿಸಮವೇ. ಯಾವುದು ಹೆಚ್ಚಲ್ಲ ಕಡಿಮೆಯಲ್ಲ. ಅದು ಇದಾಗಬಹುದು. ಇದು ಅದಾಗಬಹುದು. ಕರುಣಾಮಯಿ ಕಾಲ ಎಲ್ಲಕ್ಕೂ ಸಾಕ್ಷಿಯಾಗಿದೆ.
ತನ್ನ ಬಲವನ್ನೆಲ್ಲಾ ತನ್ನ ಬಾಹುಗಳಲ್ಲೇ ಧರಿಸಿದ್ದ ಜಗದೇಕ ಮಲ್ಲ ತಾನೇ ಗೆದ್ದರೂ, ಜಗವೆಲ್ಲಾ ಶೂನ್ಯವೆಂದು ಬೆತ್ತಲಾಗಿ ಬಯಲಲ್ಲಿ ಬರಿಗೈಲಿ ನಿಂತು ವೈರಾಗ್ಯ ಮೂರ್ತಿ ತಾನಾದ… ಕೈ ಇರುವುದು ಕಾಯುವುದಕ್ಕೇ ಹೊರತು ಕೊಲ್ಲುವುದಕ್ಕಲ್ಲ ಎಂದು ಶತಮಾನಗಳಿಂದ ಸಾರುತ್ತಾ ನಿಂತ..
ಕೈ ಹಿಡಿಯುವವರೂ ಕೈ ಕೊಡುವವರೂ ನಮಗೆ ಆಗಾಗ್ಗೆ ಎದುರಾಗುತ್ತಿರುತ್ತಾರೆ. ಹಾಗೆ ಸಂಧಿಸಿದಾಗೊಮ್ಮೆ ಅವರನ್ನು ವಂದಿಸಿ ಗಟ್ಟಿಯಾಗಿ ಹಿಡಿದುಕೊಳ್ಳುವುದೋ ಅಥವಾ ಜಾಣತನದಲಿ ಜಾರಿಕೊಳ್ಳುವುದೋ ಎಂಬುದನ್ನು ನಾವು ಕರಗತ ಮಾಡಿಕೊಂಡಿರಬೇಕು.
ಈಗ ಪ್ರೀತಿ- ಸ್ನೇಹ ತೋರಿದವರೊಡನೆಯೂ ಹಸ್ತಲಾಘವ ಮಾಡುವ ಮುನ್ನ ಚೆನ್ನಾಗಿ ಯೋಚಿಸಬೇಕಾದ ಕಾಲಮಾನದಲ್ಲಿದ್ದೀವಿ. ಕಾಣದ ಕ್ರಿಮಿ ಕೈ ಸೇರಿ ಕೈಯಿಂದ ಕೈಗೆ ಹಾರಿ ಜಾರಿ ಅದು ಮಾಡುತ್ತಿರುವ ಅವಾಂತರ ಅನಾಹುತಕಾರಿ. ಹಾಗಾಗಿ ಕೈ ಮುಗಿದು ನಿಲ್ಲುವುದೇ ಸರಿಯೆಂದು ತೋರಿ; ಮಾಡೋಣ ಕೈ ಜೋಡಿಸಿ ನಮಸ್ಕಾರ ರೀ… ನಮಸ್ಕಾರ….
***{***
ವಸುಂಧರಾ ಕದಲೂರು
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಕೈಯ ಕುರಿತು ಇಷ್ಟೆಲ್ಲ ಬರೆಯ ಬಹುದಾ… ಒಳ್ಳೆದಿದದೆ ಬರಹ ವಸುಂಧರಾ