ಪ್ರಬಂಧ
ಹಾಲು ಎಲ್ಲಿ ಕೊಳ್ಳುವುದು?
ಸಮತಾ.ಆರ್
ಬೆಳಗಿನ ಜಾವದ ಸವಿನಿದ್ದೆ,ಏನೋ ಕನಸಿನಲ್ಲಿ ತೇಲಿಹೋಗುವಾಗ,ಇದ್ದಕ್ಕಿದ್ದಂತೆ, ಟರೆರರ್ರೆರರ್,ಎನ್ನುವ ಹಾಲಿನವನ ಹಳೇ ಮೊಪೆಡ್ಯೊಂದರ ಶಬ್ದ ಕೇಳಿ, ಧಡ್ ಎಂದು ಮೇಲಿಂದ ಕೆಳಕ್ಕೆ ಬಿದ್ದಂತೆ ಎಚ್ಚರವಾಯಿತು,”ಥತ್ ಈ ಹೊತ್ತಲ್ಲಿ ಇವನ ಕಾಟ ಬೇರೆ,” ಅಂತ ಗೊಣಗುತ್ತ ಮಂಪರುಗಣ್ಣಿನಲ್ಲೆ ಮೊಬೈಲ್ ನಲ್ಲಿ ಸಮಯ ನೋಡಿದರೆ ನಾಲ್ಕುವರೆಯಾಗಿತ್ತು.ರಾತ್ರಿ ಮಲಗುವುದೇ ಲೇಟ್,ಅದ್ರಲ್ಲಿ ಬೆಳಿಗ್ಗೆ ಐದು ಗಂಟೆಗೇ ಏಳದೇ ಹೋದರೆ,ಕೆಲಸ ಎಲ್ಲಾ ಮುಗಿಸಿ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋದಂತೆಯೇ ಸರಿ.ಹಾಗಾಗಿ ದಿನವೂ ಐದಕ್ಕೇ ಅಲಾರಂ ಇಡುವುದು ರೂಡಿಯಾಗಿ ಬಿಟ್ಟಿದೆ.ಮಧ್ಯರಾತ್ರಿ ಏನಾದರೂ ಎಚ್ಚರವಾದರೆ ಮುಗೀತು.ಮತ್ತೆ ನಿದ್ದೆ ಬಾರದು ಅಂದಮೇಲೆ ಬಾರದು.ಇನ್ನೇನು ಅಲಾರಾಂ ಹೊಡೆಯುತ್ತೆ,ಇನ್ನೇನು ಅಲಾರಾಂ ಹೊಡೆಯುತ್ತೆ,ಅಂದುಕೊಂಡೆ ನಿದ್ದೆ ಕಣ್ಣಿಗೆ ಹತ್ತುವುದಿಲ್ಲ.ಅಂತಹದರಲ್ಲಿ ಇತ್ತೀಚೆಗೆ ಈ ಬೆಳಗಿನ ಜಾವದಲ್ಲಿ ಮೊಪೆಡ್ನಲ್ಲಿ ಹಾಲಿನವ ಬೇರೆ ಅಲಾರಾಂ ಸಮಯಕ್ಕಿಂತ ಅರ್ಧ ಗಂಟೆ ಮೊದಲು ನಿದ್ದೆಗೆಡೆಸಲೆ ಬಂದ ಹಾಗೆ ಅನ್ನಿಸಿ ,ಮೈ ಎಲ್ಲ ಉರಿಯುತ್ತೆ.ಬೆಳಗಿನ ಜಾವದ ನಿದ್ದೆಗೆಟ್ಟರೆ ಇಡೀ ದಿನ ಮಂಕು ಹಾಗೆಯೇ ಇರುತ್ತೆ.ತೂಕಡಿಸಿ ಕೊಂಡೆ ದಿನವಿಡೀ ಹಾಳು.”ಒಂದು ಆರು ಗಂಟೆ ಮೇಲೆ ತಂದು ಹಾಕಲು ಹೇಳಬೇಕು ” ಅಂದುಕೊಂಡು ಮೇಲೆದ್ದೆ.
ಬೆಳಗಿನಕೆಲಸ ಎಲ್ಲಾ ಮುಗಿಸಿ ನಿತ್ಯದಂತೆ ಮತ್ತೆ ಕೆಲಸಕ್ಕೆ ಹೋಗಲು ಸ್ಕೂಟಿ ಆಚೆಗೆಳೆಯುವಾಗ,ಎದುರು ಮನೆ ಹಾಲಿನವನು ಆಗ ತಾನೇ ಬಂದು ಹಾಲು ಅಳೆಯುತ್ತಿದ್ದ.
ನಾವು ಕೊಳ್ಳೋದು ಡೈರಿ ಹಾಲು.ಎದುರು ಮನೆಯವರು ವರ್ತನೆಗೆ ಅಂತ ಯಾರೋ ನಾಟಿ ಹಸು ಕಟ್ಟಿರೋರ ಹತ್ರವೇ ಹಾಲು ತೆಗೆದು ಕೊಳ್ಳುತ್ತಿದ್ದರು.ಅವರ ಬಳಿ ವಿಚಾರಿಸಿ ನಾವೂ ಇವನ ಹತ್ತಿರವೇ ಹಾಲು ಕೊಂಡರಾಯಿತು,ಸಂಜೆ ವಿಚಾರಿಸಿದರಾಯಿತು ಅಂದುಕೊಂಡು ಹೊರಟೆ.
ಸಂಜೆ ಬಿಡುವು ಮಾಡಿಕೊಂಡು ಎದುರು ಮನೆಗೆ ಹೋಗಿ ವಿಚಾರಿಸಿದೆ.ಎದುರು ಮನೆಯಾಕೆ ತಮ್ಮ ಮನೇ ಹಾಲಿನ ಗುಣಗಾನವೇ ಪ್ರಾರಂಭಿಸಿ ಬಿಟ್ಟಳು. ಹಾಲು ಎಷ್ಟುಶುದ್ದ,ಎಷ್ಟು ದಪ್ಪ ಕೆನೇ ಕಟ್ಟುತ್ತೇ, ಬೆಣ್ಣೆಯ ಕೊಳ್ಳುವುದೇ ಬೇಡ, ದಿನಾ ಕೆನೆ ಕೂಡಿಸಿ ಫ್ರಿಡ್ಜ್ ನಲ್ಲಿಟ್ಟು,ವಾರಕ್ಕೊಮ್ಮೆ ಮಿಕ್ಸಿ ಯಲ್ಲಿ ಕಡೆದರೆ ಅರ್ಧ ಸೇರು ಬರುವ ಬೆಣ್ಣೆ,ಅದರ ತುಪ್ಪದ ಘಮ,ಎಲ್ಲಾ ಸೇರಿಸಿ, ಸೇರಿಸಿ ಅರ್ಧ ಘಂಟೆ ಕೊರೆದಳು.ಅಲ್ಲದೆ ಡೈರಿ ಹಾಲಿನ ಕೆಮಿಕಲ್ಸ್ ಮತ್ತದರ ಅನಾಹುತಗಳ ಮೇಲೆ ಇನ್ನರ್ಧ ಘಂಟೆಯ ಲೆಕ್ಚರ್ ಬೇರೆ.ಸರಿ ಇನ್ನೂ ಕುಳಿತರೆ ಹಾಲು ಉತ್ಪಾದನೆ ಬಗ್ಗೆ ದೊಡ್ಡ ಪಿಚ್ಚರೇ ಶುರುವಾದಿತು ಅನ್ನಿಸಿ,”ನನ್ನ ಗಂಡನ ಜೊತೆ ಮಾತನಾಡಿ ಹೇಳ್ತೇನೆ,ನಿಮ್ಮ ಹಾಲಿನವನು ನಮಗೂ ವರ್ತನೆಗೆ ಹಾಲು ಹಾಕ್ತನಾ ನಾಳೆ ಕೇಳಿ” ಎಂದು ಹೇಳಿ ಮನೆಗೆ ಬಂದೆ.
ಮನೆಯಲ್ಲಿ ಇವನ ಹತ್ರ ಮಾತನಾಡುವಾಗ ಇವನಿಗೆ ರೇಗಿಯೆ ಹೋಯಿತು “ಎಂಥಾ ಶುದ್ಧ ಹಾಲೇ?ಅವರ ಮನೆ ಹಾಲಿನವ ಏನು ತನ್ನ ಹಸವ ಬರೀ ಹಸಿ ಹುಲ್ಲು ಕೊಟ್ಟು ಬೆಳಸಿದ್ದಾನೆ ಅಂದ್ಕೊ ಬೇಡ. ಅವನೂ ಫೀಡ್ಸ್ ಹಾಕಿಯೇ ಸಾಕೋದು.ಇಲ್ಲದಿದ್ದರೆ ಇಷ್ಟೊಂದು ಮನೆಗೆ ಹಾಲು ಹಾಕಲು ಅಗ್ತಿತ್ತ.ನಿನ್ನ ಸಮಸ್ಯೆ ಹಾಲಿನದ,ಇಲ್ಲವೇ ಹಾಲು ತರುವವನದ? ನಮ್ಮ ಹಾಲಿನವನಿಗೆ ಸ್ವಲ್ಪ ಲೇಟ್ ಆಗಿ ಬರಲು ಹೇಳು ಸಾಕು.ಪಾಪ ಅವನು ನಾನು ಮನೆಕಟ್ಟಲು ಇಲ್ಲಿಗೆ ಓಡಾಡುತ್ತಿದ್ದಾಗಿನಿಂದಾ ಗೊತ್ತು.ನನಗೆ ಅವನು ಹೊಸದಾಗಿ ಪರಿಚಯ ಆಗಿದ್ದು , ಆದ್ರೂಎಷ್ಟೋ ದಿನ ಬಸ್ ಸ್ಟ್ಯಾಂಡ್ ನಿಂದ ಅವನ ಮೊಪೆಡ್ ಮೇಲೆ ನನ್ನ ಇಲ್ಲಿಯವರೆಗೆ ಬಿಟ್ಟು ಹೋಗ್ತಿದ್ದ ಗೊತ್ತಾ.ಉಗುರು ಕಣ್ಣ್ ಮಣ್ಣಾದರೆ ಬೆರಳನ್ನೆ ತೆಗೆದು ಹಾಕ್ಕೋಕೆ ಆಗುತ್ತಾ ಹೇಳು.ನಾಳೆ ಸ್ಕೂಲಿಂದ ಬರುವಾಗ ಬಸ್ ಸ್ಟ್ಯಾಂಡ್ ಪಕ್ಕವೇ ಆತನ ಮಿಲ್ಕ್ ಬೂತ್ ಅಲ್ಲವಾ ಹೇಳಿ ಬಾ”ಎಂದು ಇನ್ನೊಂದು ಕೊರೆತ ಇವನಿಂದ ಕೂಡ ಕೊರೆಸಿಕೊಳ್ಳ ಬೇಕಾಯಿತು.ಸರಿ ಇನ್ನೂ ಒಂದು ದಿನ ನಿದ್ದೆ ಹಾಳು ಎಂದು ಗೊಣಗಿಕೊಂಡೇ ಸುಮ್ಮನಾದೆ.
ಇವನು ಹೇಳೋದು ಕೂಡ ಸರಿಯೇ.ನಗರಗಳಲ್ಲಿ ದಿನಾ ಹಸ ಮೇಯಿಸಿಕೊಂಡು ಬರಲು ತೋಟ ತುಡಿಕೆ, ಹೊಲ ಗದ್ದೆಗಳು ಏನು ಇವೆಯೇ?ಎಲ್ಲೋ ಹೊರವಲಯದ ಹೊಸ ಬಡಾವಣೆಗಳ ಅಂಚಿನಲ್ಲಿ ಹಸು ಕಟ್ಟಿರುವವರು ಸ್ವಲ್ಪ ಜನ ಇದ್ದಾರೆ,ಅವರು ಕೂಡ ನಾಟಿ ಹಸುಗಳಿಗೂ ಸೀಮೆ ಹಸಗಳಿಗೆ ತರುವಂತೆ ಹಿಂಡಿ, ಹಸಿಹುಲ್ಲು ಎಲ್ಲವನ್ನೂ ಕೊಂಡಿಯೆ ತರಬೇಕು.ಆದ್ರೆ ನಾಟಿ ಹಸುಗಳಿಗೆ ಬ್ರಾಂಡ್ ನೇಮ್ ಇದೆ ನೋಡಿ ಹಾಗಾಗಿ ಸಾಕಲು ಸ್ವಲ್ಪ ಕಷ್ಟವಾದರೂ ಹಾಲಿನ ರೇಟ್ ಹೆಚ್ಚು ಮಾಡಿ ಸರಿದೂಗಿಸಿಕೊಂಡು ಹೋಗಬಹುದು.ಸಮಯವಿದ್ದರೆ ಹೊಸ ಬಡಾವಣೆಗಳ ಖಾಲಿ ಸೈಟ್ ಗಳಲ್ಲಿ ಬೆಳೆದಿರುವ ಹುಲ್ಲು ಮೇಯಿಸಿಕೊಂಡು ಬಂದರಾಯಿತೂ.ನಾಟಿ ಹಸು ಹಾಲು, ಬೆಣ್ಣೆ ಅಂದರೆ ಒಂದಕ್ಕೆರಡರಷ್ಟು ರೇಟ್ ಕೊಟ್ಟು ಕೊಳ್ಳುವ ಜನರಿದ್ದಾರೆ.
ಹಳ್ಳಿಗಳಲ್ಲಿ ನಾನು ಚಿಕ್ಕಂದಿನಿಂದ ನೋಡಿದ ಹಾಗೆ ಕೊಟ್ಟಿಗೆ ಇಲ್ಲದ ರೈತರ ಮನೆಗಳು ಅತೀ ಕಡಿಮೆ. ಮನೇಲಿ ಒಂದು ಕರೆಯುವ ಹಸವೋ,ಇಲ್ಲ ಎಮ್ಮೆಯೋ ಇದ್ದೇ ಇರುತ್ತಿತ್ತು. ಮನೆ ಬಳಕೆಗೆ ಆಗಿ ಮಿಕ್ಕಿದ್ದನ್ನು ಅಕ್ಕಪಕ್ಕದವರಿಗೆ ಮಾರುತ್ತಿದ್ದರು.ಯಾವಾಗ ಸೀಮೇಹಸುಗಳು,ಡೈರಿ ಉದ್ಯಮ ಚಾಲ್ತಿಗೆ ಬಂತೋ ಆಗಿನಿಂದ ಹಸು ಸಾಕಿ,ಡೈರಿಗೆ ಹಾಲು ಹಾಕಿ ಸ್ವಲ್ಪ ದುಡ್ಡು ರೈತರ ಕೈಯಲ್ಲಿ ಓಡಾಡಲು ಶುರುವಾಯಿತು.ಹಸು ಸಾಕಿ ದುಡ್ಡು ಮಾಡಿರೋರ ಯಶೋಗಾಥೆಗಳು ದಿನಪತ್ರಿಕೆಗಳ ಕೃಷಿ ಪುರವಣಿಗಳ ಪುಟ ಅಲಂಕರಿಸಿ ಇನ್ನಷ್ಟು ನಿರುದ್ಯೋಗಿ ಗ್ರಾಮೀಣ ಯುವಕರು ಹೈನೋಧ್ಯಮ ಕೈಗೊಂಡರು.ಆದರೆ ಈ ಹಸುಗಳು ಸ್ವಾಭಾವಿಕವಾಗಿ ಹೊರಗಡೆ ಹುಲ್ಲು ಮೇಯಿ ಕೊಂಡು ಬಂದು ಸಂಜೆ ಮನೇ ಸೇರುವ ನಾಟಿ ಹಸುಗಳಂತಲ್ಲ.ಸ್ವಚ್ಛವಾಗಿಟ್ಟು ಕೊಂಡಿರೋ ಕೊಟ್ಟಿಗೆಗಳಲ್ಲಿ ಒಳ್ಳೆ ಹುಲ್ಲು,ಹಿಂಡಿ ಕೊಟ್ಟು ಸಾಕಬೇಕು. ಪಶುವೈದ್ಯರ ಸಲಹೆ ಸೂಚನೆ ಪಾಲಿಸಿ ಔಷದಿ, ಇಂಜೆಕ್ಷನ್, ಕೊಡಿಸಿಕೊಂಡು ನಿಗಾ ನೋಡಬೇಕು.ಹಾಗಾಗಿ ಹಾಲಿನಲ್ಲಿ ಹಲವು ಕೆಮಿಕಲ್ಸ್ ಸೇರುತ್ತವೆಂದು ಬಹಳ ಜನರ ದೂರು.
ಆದರೂ ಹಾಲು ಹಾಲಿನ ಉತ್ಪನ್ನಗಳಿಲ್ಲದ ನಮ್ಮ ಭಾರತೀಯ ಆಹಾರ ಪದ್ಧತಿಗಳ ಊಹಿಸಿ ಕೊಳ್ಳಲು ಸಾಧ್ಯವೇ? ರೂಡಿಗತವಾಗಿ ಬಂದಿರುವ ಅಡುಗೆ ಊಟಗಳ ಅಷ್ಟು ಸುಲಭವಾಗಿ ಬಿಡಲು ಸಾಧ್ಯವೇ.ಹಾಗಾಗಿ “ಏನೋ ಹಾಲು ಅಂದ್ರೆ ಹಾಲು” ಅಂದುಕೊಂಡು ಕೊಳ್ಳಬೇಕಷ್ಟೇ.ಎಲ್ಲಾ ಬೆಳೆಗಳು,ಹಣ್ಣು ತರಕಾರಿಗಳನ್ನು ರಸ ಗೊಬ್ಬರ ಹಾಕಿ ,ಕೀಟ ನಾಶಕ ಸಿಂಪಡಿಸಿ ಬೆಳೆದಿದ್ದು ತಿನ್ನೋಲ್ಲವೆ ನಾವು. ಇನ್ನು ಹಾಲಿಗೇಕೆ ತಾರತಮ್ಯ.ಅಲ್ಲದೆ ಇಷ್ಟು ಅಪಾರ ಸಂಖ್ಯೆ ಯ ಜನಸಂಖ್ಯೆ ಯುಳ್ಳ ನಮ್ಮ ದೇಶದ ಜನರಿಗೆ ಪೂರೈಕೆ ಯಾಗುವಷ್ಟು ಹಾಲು ಸೀಮೆ ಹಸುಗಳು ಪೂರೈಸು ತ್ತಿಲ್ಲವೇ?ಹಾಗಾಗಿ ಡೈರಿ ಹಾಲಿಗೆ ನಾನು ಒಗ್ಗಿ ಹೋಗಿದ್ದೇನೆ.
ಅಲ್ಲದೆ ಡೈರಿಅಂಗಡಿಯೊಂದಕ್ಕೆ ಹೋಗಿ ನೋಡಿ,ಬೇರೆ ಬೇರೆ ದರದ,ಬೇರೆ ಬೇರೆ ಜಿಡ್ಡಿನ,ಸಾಂದ್ರತೆಯ ಹಾಲು ವಿಧ ವಿಧ ಬಣ್ಣದ ಪ್ಯಾಕ್ಕೆಟ್ ಗಳಲ್ಲಿ ಸಿಗುತ್ತೆ.ಮೊಸರು,ಮಜ್ಜಿಗೆ,ಬೆಣ್ಣೆ ,ತುಪ್ಪ,ಪೇಡಾ, ಮೈಸೂರ್ ಪಾಕ್ ,ಕುಕೀಗಳು,ಏನುಂಟು ಏನಿಲ್ಲ,ಮನೆಗೆ ಅಚಾನಕ್ ಆಗಿ ಅತಿಥಿ ಗಳು ಬಂದರೆ ,ಕಾಫಿಗೆ ಹಾಲಿಲ್ಲದಿದ್ರೆ ತಕ್ಷಣ ಓಡಿ ಹೋಗಿ ತಂದರಾಯಿತು.ಇಷ್ಟೊಂದು ಸುಲಭ ಸೌಕರ್ಯ ಬಿಟ್ಟು ಹಸು ಸಾಕೋ ರಿಸ್ಕ್ ಯಾಕೆ ಬೇಕು.
ಆದರೆ ಹಳ್ಳಿ ಮೂಲಗಳಿಂದ ಬಂದವರಿಗಂತು ತಮ್ಮ ಬಾಲ್ಯ ಕಾಲದ ಹಾಲು, ಮೊಸರು,ಬೆಣ್ಣೆ,ತುಪ್ಪ, ಗಿಣ್ಣು ಗಳ ಸವಿ, ಸಮೃದ್ಧಿ, ಅದೊಂದು ಮುಗಿಯದ ಕನವರಿಕೆ.
ತಮ್ಮ ಮನೆಯಲಂತು ಹಸುಕಟ್ಟಂಗಿಲ್ಲ, ಕಟ್ಟಿರೋರ ಹತ್ರ ತೋಗೊಂಡ್ರೆ ಸ್ವಲ್ಪ ಒಳ್ಳೆ ಹಾಲು ಸಿಗಬಹುದು ಅನ್ನೋ ಆಸೆ.ಆದರೆ ಈ ನಾಟಿಹಸುಕಟ್ಟೋರು ನಗರಗಳಲ್ಲಿ ಅಪರೂಪದಲ್ಲಿ ಅಪರೂಪ.ಎಲ್ಲೋ ನಗರದಂಚಿನ ಬಡಾವಣೆಗಳಲ್ಲಿ ಕೆಲ ಜನ ಸಿಕ್ಕಾರು.ಹಾಗಾಗಿಎಲ್ಲರಿಗೂ ಈ ವರ್ತನೆ ಹಾಲು ಸಿಗೋದಿಲ್ಲ ವಾದ್ದರಿಂದ ಡೈರಿ ಹಾಲಿಗೆ ಮೊರೆ ಹೋಗಬೇಕಾಗಿದೆ.ನನ್ನ ಗಂಡನ ಪ್ರಕಾರ “ಡೈರಿಗೆ ಬರುವ ಹಾಲು ಕೂಡ ಯಾರದೋ ಮನೆಯಲ್ಲಿ ಕಟ್ಟಿರುವ ಹಸುವಿನದೇ ತಾನೇ?ಹಾಗಾಗಿ ಎಲ್ಲಿ ಕೊಂಡರೇನು?”
ಆದ್ರೆ ಕೆಲವರ ಪ್ರಕಾರ ಡೈರಿ ಹಾಲು ತಾಜಾ ಅಲ್ಲ.ಹಿಂದಿನ ದಿನದ ಹಾಲನ್ನೇ ಕೆಡದಂತೆ ಪ್ಯಾಶ್ಚರಿಕರಿಸಿ ಪೂರೈಸುತ್ತಾರೆ.ಅಲ್ಲದೆ ಕಾಯಿಸುವಾಗ ಸಿಂಡು ಹೋಗುವಂತೆ ಕಾಯಲು ಬಹಳ ಹೊತ್ತು ತೊಗೊಳ್ಳುತ್ತೆ. ಕೆನೆಯಿಂದ ಬೆಣ್ಣೆ ಬರಲ್ಲ.ಡೈರಿ ಬೆಣ್ಣೆ ಯಿಂದ ಕಾಸಿದ ತುಪ್ಪಕ್ಕೆ ಘಮವಿಲ್ಲ ಇತ್ಯಾದಿ ಇತ್ಯಾದಿ ರೋಧನೆ ಗಳು ಕೇಳ ಸಿಗುತ್ತವೆ.ಆದರೆ ಶುದ್ಧ ಹಾಲು ಪೂರೈಸಲು ಹಸು ಸಾಕಲು ನಗರಗಳಲ್ಲಿ ಸ್ಥಳ,ಸಮಯಾವಕಾಶ ಯಾರ ಬಳಿ ಇದೆ ಹೇಳಿ.ನಮ್ಮ ಪೀಳಿಗೆಯವರಿಗಾದ್ರು ಹಾಲು ಹಸುವಿನಿಂದ ಸಿಗುತ್ತೆ ಅನ್ನೋದಾದ್ರೂ ಗೊತ್ತಿದೆ.ನಮ್ಮ ಮಕ್ಕಳಿಗೆ ಅದು ಡೈರಿಯಲ್ಲಿ ಸಿಗುವ ಒಂದು ವಸ್ತು ಅಷ್ಟೇ.
ನಾವು ಚಿಕ್ಕವರಿದ್ದಾಗ ಬೆಳೆದಿದ್ದು ಒಂದು ಸಣ್ಣ ಪಟ್ಟಣ ದಲ್ಲೆ. ಅಪ್ಪನ ಕಂಪನಿ ನೀಡಿದ್ದ ವಿಶಾಲ ಅಂಗಳ, ಕೈತೋಟ ಗಳಿದ್ದ ಕ್ವಾರ್ಟರ್ಸ್ ಗಳಲ್ಲಿ ವಾಸ.ಕೆಲವರು ಆಸಕ್ತಿ ಸಮಯವಿದ್ದವರು ತಮ್ಮ ಅಂಗಳಗಳಲ್ಲೆ ಹಸು ಕಟ್ಟಿ ಕೊಂಡು,ತಮ್ಮ ಮನೆಗೂ ಹಾಲು ಆಗಿ ಮಿಕ್ಕಿದ್ದನ್ನು ಅಕ್ಕಪಕ್ಕದವರಿಗೆ ಮಾರುತ್ತಿದ್ದರು.ಅಂತಹ ಹಸು ಎಮ್ಮೆ ಕಟ್ಟಿರುವ ಮನೆಗಳು ಸಾಕಷ್ಟಿದ್ದು,ಕೊಳ್ಳುವವರೆಲ್ಲ ವರ್ತನೆ ಹಾಲೇ ಕೊಳ್ಳುತ್ತಿದ್ದು.ಇನ್ನೂ ಹಾಲಿನ ಡೈರಿ ಗಳು ಅಷ್ಟಿರಲಿಲ್ಲ.ಎಲ್ಲೋ ಅಲ್ಲೊಂದು ಇಲ್ಲೊಂದು ಅಷ್ಟೇ.ಬೆಂಗಳೂರಿಗೆ ನೆಂಟರ ಮನೆಗೆ ಹೋದಾಗ ಮಾತ್ರ ಬಾಟಲ್ ಗಳಲ್ಲಿ ಪೂರೈಕೆ ಆಗುತ್ತಿದ್ದ ಡೈರಿ ಹಾಲು ಕಾಣ ಸಿಗುತ್ತಿದ್ದು. ಹಾಲು,ಮೊಸರು ಬೆಣ್ಣೆ ತುಪ್ಪ ಎಲ್ಲಾ ಈ ವರ್ತನೆ ಹಾಲಲ್ಲೆ.ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.
ಆದರೆ ಬರುತ್ತಾ ಬರುತ್ತ ಮಕ್ಕಳೆಲ್ಲ ಓದಿ ಬೇರೆ ಬೇರೆ ಕೆಲಸಕ್ಕೆ ಸೇರಿದ ಮೇಲೆ ಈ ಸಣ್ಣ ಪಟ್ಟಣಗಳ ಹಸ ಸಾಕುವವರು ವಯಸ್ಸಾಗಿ,ಹಸು ಸಾಕುವ, ಹಾಲು ಮಾರುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತ ಹೋಗಿ ಸಣ್ಣ ಪಟ್ಟಣಗಳಲ್ಲಿ ಕೂಡ ಬಹುತೇಕ ಮಂದಿ ಡೈರಿ ಹಾಲಿಗೆ ಮೊರೆ ಹೋಗುವಂತಾಗಿದೆ.ಅಲ್ಲದೆನಾಟಿ ಹಸುಗಳಿಗೆ ಹೋಲಿಸಿದರೆ ಸೀಮೆ ಹಸುಗಳಿಂದ ಹೆಚ್ಚಿನ ಪ್ರಮಾಣದ ಹಾಲು ಸಿಗುತ್ತದೆ.ವರ್ತನೆ ಬದಲು ಡೈರಿಗೆ ಹಾಕುವುದು ಹೆಚ್ಚು ಲಾಭದಾಯಕ.ಹಾಗಾಗಿ ಹಸು ಸಾಕುವುದಾದರೂ ಮನೆ ಬಳಕೆಗೆ ಮಾತ್ರ ಅಂತ ಅಂದುಕೊಳ್ಳದೆ, ನಾಲ್ಕೈದು ಸೀಮೆ ಹಸ ಕಟ್ಟಿ ಲಾಭದಾಯಕ ಉದ್ಯಮ ನಡೆಸಲು ಹಸು ಸಾಕುವವರು ಹಳ್ಳಿ ಕಡೆಗಳಲ್ಲಿ ಹೆಚ್ಚಾಗಿದ್ದಾರೆ.ಅವರು ಉತ್ಪಾದಿಸಿದ ಹಾಲು ಡೈರಿ ಮೂಲಕ ನಗರಗಳಿಗೆ ಪೂರೈಕೆಯಾಗಿ ನಮ್ಮಂಥ ನಗರವಾಸಿ ಗಳಿಗೆ ಸಹಾಯವಾಗಿದೆ.
ನಗರಗಳಲ್ಲಂತು ಹಸು ಸಾಕುವವರ ಸಂಖ್ಯೆ ಇಲ್ಲವೇ ಇಲ್ಲ ಅನ್ನುವಷ್ಟು ಪ್ರಮಾಣದಲ್ಲಿದೆ. ಅಂಗೈಯಗಲ ಸೈಟ್ ಗೆ ಲಕ್ಷಾಂತರ ರೂಪಾಯಿ ಸುರಿದು ಕೊಂಡು,ಅದರಲ್ಲಿ ಕಟ್ಟೋ ಮನೇ, ಮನೇ ಜನಕ್ಕೆ ಇರಲು ಸಾಲದಿದ್ದಾಗ , ಅದರಲ್ಲೂ ಹಸು ಸಾಕಲು ಅಂತ ಜಾಗ ಬಿಟ್ಟು ಕೊಳ್ಳೋದು ಯಾರು ಮಾಡುತ್ತಾರೆ ಹೇಳಿ.ಅಲ್ಲದೆ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವ ಕುಟುಂಬಗಳೇ ಹೆಚ್ಚಿರುವಾಗ ಹಸು ಸಾಕುವ ಸಮಯ ಯಾರಿಗಿದೆ.ಅಲ್ಲದೆ ಗೃಹಿಣಿಯಾಗಿ ಮನೆಯಲ್ಲಿ ಇರುವವರಿಗೂ ಆಧುನಿಕ ಕಾಲದ ವಿದ್ಯಾಭ್ಯಾಸ ಮಕ್ಕಳಿಗೆ ಕೊಡಿಸುವ ಜವಾಬ್ದಾರಿಯೇ ಹೆಚ್ಚಿದ್ದು , ಸುಲಭವಾಗಿ ಡೈರಿಲಿ ಸಿಗೋ ಹಾಲು ಬಿಟ್ಟು,ಸಗಣಿ ಗಂಜಲದ ವಾಸನೆ ಸಹಿಸಿಕೊಂಡು ಹಸುವಿನ ನಿಗಾ ನೋಡುವ ಕಷ್ಟದ ಕೆಲಸ ಯಾಕೆ ಬೇಕು ಹೇಳಿ.
ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಕೆಲಸ ಒದಗಿಸಿರುವ ಈ ಹೈನೋದ್ಯಮ ನಗರವಾಸಿಗಳಿಗೆ ಕೂಡ ಹಾಲಿನ ಉತ್ಪನ್ನಗಳ ವಿಷಯದಲ್ಲಿ ಉಪಯೋಗವನ್ನು ಮಾಡುತ್ತಿದೆ.ಇಲ್ಲದಿದ್ದರೆ ಉದ್ಯೋಗಸ್ಥ ಮಹಿಳೆಯರಿಗೆ ಸುಲಭವಾಗಿ ತಮ್ಮ ಮನೆಯ ಹಾಲಿನ ಬೇಡಿಕೆ ಪೂರೈಕೆ ಯಾಗುತ್ತಿತ್ತೇ? ಬರೀ ಒಂದು ಮೊಪೆಡ್ ನ ನಿದ್ದೆ ಗೆಡಿಸುವ ಶಬ್ದ ಇಷ್ಟೆಲ್ಲಾ ಆಲೋಚನೆಗಳನ್ನು ತಲೆಯಲ್ಲಿ ತಂದಿತು ನೋಡಿ.
ಮಾರನೇ ದಿನ ಕೆಲಸದಿಂದ ಹಿಂದಿರುಗುವಾಗ ,ನೆನಪಿನಿಂದ ಮಿಲ್ಕ್ ಬೂತ್ ಗೆ ಹೋಗಿ ಹಾಲಿನವನನ್ನು ಮಾತನಾಡಿಸಿ,”ಅಣ್ಣ ಸ್ವಲ್ಪ ಲೇಟ್ ಆಗಿ ಹಾಲು ತನ್ನಿ,ಅಷ್ಟು ಬೆಳಿಗ್ಗೆ ನನ್ನ ನಿದ್ದೆ ಕೆಡುತ್ತೆ”ಅಂದಿದ್ದಕ್ಕೆ ಅವನು ನೀಡಿದ ಉತ್ತರಕ್ಕೆ ನನ್ನ ಗಂಟಲು ಕಟ್ಟಿ ಹೋಯಿತು.” ನೋಡಿ ಮೇಡಂ,ನೀವು ಬೆಳಿಗ್ಗೆ ಬೆಳಿಗೆ, ಚಳಿ ಗಾಳಿಲಿ ಕೆಲಸಕ್ಕೆ ಅಂತ ಧೌಡು ಹೊಡಿತಿರ್ಥಿರ,ಪಾಪ ಸ್ವಲ್ಪ ಕಾಪಿನಾದ್ರು ಕುಡ್ಕೊಂಡ್ ಹೋಗ್ಲಿ..ಅಷ್ಟೊತ್ತಿಗೆ ತಿಂಡಿ ತಿನ್ನಕಾಕ್ಕಿಲ್ಲ,ಕಾಪಿಯಾದ್ರೆ ಚಳಿಗೂ ಒಳ್ಳೇದು,ಅಂತ ಅಂದ್ಕೊಂಡು ಫಸ್ಟ್ ನಿಮ್ಮಕಡೆ ಮನೆಗಳಿಗೆ ಹಾಲು ಹಾಕನ ಅಂತ ಬತ್ತಿನಿ.ಬೇರೆ ಕಡೆ ಹೋಗಿ ನಿಮ್ ರೋಡ್ ಗೆ ಬರಣ ಅಂದ್ರೆ ತುಂಬಾ ಲೇಟ್ ಆಯ್ತದೆ ನೀವು ಹೊಂಟೋಗಿರ್ತಿರ.ಅದಕ್ಕೆ ನಿಮ್ ಮನೆಗೆ ಫಸ್ಟ್ ಬತ್ತೀನಿ” ಅಂದರು. ನನಗೆ ಮಾತೇ ಹೊರಡದೆ,ಕೊನೆಗೆ ಸುಧಾರಿಸಿಕೊಂಡು”ಲೇಟ್ ಆಗಿಯೇ ಕೊಡಿ ಅಣ್ಣ,ಹೇಗೂ ನಾನು ಕಾಫೀ ಟೀ ಕುಡಿಯಲ್ಲಾ, ನಿದ್ದೆಯಾದ್ರು ಸ್ವಲ್ಪ ಮಾಡಿಕೊಳ್ತೀನಿ,”ಅಂದದ್ದಕ್ಕೆ ಆತ ನಕ್ಕು ತಲೆಯಾಡಿಸಿದರು.
*************
ಸೂಪರ್ ಮೇಡಂ. ಒಳ್ಳೆಯ ಬರಹ. ವಾಸ್ತವಕ್ಕೆ ಹಿಡಿದ ಕೈಗನ್ನಡಿ.ನಿಮ್ಮ ಬರಹ ಪ್ರತೀ ಬಾರಿಯೂ ನನ್ನದೇ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದಂತೆ ಭಾಸವಾಗುತ್ತೆ.ಹೀಗೆ ಒಳ್ಳೆಯ ಬರಹಗಳು ನಿಮ್ಮಿಂದ ಇನ್ನಷ್ಟು ಮೂಡಿ ಬರಲಿ………
ತುಂಬ ಚೆನ್ನಾಗಿ ಮೂಡಿ ಬಂದಿದೆ
Super Samatha
Sarala sundara manassige haththira yenisuva baraha
Super stiry
ಎಂದಿನಂತೆ ಅನುಭವವನ್ನು ಹೃದ್ಯವಾಗಿಸಿದಿರಿ..ವಿಷಯಕ್ಕೇನು ಕೊರತೆ ನಿಮಗೆ?ಬರೀರಿ ತುಂಬಾ..
ತುಂಬ ಚೆನ್ನಾಗಿ ಮೂಡಿ ಬಂದಿದೆ
ಬೆಂಗಳೂರಲ್ಲಿ ಮನೆ ಕಟ್ಟಿದ ಹೊಸದರಲ್ಲಿ, utility ಯಲ್ಲಿ ಪ್ರತೀರಾತ್ರಿ ಇಲಿಗಳದ್ದೇ ಕಾರುಬಾರು. ಬೆಕ್ಕು ಸಾಕಲು ಬುದ್ದಿವಂತರ ಸಲಹೆ, ಅದಕ್ಕೆ ಹಾಲು ಹಾಕಲು ಹಸುಕಟ್ಟಲು ಸಿಕ್ಕ ಉಪದೇಶದ ಕಥೆ ನೆನಪಾಗತ್ತೆ.
ಹಾಲು ಹಾಗು ಹಾಲಿನ ಬರಹ ಶುದ್ಧವಾಗಿಯೇ ಇದೆ. ಇದಕ್ಕೆ ಹೊರ ರಾಜ್ಯಗಳಿಂದ ಬರುವ ರಾಸಾಯನಿಕ ಹಾಲು, ಕೃತಕ ಹಾಲು, ಕಲುಷಿತ ಹಾಲು ಹಾಕದೆ ಪರಿಶುದ್ದ ವಾಗಿದೆ, ನಮ್ಮ ನಂದಿನಿಯ ತರಹ.
Good article madam
ತುಂಬಾ ಚೆನ್ನಾಗಿ ಮೂಡಿಬಂದಿದೆ ಸಮತ
ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು