ಅಂಕಣ ಬರಹ

ತೊರೆಯ ಹರಿವು

ಕೀಟಲೆ ಮನಸ್ಸಿನ ಕೋಟಲೆಗಳು..

ಮಾನ್ಯ ಶಿವರಾಮ ಕಾರಂತರು ತಮ್ಮ ಮನಸ್ಸಿನ ಬಗೆಯನ್ನು ಜೀವನಾನುಭವದ ಒಡನೆ ಬೆಸೆದು, ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದು ಬಣ್ಣಿಸಿದರು. ಮನಸ್ಸಿನ ಬಗೆಯೇ ಅಂಥದ್ದು. ಇಂಥಾ ಮನಸ್ಸನ್ನು ‘ಮರ್ಕಟ’ ಎಂದರು ಕೆಲವರು. ಹೂವು, ಹಾವು, ಗೂಬೆ, ಗೂಳಿ, ಗಾಳಿ… ಎಂದೆಲ್ಲಾ ಜನ ತಮಗೆ ತೋಚಿದಂತೆ ಕರೆದುಕೊಂಡರು. ತಂತಮ್ಮ ಮನಸ್ಸನಲ್ಲದೇ ತಾವು ಕಂಡ ಹತ್ತು ಹಲವು ಜನರ ಮನಸ್ಸಿನ ಮರ್ಮಗಳನ್ನೂ ಸಹ ಬಗೆದು ಹೇಳಿದರು! ‘ಆಹಾ ಮಳ್ಳಿ, ಊಸರವಳ್ಳಿ, ನಳ್ಳಿ..’ ಹೀಗೆ.  

    ಆದರೂ ಮನಸ್ಸಿನ ಮರ್ಮವನ್ನು ಹೀಗೇ ಎಂದು ಯಾರೂ ಹೇಳಲಾಗಲಿಲ್ಲ. ತನ್ನ ಬಗ್ಗೆ  ಖಚಿತವಾಗಿ ಹೇಳಿಕೊಳ್ಳಲು ಮನಸ್ಸಿಗೂ ಸಹ ಇನ್ನೂ ಮನಸ್ಸಾಗಲಿಲ್ಲವೇ ಎಂಬ ಸಂದೇಹವೂ ಆಗಾಗ್ಗೆ ಕಾಡುತ್ತದೆ.


  ಮನಸ್ಸಿನ ಕುರಿತು ಮಾತನಾಡುತ್ತಾ ಇರುವ ನನಗೆ ಬೇರೆಯವರ ಮನಸ್ಸಿನ ಬಗೆಯ ಬಗ್ಗೆ ಹೇಗೆ ಗೊತ್ತಾಗಬೇಕು ಹೇಳಿ? ಮನಃಶಾಸ್ತ್ರ ಓದಿಕೊಂಡಿದ್ದರೆ ಸ್ವಲ್ಪವಾದರೂ ತಿಳಿಯಲು ಪ್ರಯತ್ನಿಸಬಹುದಿತ್ತೇನೋ… ಆದರೆ ಕನ್ನಡವೇ ಹೆಮ್ಮೆ ಎನ್ನುವ ಈ ಎಮ್ಮೆಮರಿ ಓದಿಕೊಂಡದ್ದು ಕನ್ನಡ ಎಂ.ಎ. ಕನ್ನಡದ್ದೇ ಹತ್ತು ಮತ್ತಾರು ಪುಸ್ತಕಗಳನ್ನು ಇನ್ನೂ ಓದುತ್ತಿರುವ ನನಗೆ ಬೇರೆಯವರ ಮನದ ಮರ್ಮ ತಿಳಿವ ಬಗೆ ಹೇಗೆ ಸಾಧ್ಯ?  



   ಇರಲಿ, ನಾನೀಗ ಹೇಳ ಹೊರಟಿರುವುದು ನನ್ನದೇ ಕ(ವಿ)ಪಿ ಮನಸ್ಸಿನ ಕೋಟಲೆಗಳ ವಿಚಾರಗಳನ್ನು. (ವಿ)ಕಾರ ಆವರಣದಲ್ಲೇ ಇದ್ದರೆ ಸೊಗಸೆಂದು, ಕಪಿಯೇ ಪೂರ್ವಜ ಎಂಬ (ಹುಸಿ?)ಸಿದ್ಧಾಂತ ನೆನೆಯುತ್ತಾ… 



           ನಿಮಗೆ ನವರಸಗಳು ಗೊತ್ತಲ್ಲವೇ? ಅದೇ ಹುಳಿಯ ಹುಣಸೇ ರಸ, ಸಿಹಿಯ ಜೇನಿನ ರಸ, ಸೊಗಸಿನ ಮಾವಿನ ರಸ , ಕೆಮ್ಮು- ನೆಗಡಿಗೆ ಮನೆಮದ್ದು ಮೆಣಸಿನ ರಸ… ಹೀಗೆ.. ‘ಅರೆ!! ಇದೆಂತಹ ಮೊದ್ದುಮಣಿ, ನವರಸಗಳ ಬಗ್ಗೆ ಗೊತ್ತಿಲ್ವೆ?’ ಎಂದು ಕನಿಕರ ತೋರುವಿರಾ? ಸ್ಸಾರಿ ರೀ, ಕ್ಷಮಿಸಿ, ಅದಕ್ಕೇ ನಾನು ಲೇಖನಕ್ಕೆ ಕೊಟ್ಟ ಶಿರೋನಾಮೆಯನ್ನು ಆಗಾಗ್ಗೆ ನೋಡಿ ಸಮಾಧಾನ ಮತ್ತು ನಿಮ್ಮ ಶಿರೋಭಾರ ಕಡಿಮೆ ಮಾಡಿಕೊಳ್ಳಿರೆಂದು ಈಗಲೇ ಕೈ ಮುಗಿದು ಬೇಡಿಕೊಳ್ಳುವೆ. ಲೇಖನ ಮುಕ್ತಾಯದವರೆಗೂ ಈ ಕೋಟಲೆಯನ್ನು  ಸಹಿಸಿ ಓದಿಕೊಳ್ಳಿರಿ. 

   ಶೃಂಗಾರ, ಹಾಸ್ಯ, ರೌದ್ರ, ವೀರ, ಕರುಣ, ಭೀಭತ್ಸ, ಅದ್ಭುತ, ಭಯಾನಕ, ಶಾಂತ –  ಇವುಗಳನ್ನು  ನವರಸಗಳೆಂದು ಆದ್ಯ ನಾಟ್ಯಮುನಿ ಭರತ, ಅಭಿನವಗುಪ್ತರ ಆದಿಯಾಗಿ ಹಲವು ಮೀಮಾಂಸಕಾರರೂ, ರಸತಜ್ಞರೂ, ಪಂಡಿತರೂ  ಪ್ರತಿಪಾದಿಸಿ ಮಂಡಿಸಿರುತ್ತಾರೆ. ಹೀಗೆ, ಈ ನವರಸಗಳ ಬಗ್ಗೆ ಮಹಾಮಹಾ ಪಂಡಿತರು ಹಲವು ಸುತ್ತಿನ ಪರ-ವಿರೋಧದ ಚರ್ಚೆಗಳನ್ನು ಮಾಡಿ ಮಂಡಿಸಿರುವ ಸಿದ್ಧಾಂತಗಳು ನಮ್ಮ ಮುಂದೆ ಇರುವುದರಿಂದ, ಪಾಮರಳಾದ ನಾನು ಅದರ ಬಗ್ಗೆ ಮತ್ತೆ ನುಡಿಯಲಾರದೆ, ನನ್ನದೇ ಆದ ರಸಸಿದ್ಧಾಂತವನ್ನು ನಿಮ್ಮ ಮುಂದೆ ಇದೀಗ ಅರಹುತ್ತೇನೆ.

 


    ಹೊರಗಿನವರು ನನ್ನನ್ನು ನೋಡಿ, ಈಕೆ ಬಹಳ ಗಂಭೀರಳೂ, ಮೌನಿಯೂ, ಅಂತರ್ಮುಖಿಯೂ, ಸಾಧು ಪ್ರಾಣಿಯೂ ಎಂದು ಭ್ರಮಿಸಿ ಭಾವಿಸುವ ಹಾಗೆ ಮಾಡುವ ನನ್ನ ಈ ಮೂತಿ (ಗಂಭೀರವಾಗಿ ಬೇಕಿದ್ದರೆ ಮುಖ ಚಹರೆ ಎನ್ನಿ). ಆದರೆ ನನ್ನ ಮುಖದ ಗಾಂಭೀರ್ಯಕ್ಕೆ ಕಿಂಚಿತ್ತಾದರೂ ನನ್ನ ಮನಸ್ಸೂ ಕೈ ಜೋಡಿಸಬೇಕಲ್ಲವೇ? ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಹಾಗಾಗುವುದೇ ಇಲ್ಲ. 

     ಅದರಲ್ಲೂ ಆಫೀಸಿನ ಸಭೆಗಳಲ್ಲಿ (ಈ ನಡುವೆ ಕಡಿಮೆಯಾಗಿದೆ ಬಿಡಿ) (ಕನ್ನಡದ ‘ಅಧ್ಯಕ್ಷ’ ಸಿನೆಮಾ ನೋಡಿದ್ದ ಆರಂಭದಲ್ಲಿ!)  ಸಭೆಯ ಅಧ್ಯಕ್ಷತೆ ವಹಿಸಿದವರನ್ನ  ನೋಡಿದರೆ ಸಾಕು, “ಅಧ್ಯಕ್ಷ, ಅಧ್ಯಕ್ಷ, ಅಧ್ಯಕ್ಷ…. “ ಎಂಬೋ ಹಾಡು ಮ್ಯೂಸಿಕ್ ಸಮೇತ ಕಿವಿಯ ಬಳಿ ಬಂದು ಕುಣಿಯುತ್ತಿತ್ತು! ಯಾವುದೋ ವಿಷಯ ಮಂಡನೆಯಾಗುವಾಗ, ಮೇಲಾಧಿಕಾರಿಯೋ, ಮಂತ್ರಿ-ಮಹೋದಯರೋ ಅದನ್ನು  ಒಪ್ಪದಿದ್ದಾಗ, ‘ಹರಿಯೇ ನಿನ್ನ ಮೆಚ್ಚಿಸಬಹುದು ಈ ನರನ ಮೆಚ್ಚಿಸುವುದು ಬಲು ಕಷ್ಟಾ…’ ಎಂದು ತಲೆ ಅಲ್ಲಾಡಿಸುವ ಮನಸ್ಸಾಗಬೇಕೆ?! ಇನ್ನು ಸಾವಿನ ಮನೆಯ ಗೋಳಾಟದ ಮುಂದೆ ಇದರದ್ದು ಎಂಥಾ ದೊಂಬರಾಟ ಗೊತ್ತೆ? ಶವದ ಮುಂದೆ, ‘ಈ ದೇಹದಿಂದ ದೂರವಾದೆ ಏಕೆ ಆತ್ಮವೆ?’ ಎಂದೂ, ಅತ್ತೂ ಕರೆದು ದುಃಖ ತೋಡಿಕೊಳ್ಳುವ ಬಂಧುಬಳಗದ ಮುಂದೆ, ‘ಮನುಜಾ ನಿನ್ನ  ಮೃತ್ಯು ಗೆದ್ದರೇನೋ… ನಿನ್ನ ಕೂಡೆ ಬಂದರೇನೋ….?’  ಎನ್ನಲು ಶುರು ಮಾಡಿ ಅವರನ್ನು ಪ್ರಶ್ನಿಸುವ ಧೈರ್ಯಸಾಲದೆ, ನನ್ನನ್ನೇ ಮರುಪ್ರಶ್ನಿಸುವ ನನ್ನ ಮನದ ಅಳಲನ್ನು ಸಮಾಧಾನಪಡಿಸಿ ಸುಮ್ಮನೆ ಮಾಡಲು ನನಗೆ ಸಾಕುಬೇಕಾಗುತ್ತದೆ. ಇಷ್ಟಕ್ಕೆ ಸುಮ್ಮನಾದರೆ ಸರಿ, ಆದರೆ ನನ್ನ ಗ್ರಹಚಾರಕ್ಕೆ ಅಲ್ಲಿ ತಮಟೆ ಬಡಿದರಂತೂ ಮುಗಿಯಿತು, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ..‘ ಎಂದು ಆ ವಾತಾವರಣದ ಬಿಗುವನ್ನು ಮರೆತು ಸ್ಟೆಪ್ ಹಾಕಿಬಿಡುತ್ತದೆ! ನಿಮಗೂ ಹೀಗೇನಾದರೂ ಆಗಿದ್ದರೆ ನಾನು ಬಚಾವ್. ಇಲ್ಲದಿದ್ದರೆ ಮೇಲೆ ಹೇಳಿರುವುದು ‘ನಾನಲ್ಲ, ನಾನಲ್ಲ, ನಾನಲ್ಲವೇ ಅಲ್ಲ..’. 



  ಹೀಗೆ ಒಂದು ಮಾತಿದೆ ‘ಮನಸ್ಸಿನಂತೆ ಮಾದೇವ’ ಎಂದು. ಅದೇ ಯಾರ ಮನಸ್ಸಿನಂತೆ ಎಂದು ಮಾತ್ರ ಕೇಳಬೇಡಿ. ಮಾದೇವ, ಮಹಾದೇವ ಎಲ್ಲಾ ಅವರವರ ಮನಸ್ಸಿನಂತೆಯೇ. ಸಾಮಾನ್ಯವಾಗಿ ಶಿವನಿಗೇ ಮಹಾದೇವ ಎನ್ನುವುದು. ಲಿಂಗ ಸ್ವರೂಪಿಯಾದ ಶಿವನನ್ನು – ನಿರಾಕಾರ ಅಂತಲೂ ಕರೆಯೋದಿಲ್ಲವೇ? ಹಾಗಾಗಿ ಈ ನಿರಾಕಾರನನ್ನು ಪೂಜಿಸೋದಾದರೂ ಹೇಗೆ? ಭಜಿಸಿ, ನೈವೇದ್ಯ ಅರ್ಪಿಸೋದು ಹೇಗೆ? ನಮ್ಮ ಅಹವಾಲು- ಹರಕೆಗಳನ್ನು ಮಂಡಿಸೋದು ಹೇಗೆ? ಅದಕ್ಕಾಗಿಯೇ ಹಿರಿಯರು ಇಷ್ಟಾರ್ಥ ಸಿದ್ಧಿಗಾಗಿ, ಇಷ್ಟ ಸ್ವರೂಪ ಕಲ್ಪಿಸಿಕೊಳ್ಳಲು ‘ಮನಸ್ಸಿನಂತೆ ಮಹಾದೇವ’ ಎಂದಿರಬಹುದೇ!?



   ‘ಮನಸು ಹೇಳ ಬಯಸಿದೆ ನೂರೊಂದು, ತುಟಿಯ ಮೇಲೆ  ಬಾರದಿದೆ ಮಾತೊಂದು..‘  ನಿಜ ಅಲ್ವಾ? ಈ ಪದ ರೂಪಿ ಅಕ್ಷರಗಳು ಎಷ್ಟು ಸಲ ಮನಸ್ಸಿನ ಭಾವ ಪ್ರಕಟಿಸಲು ತಾನು ಸೋತೆ ಅಂತ ಕೈಚೆಲ್ಲಿವೆ ಅಲ್ಲವೇ…? “ನೋಡೀ ನಾನೀಗ ಏನು ಹೇಳ್ಬೇಕಂತಿದ್ದೀನಿ ಅಂದ್ರೆ, ಅದರ ಭಾವವನ್ನು ಈ ಪದಗಳಲ್ಲಿ ವ್ಯಕ್ತಪಡಿಸೋಕಾಗ್ತಿಲ್ಲ” ಎಂದು ನಾವೆಲ್ಲಾ ಒಂದಲ್ಲಾ ಒಂದು ಸಂದರ್ಭದಲ್ಲಿ ಪೇಚಾಡಿದವರೇ. ಅದರಲ್ಲೂ ಪ್ರೇಮಿಗಳು  ತಂತಮ್ಮ ಮನದ ಪ್ರೀತಿಯ ಆಳ ಅಗಲದ ಅಂದಾಜು ಒಪ್ಪಿಸಲು ಒದ್ದಾಡಿರುತ್ತಾರೆ. 


   “ಮನಸೆ, ಓ ಮನಸೆ, ಎಂಥಾ ಮನಸೆ.. “ ಎಂಬ ಚಲನಚಿತ್ರಗೀತೆಯಲ್ಲಂತೂ ‘ಮನಸ್ಸು’ ಎಷ್ಟು ಸಲ ರಿಪೀಟಾಯ್ತು ಅನ್ನೋದು ಸಹ ರಸಪ್ರಶ್ನೆಯಾಗಿ ಕೇಳಿ ಮನಸ್ಸಿನ ಮಹತ್ವ ಸಾರಿತ್ತಲ್ಲವೇ..?



   ‘ಮನೋರೋಗಕ್ಕೆ ಮದ್ದಿಲ್ವೆ?’ ಮೇಲಿಂದ ಓದಿಕೊಂಡು ಬಂದ ತಕ್ಷಣಕ್ಕೇ ನೀವು ‘ನಿಮ್ಮ ಮನೋರೋಗಕ್ಕಾ?!’  ಅಂತ ನನ್ನನ್ನು ಮಾತ್ರ ಕೇಳ್ಬೇಡಿ! ನಾನು ಹೇಳ್ತಿರೋದು ಒಂದು ಗಾದೆ ಮಾತು.  ಮನೋರೋಗ ಅನ್ನೋದು ಮನಸ್ಸಿಗೆ ಹತ್ತಿದ ರೋಗ. ಈಗೀಗ ಇದು ಜಾಸ್ತಿ ಆಗುತ್ತಿದೆ ಎಂದು ಕೆಲವು ವರದಿಗಳಿಂದ ತಿಳಿದು ಬರುತ್ತಿದೆ. ಸರಿಯಾಗಿ ಅಭ್ಯಾಸ ಮಾಡಿದ ಮನೋರೋಗ ತಜ್ಞರ ನೆರವು ಪಡೆದರೆ ಅಸ್ವಸ್ಥ ಮನಸ್ಸೂ ಕೂಡ  ಸ್ವಸ್ಥವಾಗಬಹುದು. 

  ತಲ್ಲಣಿಸದಿರು ಕಂಡ್ಯಾ ತಾಳು ಮನವೇ.. ಎಂದು ಪ್ರಾರಂಭವಾಗುವ ಹಾಡು ಕನಕದಾಸರಿಂದ ಕನ್ನಡದಲ್ಲಿ ರಚಿತವಾಗಿ, ಜನಪ್ರಿಯವಾಗಿರುವ ದಾಸ ಸಾಹಿತ್ಯಗಳಲ್ಲೊಂದು. ಲಗಾಮಿಲ್ಲದೆ ನಾಗಾಲೋಟದಲ್ಲಿ ಓಡುವ ಕುದುರೆಯಂತಹ ಮನಸ್ಸನ್ನು ನಿಯಂತ್ರಿಸುವುದು ತ್ರಾಸದಾಯಕ. ಅಂತಹ ಮನಸ್ಸಿಗೆ ಸಮಾಧಾನ ಹೇಳಿಕೊಂಡು ಬಾಳಿಸಿಕೊಂಡವರು ಬದುಕಿಯಾರು. 

  ಮನಸ್ಸು ಹತೋಟಿಯಲ್ಲಿದ್ರೆ ಏನನ್ನು ಬೇಕಾದರೂ ಸಾಧಿಸಬಹುದು ಅನ್ನೋದನ್ನು ಹಲವಾರು ಮಹಾಮಹಿಮರು ತಮ್ಮ ಸಾಧನೆಗಳಿಂದ ಸಾಬೀತು ಪಡಿಸಿದ್ದಾರೆ. ಹಾಗೆಯೇ ಮನಸ್ಸಿನ ಹತೋಟಿ ತಪ್ಪಿದ್ರೆ  ತನಗೂ ನಷ್ಟ, ಸಮಾಜಕ್ಕೂ ಹಾನಿ. ಮಹಾಮಹಿವಾನ್ವಿತ ಮುನಿಗಳಿಗೂ ಸಹ ಅವರ ಮನಸ್ಸಿನ ಹತೋಟಿ ತಪ್ಪಿ ಹೋಗಿ, ತಪೋಭಂಗವಾಗಿ ಅನುಭವಿಸಿದ ನಷ್ಟಗಳೂ ಸಹ ಪುಟಗಟ್ಟಲೆ ಪುರಾಣಗಳಾಗಿ ನಮ್ಮ ಮುಂದಿವೆ. ವಿಜ್ಞಾನಿಗಳೂ ಈ ವಿಚಾರದಲ್ಲಿ ಹಿಂದುಳಿದಿಲ್ಲ ಅನ್ನುವುದಕ್ಕೆ ಅವರು ಮನಸ್ಸಿನ ನಿಯಂತ್ರಣ ತಪ್ಪಿ ನಡೆಸಿದ ಅನಾಹುತಕಾರಿ ಆವಿಷ್ಕಾರಗಳು, ಹಲವು ವಿಫಲಪ್ರಯತ್ನಗಳಿಂದಾದ ಹಾನಿಯ ಕುರುಹುಗಳನ್ನೂ ಸಹ ಕಾಣಬಹುದು. 

      ರಾಜಾಧಿರಾಜರು, ಆಡಳಿತದ ಚುಕ್ಕಾಣಿ ಹಿಡಿದ ಸರ್ವಾಧಿಕಾರಿಗಳು ಮನಸ್ಸು ಮಾಡಿದರೆ ಒಳಿತನ್ನೂ ಕೆಡುಕನ್ನೂ ಹೇಗೆ ಕಾಣಿಕೆಯಾಗಿ ನೀಡಬಲ್ಲರು ಎಂಬುದನ್ನು ಇತಿಹಾಸವೇ ಸ್ಪಷ್ಟಪಡಿಸಿದೆಯಲ್ಲಾ. ‘ಹುಚ್ಚುದೊರೆ’ ಬಿರುದಾಂಕಿತ ಮೊಹಮ್ಮದ್ ಬಿನ್ ತುಘಲಕ್ ನ ತಿಕ್ಕಲು ದರ್ಬಾರನ್ನು ಮರೆಯಲಾದೀತೆ? ಪ್ರೌಢದೇವರಾಯ, ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದವರ ಉತ್ತಮ ಮನಸ್ಸಿನ ಆಳ್ವಿಕೆಯ ಕೊಡುಗೆಗಳೂ ನಮ್ಮ ಮುಂದೆ ಸಾಕ್ಷಿಯಾಗಿಲ್ಲವೆ ಅಲ್ಲವೇ!

    ಹಾಗಾಗಿ ಮನಸ್ಸನ್ನು ಹಗುರವಾಗಿ ಪರಿಗಣಿಸದೇ, ಕಣ್ಣಿದುರಿಗೆ ಬಾರದ ಈ  ಅನಿವಾರ್ಯದ ಅನಂಗವನ್ನು ಬಹಳ ಗೌರವದಿಂದ ಕಾಣುತ್ತಾ, ನಂನಮ್ಮ ಮನಸ್ಸು ಎಲ್ಲೋ ಮಾಯವಾಗಲು ಬಿಡದೆ ಅದರ ಸ್ವಾಸ್ಥ್ಯ ಕಾಯ್ದುಕೊಳ್ಳೋಣ. ಕೀಟಲೆಯ ಮನಸ್ಸು ನಮಗಿದ್ದರೂ ಸರಿಯೇ ಆದರೆ, ಇತರರನ್ನು ಕಾಡುವ ಕೋಟಲೆಯ ರಾಕ್ಷಸ ಮನಸ್ಸು ನಮ್ಮದಾಗದಿರಲಿ..

**********

ವಸುಂಧರಾ ಕದಲೂರು. 

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ.

2 thoughts on “

  1. ಸ್ವಸ್ಥ ಮನಸಿನ ಕುರಿತ ನವಿರು ಬರಹ , ಚೆಂದಿದೆ ವಸುಂಧರಾ

Leave a Reply

Back To Top