ಅಂಕಣ ಬರಹ
ತೊರೆಯ ಹರಿವು
ಬಾಲ್ಯದ ಆಟ….!’
ಬಾಲ್ಯವು ಸದಾ ಚಟುವಟಿಕೆಯಿಂದ ಕೂಡಿರುವ ಜೀವನದ ಘಟ್ಟ. ವಯಸ್ಸು ಬೆಳೆಯುತ್ತಾ ಹೋದಂತೆ, ಬಾಲ್ಯ ಕಳೆದು ಹೋಯ್ತೆಂದು ಹುಯ್ಯಲಿಡುತ್ತೇವೆ. ಆದರೆ ಅದು ಹೊರಗೆಲ್ಲೂ ಕಳೆದು ಹೋಗದೇ ನಮ್ಮ ಆಂತರ್ಯದಲ್ಲಿ ಹುದುಗಿ ಮರೆಯಾಗಿರುತ್ತದೆ. ಪ್ರಾಯ ಮಾಗಿ, ಯೌವನದ ಬಿಸುಪು ನಿಧಾನ ಕರಗಿದಂತೆ ಬಾಲ್ಯದ ಬುತ್ತಿಯ ನೆನಪಾಗಿ ಹಸಿವಾಗತೊಡಗುತ್ತದೆ. ಸವೆಸಿ ಬಂದ ಹೆಜ್ಜೆ ಗುರುತು ಪುನಃ ಮೂಡುತ್ತಾ, ಹತಾಶೆಯ ನಮ್ಮ ಮೂಡುಗಳನ್ನು ರಿಫ್ರೆಶ್ ಮಾಡುತ್ತಾ ಹೋಗುತ್ತದೆ…
ಮಧ್ಯ ವಯಸ್ಸಿನಲ್ಲಿರುವಾಗ ಬಾಲ್ಯದ ಸ್ಮೃತಿ ಧುತ್ತೆಂದು ಆವೀರ್ಭವಿಸಲಾರದೇನೋ! ಏಕೆಂದರೆ, ಆಗ ಯೌವನದ ಸೆಳೆತಗಳು ಅಷ್ಟು ಆಕರ್ಷಣೀಯವಾಗಿರುತ್ತವೆ. ಆದರೆ, ಅಂಗೈ ಮೇಲಿನ ಮಂಜುಗಡ್ಡೆ ಹನಿ ಹನಿಯಾಗಿ ಕರಗಿ ಸೋರಿದಂತೆ, ಯೌವನದ ಹುರುಪು ಮಾಯ ಆಗುವಾಗ ಬಾಲ್ಯ ನೆನಪಾಗುತ್ತದೆ.
ಹಾಗೆ ನೆನಪಾಗುವ ಬಾಲ್ಯವೆಂದರೆ, ಸಿಡಿಲ ಬಡಿತವಲ್ಲ ಭಯ ಹುಟ್ಟಿಸಲು; ಮಿಂಚಿನ ಸೆಳೆತವಲ್ಲ ಒಮ್ಮೆ ಝಗಮಗಿಸಿ ಮರೆಯಾಗಲು! ಅದು ಸೋನೆ ಮಳೆ ಜಿಟಿಜಿಟಿ ಸುರಿದಂತೆ, ನೆಲದಾಳದಲಿ ಹುಗಿದ ಬೀಜ ಚಿಗುರಿ, ಮೊಗ್ಗಾಗಿ, ಮೊಗ್ಗು ಹೂವಾಗಿ ಅರಳಿದಂತೆ. ಅರೆ ಬಿರಿಯುತ್ತಾ ನಿಧಾನವಾಗಿ ತೆರೆದುಕೊಳ್ಳುತ್ತದೆ. ಆ ಘಮಲನು ಆಘ್ರಾಣಿಸಲು ನಮ್ಮ ಮನದ ಅಂಗಳದಲ್ಲಿ ಒಂದಷ್ಟು ತಾವು ಕೊಡಲು ಸಿದ್ಧರಿರಬೇಕು.
ನದಿಯ ಮೇಲಿಂದ, ಮಲ್ಲಿಗೆ- ಸಂಪಿಗೆಯ ಉದ್ಯಾನವನಗಳ ಎಡೆಯಿಂದ ಬೀಸಿ ಬರುವ ಮಂದ ಮಾರುತ ನೀಡುವ ಆಹ್ಲಾದಾನುಭವವೇ ಬಾಲ್ಯದ ನೆನಪೆನ್ನಬಹುದೆ!? ಹಲವರ ಬಾಲ್ಯ ಕರಾಳ ಮುಖವನ್ನು ಹೊಂದಿರಬಹುದು. ಅನಾಥ ಭಾವದ, ಕಠಿಣ ಪರಿಸ್ಥಿತಿಯ ಕಡಲನ್ನು ದಾಟಿ ಬಂದವರು ತಮ್ಮ ಬಾಲ್ಯವನ್ನು ಪುನಃ ನೆನೆಯಲೂ ಮನಸ್ಸು ಮಾಡದಿರಬಹುದು. ಆದರೂ ಬಾಲ್ಯದ ಮುಗ್ಧತೆಯ ಸವಿಯನ್ನು ಕಂಡ ಸಹೃದಯ ಚೇತನ ಆ ಮುಗ್ಧತೆಯ ಸೊಗಸುಗಾರಿಕೆಗಾದರೂ ಮನ ಸೋಲದಿರದು.
‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲಾ..’ ಇದನ್ನೊಂದು ಹಾಡೆಂದು ಮಾತ್ರ ಪರಿಗಣಿಸುವುದೇ? ಆಟ, ಆಟ, ಆಟ ಆಗ ಆಡಿದ್ದೆಲ್ಲವೂ ಆಟವೇ. ಎಷ್ಟೋ ಬಾರಿ ಮನೆ ಕೆಲಸ, ತೋಟ-ಹೊಲ, ಗದ್ದೆ ಕೆಲಸಗಳನ್ನು ಆಟವಾಡಿಕೊಂಡೇ ಮುಗಿಸಲಾಗಿರುತ್ತದೆ!! ಜೀವನವನ್ನು ಗಂಭೀರವಾಗಿ ಪರಿಗಣಿಸಬೇಕಾದ ಯಾವ ಜರೂರತ್ತು ಇಲ್ಲದ ಬಾಲ್ಯಕ್ಕೆ ಎಲ್ಲವೂ ಹುಡುಗಾಟವೇ…
ಮುಷ್ಠಿಯೊಳಗೆ ಹಾವು ಹಿಡಿದ ಮಗು, ಬೆಂಕಿಯಿಂದ ಆಕರ್ಷಿತವಾಗುವ ಮಗು ಎಂಬೆಲ್ಲಾ ವಿಚಾರ ಕೇಳಿದರೆ ಈ ಬಾಲ್ಯವು ಅಪಾಯವನ್ನು ಪರಿಗಣನೆಗೆ ಇಟ್ಟುಕೊಂಡೇ ಇಲ್ಲವಲ್ಲ!? ಎಂದು ಆಶ್ಚರ್ಯವಾಗುತ್ತದೆ. ಬದುಕಿನ ಬಗ್ಗೆ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಇದ್ದಾಗ ಇಂತಹ ನಿರಾಳ ಭಾವ ಸಾಧ್ಯವೇನೋ…
ಬಾಲ್ಯವೂ ನಿಜದ ಸಂತರ ಅನುಭಾವಿ ಜಗತ್ತೇ!?
“ನನ್ನಯ್ಯನಂತೋರು ಹನ್ನೆರಡು ಮಕ್ಕಳು ಬನ್ನೀಯ ಮರದ ಕೆಳಗೆ ಆಡಿದರೆ
ಸನ್ಯಾಸಿ ಜಪವಾ ಮರೆತಾನು”
ಎಂದು ಹಾಡಿಕೊಳ್ಳುವ ಅಮ್ಮನಿಗೆ ಮಗುವಿನ ಆಟದ ಸೊಗಸೇ ಜಗತ್ತಿನ ಸರ್ವ ಶ್ರೇಷ್ಠ ವಿಷಯ. ಸನ್ಯಾಸಿಯೊಬ್ಬ ಮುಕ್ತಿ ಮಾರ್ಗದ ಕಡೆಗೆ ಮುಖ ಮಾಡಿದ್ದರೂ ಮಕ್ಕಳ ಬಾಲ್ಯದ ಆಟ ಕಂಡರೆ, ‘’ಅರೆ! ಇಂತಹ ಪರಮ ಹಿತಾನುಭವದ ಮುಂದೆ ಮತ್ಯಾವ ಮೋಕ್ಷವಿದೆ!? ಜಗದ ಜಂಜಡಕ್ಕೆಲ್ಲಾ ಪರಿಹಾರದ ಮದ್ದು ಈ ಮುಗ್ದ ಮಕ್ಕಳ ಆಟದಲ್ಲಡಗಿದೆ!” ಎಂದು ಸಾಂಸಾರಿಕ ಜೀವನದೆಡೆಗೆ ಮುಖ ಮಾಡಬಹುದು ಎಂಬ ಅಭಿಮಾನ ಯಾವ ತಾಯಿಗಾದರೂ ಆದೀತು. ರಾಹುಲನ ಆಟಪಾಠ ಕಂಡಿದ್ದರೆ ಸಿದ್ಧಾರ್ಥನೂ ಬುದ್ಧನಾಗಲು ಹೊರಡುವ ಕಾಲ ಮುಂದೂಡಿ ಕ್ರಮೇಣ ಮರೆಯುತ್ತಿದ್ದನೇ..!?
ಬಾಲ್ಯ ಅಪೇಕ್ಷಣೀಯ ಹಾಗೂ ಆಕರ್ಷದಾಯಕ. ಜೀವನದ ಸಂಧ್ಯಾಕಾಲದಲ್ಲಿರುವ ಮಂದಿ ಬಾಲ್ಯದ ಗೆಳೆತನವನ್ನು ಚೆನ್ನಾಗಿ ಸಂಪಾದಿಸಿಬಿಡುತ್ತಾರೆ! ಕಳೆದು ಹೋದ ಅಮೂಲ್ಯ ನಿಧಿ ಮರಳಿ ಸಿಕ್ಕ ಹಾಗೆ ಜತನ ಮಾಡುತ್ತಾರೆ. ‘ಅಜ್ಜಅಜ್ಜಿಗೆ ತಮ್ಮ ಮಕ್ಕಳಿಗಿಂತ ಮೊಮ್ಮಕ್ಕಳ ಮೇಲೆ ಪ್ರೀತಿ ಜಾಸ್ತಿ’ ಎನ್ನುವ ಮಾತಿದೆ. ನಿಜ ಅಲ್ವಾ! ತಮ್ಮ ಬಾಲ್ಯ, ತಮ್ಮ ಮಕ್ಕಳ ಬಾಲ್ಯ ಆಡಿ ಅನುಭವಿಸಿ ತೆರೆಯ ಮರೆಗೆ ಸರಿಯುತ್ತಿರುವಾಗ ಮರುಭೂಮಿಯ ಓಯಸಿಸ್ ನ ಹಾಗೆ ಸಿಗುವ ಮೊಮ್ಮಕ್ಕಳ ಬಾಲ್ಯ ಬೊಚ್ಚು ಬಾಯಲ್ಲಿ ಹಾಕಿಕೊಂಡ ಸಿಹಿ ಪೆಪ್ಪರ್ಮೆಂಟು.
‘ಬೆಳೆವ ಸಿರಿ ಮೊಳಕೆಯಲ್ಲಿ’, ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಮೊದಲಾದವು ಬಾಲ್ಯ ಕೇವಲ ಆಡುವ ವಯಸ್ಸಲ್ಲಾ ಕಲಿಯುವ ವಯಸ್ಸೂ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಎಳೆಯ ಮನಸ್ಸು ಪರಿವರ್ತನೆಗೆ ಪ್ರಶಸ್ತವಾಗಿರುವದರಿಂದರೇ, ಅದನ್ನು ಹಸಿ ನೆಲಕ್ಕೆ ಹೋಲಿಸುವುದು. ಯಾವ ಬೀಜ ನೆಡುತ್ತೇವೋ ಅದರ ಫಲವನ್ನೇ ಉಣ್ಣುತ್ತೇವೆ. ಸನ್ಯಾಸಿಯ ಬಳಿ ಹಾಗೂ ಕಟುಕನ ಬಳಿ ಬೆಳೆದ ಒಂದೇ ತಾಯಿ ಗಿಳಿಯ ಎರಡು ಮರಿಗಳು ಪಡೆದ ಸಂಸ್ಕಾರದ ಕತೆಯನ್ನು ಕೇಳಿಯೇ ಇರುತ್ತೇವೆ. ಇದರ ತಾತ್ಪರ್ಯ ‘ಮಕ್ಕಳಿಸ್ಕೂಲ್ ಮನೇಲಲ್ವೇ’ ಎನ್ನುವುದೇ ಆಗಿರುತ್ತದೆ. ಬಾಲವಾಡಿ, ಅಂಗನವಾಡಿ, ಶಿಶುವಿಹಾರ, ನರ್ಸರಿ, ಪ್ರೀಕೆಜಿ ಮೊದಲಾದವು ಬಾಲ್ಯವನ್ನು ನಲಿಕಲಿ ಮಾದರಿಯಲ್ಲಿ ರೂಪಿಸುವ ತರಬೇತಿ ಗೃಹಗಳು. ಬಾಲ್ಯ ಮಕ್ಕಳಿಗೆ ಕಲಿಯುವಿಕೆಯ ಕಾಲವೂ ಹೌದು ದೊಡ್ಡವರಿಗೆ ಸರಿಯಾದುದನ್ನು ಕಲಿಸುವ ಜವಾಬ್ದಾರಿ ಹೊರುವ ಕಾಲವೂ ಹೌದು.
“ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಮಾತ್ಯನಾ”
ಸಮಾಜಮುಖಿಯಾಗಿ, ವಿವೇಕಿಯಾಗಿ, ಸಜ್ಜನ ವ್ಯಕ್ತಿಯಾಗಿ, ಲೋಕೋಪಕಾರಿಯಾಗಿ ಜೀವಿಸೆನ್ನುವ ಸದಾಶಯಗಳ ತಾತ್ಪರ್ಯ ಹೊಂದಿರುವ ಈ ಮೇಲಿನ ಕವಿತೆ, ಹಾಲೂಡುವ ಎಡೆಯಲ್ಲಿ ಇಂತಹ ಉದಾತ್ತ ಚಿಂತನೆಗಳನ್ನೂ ಕಿವಿಗಳಿಗೆ ಊಡುವ ತಾಯಂದಿರು ಮಗುವಿನ ಭವಿಷ್ಯವನ್ನು ಮಾತ್ರವಲ್ಲ ಆ ಮಗು ಮುಂದೆ ಬದುಕಬೇಕಾದ ಆರೋಗ್ಯಕಾರಿ ಸಮಾಜದ ಭವಿಷ್ಯಕ್ಕೂ ಬಾಲ್ಯದಲ್ಲಿಯೇ ಬುನಾದಿ ಹಾಕಬೇಕಾದ ಬಗೆಯನ್ನು ತಿಳಿಸುತ್ತದೆ. ಇದು ಹದಿನೈದನೆಯ ಶತಮಾನದ ಕನ್ನಡ ಪದ್ಯ ಎನ್ನುವುದು ನಮ್ಮ ಹೆಮ್ಮೆ.
ಭ್ರೂಣದೊಳಗಿನ ಕೂಸು ಕಲಿಯಲು ಸಮರ್ಥ ಎನ್ನುವುದನ್ನು ಹಲವಾರು ಸಂಶೋಧನೆಗಳು ದೃಢಪಡಿಸುತ್ತಿವೆ. ಹೀಗೆನ್ನುವಾಗ, ಪುರಾಣ ಕತೆಯಲ್ಲಿ ಅಭಿಮನ್ಯು ತಾಯಿಯ ಗರ್ಭದೊಳಗೇ ಚಕ್ರವ್ಯೂಹ ಬೇಧಿಸಲು ಕಲಿತುದು ಭಾರತೀಯರಿಗೆ ನೆನಪಿಗೆ ಬಾರದೇ ಇದ್ದೀತೆ? ಶಿಶುವಿಗೆ ಸರಿಯಾದ ಬೋಧನೆಯಾದರೆ, ಸರಿದಾರಿ ಹಿಡಿಯದೆ ಮುಂದೆ ಅಡ್ಡದಾರಿ ಹಿಡಿದೀತೆ?
ಏನೆಲ್ಲಾ ಮಾಡಬಹುದಾದ ದೊಡ್ಡವರು ಮಕ್ಕಳಂತೆ ಆಡಲಿಕ್ಕೆ ಮಾಡಲಿಕ್ಕೆ ಆಗುವುದಿಲ್ಲ. ಹಾಗೆಂದು ಮಕ್ಕಳು ಆಡಿದ್ದು ಮಾಡಿದ್ದೆಲ್ಲವೂ ಸರಿಯೆಂದಲ್ಲ. ಹಿರಿಯರ ಜೀವನದ ಅನುಭವದ ನೆರಳಲ್ಲಿ ಮಕ್ಕಳ ಹಿತ ಕಾಯಬೇಕು. ತಪ್ಪುಗಳನ್ನು ತಿದ್ದಿ, ಸರಿಯನ್ನು ಸ್ಪಷ್ಟಪಡಿಸಬೇಕು. ಬಾಲ್ಯದ ಸೊಗಸುಗಾರಿಕೆಯೇ ಮುಗ್ಧತೆ ಹಾಗೂ ಸಂತೋಷ. ಅದನ್ನು ಕಾಪಿಟ್ಟುಕೊಂಡು ಬದುಕುವುದು ಸಾಧ್ಯವಾದರೆ ‘ಇಲ್ಲೇ ಸ್ವರ್ಗ… ಬೇರೆ ಎಲ್ಲೂ ಇಲ್ಲಾ…’
**********************
ವಸುಂಧರಾ ಕದಲೂರು
೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ.
ಬಾಲ್ಯವೇ ಹಾಗೆ.ಸುಂದರ ಬರಹ
ಧನ್ಯವಾದಗಳು ಸ್ಮಿತಾ