ಲೇಖನ

ಆಧ್ಯಾತ್ಮಕ್ಕೂ, ಅರ್ಥಶಾಸ್ತ್ರಕ್ಕೂ ಬಿಡಲಾರದ ನಂಟು…..

Assorted-color Stained Glass

ಗಣೇಶ ಭಟ್ ಶಿರಸಿ

.
ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ದೈನಂದಿನ ಬದುಕಿನ ವಿಚಾರಗಳ ಕುರಿತು ಹೇಳುವದು, ಅರ್ಥಶಾಸ್ತ್ರದೊಡನೆ ಸಂಬಂಧ ಜೋಡಿಸುವದು ಸರಿಯಲ್ಲವೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಭಾರತದ ದರ್ಶನಶಾಸ್ತ್ರದ, ಬದುಕಿನ ರೀತಿನೀತಿಗಳ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಹಲವರು ಆಧ್ಯಾತ್ಮಕ್ಕೂ , ಅರ್ಥಶಾಸ್ತ್ರಕ್ಕೂ ಸಂಬಂಧವೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಅವರ ಅರಿವಿನ ವ್ಯಾಪ್ತಿಯ ಸೀಮಿತತೆಯೇ ಇದಕ್ಕೆ ಕಾರಣ.
ಮಾನವನ ಬದುಕಿನ ಗುರಿಯನ್ನು ಧರ್ಮ, ಅರ್ಥ, ಕಾಮ , ಮೋಕ್ಷಗಳೆಂಬ ಚತುರ್ವರ್ಗಗಳಾಗಿ ಗುರ್ತಿಸುತ್ತಾರೆ. ದೈಹಿಕ, ಮಾನಸಿಕ, ಆಧ್ಯಾತ್ಮಿಕ ಹೀಗೆ ಮೂರು ಸ್ತರಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಮಾನವರು ವಿಕಾಸ ಪಥದಲ್ಲಿ ಕ್ರಮಿಸುತ್ತಿರುವಾಗ ಯಾವ ಸ್ತರವನ್ನೂ ನಿರ್ಲಕ್ಷಿಸಲು ಸಾಧ್ಯವಾಗದು. ಪರಿಪೂರ್ಣತೆಯಿಂದ ಬಂದು ಪರಿಪೂರ್ಣತೆಯಲ್ಲಿ ಒಂದಾಗುವ ಸೃಷ್ಟಿ ಚಕ್ರದಲ್ಲಿ ಮಾನವ ಜೀವನ ಅಮೂಲ್ಯವಾದುದು.
ಮಾನವನ ಭೌತಿಕ ಅಸ್ತಿತ್ವದ ಅವಶ್ಯಕತೆಗಳನ್ನು ಕಾಮ ಎಂದು ಸಂಸ್ಕೃತದಲ್ಲಿ ಹೇಳುತ್ತಾರೆ. ಮಾನಸಿಕ ತವಕ, ಚಡಪಡಿಕೆಗಳ ನಿವಾರಣೆಯಾಗುವುದು ಅರ್ಥದಿಂದ. ಮನೋ- ಆಧ್ಯಾತ್ಮಿಕ ಹಂಬಲದ ಪೂರೈಕೆಯ ಪ್ರಯತ್ನ ಧರ್ಮ. ಆಧ್ಯಾತ್ಮದ ಉತ್ಕಟ ಆಕಾಂಕ್ಷೆಯ ಪೂರ್ತಿಯೇ ಮೋಕ್ಷ. ಈ ನಾಲ್ಕು ವರ್ಗಗಳ ಅನುಸರಣೆ ಮಾನವ ಜೀವನದಲ್ಲಿ ಅನಿವಾರ್ಯ.
ಸೀಮಿತತೆಯಿಂದ ಅನಂತತೆಯೆಡೆಗಿನ ಪಯಣವೇ ಜೀವನ ಎನ್ನುತ್ತಾರೆ. ಸಾಂತವೇ ಅನಂತವಾಗುವ ಪ್ರಕ್ರಿಯೆ ಮೋಕ್ಷ. ಇದು ಮಾನವ ಜೀವನದ ಅಂತಿಮ ಗುರಿ. ಮೋಕ್ಷದ ಹಲವು ಅವೈಜ್ಞಾನಿಕ , ಅತಾರ್ಕಿಕ ಕಲ್ಪನೆಗಳು ಪ್ರಚಾರದಲ್ಲಿವೆ. ಯಾವುದೋ ನದಿಯಲ್ಲಿ ಮುಳುಗು ಹಾಕುವುದರಿಂದ ಮೋಕ್ಷ ಪ್ರಾಪ್ತಿಯೆಂದು ಹಲವರನ್ನು ನಂಬಿಸಲಾಗಿದೆ. ವ್ಯಕ್ತಿ ಮರಣ ಹೊಂದಿದ ನಂತರ ಅವರ ಮಕ್ಕಳು ಅಥವಾ ಹತ್ತಿರದ ಸಂಬಂಧಿಗಳು ಪ್ರಾರ್ಥಿಸುವುದರಿಂದ ಅಥವಾ ನಿರ್ದಿಷ್ಟ ಪೂಜೆ, ಆಚರಣೆಗಳ ಮೂಲಕ ಮೃತರಿಗೆ ಮೊಕ್ಷ ಪ್ರಾಪ್ತಿಯಾಗುತ್ತದೆ ಎಂದು ಮುಂತಾದ ವಿವಿಧ ರೀತಿಯಲ್ಲಿ ಹಲವರು ನಂಬಿಕೊಂಡಿದ್ದಾರೆ.
ಮೋಕ್ಷ ಎಂದರೆ ಆತ್ಮ-ಪರಮಾತ್ಮನಲ್ಲಿ ಒಂದಾಗುವುದು ಎಂದು ದರ್ಶನಶಾಸ್ತ್ರ ಹೇಳುತ್ತದೆ. ಹುಟ್ಟು- ಸಾವಿನ ಚಕ್ರದಿಂದ ಬಿಡುಗಡೆ ಪಡೆಯುವ ಹಂತವಿದು. ಬಿಂದು ಸಿಂಧುವಿನಲ್ಲಿ ಒಂದಾಗಿ ಪ್ರತ್ಯೇಕ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ. ವೈಜ್ಞಾನಿಕವಾಗಿ ವಿವರಿಸುವುದಾದರೆ ಜೀವ ವಿಕಾಸದ ಕೊನೆಯ ಹಂತವೇ ದಾರ್ಶನಿಕರು ವಿವರಿಸುವ ಮೋಕ್ಷ.
ಏಕಕೋಶ ಜೀವಿಯಿಂದ ಬಹುಕೋಶ ಜೀವಿಯಾಗಿ ಸಸ್ಯ, ಗಿಡ, ಮರ, ಕ್ರಿಮಿ, ಕೀಟ, ಪಶು, ಪಕ್ಷಿ, ಪ್ರಾಣಿ, ಸಸ್ತನಿ, ಮಂಗ ಹಾಗೂ ಮಾನವನಾಗಿ ವಿಕಾಸ ನಡೆಯಿತೆಂದು ವಿಜ್ಞಾನ ಹೇಳುತ್ತದೆ. ಮಾನವನ ಹುಟ್ಟಿನೊಂದಿಗೆ ವಿಕಾಸ ಕ್ರಿಯೆ ನಿಂತು ಹೋಯಿತೇ? ಮಾನವನ ಹಂತದಿಂದ ಮುಂದೆ ವಿಕಾಸ ಇಲ್ಲವೇ? ವಿಕಾಸ ಪಥದಲ್ಲಿ ಕಾಣಿಸಿಕೊಂಡ ವಿವಿಧ ಜೀವಿಗಳ ನಡುವಿನ ಕೊಂಡಿ ಯಾವುದು ಮತ್ತು ವಿವಿಧ ಜೀವಿಗಳ ದೈಹಿಕ, ಮಾನಸಿಕ, ಬದಲಾವಣೆಗೆ ಕಾರಣಗಳೇನು? ಜೀವೋದ್ಭವ ಹೇಗಾಯಿತು? ಮನಸ್ಸು ಎಂದು, ಹೇಗೆ ಹುಟ್ಟಿಕೊಂಡಿತು? ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಆದರೆ ಭಾರತೀಯ ದರ್ಶನ ಶಾಸ್ತ್ರದಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ತಾರ್ಕಿಕ ಉತ್ತರವಿದೆ.
ಪರಮಪ್ರಜ್ಞೆ ಅಥವಾ ಅನಂತತೆಯ ಇಚ್ಛೆಯಿಂದಲೇ ವಿಶ್ವಮನದ ರಚನೆಯಾಗಿ ಸೂಕ್ಷ್ಮದಿಂದ ಸ್ಥೂಲೀಕರಣ ಪ್ರಾರಂಭವಾಯಿತು. ಪಂಚ ಮಹಾಭೂತಗಳೆಂದು ಕರೆಯಲ್ಪಡುವ ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ , ತತ್ವಗಳ ಸೃಷ್ಟಿಯಾಯಿತು. ಅನಂತತೆಯ ಅತ್ಯಂತ ಜಡ ಸ್ಥಿತಿಯೇ ಪೃಥ್ವಿ ಅಥವಾ ಘನ ತತ್ವ. ಈ ಸ್ಥಿತಿಯೂ ಅದೇ ಅನಂತತೆಯ ಒಂದು ರೂಪವಾಗಿರುವುದರಿಂದಲೇ ಅದರಲ್ಲಿಯೂ ಚೇತನವಿದೆ, ಮನಸ್ಸು ಸುಪ್ತಾವಸ್ಥೆಯಲ್ಲಿದೆಯೆಂದು ಭಾರತೀಯ ಚಿಂತನೆ ಹೇಳುತ್ತದೆ. ಆದ್ದರಿಂದಲೇ ಅಣು, ರೇಣು, ತೃಣ, ಕಾಷ್ಠಗಳಲ್ಲಿಯೂ ಪರಮಾತ್ಮನನ್ನು ಕಾಣುವುದು ಈ ನೆಲೆದ ಸ್ವಭಾವ. ಕಲ್ಲಿನಲ್ಲಿಯೂ ಪರಮಾತ್ಮನಿದ್ದಾನೆ ಎಂಬುದನ್ನು ತಿರುಚಿ ಕಲ್ಲಿನಲ್ಲೇ ಪರಮಾತ್ಮನಿದ್ದಾನೆಂದು ನಂಬಿಸುವವರು ಆಧ್ಯಾತ್ಮ ರಂಗದ ಶೋಷಕರು. ಎಲ್ಲೆಡೆ ಪರಮಾತ್ಮನಿದ್ದಾನೆ ಎನ್ನುವುದು ತಾರ್ಕಿಕ. ಪರಮಾತ್ಮ ಇಲ್ಲೇ ಇದ್ದಾನೆ ಎನ್ನುವುದು ಅತಾರ್ಕಿಕ.
ಜಡ ವಸ್ತುವಿನಲ್ಲಿ ಸುಪ್ತವಾಗಿರುವ ಚೈತನ್ಯ ಶಕ್ತಿಯೇ ಸೂಕ್ತ ಪರಿಸರ ದೊರಕಿದಾಗಿ ಏಕಕೋಶ ಜೀವಿಯಾಗಿ ರೂಪ ತಾಳುತ್ತದೆ. ಅದರಲ್ಲಿ ಕೂಡಾ ಸುಪ್ತ ಮನಸ್ಸಿರುತ್ತದೆ. ಇಡೀ ವಿಕಾಸ ಪ್ರಕ್ರಿಯೆಯ ಮೂಲ ಉದ್ದೇಶವೇ ಮನಸ್ಸಿನ ವಿಕಾಸ ಪರಮ ಪ್ರಜ್ಞೆ ಅಥವಾ ಅನಂತತೆಯ ಪ್ರತಿಫಲನದ ಸಾಮಥ್ರ್ಯ ವೃದ್ಧಿಯೇ ವಿಕಾಸದ ದಾರಿ. ವಿಕಸಿತವಾಗುತ್ತಿರುವ ಮನಸ್ಸಿಗೆ ಆಧಾರ ನೀಡುವ ಸಲುವಾಗಿ ಭೌತಿಕ, ಜೈವಿಕ ಬದಲಾವಣೆಗಳಾಗಿ ವಿವಿಧ ಜೀವಿಗಳು ರೂಪುಗೊಂಡವು. ಏಕಕೋಶ ಜೀವಿಯ ಮನಸ್ಸೇ ವಿಕಾಸ ಹೊಂದುತ್ತಾ ತನ್ನ ಮುಂದಿನ ವಿಕಾಸದ ಪಥದಲ್ಲಿ ಸಾಗಲು ಮಾನವ ದೇಹದಲ್ಲಿ ಆಶ್ರಯ ಪಡೆಯುತ್ತದೆ. ಇಂದಿನ ಮಾನವ ಹಿಂದೆ ಎಂದೋ ಒಂದು ಕಾಲದಲ್ಲಿ ಏಕಕೋಶ ಜೀವಿಯಾಗಿದ್ದು, ವಿಕಾಸದ ಎಲ್ಲ ಹಂತಗಳಲ್ಲಿ ಹಾದು ಬಂದಿರುವುದನ್ನು ವಿಜ್ಞಾನವೂ ದೃಢಪಡಿಸುತ್ತದೆ. ಕೋಟಿ, ಕೋಟಿ ಜನ್ಮಗಳ ನಂತರ ಮಾನವ ಜೀವನ ಲಭ್ಯವಾಗುತ್ತದೆಂದು ಭಾರತೀಯ ತತ್ವಶಾಸ್ತ್ರದಲ್ಲಿ ಹೇಳಿರುವುದು ಈ ಕಾರಣಕ್ಕಾಗಿ.
ಮಿದುಳು ಮನಸ್ಸಿನ ಆಶ್ರಯ ತಾಣವೇ ಹೊರತು ಅದೇ ಮನಸ್ಸಲ್ಲ. ವ್ಯಕ್ತಿಯ ಮರಣದ ನಂತರವೂ ಆ ಮನಸ್ಸು ಅಸ್ತಿತ್ವದಲ್ಲಿರುತ್ತದೆ. ಮುಂದಿನ ವಿಕಾಸಕ್ಕಾಗಿ ಪುನರ್ಜನ್ಮ ತಾಳಲೇ ಬೇಕಾಗುತ್ತದೆ. ( ಟಿವಿಗಳಲ್ಲಿ ತೋರಿಸುವ ಪುನರ್ಜನ್ಮದ ಕಥೆ ಭಾರಿ ಬೊಗಳೆ ಹಾಗೂ ಅತಾರ್ಕಿಕ).
ಸೂಕ್ಷ್ಮದಿಂದ ಜಡವಾಗುವ ಪ್ರಕ್ರಿಯೆಯನ್ನು ಸಂಚರ ಎಂದೂ ಜಡದಿಂದ ಸೂಕ್ಷ್ಮತೆಯೆಡೆಗಿನ ಚಲನೆಯನ್ನು ಪ್ರತಿ ಸಂಚರ ಎಂದೂ ಹೇಳುತ್ತಾರೆ. ಸಂಚರ- ಪ್ರತಿ ಸಂಚರಗಳೆರಡೂ ಸೇರಿ ಸೃಷ್ಟಿ ಚಕ್ರವಾಗುತ್ತದೆ.
ಮಾನವನಾಗುವ ಹಂತದವರೆಗೆ ವಿಕಾಸದ ದಾರಿ ಪ್ರಕೃತಿ ನಿಯಂತ್ರಿತ. ಇದಕ್ಕೂ ಮುಂದಿನ ವಿಕಾಸದ ಪಥದಲ್ಲಿ ಸ್ವಪ್ರಯತ್ನದಿಂದಲೂ ಸಾಗುವ ಸಾಮಥ್ರ್ಯ ಮಾನವನಿಗೆ ಇದೆ. ಮನಸ್ಸನ್ನು ಏಕಾಗ್ರಗೊಳಿಸಿ ನಡೆಸುವ ಆಧ್ಯಾತ್ಮ ಸಾಧನೆಯಿಂದಲೇ ಮುಂದಿನ ವಿಕಾಸ ಸಾಧ್ಯ. ಆಧ್ಯಾತ್ಮವೆಂದರೆ ಜೀವನದಿಂದ ವಿಮುಖರಾಗಿ ಪಲಾಯನ ಮಾಡುವುದಲ್ಲ. ಆಧ್ಯಾತ್ಮದ ದಾರಿಯಲ್ಲಿ ಸಾಗಲು ಸಂಸಾರ ಬಿಟ್ಟು, ಖಾವಿ ತೊಟ್ಟು ಸನ್ಯಾಸಿಯಾಗಬೇಕೆಂಬುದು ತಪ್ಪು ಕಲ್ಪನೆ. ಮೂಲೆ ಸೇರಿ ಮೂಗು ಹಿಡಿದು, ಕಣ್ಮುಚ್ಚಿ ಕುಳಿತುಕೊಳ್ಳುವುದೇ ಆಧ್ಯಾತ್ಮ ಸಾಧನೆಯಲ್ಲ.
ಬಾಹ್ಯ ಮತ್ತು ಆಂತರಿಕ ಪ್ರಪಂಚವನ್ನು ಒಂದೇ ಅಸ್ತಿತ್ವದ ಅಭಿವ್ಯಕ್ತಿಯ ವಿವಿಧ ರೂಪಗಳೆಂದು ಗ್ರಹಿಸಿ, ತನ್ನಂತೆಯೇ ಇತರರು ಎಂದು ಭಾವಿಸಿ, ಯೋಚಿಸಿ, ವ್ಯವಹರಿಸುವ ಮನಸ್ಥಿತಿಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ಅನಂತತೆಯನ್ನು ಆರೋಹಿಸಿದಾಗ ಆಧ್ಯಾತ್ಮ ಸಾಧನೆಯಾಗುತ್ತದೆ. ಈ ಪ್ರಕ್ರಿಯೆ ಧರ್ಮಾಚರಣೆ ಎನಿಸಿಕೊಳ್ಳುತ್ತದೆ.
ಧರ್ಮ ಎಂದರೆ ಸ್ವಭಾವ. ವಿಕಾಸ ಹೊಂದುವದು ಮಾನವನ ಸ್ವಭಾವ. ಮಾನವರ ಧರ್ಮ. ಆದ್ದರಿಂದಲೇ ಮಾನವರೆಲ್ಲರ ಧರ್ಮ ಒಂದೇ. ನಾವು ಧರ್ಮವೆಂದು ಕರೆಯುತ್ತಿರುವ ವಿವಿಧ ಆಚರಣೆ ಆಧಾರಿತ ನಂಬಿಕೆಗಳು ಮತ. ಉದಾ: ಹಿಂದೂ, ಕ್ರಿಶ್ಚಿಯನ್, ಇಸ್ಲಾಂ, ಬುದ್ಧ, ಜೈನ ಇತ್ಯಾದಿಗಳೆಲ್ಲವೂ ಮತಗಳೇ ಹೊರತು ನೈಜ ಅರ್ಥದಲ್ಲಿ ಧರ್ಮ ಎನಿಸಿಕೊಳ್ಳುವುದಿಲ್ಲ. ಧರ್ಮದ ಆಚರಣೆಗೆ ಬಾಹ್ಯ ಪರಿಕರಗಳ , ಬಾಹ್ಯ ಆಡಂಬರಗಳ ಅಗತ್ಯವಿಲ್ಲ.
ಧರ್ಮಾಚರಣೆ ಅರ್ಥಾತ್ ಆಧ್ಯಾತ್ಮ ಸಾಧನೆ ಪ್ರತಿಯೋರ್ವ ಮಾನವನ ಹಕ್ಕು ಮತ್ತು ಕರ್ತವ್ಯ. ಇದರಲ್ಲಿ ಸ್ತ್ರೀ – ಪುರುಷ ಎಂಬ ಭೇದವಿಲ್ಲ. ಆಧ್ಯಾತ್ಮಿಕ ಸಾಧನೆಯ ಮೂಲ ಅವಶ್ಯಕತೆ ಮಾನವ ದೇಹ. ಆದ್ದರಿಂದ ದೇಹದ ಪಾಲನೆ, ಪೋಷಣೆಯನ್ನು ನಿರ್ಲಕ್ಷಿಸಲಾಗದು. ‘ಬ್ರಹ್ಮ ಸತ್ಯಮ್’ ಎನ್ನುವುದು ಸರಿ. ಆದರೆ ನಾವು ಬದುಕುತ್ತಿರುವ ಜಗತ್ತನ್ನು ಮಿಥ್ಯೆಯೆಂದು ನಿರಾಕರಿಸುವುದು ನಮ್ಮನ್ನೆ ನಾವು ಮೋಸಗೊಳಿಸಿಕೊಳ್ಳುವದಾಗಿದೆ. ದೇಹದಲ್ಲಿ ಜೀವ ಇರುವವರೆಗೂ ಆ ವ್ಯಕ್ತಿಯ ಪಾಲಿಗೆ ಬಾಹ್ಯ ಜಗತ್ತು ಕೂಡಾ ಹೋಲಿಕೆಯ ಸತ್ಯ ಅಥವಾ ಸಾಪೇಕ್ಷಿತ ಸತ್ಯ. ‘ಬ್ರಹ್ಮ ಸತ್ಯಂ ಜಗದಪಿ ಸತ್ಯಮಾಪೇಕ್ಷಿಕಂ’ ( ಆನಂದ ಸೂತ್ರಮ್ 2-14) ಎನ್ನುವುದೇ ಸಮಂಜಸ.
ಆದ್ದರಿಂದ ಆಧ್ಯಾತ್ಮ ಸಾಧನೆಗೆ ಪೂರಕವಾದ ವಾತಾವರಣ ಎಲ್ಲರಿಗಾಗಿ ಕಲ್ಪಿಸುವುದು ಸಮಾಜದ ಹೊಣೆಗಾರಿಕೆ. ಒಪ್ಪತ್ತಿನ ಊಟಕ್ಕಾಗಿ ಪರದಾಡುವ, ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸಿಕೊಳ್ಳಲೋಸುಗವೇ, ದಿನವಿಡೀ ದುಡಿಯಲೇಬೇಕಾದ ಜನರಿಗೆ ಆಧ್ಯಾತ್ಮ ಸಾಧನೆಯ ಕುರಿತು ಭೋದಿಸುವದು ಕ್ರೂರ ವ್ಯಂಗ್ಯ. ಪ್ರತಿಯೋರ್ವ ವ್ಯಕ್ತಿಗೂ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷದೋಪಚಾರಗಳು ಲಭ್ಯವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕಾದುದು ಸಮಾಜದ ಹಿತಚಿಂತಕರ ಕರ್ತವ್ಯ. ಇಂತಹ ವ್ಯವಸ್ಥೆಯನ್ನು ರೂಪಿಸುವ ಚಿಂತನೆ, ಕಾರ್ಯವಿಧಾನವೇ ಅರ್ಥಶಾಸ್ತ್ರ.
ಅರ್ಥಶಾಸ್ತ್ರವೆಂದರೆ ಇಕೊನಿಮಿಕ್ಸ್ ( ಧನ ಶಾಸ್ತ್ರ) ಅಲ್ಲ. ಅರ್ಥ ಶಬ್ದಕ್ಕೆ ಎರಡು ವಿವರಣೆಗಳಿವೆ. ಮಾನವನ ಭೌತಿಕ ಅಸ್ತಿತ್ವದ ತೊಂದರೆಗಳನ್ನು ನಿವಾರಣೆ ಮಾಡುವ ಮಾಧ್ಯಮವೇ ಅರ್ಥ. ಈ ಸಂದರ್ಭದಲ್ಲಿ ಅರ್ಥಕ್ಕೆ ಹಣವೆನ್ನುವ ವಿವರಣೆ ಸಲ್ಲುತ್ತದೆ. ಮಾನಸಿಕ ಬೇಗುದಿಯನ್ನು , ತೋಳಲಾಟವನ್ನು ಪರಿಹರಿಸುವುದಕ್ಕೂ ಅರ್ಥ ಎನ್ನುತ್ತಾರೆ. ಅದು ಕೇವಲ ಹಣದಿಂದಲೇ ಆಗುವಂತಹುದಲ್ಲ. ಮಾನಸಿಕ ನೆಮ್ಮದಿಯನ್ನು ತಾತ್ಕಾಲಿಕವಾಗಿ ನೀಡುವುದು ಅರ್ಥ. ಶಾಶ್ವತವಾಗಿ ನೀಡುವುದು ಪರಮಾರ್ಥ. ಮಾನವನ ಭೌತಿಕ ಅಸ್ತಿತ್ವವನ್ನು ರಕ್ಷಿಸಿ ಉಳಿಸುವದು ಮತ್ತು ಮಾನಸಿಕ ಹಸಿವನ್ನು ನೀಗಿಸುವದು ಅರ್ಥಶಾಸ್ತ್ರದ ಗುರಿ. ಇಂದು ಪ್ರಚಲಿತವಿರುವುದು ಧನಶಾಸ್ತ್ರ; ಬೇಕಿರುವುದು ಅರ್ಥಶಾಸ್ತ್ರ.
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಣಗಳನ್ನು ಮಾನವರು ಪಾಲಿಸಬೇಕೆಂದು ಭಾರತದ ದಾರ್ಶನಿಕರು ತಿಳಿಸಿದ್ದು ಈ ಅರ್ಥದಲ್ಲಿ. ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಂಡು ಧರ್ಮಾಚರಣೆ ಮಾಡಲು ಅವಕಾಶ ಕಲ್ಪಿಸಿಕೊಡುವುದು ಅರ್ಥಶಾಸ್ತ್ರ. ಧರ್ಮಾಚರಣೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆಂದು ಅನುಭಾವಿಗಳು ಅರಿತಿದ್ದರು.
ಹಣದಿಂದಲೇ ಧರ್ಮಾಚರಣೆ ಮಾಡುತ್ತೇವೆಂಬ ಭ್ರಮೆಗೆ ಹಲವರು ಸಿಲುಕಿದ್ದಾರೆ. ಬಡವರಿಗೆ, ದೇವಾಲಯ, ಚರ್ಚು, ಮಸೀದಿಗಳಿಗೆ ದೇಣಿಗೆ ನೀಡುವುದು, ಆಡಂಬರದ ಪೂಜೆಗಳನ್ನು ನೆರವೇರಿಸುವುದು, ಖಾವಿ ತೊಟ್ಟವರ ಸೇವೆ ಮಾಡುವುದೇ ಧರ್ಮಾಚರಣೆಯೆಂದು ಜನಸಾಮಾನ್ಯರನ್ನು ನಂಬಿಸಲಾಗಿದೆ. ಆಧ್ಯಾತ್ಮವೆಂದರೆ ಬದುಕಿನ ವಾಸ್ತವದ ನಿರಾಕರಣೆಯೆಂದು ತಪ್ಪಾಗಿ ಬಿಂಬಿಸಿ ಅದಕ್ಕಿಷ್ಟು ನಿಗೂಢತೆಯ ಲೇಪವನ್ನು ಹಚ್ಚಿ ಜನರನ್ನು ಭಯಭೀತರನ್ನಾಗಿಸಲಾಗಿದೆ.
ಧನ ಗಳಿಕೆ ಮತ್ತು ಸಂಗ್ರಹಣೆಯೇ ಜೀವನದ ಗುರಿಯೆಂದು ನಂಬಿರುವವರ ಜೀವನದ ಬಹುಪಾಲು ಸಮಯ ಅದರಲ್ಲೇ ಕಳೆದು ಹೋಗುತ್ತದೆ. ಶ್ರೇಷ್ಠ ವಿಚಾರಗಳನ್ನು ಅರಿಯುವ, ಅಧ್ಯಯನ ಮಾಡುವ , ಆಧ್ಯಾತ್ಮ ಸಾಧನೆಯ ಆನಂದವನ್ನು ಅನುಭವಿಸುವುದರಿಂದ ಅವರು ವಂಚಿತರಾಗುತ್ತಿದ್ದಾರೆ. ಸ್ವಾರ್ಥ ಮತ್ತು ಸ್ವ ಕೇಂದ್ರಿತ ಧನಶಾಸ್ತ್ರದ ಚಿಂತನೆಗಳಿಂದ ಪ್ರಭಾವಿತವಾದ ಆರ್ಥಿಕ ವ್ಯವಸ್ಥೆಯಲ್ಲಿ ಸಿಲುಕಿ ಅಸಹಾಯಕತೆ ಅನುಭವಿಸುತ್ತಿರುವವರಿಗೆ ಆಧ್ಯಾತ್ಮದ ಕುರಿತು ಚಿಂತಿಸಲೂ ಸಮಯವಿಲ್ಲವಾಗಿದೆ. ಬಾಹ್ಯಾಡಂಬರ, ಬಾಹ್ಯ ಪೂಜೆ, ಪ್ರಾರ್ಥನೆಗಳಿಂದ ತಮ್ಮ ಕಷ್ಟಗಳು ಪರಿಹಾರ ತಮ್ಮ ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಾದಿತೆಂಬ ನಿರೀಕ್ಷೆಯಲ್ಲಿ ಅವರು ಇನ್ನಷ್ಟು ಮೌಢ್ಯಾಚರಣೆಗಳಿಗೆ ಬಲಿಯಾಗುತ್ತಿದ್ದಾರೆ. ಧನಶಾಸ್ತ್ರದ ಶೋಷಣಾ ಕುಣಿಕೆಗಳನ್ನು ಹರಿದೊಗೆಯಲು ಅರ್ಥಶಾಸ್ತ್ರದ ಅನುಷ್ಠಾನದಿಂದ ಮಾತ್ರ ಸಾಧ್ಯ.
ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸುವ ಹೊಣೆಗಾರಿಕೆ ಸಮಾಜ ಅಂದರೆ ಸರ್ಕಾರಕ್ಕೆ ಇದೆ. ಸರ್ಕಾರದ ಅಥವಾ ಧನವಂತರ ಔದಾರ್ಯದ ಭಿಕ್ಷೆಯಿಂದ ಇದು ಆಗಬೇಕಿಲ್ಲ. ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ನೀಡುವುದು, ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಹಾಗೂ ಅವರ ಅವಲಂಬಿತರ ಜೀವನದ ಮೂಲಭೂತ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷಧೋಪಚಾರಗಳ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂಥ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಸರ್ಕಾರದ ಹೊಣೆಗಾರಿಕೆ.
ಇಂತಹ ವ್ಯವಸ್ಥೆಯ ನಿರ್ಮಾಣ ಬರೀ ಕನಸಲ್ಲ. ವಾಸ್ತವವಾಗಿಸಲು ಸಾಧ್ಯ. ಇಂದಿನ ಸ್ವಾರ್ಥ ಕೇಂದ್ರಿತ ವ್ಯವಸ್ಥೆಯನ್ನು ತೊಲಗಿಸಿ, ಆರ್ಥಿಕ ವಿಕೇಂದ್ರೀಕರಣವನ್ನು ಜಾರಿಗೊಳಿಸಿದಾಗ ಸಂಪನ್ಮೂಲಗಳ ಹತೋಟಿ ಜನಸಾಮಾನ್ಯರಿಗೆ ಸಿಗುತ್ತದೆ. ಲಾಭ ಗಳಿಕೆ, ಲಾಭ ಹೆಚ್ಚಳದ ಉದ್ದೇಶದಿಂದಲೇ ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಬದಲಿಗೆ, ಎಲ್ಲರಿಗೂ ಉದ್ಯೋಗ ನೀಡುವ, ಎಲ್ಲರಿಗೂ ಉತ್ತಮ ಬದುಕು ಕಟ್ಟಿಕೊಡುವ ಉದ್ದೇಶದಿಂದ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಖಾಸಗಿ ರಂಗವು ಸಹಕಾರಿ ರಂಗಕ್ಕೆ ಸ್ಥಾನ ಮಾಡಿಕೊಡುವುದು ಅನಿವಾರ್ಯವಾಗಲಿದೆ. ಇದು ಜನಾಧಿಕಾರ ಅರ್ಥ ವ್ಯವಸ್ಥೆ. ಇದರ ಉದ್ದೇಶ ಎಲ್ಲರ ಸುಖ ಮತ್ತು ಎಲ್ಲರ ಹಿತ. ಸಮಾಜದ ಪ್ರತಿಯೋರ್ವ ವ್ಯಕ್ತಿಗೂ ನೈಜ ಅರ್ಥದ ಧರ್ಮಾಚರಣೆಯಿಂದ ಆಧ್ಯಾತ್ಮದ ಪಥದಲ್ಲಿ ಸಾಗಿ ಯಶ ಪಡೆಯುವ ಅವಕಾಶ ಸೃಷ್ಟಿಸುವುದು. ಮಾನವನ ಅಸ್ತಿತ್ವದ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕವೆಂಬ ಮೂರು ಸ್ತರಗಳಲ್ಲಿ ಉನ್ನತಿ ಸಾಧಿಸಲು ಅವಕಾಶ ನೀಡುವ ಅರ್ಥವ್ಯವಸ್ಥೆಯೇ ಜನಾಧಿಕಾರ ವ್ಯವಸ್ಥೆ.


One thought on “ಲೇಖನ

Leave a Reply

Back To Top