ಅಂಕಣ ಬರಹ

ಮೌನದ ಮಾತು…

Full Moon, Reflection, Water, Moon, Dusk

ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು.

    ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ ..

    ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ..

          ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬರೇ ಓದಿದರೆ ಸಾಕೆ? ಕೆಲವರು ನುಡಿವುದೇ ವಿಷ ಕಾರಲು ..ನುಡಿದರೆ ವಿಷ ಕಾರಿ ನಂಜಾಗುವಂತಿರಬೇಕು  ಎನ್ನುವುದೇ ಅವರುಗಳ ಜೀವನದ ತತ್ವವಾಗಿರುತ್ತದೇನೋ…

        ಎಷ್ಟೇ ವಿಷದ ನಾಲಿಗೆಗಳು ವಿಷವ ಕಕ್ಕಿದರೂ  ಆ ಶಿವನೂ ಅದನ್ನು ಕಂಠದಲ್ಲಿ ಧರಿಸಿ ನೀಲಕಂಠನಾಗಲಿಲ್ಲವೆ ?

        ಮಗುವನ್ನು ಮುಂಗುಸಿ ಕೊಂದಿತೆಂದು ತಾಯಿಯೊಬ್ಬಳು ಅಜ್ಞಾನದಲ್ಲಿ ತಾನು ಸಾಲಿದ ನಿಷ್ಠಾವಂತ ಮುಂಗುಸಿಯನ್ನೇ ಹೊಡೆದು ಸಾಯಿಸಿ ಆ ನಂತರ ಆ ಮುಂಗುಸಿ ಹಾವಿನಿಂದ ಮಗುವನ್ನು ರಕ್ಷಿಸಿತೆನ್ನುವ ಸತ್ಯ ತಿಳಿದು ಪಶ್ಚತ್ತಾಪಪಟ್ಟ ಹಾಡು “

ನೋಡಿದ್ದು ಸುಳ್ಳಾಗಬಹುದು

ಕೇಳಿದ್ದು ಸುಳ್ಳಾಗಬಹುದು

ನಿಧಾನಿಸಿ ಯೋಚಿಸಿದಾಗ

ನಿಜವು ತಿಳಿವುದು ” ನೆನಪಾಗುತ್ತಿದೆ.

          ಕೇವಲ ಹಣ ಸಂಪಾದನೆ , ಗುಲಾಮಗಿರಿತನ , ಸದಾ ಇನ್ನೊಬ್ಬರ ಮರ್ಜಿ ಕಾಯುವ , ಅಧಿಕಾರಿಗಳ  ಬಾಯಿಯಲ್ಲಿ ತಮ್ಮ ಹೆಸರು ಬರುವುದೇ  ತಮ್ಮಪೂರ್ವ ಜನ್ಮದ ಸುಕೃತ ಎಂದು ಭಾವಿಸುವವರು ಅದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಆದರೆ ಅಧಿಕಾರಿಗಳಿಗೆ ಕೇವಲ ಓಲೈಕೆ ಮಾತ್ರಾ ಬೇಕಾಗಿರುತ್ತದೆ ..ಸಮಯ ಬಂದಾಗ ಯಾವಾಗ ಯಾವ ರೀತಿ ತಿರುಗುತ್ತರೋ ಎನ್ನುವ ಸತ್ಯದ ಅರಿವೂ ಇಂತವರಿಗೆ ಇರುವುದಿಲ್ಲ.

              ಖಾಲಿ ತಲೆ ಭೂತದ ಆವಾಸ ಸ್ಥಾನ ಎನ್ನುತ್ತಾರೆ ..ಹಾಗೆ ಮಾಡಲು ಕೆಲಸವಿಲ್ಲದವರಿಗೆ ಸದಾ ಇನ್ನೊಬ್ಬರ ನಡೆ ನುಡಿಗಳನ್ನೇ ಗಮನಿಸುತ್ತಿರುವುದು , ಅದನ್ನು ತಮ್ಮಿಷ್ಟಕ್ಕೆ ತಮ್ಮ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡು ಅಧಿಕಾರಿಗಳ ಕಿವಿ ಚುಚ್ಚುವುದು ..ಇದೇ ಬದುಕಾಗಿಬಿಟ್ಟಿರುತ್ತದೆ. ಇದು ಕೇವಲ ವೃತ್ತಿಯಲ್ಲಿ ಅಲ್ಲ ಮನೆಗಳಲ್ಲಿಯೂ ಕಾಣುವ ಪ್ರವೃತ್ತಿ!!

    ಒಂದು ಮನೆಯಲ್ಲಿ ಹತ್ತು ಜನರಿದ್ದರೆ ಅವರಲ್ಲೇ ಹದಿನೈದು ಗುಂಪುಗಳಿರುತ್ತವೆ. ಸದಾ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುತ್ತಾ ಅದರ ಪರಿಣಾಮಗಳನ್ನ ನೋಡಿ ಒಳಗೊಳಗೇ ಖುಷಿ ಪಡುವ ವಿಕೃತ ಮನಸುಗಳಿಗೆ ಆದಾವ ಬೇಲಿಯಿದೆ?

ತೂಕವಿಲ್ಲದಾಮಾತುಗಳುಸಾಗರದೆ

ತೇಲುವಕಸಕಡ್ಡಿಕೊಳಕಿನಂತೆ ನೋಡಯ್ಯ

ತೂಕದಾಮಾತುಗಳುಸಾಗರದಾಳಕಿಳಿದರಷ್ಟೆ

ದೊರೆವಮುತ್ತುರತ್ನಹವಳದಂತೆ ಕಾಣಯ್ಯ

            ಹಗುರ ಮಾತಿಗೂ ತೂಕದ ಮಾತಿಗೂ ವ್ಯತ್ಯಾಸ ಅರಿಯದವರು ಲೋಕದಲ್ಲಿ ಇರುವವರೆಗೂ  “ಆಚಾರವಿಲ್ಲದ ನಾಲಿಗೆ …ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ …”  ಎಂಬ ದಾಸವಾಣಿ ಮೊಳಗುತ್ತಲೇ ಇರುತ್ತದೆ..ಮತ್ತು ಇದಕ್ಕೆ ಕೊನೆಯೇ ಇಲ್ಲ…

           ನಾಲಿಗೆ ಹೊರಳುವ ಮುನ್ನ ಅದಕ್ಕೊಂದಷ್ಟು ಕಡಿವಾಣ ಹಾಕಬೇಕಾದುದು ಮನಸು..ಆದರೆ ಆ ಮನಸು ಯಾವುದೇ ಸಂಸ್ಕಾರಗಳಿಗೆ ಈಡಾಗದೇ ಕಾಡು ಕಾಡಾಗೇ ಬೆಳೆದಿದ್ದರೆ ಅದೂ ನಾಲಿಗೆಯನ್ನು ಮಾತಾಡು ಮಾತಾಡು ಎಂದು ಮುಂದಕ್ಕೆ ಛೂ ಬಿಡುತ್ತಲೇ ಇರುತ್ತದೆ..

     ಎದುರಿಗಿರುವ ನಾಲಿಗೆ ಏನಾದರೂ ಹೇಳಲಿ ಅದನ್ನು ಕೇಳುವ ಕಿವಿಯನ್ನೂ ಆ ಕಿವಿ ಹೊತ್ತವರ ಮನಸ್ಸು ತಿವಿದು ಎಚ್ಚರಿಸದಿದ್ದರೆ ಆ ಕಿವಿಗಳು ಹಿತ್ತಾಳೆ ಕಿವಿಗಳಾಗಲು ಬಹಳ ಹೊತ್ತೇನೂ ಬೇಕಾಗಿಲ್ಲ..

      ಚಿಕ್ಕಂದಿನಲ್ಲಿ  ಟೇಪ್ ರೆಕಾರ್ಡರ್ ನಲ್ಲಿ     ಕೇಳಿದ  ಶನಿಪ್ರಭಾವ  ಚಿತ್ರಕಥೆ ಕಥೆ ನೆನಪಾಗುತ್ತಿದೆ. ಶನಿಯ ವಕ್ರ ದೃಷ್ಟಿಯ ಪ್ರಭಾವದಿಂದ ಗೋಡೆಯ ಹಂಸೆಗೆ ಜೀವ ಬಂದು ಅಲ್ಲಿದ್ದ ಮುತ್ತಿನ ಹಾರವನ್ನು ಗುಳುಕ್ಕನೇ ನುಂಗಿ ಮತ್ತೆ ನಿರ್ಜೀವ ಹಂಸೆಯಾಗುವುದೂ , ಆ ಮುತ್ತಿನ ಹಾರದ ಕಳ್ಳತನದ ಆಪಾದನೆ ನಿರ್ದೋಷಿಯ ಮೇಲೆ ( ಕಥೆ ಅರೆಬರೆ ಮಾತ್ರಾ ನೆನಪಿದೆ ಬಹುಶಃ ರಾಜಾ ವಿಕ್ರಮಾದಿತ್ಯನಾ ಅಂತ ಅನುಮಾನ ) ಬರುವುದೂ ..ಅದರಿಂದ ಆತ ನಾನಾ  ವಿಧದ ಸಂಕಷ್ಟಗಳಿಗೆ ಈಡಾದರೂ ಸೋಲದೆ ಎಲ್ಲವನ್ನೂ ಎದುರಿಸಿ ಕೊನೆಗೆ ಶನಿಯ ಪ್ರಭಾವ ಇಳಿದ ಮೇಲೆ ಸತ್ಯ ಎಲ್ಲರಿಗೂ ತಿಳಿದ್ದೂ ಆರೋಪ ಹೊರಿಸಿದವರೂ ಅದನ್ನು ನಂಬಿದವರೂ ಪಶ್ಚತ್ತಾಪ ಪಟ್ಟಿದ್ದೂ …

      ಎಲ್ಲ ಸನ್ನವೇಶಗಳಲ್ಲಿಯೂ ಪಶ್ಚತ್ತಾಪಕ್ಕೆ ಎಡೆ ಇರುವುದಿಲ್ಲ. ಆರೋಪ ಹೊತ್ತವನು  ಹೇಗೆ ಆರೋಪಿಸಿದವನ ನಂಬಿಕೆ ಕಳೆದುಕೊಂಡಿರುತ್ತಾನೋ ಹಾಗೆಯೇ ಆರೋಪಿಸಿದವನೂ ಸಹಾ ಆರೋಪ ಹೊತ್ತವನ ನಂಬಿಕೆಯನ್ನೂ ಕಳೆದುಕೊಂಡಿರುತ್ತಾನೆ. ನಂಬಿಕೆ ಹೇಗೆ ಪರಸ್ಪರೋ ಅಪನಂಬಿಕೆಯೂ ಸಹಾ ಪರಸ್ಪರ…ಇದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ…

             ಬದುಕಲ್ಲೇ ಆಗಲಿ ವೃತ್ತಿಯಲ್ಲೇ ಆಗಲಿ ಒಬ್ಬರು ಇನ್ನೊಬ್ಬರ ವಿರುದ್ಧ ಕಿವಿ ಚುಚ್ಚುವ ಮುನ್ನ ಎಚ್ಚರಿಕೆಯಿರಲಿ..ಅದರಿಂದಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅರಿವಿರಲಿ. ಹಾಗೇ ಕೇಳುವ ಕಿವಿಗಳೂ  ನಂಬುವ ಮನಸುಗಳೂ ಎಚ್ಚರಿಕೆಯಿಂದಿರಲಿ…ಒಡೆದ ಕನ್ನಡಿಯ ಚೂರುಗಳನ್ನು ಹೇಗೆ ಮತ್ತೆ ಜೋಡಿಸಲಾಗದೋ ಒಡೆದ ನಂಬಿಕೆಗಳನೂ ಮತ್ತೆ ಜೋಡಿಸಲಾಗದು ..

ಸರ್ವಜ್ಞನ ನುಡಿಯಂತೆ

                ಮಾತಿನಿಂ ನಗೆ  ನುಡಿಯು

              ಮಾತಿನಸರ್ವ ಸಂಪದವು

             ಮಾತೇ ಮಾಣಿಕ್ಯ ಆಗಬೇಕೆ ವಿನಃ

                ಮಾತಿನಿಂ ಹಗೆ ಕೊಲೆಯು(ಸರ್ವಜ್ಞ) ಆಗಬಾರದು.

ಹಾಗಾಗುವುದೇ  ನಿಜವಾದರೆ ಅಂತಹಾ ಮಾತೇ ಬೇಡ…ಅಂತಹಾ ಮಾತಿಗಿಂತ ಮೌನವೇ ಲೇಸು…

ಬಹಳಷ್ಟು ಒಡಕು ಮಾತುಗಳಿಗೆ ಮೌನ ಉತ್ತರಿಸುತ್ತದೆ. ಅದನ್ನು ಆಲಿಸುವ ಸಾಮರ್ಥ್ಯ ಇರಬೇಕಷ್ಟೆ…

           ಸಂತ ಶರೀಫರು ಹೇಳುವಂತೆ  ಪರಸತಿ ಪರಧನ ಪರ ನಿಂದನೆಗೆ ಈ ಮನಸ್ಸಿಗೆ ಎಡೆ ಮಾಡಿಕೊಡದೆ ಜಾಗರೂಕರಾಗಿರಬೇಕು.ವಾಕ್ ಸ್ವಾತಂತ್ರ್ಯ ಇದೆ, ಹೊರಳುವ ನಾಲಿಗೆಯೂ ಇದೆ ಎಂದು ಮನಸ್ಸಿಗೆ ತೋಚಿದ್ದನ್ನೆಲ್ಲಾ ಆಡುವುದು ಅಪೇಕ್ಷಣೀಯವಲ್ಲ.ಕೆಲವರಿಗೆ ಸದಾ ಹೇಳಿದಗದನ್ನೇ ಹೇಳುವ ಚಟ! ಎದುರಿಗಿರುವವರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಪ್ಪೆಯಂತೆ ವಟವಟಿಸುತ್ತಲೇ ಇರುತ್ತಾರೆ.ಇಂತವರ ಮುಂದೆ ಮಾತಾಡದೆ ಮೌನ ವಹಿಸುವುದೇ ಸರಿಯಾದುದು.ಇಂತಹಾ  ಸಂದರ್ಭಗಳಲ್ಲಿ ಮಾತು ಸೋತು‌ಮೌನ ಗೆಲ್ಲುತ್ತದೆ..

  ಪರನಿಂದನೆಗೆ ಸದಾ ಹಾತೊರೆವ ಮನಸುಗಳೂ , ನಾಲಿಗೆಗಳೂ , ಕಿವಿಗಳೂ  ಇದನ್ನ ಅರಿತು ಜಾಗೃತರಾದರೆ ವ್ಯವಸ್ಥೆಯಲ್ಲಿನ ಬಹಳಷ್ಟು ಸಮಸ್ಯೆಗಳನ್ನು ದೂರ ಮಾಡಬಹುದು. ಎಲ್ಲ ಮನಗಳೂ ನೆಮ್ಮದಿಯಿಂದ ಬದುಕಬಹುದು..

           ಮೌನ ಮೌ ನ ಎಂದು ಹೇಳಿ ಇಷ್ಟೆಲ್ಲಾ ಮಾತಾಡುವುದಾ ಎಂದು ಮತ್ತೆ ಆರೋಪಿಸದಿರಿ…ಇದು ಒಡಕು ಮಾತಲ್ಲ ..ಮನದ ಮಾತು..ಮೌನದ ಮಾತು…

     ಮೌನ ಖಂಡಿತಾ ದೌರ್ಬಲ್ಯದ ಸಂಕೇತವಲ್ಲ…

************************************

                  ಶುಭಾ ಎ.ಆರ್  (ದೇವಯಾನಿ)

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ.

4 thoughts on “

  1. ತುಂಬಾ ಚೆನ್ನಾಗಿ ಮೂಡಿಬಂದಿದೆ . ಶುಭಾರವರ ಬಗ್ಗೆ ತಿಳಿದು ಬಹಳ ಸಂತೋಷ ವಾಯಿತು

  2. ಚುಚ್ಚು ಮಾತು ಆಡಬಾರದು ಎಂದು ತಿಳಿದೇ, ಕೆಲವರು ಚುಚ್ಚಿ ಮಾತನಾಡಿ ನೋಯಿಸುವುದು. ಅವರ ಹುದ್ದೆಯ adavnatage, ಹೊಂದಿರುವ ಆಸ್ತಿಯ ಅಥವಾ ನನ್ನನ್ನಾ ಯಾರೂ ಪ್ರಶ್ನಿಸುವುದಿಲ್ಲ ಎಂಬ ದುರಾಹಂಕಾರದಿಂದ ಹಾಗೆ ಮಾಡುತ್ತಾರೆ. ನಿಮ್ಮ ಈ ಲೇಖನದಲ್ಲಿ ಹೇಳಿರುವಂತೆ ಪ್ರತಿಯೊಬ್ಬ ಮೌನಿಯೂ ಈ ತರಹದ ಸಂದರ್ಭಗಳನ್ನು ಎದುರಿಸಿರುತ್ತಾರೆ. ಉತ್ತಮ ಲೇಖನ.

    1. ನಿಮ್ಮ ಅನಿಸಿಕೆ ನಿಜ, ಪ್ರತಿಯೊಬ್ಬ ಮೌನಿಯೂ ಈ ಥರದ ಸಂದರ್ಭಗಳ ಎದುರಿಸಿಯೇ ಇರುತ್ತಾನೆ ಸರ್ , ಧನ್ಯವಾದಗಳು

Leave a Reply

Back To Top