ಅಂಕಣ ಬರಹ

ದೀಪದ ನುಡಿ

ಎಲ್ಲರೆದೆಯೊಳಗಿನ  ದೀಪ

Frozen Wave Against Sunlight

ಈ ಬದುಕು ಬಹಳ ಕ್ಷಣಿಕ. ಈ ಕ್ಷಣ ನಾವು  ಬದುಕುತ್ತಿರುವುದಷ್ಟೇ  ಸತ್ಯ. ಹುಟ್ಟಿನ ಜೊತೆಗೇ ಸಾವನ್ನು ಬೆನ್ನ ಮೇಲೆ ಹೊತ್ತು ತಂದಿದ್ದರೂ ಪ್ರತಿಯೊಂದು ಜೀವಿಯೂ ಉಳಿವಿಗಾಗಿ ಹೋರಾಟವನ್ನು ಮಾಡಲೇಬೇಕು.ಇದು ಪ್ರಕೃತಿಯ ನಿಯಮ.ಜಗತ್ತಿನ ಪ್ರತಿಯೊಂದು ಪಶು ಪಕ್ಷಿ ಸಂಕುಲವೂ ಇದೇ ಧರ್ಮವನ್ನು ಪಾಲಿಸುತ್ತಾ ಬದುಕುತ್ತಿವೆ. ಆದರೆ ಮನುಷ್ಯ ಮಾತ್ರಾ ಬೇರೆ ಹಾದಿ ಹಿಡಿದು ಸಾಗಿದ್ದಾನೆ.

          ಬೇರೆಲ್ಲಾ ಪ್ರಾಣಿ ಪಕ್ಷಿಗಳು ಕೇವಲ ಹೊಟ್ಟೆಪಾಡಿಗಾಗಿ ಮಾತ್ರಾ ಬೇಟೆಯಾಡುತ್ತವೆ. ಅತೀ ಬುದ್ಧಿವಂತ ಪ್ರಾಣಿಕುಲವಾದ ನಮ್ಮಲ್ಲಿ ಗಾದೆಯಿದೆ.ಎಲ್ಲಾರೂ ಮಾಡುವುದು ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂದು. ಆದರೆ ಈ ಗಾದೆ ಇಂದು ಎಲ್ಲರಿಗೂ ಅನ್ವಯಿಸದ ಸನ್ನಿವೇಶದಲ್ಲಿ ನಾವಿದ್ದೇವೆ. ಮೂರ್ನಾಲ್ಕು ಅಷ್ಟೇ ಏಕೆ ಹತ್ತಾರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಮಾಡಿಟ್ಟವರು ಕೇವಲ ಹೊಟ್ಟೆ  ಮತ್ತು ಬಟ್ಟೆ ಎಂದೇ ದುಡಿದರೆ??

               ಇಂದಿನ ಹೊತ್ತಿಗಾದರೆ ಸಾಕು ,ನಾಳಿನ ಪಾಡು ನಾಳೆಗೆ ಎಂದು ಬದುಕು ಸವೆಸುವವರಿಗೆ ಮಾತ್ರಾ ಗಾದೆ ಅನ್ವಯಿಸಬಹುದಷ್ಟೆ.

        ಹೋಗಲಿ ದುಡಿದು ಎಷ್ಟಾದರೂ ಆಸ್ತಿ ಸೇರಿಸಲಿ ನ್ಯಾಯಯುತ ಮಾರ್ಗದಲ್ಲಿ ಗಳಿಸಿದ್ದಾದರೆ ಸರಿ.ಲಂಚ , ಭ್ರಷ್ಟಾಚಾರ ಕೊಲೆ ,ಸುಲಿಗೆಗಳಿಂದ ಗಳಿಸಿದ್ದರೆ ಅದು ಮೈಗೆ ಹತ್ತುವುದೆ?

               ಆಸ್ತಿ ಮಾಡಿಡುವ ಮಾತನ್ನೂ ಅತ್ತ ಪಕ್ಕಕ್ಕೆ ಸರಿಸಿಬಿಡೋಣ. ಒಂದೇ ಸಮಾಜದಲ್ಲಿ ಬದುಕುತ್ತಿರುವವರು ಪರಸ್ಪರರ ವಿರುದ್ಧ ಮಾಡುವ ಪಿತೂರಿ, ಒಬ್ಬರ ಏಳಿಗೆಯನ್ನು ಸಹಿಸದ ಕುದಿವ ಮನಸುಗಳು, ಒಳ್ಳೆಯತನದ ದುರುಪಯೋಗ, ಪಕ್ಕದವರ ಕಷ್ಟ ಅಸಹಾಯಕತೆಯ ನೋಡಿ ಖುಷಿಪಡುವ ಸಂಕುಚಿತ ಮನೋಭಾವ,  ಕಾರಣವೇ ಇಲ್ಲದ ಮತ್ಸರ , ಅಕಾರಣ ದ್ವೇಷ , ಕುಹಕದ ಮಾತು ,ಕುತಂತ್ರಗಳ ಬಲೆ ಇವೆಲ್ಲವೂ ಅದಾವ ಘಳಿಗೆಯಲ್ಲಿ ಮನುಷ್ಯನನ್ನು ಅಂಟಿಕೊಂಡವೋ ಏನೋ .

            ಅಧಿಕಾರಕ್ಕಾಗಿ ಸದಾ ಓಲೈಸುವಿಕೆ, ಭಟ್ಟಂಗಿತನ,  ಬದುಕಿರುವುದೇ ಹಣಕ್ಕಾಗಿ , ಹೆಸರಿಗಾಗಿ ಎಂಬಂತೆ ಬದುಕುವವರು ಅದೆಷ್ಟು ಜನರಿದ್ದಾರೆ ನಮ್ಮ ನಡುವೆ.ಕಾಲ ಕೆಟ್ಟು ಹೋಯಿತು ಎನ್ನುತ್ತಾರೆಯೇ ವಿನಃ ನಮ್ಮ ಆಸೆ , ದುರಾಸೆಗಳು ನಮ್ಮ ಬದುಕನ್ನು ಹದಗೆಡಿಸುತ್ತಿವೆ ಎನ್ನುವುದನ್ನು ಸುತರಾಂ ಒಪ್ಪುವುದಿಲ್ಲ.

ಕಾಲಕ್ಕಾವ ಹಂಗಿದೆ? ಅದು ನಿರ್ಲಿಪ್ತ..ಯಾರ ಹಂಗಿಗೂ ಒಳಗಾಗದೆ ತನ್ನಷ್ಟಕ್ಕೆ ತಾನು ಓಡುತ್ತಲೇ ಇರುತ್ತದೆ. ಆಗಾಗ ತನ್ನ ಜೋಳಿಗೆಯಿಂದ ಇತಿಹಾಸದ ಪುಟಗಳಲ್ಲಿನ ಚಿತ್ರಗಳನ್ನ ತೋರಿಸುತ್ತಲೇ ಎಲ್ಲರನ್ನೂ ಎಚ್ಚರಿಸುತ್ತಾ ಮುಂದೆ ಸಾಗುತ್ತದೆ.

        ಆದರೆ ನಾವು ಕಣ್ಣಿದ್ದೂ ಕುರುಡರಂತೆ ಕಾಲ ತೋರಿಸುವ ಚಿತ್ರಗಳ ನೋಡದೆ ,ಪಾಠ ಕಲಿಯದೆ ನಮ್ಮದೇ ದಾರಿಯಲ್ಲಿ ಸಾಗುತ್ತಾ ಕಾಲವನ್ನೂ ಗೆಲ್ಲುವವರಂತೆ ಓಡುತ್ತಿದ್ದೇವೆ.

                 ನೀತಿ ಶಿಕ್ಷಣ ಬೇಕು , ಮೌಲ್ಯಗಳ ಕಲಿಸಬೇಕು..ಎಲ್ಲಿಂದ ? ಪುಸ್ತಕಗಳಿಂದಲೇ? ನಮ್ಮ ನಡೆ ನುಡಿಯಲ್ಲೇ ಇಲ್ಲದ ಮೌಲ್ಯಗಳ ಯಾವ ಪುಸ್ತಕದಿಂದ ಹೆಕ್ಕಿ ತೆಗೆದು  ಕಲಿಸಲಾದೀತು?

            ಒಳಿತು ಕೆಡಕುಗಳ ಪರಿವೆಯೇ ಇಲ್ಲದೆ ಸ್ವಾರ್ಥದಿಂದ ಓಡುತ್ತಿರುವಂತಹ ಜನರ ಪರಿ ನೋಡಿದರೆ ಭಯವಾಗುತ್ತದೆ.ಎಲ್ಲಿದೆ ಇದರ ಕೊನೆ ಎಂದು. ನಿಜ ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ಒಳಿತಿರುವಂತೆಯೇ ಕೆಡುಕೂ ಇದೆ. ಕೆಡುಕಿನ ಮೇಲೆ ಗೆಲವು ಸಾಧಿಸುವುದೇ ಒಳಿತಿನ ಧರ್ಮ. ತನ್ನಲ್ಲಿರುವ ಕೆಡುಕನ್ನು ಗೆದ್ದವನನ್ನು , ನಿಯಂತ್ರಿಸಿಕೊಂಡವನನ್ನು ಸೋಗಲಾಡಿ ,ಗುಳ್ಳೆ ನರಿ , ಡಬಲ್ ಗೇಮ್ ಆಡುವವನು ಎಂದೆಲ್ಲಾ ಹಣೆಪಟ್ಟಿ ಹಚ್ಚಲಾಗುತ್ತದೆ. ಅದೆ ಕೆಡುಕು ಮಾಡಿದವನೊಬ್ಬ  ಹೌದು ನಾನು ಹೀಗೆ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರೆ( ಆತ ಅದೇ ಚಾಳಿ ಮುಂದುವರೆಸಿದರೂ)  ಆಹಾ ನೋಡಿರಿವನ ಎಷ್ಟು ಪ್ರಾಮಾಣಿಕ , ಮಾಡಿದ ತಪ್ಪನ್ನು ಹೋಗೆ ಬಹಿರಂಗಪಡಿಸಲೂ ಧೈರ್ಯ ಬೇಕು ಎನ್ನುತ್ತದೆ ಜಗತ್ತು.  ತಪ್ಪು ಬಹಿರಂಗಪಡಿಸಲು ಎಷ್ಟು ಧೈರ್ಯ ಬೇಕೋ‌ ಅಷ್ಟೇ ಗಟ್ಟಿಗತನ ಮತ್ತೊಮ್ಮೆ ಆ ತಪ್ಪು ಮರುಕಳಿಸದಂತೆ ನಡೆದುಕೊಳ್ಳುವುದರಲ್ಕಿಯೂ ಬೇಕು.ಮಮುಷ್ಯನಿರುವುದೇ ತಪ್ಪು ಮಾಡುವುದಕ್ಕಲ್ಲ. ತಪ್ಪುಗಳಾಗದ  ನಿಯಂತ್ರಿಸಿಕೊಳ್ಳಲು ಎನ್ನುವುದನ್ನು ಮರೆಯಬಾರದು.

                ಕಾಣದ ದೇವರ ಹೆಸರಲ್ಲಿ ಮಾನವನೇ ದೇವಮಾನವನಾಗುತ್ತಾ ಜನರನ್ನ ಮರುಳು ಮಾಡುತ್ತಿದ್ದಾನೆ. ಇದ್ದ ಬದ್ದ ಪ್ರಕೃತಿ ಧರ್ಮಗಳ ಮೀರಿ ಪ್ರಕೃತಿಗಿಂತಲೂ ದೊಡ್ಡವನಾಗಲು ಹೊರಟಿದ್ದಾನೆ.ರೆಕ್ಕೆಗಳಿಲ್ಲದೇ ಹಾರುವ, ಬಟ್ಟೆ ತೋಯಿಸಿಕೊಳ್ಳದೆ ನೀರ ದಾಟುವ,  ಗ್ರಹ ತಾರೆಗಳತ್ತ ಕೈಚಾಚುವ ಮಾನವ ತನ್ನ ನೆಲೆಯನ್ನೇ ತಾನು ಹಾಳುಗೆಡವಿ ಮಸಣವಾಗಿಸುತ್ತಿರುವುದರ ಅರಿವಿದ್ದರೂ ಕುರುಡಾಗಿದ್ದಾನೆ.

               ಸತ್ಯ ಹೇಳ ಹೊರಟವನು ಓಹೋ ಇವನೊಬ್ಬ ಗಾಂಧಿ ಮೊಮ್ಮೊಗನೆಂದೋ ,ಸತ್ಯ ಹರಿಶ್ಚಂದ್ರನ ಮಗನೆಂದೋ ಹೀಯಾಳಿಸುವ ಮನಸುಗಳಿವೆಯಿಲ್ಲಿ. ನೇರವಾಗಿ ನಡೆವವ ಢೋಂಗಿಯಾಗಿ ಪ್ರವಾಹದ ವಿರುದ್ಧ ಈಜುವ ಹುಚ್ಚನಾಗಿ ಕಾಣುತ್ತಾನೆ.

                  ವ್ಯವಸ್ಥೆ ಇರುವುದೇ ಹೀಗೆ..ಹೊಂದಿಕೊಳ್ಳಬೇಕು ಎನ್ನುವವರು ಗಾಳಿಬಂದತ್ತ ಓಡುವವರೇ ಸರಿ. ಬದುಕಿನಲ್ಲಿ ಹೊಂದಾಣಿಕೆ ಬೇಕೇ ಬೇಕು . .ಆದರೆ ಕೆಡುಕಿನ ಜೊತೆಗಲ್ಲ ಎನ್ನುವುದು ಇಂತವರಿಗೆ ಅರ್ಥವೇ ಆಗದು.

ಗಾಳಿಬಂದೆಡೆಹಾದಿಲೆಕ್ಕಿಸದೆ ತೂರುವುದರಲಿ

 ಅದಾವ ಪುರುಷಾರ್ಥವಿಹುದಯ್ಯ

ಗಾಳಿಗೆದುರಾದರೂ ಸರಿ , ಸರಿ ದಾರಿ ಹಿಡಿದು

ಸಾಗುವುದೆ ಧೀರತನವು ಕಾಣಯ್ಯ 

ಆದರೆ ಗಾಳಿಗೆದುರಾಗಿ ನಡೆವವನೂ ,ಪ್ರವಾಹದ ವಿರುದ್ಧ ಈಜುವವನೂ  ನಾನಾ ಕಿರುಕುಳಗಳು, ಕಷ್ಟಗಳು. ಒಳ್ಳೆಯತನ ಕೊನೆಯವರೆಗೂ ಕಷ್ಟ ಅನುಭವಿಸುತ್ತಲೇ ಇರಬೇಕು .

ಎಲ್ಲಿಯವರೆಗೆಂದರೆ ವ್ಯಕ್ತಿ ಸತ್ತಾಗಲೂ ಅವನು ನಮ್ಮ ಮಾತುಕೇಳಿದ್ದರೆ ಸುಖವಾಗಿರಬಹುದಿತ್ತು..ಆದರೆ ಅದೇನೊ ಸತ್ಯ ,ಆದರ್ಶ ಮಣ್ಣು ಮಸಿ ಅಂತ ನೆಚ್ಚಿಕೊಂಡಿದ್ದ ..ಕೊನೆಗೆ ಬರೇ ಕಷ್ಟ ಅನುಭಿಸಿಯೇ ಸತ್ತ.ಯಾಕೆ ಬೇಕು ಇದೆಲ್ಲ ಎಂದು ಸುತ್ತಲಿರುವವರಿಗೆ ಪಾಠ ಹೇಳುವಷ್ಟರ ಮಟ್ಟಿಗೆ.

            ಎಲ್ಲರೆದೆಯೊಳಗೂ ಒಂದು ಉರಿವ ದೀಪವಿದೆ. ಎಲ್ಲ ದೀಪಗಳ ಎಣ್ಣೆಯೂ ಒಂದಲ್ಲ ಒಂದು ದಿನ ತೀರಲೇ ಬೇಕು.ಅಷ್ಟರೊಳಗೆ ಬತ್ತಿ ಕರಟುಗಟ್ಟಿ ಮಸಿ ಹೊಗೆ ಸೂಸದೆ ಪ್ರಜ್ವಲವಾಗಿ ಬೆಳಗುವ ದೀಪಗಳಾಗೋಣ.ನಮ್ಮೆದೆಯ ದೀಪ ಬೆಂಕಿಯಾಗಿ ನಮ್ಮನ್ನೂ ನಮ್ಮ ಸುತ್ತಲಿನವರನ್ನೂ ಸುಡದೆ ಶಾಂತವಾಗಿ ಉರಿವ ದಾರಿ ದೀಪವಾದರಷ್ಟೆ ಬದುಕು ಸಾರ್ಥಕ.

ನಮ್ಮೆದೆಯ ದೀಪಗಳ ಬೆಳಗೋಣ

               ಬದುಕೋಣ ,ಬದುಕಲು ಕಲಿಸೋಣ ,ಬದುಕಲು ಸಹಕರಿಸೋಣ .

**************************************************************

                         

ಶುಭಾ ಎ.ಆರ್.(ದೇವಯಾನಿ)

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ.

4 thoughts on “

  1. ಬದುಕಿನ ನಿಜವಾದ ಉದ್ದೇಶ…ಮತ್ತು ಅದನ್ನು ಸಾಕಾರ ಗೈವಬಗೆ ಹೇಗೆ0ದು ಹೇಳಿದ್ದೀರಿ…ಧನ್ಯವಾದಗಳು

    1. ಧನ್ಯವಾದಗಳು ಸರ್ , ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ

  2. ತುಂಬಾ ಅದ್ಬುತ ಅಂಕಣ ಶುಭಾ ಮೇಡಂ…. ಪ್ರಸ್ತುತ ಸಮಾಜದ ಹಲವಾರು ಜನರಿಗೆ ಕನ್ನಡಿಯನ್ನು ಕೊಟ್ಟು ತಮ್ಮ ಮನಸ್ಸನ್ನ ತಾವೇ ನೋಡಿಕೊಳ್ಳುವಂತಹ ಅರ್ಥಗರ್ಭಿತವಾದoತಹ ಅಂಕಣ…… ಎರಡನೇ ಪ್ಯಾರಾ ನನಗೆ ತುಂಬಾ ಇಷ್ಟ ಆಯಿತು…

Leave a Reply

Back To Top