ಸಾವಿರದ ಸಾವಿರ ಕವಿತೆ
ರವಿ ರಾಯಚೂರಕರ್
ಬಳಲಿ ಬೇಕೆಂದು
ಬಿಕ್ಕಳಿಸಿ ಅತ್ತವನು
ಎದೆಗಂಟಿ ನುಡಿ ನುಡಿದು
ಆಸೆಯ ಗೋಪುರಕೆ
ಹೊಸ ಕನಸುಗಳ ತುಂಬಿ
ನೆಲಕಳಚಿ ಬಿದ್ದವನು ನೀನಲ್ಲವೇ
ಹಸಿದು ಕುಳಿತಾಗ
ಕುಟುಕಿ ಕಾಳನಿಟ್ಟು
ನಿಟ್ಟುಸುರ ಹೆಜ್ಜೆಯಲಿ
ಊರ ತಿರುಗಿದ ಬಿಕ್ಕು
ಪ್ರಾಯದ ಪೊರೆ ಹರಿದು
ಹದಿಹರೆಯದ ಒಲವನೆರದವನು
ನೀನಲ್ಲವೇ
ಬರಿ ಅರ್ಥಗಳನೆ ಈ ಮೌನಕೆ
ತುಂಬಿ
ಹಾಗೆ ತುಳುಕುವ
ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ
ಬೆಳಗಾಗುವವರೆಗೆ
ಉರಿದು,ಸುಟ್ಟು, ಬೂದಿಯಾಗಿ
ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ
ಶತಮಾನದ ನೋವಿಗೆ
ಪ್ರೀತಿ ಒಂದೇ ಮದ್ದೆಂದು
ಬಂಡಾಯವ ನನ್ನಲಿ ಬಿತ್ತಿ
ದುಡಿದು,ತಡೆದು,ಮಣಿದು
ರಮಿಸಿ,ಕ್ಷಮಿಸಿ,ಮುದ್ದಿಸಿ
ಮುತ್ತಿನ ಮುದ್ರೆ ಹೊತ್ತಿ
ಬೆಳಕಿಲ್ಲದೆ ದಾರಿಗೆ ಕೈ ಹಿಡಿದು
ನಡೆಸಿಕೊಂಡೊದವರು ನೀನಲ್ಲವೇ
ಕಿರು ಪರಿಚಯ:
ಕನ್ನಡ ಉಪನ್ಯಾಸಕರು.’ಬಸವಮ ಕಾಲಿನ ಜೋಡಿ ಮೆಟ್ಟು’ಕವನಸಂಕಲನ