ಲಲಿತ ಪ್ರಬಂಧ
ಪರಿವರ್ತನೆಗೆ ದಾರಿ ಯಾವುದಾದರೇನು?
ನಾಗರೇಖಾ ಗಾಂವಕರ್
ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೇ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರಿಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. ಉಳಿದೆಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ಬಂದರೆ ಆ ಹುಡುಗ ಮಾತ್ರ ದಿನವೂ ತಡವಾಗಿಯೇ ಕಾಲೇಜಿಗೆ ಬರುತ್ತಿದ್ದ. ಕೈಯಲ್ಲಿ ಒಂದು ನೋಟ್ ಪುಸ್ತಕ ಬಿಟ್ಟರೆ ಬೇರೇನೂ ಇರುತ್ತಿರಲಿಲ್ಲ. ಹಾಕಿಕೊಂಡ ಯೂನಿಫಾರ್ಮ ಅಲ್ಲಲ್ಲಿ ಕೊಳೆ ಮೆತ್ತಿಕೊಂಡಂತೆ ಇದ್ದರೆ ಕೂದಲನ್ನು ವಿಕಾರ ಶೈಲಿಯಲ್ಲಿ ಕ್ರಾಪು ಹೊಡೆಸಿಕೊಂಡಿದ್ದ.ಆತ ಬರುವ ಗತ್ತು ಮಾತ್ರ ಥೇಟ್ ಹೀರೋ, ಬಹುಶಃ ಕನ್ನಡದ ದರ್ಶನ್ ಇಲ್ಲವೇ ಯಶ್ ಇವರ ನಡಿಗೆಯಿಂದ ಪ್ರಭಾವಿತನಾಗಿದ್ದಂತೆ ಇತ್ತು.
ಪ್ರತಿದಿನ ಪ್ರಾರ್ಥನೆ ತಪ್ಪಿಸುವ, ತಡವಾಗಿ ಬರುವ ವಿದ್ಯಾರ್ಥಿಗಳನ್ನು ಹಿಡಿಯಲು ಕ್ಲಾಸರೂಮಿನ ಹೊರಗೆ ಉಪನ್ಯಾಸಕರ ದಂಡು ಕಾಯುತ್ತ ಕುಳಿತಿರುತ್ತಿದ್ದರು. ಆದರೂ ಈ ಹುಡುಗ ಮಾತ್ರ ನನಗಾರೂ ಸಮನಿಲ್ಲ, ಎಂಬ ಉಡಾಫೆಯಲ್ಲಿ ತಡವಾಗಿಯೇ ಬರುತ್ತಿದ್ದ.. ಕನ್ನಡ ಉಪನ್ಯಾಸಕರಿಗೂ ಅವನಿಗೂ ಯಾವಾಗಲೂ ಎಣ್ಣೆ ಸೀಗೆಕಾಯಿ ಸಂಬಂಧ.ಎಂದಿನಂತೆ ಈತ ಕಂಡದ್ದೆ ತಡ, ಅವರು ಮಂಗಳೂರಿನ ಭಾಷಾ ಶೈಲಿಯಲಿ
“ ಏ ಹುಡುಗಾ, ಕಾಲೇಜು ಪ್ರಾರ್ಥನೆ ಎಷ್ಟಕ್ಕೋ? ಮತ್ತೀಗ ಎಷ್ಟು ಗಂಟೆ? ನಿಂಗೆ ಮಂಡೆ ಗಿಂಡೆ ಉಂಟಾ? ನೀನೊಬ್ಬ ಸ್ಟೂಡೆಂಟಾ?” ಎಂದು ಗರಂ ಆಗಿ ಗುರಗುಟ್ಟಿದರು.
“ಸರ್ ಸ್ನಾನ ಮಾಡಾಕ್ ಲೇಟ್ ಆಯ್ತ ರೀ, ನಮ್ಮವ್ವ ಬ್ಯಾಗ್ ಏಳಾಂಗಿಲ್ಲಾರೀ, ನೀರು ಕಾಯಿಸಿ ಒಲೆ ಹಚ್ಚಿ ನೀರು ಕಾಯುವರೆಗೂ ನಾನ್ ಎಳಾಂಗಿಲ್ಲಾರೀ,” ಎಂದ.
ತೀರಾ ಸಲೀಸಾಗಿ ಸುಳ್ಳು ಹೇಳುತ್ತಿದ್ದಾನೆ ಎಂಬ ಗ್ರಹಿಕೆ ಬರುವಂತೆ ನುಡಿಯುತ್ತಿದ್ದರೆ ಕನ್ನಡ ಶಿಕ್ಷಕರು ನಖಶಿಖಾಂತ ಉರಿಯತೊಡಗಿದರು.
ಇನ್ನು ಮುಂದೆ ಹೀಗೆ ತಡಮಾಡುವುದಿಲ್ಲವೆಂದು ವಿನಂತಿಸಿ ಅಂತೂ ಆತ ತರಗತಿಗೆ ನಡೆದ.ಇಂಗ್ಲಿಷು ಅಷ್ಟಾಗಿ ಬರದ ಆತ ಸಂಸೃತ ಆಯ್ದುಕೊಂಡಿದ್ದ.ಮೊದಲ ತರಗತಿ ಸಂಸ್ಕೃತ. ಪಾಠ ಮಾಡಬಂದವರು ನಡುವಯಸ್ಸಿನ ಆದರೂ ನವ ಯುವಕನ ಪೋಸು ಕೊಡುತ್ತಿದ್ದ ಆರ್ ಕೆ. ಅವರ ಮುಂದಿನ ಹೆಸರನ್ನು ನಾನು ಹೇಳುವುದು ನೀವು ಕೇಳುವುದು ಬೇಡವೇ ಬೇಡ.ಆ ದಿನದ ಪಾಠದ ವಿಷಯ ಪಾಪ ಪುಣ್ಯ. ಪಾಪ ಪುಣ್ಯಗಳ ಬಗ್ಗೆ ಉಪನ್ಯಾಸಕರು ದೀರ್ಘವಾಗಿ ಭಾಷಣ ಮಾಡತೊಡಗಿದರು.ವ್ಯಾಸರ ಭಾರತವನ್ನು, ಹದಿನೆಂಟು ಪುರಾಣಗಳ ಆಧಾರಗಳನ್ನು ಉಲ್ಲೇಖಿಸಿ
“ಪರರಿಗೆ ಉಪಕಾರ ಮಾಡುವುದೇ ಪುಣ್ಯ,ಪರರ ಪೀಡನೆಯೇ ಪಾಪ” ಎನ್ನುತ್ತಿದ್ದರು.
ತಟ್ಟನೆ ಆ ವಿದ್ಯಾರ್ಥಿ ಎದ್ದು ಪ್ರಶ್ನಿಸಿದ “ಸರ್, ಸುಂದರವಾಗಿರುವ ಹುಡುಗಿಯರಿಗೆ ಹೆಚ್ಚು ಅಂಕ ನೀಡಿ, ಬುದ್ದಿವಂತ ಆದರೆ ತುಂಟ ಹುಡುಗರಿಗೆ ಕಡಿಮೆ ಅಂಕ ನೀಡುವುದು ಪಾಪವೋ? ಅಥವಾ ಪುಣ್ಯವೋ?” ಎಂದ.
ಉತ್ತರ ಕೊಡಲಾಗದ ಉಪನ್ಯಾಸಕರು ಬೆಸ್ತುಬಿದ್ದು ತಡಬಡಿಸತೊಡಗಿದರು.
ಮತ್ತೆ ಉಪನ್ಯಾಸಕರು ಉಪನ್ಯಾಸ ನೀಡದೆ, “ಯಾಕೋ ಹನುಮ ಬೆಳ್ಳಂಬೆಳಿಗ್ಗೆ ಅಮಲೇರಿದಂಗೆ ಬಡಬಡಿಸ್ತಿ.ಚಂದಾ ಗಿಂದ ತಗೊಂಡು ನನಗೇನಾಗಬೇಕು.ಪಾಠ ಸರ್ಯಾಗ ಕಲಿಯೂದ ಕಲಿ. ಬಡವ “ ಎಂದು ಗದರಿಸಿ“ಎಲ್ರೂ ಇಲ್ಲಿ ಕೇಳಿ, ಒಂದು ಸುಭಾಷಿತ ಕೊಡ್ತಿನಿ, ಬರ್ಕೋಳ್ಳಿ” ಎಂದು ಹೇಳಿ
“ಮರ್ಕಟಸ್ಯ ಸುರಾಪಾನಂ
ಮಧ್ಯೆ ವೃಶ್ಚಿಕ ದ್ವಂಶನಂ
ತನ್ಮದ್ಯೆ ಭೂತಸಂಚಾರೋ
ಯದ್ವಾತದ್ವಾ ಭವಿಷ್ಯತಿ” ಎಂದು ಬರೆಸಿ ನಾಳೆ ಅದರ ಕನ್ನಡ ಅನುವಾದ ಉತ್ತರ ಬರೆದು ತರುವಂತೆ ಹೇಳಿದರು.ಯಾರು ತರುವುದಿಲ್ಲವೋ ಅವರಿಗೆ ಇಂಟರ್ನಲ್ ಮಾರ್ಕ್ಸ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದು ಹೊರನಡೆದರು. ಅದು ಇಂಟರ್ವೆಲ್. ಹನುಮ ಮತ್ತವನ
ಗೆಳೆಯರು ತಲೆಕೆರೆದು ಕೊಳ್ಳುತ್ತ ಅನುವಾದ ಮಾಡತೊಡಗಿದರು.
ಅಲ್ಲೆ ಒಬ್ಬ ಗೆಳೆಯ ಅಂದ “ಹನಮ್ಯಾ ಅವ್ರ ನಿಂಗ್ ಇದನ್ನ ಟೊಂಟಾಗ್ ಕೊಟ್ಟಾಂಗೈತಲೇ!.ಮರ್ಕಟ ಅಂದ್ರ ಮಂಗಾ ಅಲ್ಲೇನ್ಲೇ? ಮತ್ತ ನಿನ್ನ ಹೆಸರು ಹನುಮ, ಸರಿಯಾಯ್ತ ಮಗನೇ, ಸೇರಿಗೆ ಸವ್ವಾಸೇರು. ನೀ ಸ್ಟುಡೆಂಟಲೇ, ಅವ್ರು ಲೆಕ್ಚ್ರು. ನಿನ್ನ ಕೈಯಾಗ ಅವರನ್ನ ಯಾಮಾರ್ಸೋದಕ್ಕ ಆಗಾಂಗಿಲಲೇ” ಎಂದ.
ಎಳೆ ಪ್ರಾಯದ ಬಿಸಿರಕ್ತದ ಹನುಮನ ಬಡಕಲು ಶರೀರವೂ ಕೊತಕೊತ ಕುದಿಯಿತು. ಅವನೆಂದ “ ಹೌದಾ! ಹಾಗಾಂದ್ರೆ ನೋಡೆ ಬೀಡುವಾ. ನಾನ ಅದರ ಉತ್ತರ ಬರಿದೆ ಬರಿತೀನಿ. ಸರ್ ಯಾವಾಗ್ಲೂ ನೆನಪಿಡೋ ಹಾಂಗ ಬರಿತೀನಿ. ಈಗ್ಲೆ ಅದನ್ ಹೇಳಾಂಗಿಲ್ಲ, ಮಾಡೇ ತೋರಸ್ತೀನಿ. ನೋಡ್ಲೇ ” ಅಂದ.
ಆದರೂ ಅವನ ಮುಖ ಜೋತು ಬಿದ್ದಿತ್ತು. ತಾನು ಮಾಡುವುದು ಸರಿಯೋ? ತಪ್ಪೋ? ಡೋಲಾಯಮಾನ ಮನಸ್ಥಿತಿ. ಆದರೂ ಹುಡುಗರೆದುರಿಗೆ ತಾನು ಹೀರೋ ಆಗಬೇಕೆನ್ನುವ ಛಲ. ಇಷ್ಟಾಗಿಯೂ ಶಿಕ್ಷಕರ ಅಂತಃಕರಣದ ಉದಾರೀಕರಣ ಬಲ್ಲವನಾಗಿದ್ದ. ತಾನಾದರೋ ಹಾಗೆ ಮಾಡಿದರೆ ಉಪನ್ಯಾಸಕರು ಮಹಾ ಏನು ಮಾಡಿಯಾರು? ಒಂದೆರಡು ಬೈದು ಬುದ್ದಿ ಹೇಳತಾರು,ಅಷ್ಟೇ ತಾನೆ? ನೋಡೆ ಬಿಡುವ ನನ್ನ ಜಿದ್ದು ಹೆಚ್ಚೋ ಆರ್.ಕೆ ಜಿದ್ದು ಹೆಚ್ಚೋ? ಎಂದುಕೊಳ್ಳುತ್ತ ಮಾರನೆ ದಿನ ತರಗತಿಗೆ ಕೊಂಚ ಮೊದಲೆ ಬಂದ. ಮೊದಲನೆ ತರಗತಿಯೇ ಸಂಸ್ಕೃತ. ಮೊದಲೆ ಕಾಲೇಜಿಗೆ ಬಂದ ಆತ ಮಾಡಿದ ಕೆಲಸವೆಂದರೆ ಬ್ಲಾಕ್ ಬೋರ್ಡನ್ನು ಚೆನ್ನಾಗಿ ಒರೆಸಿ, ಒಂದು ಮೂಲೆಯಿಂದ ಮಂಗನ ಆಗಮನದ ಚಿತ್ರ ಬಿಡಿಸಿದ. ಆದರೆ ಅದರ ಮೂತಿ ಮಾತ್ರ ತನ್ನ ಮುಖದಂತೆ ಬರೆದ.ಕೈಯಲ್ಲಿ ಬಾಟಲ್ ಹಿಡಿಸಿದ, ಮಂಗನ ಕೆಳಭಾಗದಲ್ಲಿ ಎಡನಿತಂಬಕ್ಕೆ ಕಚ್ಚುತ್ತಿರುವ ಚೇಳೊಂದನ್ನು ಬಿಡಿಸಿದ.ಈಗ ಮತ್ತೊಂದು ಎರಡನೆಯ ಚಿತ್ರ ಬರೆದ ಮಂಗನ ದಶಾವತಾರದ ಚಿತ್ರ.ಅಮಲೇರಿದ ಮಂಗನ ಮುಖದ ಹನುಮನ ಮಂಗಚೇಷ್ಟೆಯ ಚಿತ್ರ, ಕೊನೆಯಲ್ಲಿ ಮಂಗನಿಂದ ಬಚಾವಾಗಲು ಮರವೇರಿದ ಉಪನ್ಯಾಸಕರ ಚಿತ್ರ ಬರೆದು ನಿರುಮ್ಮಳನಾದ. ಅಷ್ಟೇ ಅಲ್ಲ ಯಾರಾದರೂ ಅದನ್ನು ಅಳಿಸಬಹುದೆಂದು ತರಗತಿ ಬಿಟ್ಟು ಹೊರಬರದೆ ಕಾಯುತ್ತ ಕುಳಿತ. ಸಮಯವಾಗುತ್ತಲೇ ತರಗತಿ ಭರ್ತಿಯಾಗತೊಡಗಿತು. ಹೆಣ್ಣು ಹುಡುಗಿಯರು ಕಣ್ಣು ಕಣ್ಣು ಬಿಟ್ಟು ಈ ಅದ್ಭುತ ಚಿತ್ರ ನೋಡಿ ವಿವರಿಸತೊಡಗಿದರು. ಈಗ ಅದಕ್ಕೆ ರೆಕ್ಕೆ ಪುಕ್ಕ ಎಲ್ಲ ಹುಟ್ಟಿಕೊಂಡವು.ಎಲ್ಲರ ಮುಂದೆ ಕಾಲರ್ ಎತ್ತಿ ಎತ್ತಿ ಹನುಮ ಭುಜ ಕುಣಿಸಿದ.ಪ್ರಾರ್ಥನೆಗೂ ಹೋಗದೆ ಉಪನ್ಯಾಸಕರು ಬರುವವರೆಗೂ ಚಿತ್ರ ಕಾಯುತ್ತ ಕುಳಿತ. ಕೈಯಲ್ಲೊಂದು ಹಾಜರಿ ಪುಸ್ತಕ ಮತ್ತೊಂದು ಪಠ್ಯ ಪುಸ್ತಕ ಹಿಡಿದು ಠಾಕುಠೀಕಾಗಿ ಬರುತ್ತಿರುವ ಉಪನ್ಯಾಸಕರಾದ ಆರ್. ಕೆ. ನ ನೋಡಿ ಹುಡುಗಿಯರು ಮುಸಿಮುಸಿ ನಕ್ಕರೆ, ಹನಮ್ಯಾ ಮತ್ತವನ ಕೋತಿ ದಂಡು ತಣ್ಣಗೆ ಕುಳಿತಿತ್ತು. ಹಾಜರಿ ಗಿಜರಿ ಮುಗಿಸಿ ಈಗ ಗುರುಗಳು ಬೋರ್ಡಿನ ಕಡೆ ತಿರುಗುತ್ತಲೂ ಆಶ್ಚರ್ಯ!! . ನಿನ್ನೆ ತಾವು ವಿದ್ಯಾರ್ಥಿಗಳಿಗೆ ನೀಡಿದ ಸಮಸ್ಯೆ ಅವರಿಗೆ ನೆನಪಿರಲಿಲ್ಲ. ‘ಎಂಥದ್ಭುತ ! ಭಲೇ, ಚಿತ್ತ ಚಾಂಚಲ್ಯಕ್ಕೆ ಎಂಥೊಳ್ಳೆ ಚಿತ್ರ. ಯಾರು ಬರೆದವರು?’ ಎಂದು ಕೇಳುತ್ತಲೂ ಮಕ್ಕಳಲ್ಲಾ ಹನುಮನ ಕಡೆ ನೋಡುತ್ತಲೂ ಗುರುಗಳಿಗೆ ಆಶ್ಚರ್ಯ . .’ ಭಲೇ’ ಎಂದರು ಮನದಲ್ಲೇ. “ ಎಂಥ ಅದ್ಭುತ ಕಲೆಗಾರ! ನಿನ್ನೊಳಗೊಂದು ಈ ವ್ಯಕ್ತಿ ಇರುವುದು ನನಗೆ ತಿಳಿದಿರಲಿಲ್ಲ,ಹನುಮಾ, ನೀನೊಬ್ಬ ಶ್ರೇಷ್ಠ ಚಿತ್ರಗಾರ. ನಿನ್ನ ಸಾಮರ್ಥ್ಯದ ಅರಿವು ನಿನಗೆ ಇಲ್ಲ. ಇರಲಿ ಬಿಡು. ನಿನಗೊಬ್ಬರನ್ನು ಪರಿಚಯಿಸಿ ಕೊಡುತ್ತೇನೆ. ಅವರ ಹತ್ತಿರ ಸರಿಯಾಗಿ ಪ್ರಾಕ್ಟೀಸು ಮಾಡು. ಹಣದ ಬಗ್ಗೆ ಚಿಂತಿಸಬೇಡ. ಹೇಗಾದರೂ ಹೊಂದಿಸೋಣ. ನೀನು ಮುಂದೆ ಬಂದರೆ ಸಾಕು” ಎನ್ನುತ್ತಲೂ, ಇವೆಲ್ಲವನ್ನು ನಿರೀಕ್ಷಿಸದೆ, ಉಪನ್ಯಾಸಕರು ತನಗೆ ಛೀಮಾರಿ ಹಾಕಿ ಹೊರಗೆ ಕಳುಹಿಸಬಹುದೆಂದು ಗ್ರಹಿಸಿದ್ದ ಆತನ ಲೆಕ್ಕಾಚಾರ ತಿರುವು ಮುರುವಾಗಿತ್ತು.ಹನುಮ ನಿಜಕ್ಕೂ ಈಗ ಮಂಗನಂತಾದ.ಕನಕ ಮಣಕ ಆದಂಗಾದ.ಅದರ ಕಾರಣ ಹೇಳ ಹೊರಟ. ಆಗಲಿಲ್ಲ. ಕಣ್ಣಾಲಿಗಳು ತುಂಬಿಕೊಂಡವು. ಗುರುವಿನ ಮುಂದೆ ಗುಲಾಮನಾಗಬೇಕೆನಿಸಿತು. ಇವರಿಗೆ ತಾನು ಎಷ್ಟು ಸತಾಯಿಸಿದೆ. ಅರ್ಥವಾಗಲಿಲ್ಲವೇ? ಅಂದುಕೊಂಡ. ತಪ್ಪಾಯಿತೆಂದು ಅಂಗಲಾಚಬೇಕೆಂದು ಕೊಂಡ. ಯಾವುದನ್ನು ಮಾಡಲಾಗದೆ ಈಗ ಮುಸಿ ಮುಸಿ ಅಳತೊಡಗಿದ.
ಅವನೊಳಗಿನ ಅಂತಃ ಪ್ರಜ್ಞೆ ಎಚ್ಚರಗೊಂಡಿತ್ತು. ಎಲ್ಲವನ್ನೂ ಸಲೀಸಾಗಿ ತೆಗೆದುಕೊಂಡು ಬದುಕುತ್ತಿದ್ದ ಹುಡುಗನ ಮನೆ ಸ್ಥಿತಿ ತೀರ ಹದಗೆಟ್ಟಿದ್ದಾಗಿತ್ತು. ಅದನ್ನು ತನ್ನ ವಿಚಿತ್ರ ಶೈಲಿಗಳಿಂದ ನಡೆ ನುಡಿಗಳಿಂದ ಮರೆಯಲು ಬಯಸುತ್ತಿದ್ದ. ಕಾಯಿಲೆಯಿಂದ ಹಾಸಿಗೆ ಹಿಡಿದ ತಾಯಿ, ಸದಾ ಕುಡಿದು ಬರುತ್ತಿದ್ದ ತಂದೆ, ಈ ಮಧ್ಯೆ ಒಡಹುಟ್ಟಿದ ಮುದ್ದು ತಂಗಿ, ಆಕೆಯ ಜವಾಬ್ದಾರಿ ಎಲ್ಲವನ್ನೂ ಎಳೆಯ ಪ್ರಾಯದ ಹುಡುಗ ಹೊತ್ತಿಕೊಂಡಿದ್ದ. ಬೆಳಿಗ್ಗೆ ತಡವಾಗುತ್ತಿದ್ದ ಕಾರಣ, ಮನೆಗುಡಿಸಿ, ನೀರು ತುಂಬಿ, ತಿಂಡಿ ಮಾಡಿ,ತಾಯಿಗೆ ತಂಗಿಗೆ ತಿಂಡಿ ಕೊಟ್ಟು, ತಾನು ಅರ್ಧಂಬರ್ಧ ತಿಂದು, ಬರುತ್ತಿದ್ದ ಆತ ಸುಮ್ಮನೆ ಸುಳ್ಳು ಹೇಳುತ್ತಿದ್ದ. ಕಾಲೇಜು ಸಮಯದ ನಂತರ ಅಂಗಡಿಯೊಂದರಲ್ಲಿ ಲೆಕ್ಕ ಪತ್ರ ಬರೆಯುವ ಕೆಲಸಕ್ಕೆ ಹೋಗುತ್ತಿದ್ದ ಆತ ಮನೆಯ ಖರ್ಚು ವೆಚ್ಚವನ್ನೆಲ್ಲಾ ತಾನೆ ನಿಭಾಯಿಸುತ್ತಿದ್ದ.ಕಾಲೇಜಿಗೆ ತಡವಾಗಿ ಬರುವುದಕ್ಕೆ ನಿಜ ಕಾರಣ ನೀಡಲು ಪ್ರಾಯದ ಜಂಭ ಅಡ್ಡಬರುತ್ತಿತ್ತು. ‘ತಾನೇಕೆ ಇನ್ನೊಬ್ಬರ ಎದುರಿಗೆ ತಲೆ ಬಾಗಿಸಲಿ? ಎಂಬ ಒಣ ಪ್ರತಿಷ್ಠೆ ಎಲ್ಲವೂ ಆತನಲ್ಲಿತ್ತು. ಆದರೀಗ ಹಾಗಾಗಲಿಲ್ಲ.ಒಂದು ಮನಸ್ಸು ಬೇಡ ಬೇಡವೆಂದರೂ ಮತ್ತೊಂದು ಮನಸ್ಸು ತನ್ನ ಮನೆಯ ರಹಸ್ಯವನ್ನೆಲ್ಲಾ ಬಿಚ್ಚಿಟ್ಟಿತು ಮತ್ತು ತನ್ನ ಮಂಗಚೇಷ್ಟೇಯ ಆಲೋಚನೆಯನ್ನು ಹೊರಗೆಡುವಿದ.ಆತ ಹೀಗೆಂದ
“ಸರ್, ಸರ್, ನನ್ನ ನೀವು ಕ್ಷಮಿಸಬೇಕ್ರೀ. ನಾನು ನಿಮಗೆ ಬುದ್ಧಿ ಕಲಿಸ್ತೀನಿ ಅಂತ ಹುಡುಗರತ್ರ ಹೇಳಕೊಂಡಿದ್ದೇರಿ..ನಂದೆಲ್ಲಾ ತಪ್ಪಾಗೈತ್ರಿ ಸರ್ ಹೊಟ್ಯಾಗ ಹಾಕ್ಕೊಳ್ರೀ, ಸರ್. ನನ್ನ ಗೆಳೇರಲ್ಲಾ ಅಂದ್ರು ಅಂತ ನಿಮಗಿಂತ ನಾನೆ ಬುದ್ಧಿವಂತ ಅಂತಾ ತೋರ್ಸಾಕ ಹೊಂಟಿದ್ದರ್ರೀ. ಈಗ ಗುರುತಾತ್ರೀ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ಶರೀಫರು ಯಾಕ್ ಹಾಡಿದ್ರೂ ಅಂತ”. ಎನ್ನುತ್ತ ಅವರ ಕಾಲಿಗೆ ಬಿದ್ದ.ಅಷ್ಟೊತ್ತಿಗೆ ಕನ್ನಡ ತರಗತಿ ಪ್ರಾರಂಭವಾಗುತ್ತಲೇ ಅವರೂ ಕ್ಲಾಸಿಗೆ ಬರಲು ಈ ದೃಶ್ಯ ಮನಕಲುಕಿತು. ಆವರೆಗೆ ಆತನ ಮೇಲಿದ್ದ ಕೋಪ,ಅಸಹನೆ ಮಾಯವಾಗಿ ಕರುಣೆ ತುಂಬಿಕೊಂಡಿತು.ಹೆಣ್ಣು ಹುಡುಗಿಯರಂತೂ ಆತನನ್ನು ಅಭಿಮಾನದಿಂದ ನೋಡತೊಡಗಿದರು. ಈಗ ನಿಜಕ್ಕೂ ಆತ ಹೀರೋ ಆಗಿದ್ದ ಬರಿಯ ಹುಡುಗಿಯರ ಕಣ್ಣಲ್ಲಿ ಮಾತ್ರವಲ್ಲ. ಶಿಕ್ಷಕರು, ಉಳಿದ ಸಹಪಾಠಿಗಳ ದೃಷ್ಠಿಯಲ್ಲೂ ಹನುಮನಿಗೆ ಹನುಮನೇ ಸಾಟಿ ಎನಿಸಿಕೊಂಡುಬಿಟ್ಟ. ಅದರಲ್ಲಿ ಬಹಳ ಆನಂದ ಪಟ್ಟವರೆಂದರೆ ಕನ್ನಡ ಮೇಷ್ಟ್ರು ಸದಾ ಕನ್ನಡ ತರಗತಿಗೆ ಗೈರುಹಾಜರಾಗಿ ಗುಂಪು ಕಟ್ಟಿಕೊಂಡು ಉಂಡಾಡಿ ಗುಂಡನ ಹಾಗೆ ಕಾಲೇಜು ಕ್ಯಾಂಪಸ್ ಸುತ್ತುತ್ತ ಆಗಾಗ ವಿಕಾರವಾಗಿ ಅವರನ್ನು ಅಣುಕಿಸುವ ಆತನ ಆಟಕ್ಕೆ ಅವರ ಮನ ರೋಸಿ ಹೋಗಿತ್ತು. ಪಾಠಕ್ಕೆ ಬಾ ಎಂದು ಕರೆದರೂ”ಸರ್ ನಾನು ಕ್ಲಾಸಿಗ್ ಕೂರದಿದ್ರೂ ಪಾಸಾಗ್ತೀನಿ ನೋಡಿ.” ಎಂದು ಸವಾಲೆಸೆದು ಅವರ ಮುಖಭಂಗ ಮಾಡಿದ್ದ. ಆದರೆ ಈಗ ಅವರು ಅದನ್ನೆಲ್ಲ ಮರೆತು ಆತನ ಹರಸತೊಡಗಿದರು. ತಮ್ಮ ಹಳೆಯ ಕಾಲೇಜು ದಿನಗಳನ್ನು ನೆನಪಿಸಿಕೊಂಡು “ಆ ವಯಸ್ಸು ಮಾರಾಯ, ಈಗ ನಿಂಗೆ ಬೈದ್ರು ಒಂದಕಾಲಕ್ಕೆ ನಾವು ಸಾಕಷ್ಟು ಸೌಖ್ಯ ಕೊಟ್ಟಿದ್ದೆವು ನಮ್ಮ ಮಾಷ್ಟುçಗಳಿಗೆ” ಎನ್ನುತ್ತ ಆತನ ಬೆನ್ನು ತಟ್ಟಿದರು.
ಸತತ ಪರಿಶ್ರಮ ಪಟ್ಟು ಚೆನ್ನಾಗಿ ಓದಿದ. ಆ ವರ್ಷದ ಆದರ್ಶ ವಿದ್ಯಾರ್ಥಿ ಸ್ಥಾನವನ್ನು ಮಾತ್ರವಲ್ಲದೇ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ. “ಹುಡುಗಾಟದ ಹುಂಬತನದಲ್ಲೂ ಮುಗ್ಧ ಮನಸ್ಸಿರುವುದು” ಎಂಬುದಕ್ಕೆ ಸಾಕ್ಷಿಯೂ ಆದ.ತಪ್ಪು ನಡೆದಾಗ ಶಿಕ್ಷಿಸದೆ ಆ ತಪ್ಪಿನಲ್ಲೂ ಕೆಲವೊಮ್ಮೆ ಇರುವ ಒಪ್ಪನ್ನು ಒಡಮೂಡಿಸಿದ ಸಂಸ್ಕೃತ ಶಿಕ್ಷಕರ ಸುಸಂಸ್ಕೃತ ವರ್ತನೆ ಆತನ ಬದಲಾವಣೆಗೆ ದಾರಿಯಾಯಿತು.
ಒಳ್ಳೆಯ ಪ್ರಬಂಧ
ಹಾಸ್ಯಮಯವಾಗು ಚೆನ್ನಾಗಿದೆ ಅಕ್ಕ