ಕವಿತೆ
ನೀ ಬಂದ ಘಳಿಗೆ
ಅನ್ನಪೂರ್ಣಾ ಬೆಜಪ್ಪೆ
ಮಲಗು ಮಲಗೆನ್ನ ಕಂದ
ಮಲಗೆನ್ನ ಹೆಗಲಿನಲಿ
ಕಾಯುವೆನು ಅನವರತ ಭಯಬೇಡ ಮಗುವೆ
ಸವಿಯುತಿರು ಪ್ರತಿ ಕ್ಷಣವ
ನಲುಗದೆಯೆ ಕೊರಗದೆಯೆ
ಬಾಳ ಹಾದಿಯಲೆನಗೆ ಬಲವದುವು ನಿನ್ನ ನಗುವೆ
ರವಿಯು ಉದಿಸುವ ವೇಳೆ
ನಲಿವ ಇಳೆಯದೆ ಸುಖವು
ನೀ ನನ್ನ ಮಡಿಲ ತುಂಬುತಲಿ ಬಂದ ಘಳಿಗೆ
ಎಳೆಯಬೆರಳಿನ ಸ್ಪರ್ಶದಲಿ
ನೂರು ತಂತಿಯು ಮಿಡಿದು
ಎದೆಯ ನೋವೆಲ್ಲ ಮರೆಯಾದಂತೆ ಮರೆಗೆ
ಮುಪ್ಪು ಕಾಡುವವರೆಗೆ
ತಪ್ಪು ಒಪ್ಪುಗಳ ಅರುಹಿ
ತೆಪ್ಪವಾಗುತ ಬರುವೆ ಬಾಳ ಯಾನದಲ್ಲಿ
ಕಪ್ಪು ಮೋಡವು ಸರಿದು
ತುಪ್ಪದಂತೆಯೆ ಘಮಿಸಿ
ಒಪ್ಪವಾಗಿರಲಿ ಬದುಕು ಸವಿ ನಗುವ ಚೆಲ್ಲಿ
**********************