ತಲ ಷಟ್ಪದಿಯಲ್ಲೊಂದು ಶಿಶುಗೀತೆ

ಪುಟ್ಟನ ಮನೆ

ತೇಜಾವತಿ ಹೆಚ್.ಡಿ.

Mother with Children On the Stock Footage Video (100% Royalty-free)  19334575 | Shutterstock

ಒಮ್ಮೆ ಪುಟ್ಟ
ಅಮ್ಮನೊಡನೆ
ಸಾಗರ ನೋಡಲೋದ
ರಾಶಿ ರಾಶಿ
ಉಸುಕು ಕಂಡು
ಕುಣಿದು ಕುಣಿದು ಹಿಗ್ಗಿದ ||

ಪುಟ್ಟ ನುಣುಪು
ಉಸುಕಿನಲ್ಲಿ
ಚಂದ ಮನೆಯ ಕಟ್ಟಿದ
ಅಲೆಯು ಬಂದು
ಕೊಚ್ಚಿ ಹೊಯ್ದು
ಅಮ್ಮಾ! ಎಂದು ಕೂಗಿದ ||

ಅಮ್ಮ ಬಂದು
ಹೇಳು ಕಂದ
ಏಕೆ ಅಳುವೆ ಎನ್ನಲು
ನೋವಿನಿಂದ
ಉರುಳಿ ಬಿದ್ದ
ಮನೆಯ ತೋರಿ ಹಲುಬಿದ ||

ಕೇಳು ಮಗನೆ
ಏಕೆ ಅಳುವೆ
ಮರಳ ಮನೆಯು ಕ್ಷಣಿಕವು
ನೀನು ಕಟ್ಟು
ಮನದ ಮನೆಯ
ಆತ್ಮ ಛಲವು ಜೊತೆಗಿದೆ ||

ಒಡನೆ ಪುಟ್ಟ
ಎದ್ದು ನಿಂತು
ಅಮ್ಮನಪ್ಪಿ ಹೇಳಿದ
ಬಿಡೆನು ನಾನು
ನಿನ್ನ ಮಾತ
ಒಪ್ಪಿಕೊಂಡೆ ಎಂದನು ||

ಮಗನ ನುಡಿಯ
ಕೇಳಿ ಅಮ್ಮ
ಪ್ರೀತಿ ಧಾರೆ ಎರೆದಳು
ಮಿಂದ ಪುಟ್ಟ
ಮಡಿಲ ಸುಖದಿ
ಹೊಸತು ಕನಸ ಕಂಡನು ||

ಊರಿನಲ್ಲಿ
ಗೆಳೆಯರೊಡನೆ
ಜೀವ ಭಾವ ಹುಡುಕಿದ
ತಂದು ಎಲ್ಲ
ಕೂಡಿ ಕಳೆದು
ಮನದ ಮನೆಯ ಕಟ್ಟಿದ ||

ಅಮ್ಮ ನೀನು
ಬಂದು ನೋಡು
ಎಂದು ಮುದದಿ ಓಡಿದ
ನೋಡಿ ಅವಳು
ಶ್ರಮದ ಫಲವು
ದೊರೆವುದೆಂದು ನುಡಿದಳು ||

ಅಂದಿನಿಂದ
ಪುಟ್ಟ ತಾನು
ಕೋಟಿ ಕನಸ ಕಂಡನು
ಬಿಡದೆ ಹಿಡಿದು
ತನ್ನ ಛಲವ
ದೊಡ್ಡ ಜಾಣನಾದನು ||

*****************************

One thought on “ತಲ ಷಟ್ಪದಿಯಲ್ಲೊಂದು ಶಿಶುಗೀತೆ

Leave a Reply

Back To Top