ಲೇಖನ
ಗಜಲ್ ಸಾಹಿತ್ಯ ಮತ್ತು
ಸವಾಲುಗಳು
ಡಾ. ಮಲ್ಲಿನಾಥ ಎಸ್.ತಳವಾರ
ಪ್ರಕೃತಿಯನ್ನೊಮ್ಮೆ ಅವಲೋಕಿಸಿದಾಗ ‘ಮನುಷ್ಯ’ ನ ವಿಕಾಸ ದಿಗ್ಭ್ರಮೆಯನ್ನು ಮೂಡಿಸುತ್ತದೆ. ಅದೊಂದು ರೀತಿಯಲ್ಲಿ ಪವಾಡವೇ ಸರಿ ! ಎಲ್ಲ ಪ್ರಾಣಿ ಸಂಕುಲಗಳಿಂದ ಆತನು ವಿಭಿನ್ನವೆನಿಸಿದ್ದು ಮಾತ್ರ ಭಾಷೆಯ ಬಳಕೆಯಿಂದ. ತನ್ನ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಪಡಿಸಲು ‘ಭಾಷೆ’ ಯನ್ನು ಸಾಧನವನ್ನಾಗಿ ಮಾರ್ಪಡಿಸಿಕೊಂಡನು. ಈ ಭಾಷೆಯ ಉದಯದೊಂದಿಗೆ ಸಾಹಿತ್ಯವೂ ಉದಯವಾಯಿತು ಎನ್ನಬಹುದು. “ಭಾಷೆಯ ಉದಯವೆಂದರೆ ಸಾಹಿತ್ಯದ ಉದಯವೆ ಸರಿ” ( ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಎಂಬ ರಂ. ಶ್ರೀ. ಮುಗುಳಿಯವರ ಮಾತು ಇದನ್ನೇ ಪುಷ್ಟಿಕರಿಸುತ್ತದೆ. ಜ್ಞಾನ ಸಂಪಾದನೆ ಮತ್ತು ಜ್ಞಾನ ಪ್ರಸಾರಗಳ ಅತ್ಯಂತ ಪ್ರಬಲ ಪರಿಣಾಮಕಾರಿ ಮಾಧ್ಯಮವೇ ಸಾಹಿತ್ಯ. ಇದು ಆಹ್ಲಾದಕರವೂ, ಆಕರ್ಷಕವೂ, ಜೀವನ ಸೌಂದರ್ಯದಾಯಕವೂ, ಸಂಸ್ಕೃತಿ ಸಂಪನ್ನವೂ, ಬುದ್ಧಿ ಮನಸ್ಸುಗಳ ವರ್ಧಕವೂ ಆಗಿದೆ. ಈ ನೆಲೆಯಲ್ಲಿ “ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ”.(ರಂ. ಶ್ರೀ. ಮುಗುಳಿ, ಕನ್ನಡ ಸಾಹಿತ್ಯ ಚರಿತ್ರೆ, ಪು- ೦೧) ಪಾದರಸದಂತೆ ಪರಿವರ್ತನಶೀಲವಾದ ಪ್ರಪಂಚದ ಜ್ಞಾನ, ವಿಜ್ಞಾನ, ಸಂಸ್ಕೃತಿಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತ, ಮನುಕುಲದ ಜೀವನವನ್ನು ಪುಷ್ಟಿಕರಿಸುತ್ತ, ತುಷ್ಟಿಗೊಳಿಸುತ್ತ, ವಿಕಾಸಗೊಳಿಸುತ್ತ, ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಸಾಹಿತ್ಯದ ಪರಮಗುರಿ.
ಸಾಹಿತ್ಯವೂ ಬದುಕಿನಂತೆಯೇ ಬೆಳೆಯುತ್ತದೆ. ಅದರಲ್ಲಿಯೂ ನಮ್ಮ ಬಾಳಿನಲ್ಲಿ ಇರುವಂತೆಯೇ ಏಳುಬೀಳುಗಳು, ಸಂಪ್ರದಾಯಗಳು, ಅವುಗಳ ವಿರುದ್ಧ ಕ್ರಾಂತಿ… ಇವೆಲ್ಲವೂ ಉಂಟು. ಸಾಹಿತ್ಯ ಆಗಸದಷ್ಟು ವಿಶಾಲ, ಸಾಗರದಷ್ಟು ಆಳವಾದ ಹರವು ಹೊಂದಿದೆ. ವಿಷಯವಸ್ತು, ಶೈಲಿ, ಅಭಿವ್ಯಕ್ತಿಯ ಹಿನ್ನೆಲೆಯಲ್ಲಿ ಸಾಹಿತ್ಯವು ಹತ್ತು ಹಲವಾರು ಪ್ರಕಾರಗಳನ್ನು ಹೊಂದಿದೆ. ಜೀವನ ಬದಲಾದಂತೆ ಸಾಹಿತ್ಯವೂ ಬದಲಾಗುತ್ತದೆ. ಹೊಸದಾದುದು ಕಾಲ ಕಳೆದಂತೆ ಹಳೆಯದೆನಿಸಿಕೊಂಡು ಸಂಪ್ರದಾಯವಾಗಿಬಿಡುತ್ತದೆ. ಅದರ ವಿರುದ್ಧ ಕ್ರಾಂತಿಯಾಗಿ, ದಂಗೆಯಾಗಿ ಹಳೆಯದರ ಸ್ಥಾನಕ್ಕೆ ಹೊಸದು ಬಂದು ನಿಲ್ಲುತ್ತದೆ. ಈ ಹೊಸದು ಕೂಡ ಮುಂದೆ ಮತ್ತೊಂದು ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೂ- ಚಂಪೂ, ವಚನ, ರಗಳೆ, ಷಟ್ಪದಿ, ಸಾಂಗತ್ಯ…. ಮುಂತಾದ ಅನೇಕ ರೀತಿಗಳ ಮೂಲಕ ಸಾಹಿತ್ಯ ಬೆಳೆದು ಬಂದಿದೆ. “ಒಂದು ನಿರ್ದಿಷ್ಟ ಸಾಹಿತ್ಯ ಪರಂಪರೆಯು ತನ್ನ ಸಾಧ್ಯತೆಗಳನ್ನು ತೀರಿಸಿಕೊಂಡು ಜಡವಾಗುವ ಹೊತ್ತಿಗೆ ಇನ್ನೊಂದು ಸಾಹಿತ್ಯ ಪರಂಪರೆಯ ಉಗಮಕ್ಕೆ ಕಾರಣವಾದ ಅಂಶಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡಿರುತ್ತದೆ” (ಶ್ರೀಧರ್ ಹೆಗಡೆ ಭದ್ರನ್ (ಸಂ) ; ಸಾಹಿತ್ಯ ಚಳುವಳಿಗಳು; ಪು- ೪೩) ಎಂಬ ಪುರುಷೋತ್ತಮ ಬಿಳಿಮಲೆಯವರ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ, ಎಲ್ಲ ಘಟ್ಘಗಳಿಗೂ ಅನ್ವಯಿಸುತ್ತದೆ. ಈ ಸಾಹಿತ್ಯಕ್ಕೆ ಭಾಷೆಯ, ಗಡಿಯ ಹಂಗು ಇಲ್ಲ. ಇದೊಂದು ‘ಸರ್ವಾಂತರ್ಯಾಮಿ’. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ‘ಗಜಲ್’. ಈ ಗಜಲ್ ನಷ್ಟು ವಿಶ್ವವ್ಯಾಪಿಯಾದ ಸಾಹಿತ್ಯದ ಮತ್ತೊಂದು ಪ್ರಕಾರವನ್ನು ಜಗತ್ತಿನ ಮತ್ಯಾವುದೇ ಸಾಹಿತ್ಯದಲ್ಲಿಯೂ ಕಾಣಲಾಗದು..! ಇದು ಅರೆಬಿಕ್, ಫಾರಸಿ ಮತ್ತು ಭಾರತೀಯ ಸಂಸ್ಕೃತಿಗಳ ಹದವಾದ ಮಿಶ್ರಣವಾಗಿದೆ.
‘ಗಜಲ್’ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ಹಾಗೂ ಗಂಭೀರ ಸಾಹಿತ್ಯ ರೂಪ. ಇದನ್ನು ಉರ್ದು ಕಾವ್ಯದ ರಾಣಿ ಎಂದು ಕರೆಯುತ್ತಾರೆ. “ಗಜಲ್ ಉರ್ದು ಕಾವ್ಯದ ಕೆನೆ; ಘನತೆ, ಗೌರವ, ಪ್ರತಿಷ್ಠೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ ಮತ್ತು ಬಟ್ಟೆ; ಆತ್ಮಾನಂದದ ತಂಬೆಳಕು” ಎಂದಿದ್ದಾರೆ ಶಾಂತರಸರು. (ಗಜಲ್ ಮತ್ತು ಬಿಡಿ ದ್ವಿಪದಿ : ಪು- ೪೩) ಗಜಲ್ ಅತ್ಯುತ್ತಮವೂ ಸುಖತಮವೂ ಆದ ಮನಸ್ಸಿನ ಸೌಂದರ್ಯಯೋಗಿ. ಜೀವಮಾನದ ಸುಖತಮವಾದ ಅತ್ಯುತ್ತಮ ಮುಹೂರ್ತಗಳಲ್ಲಿ ಹಾಡುವ ಆತ್ಮ ಗೀತಾಂಜಲಿಯಾಗಿದೆ. ನಮ್ಮ ಹೃದಯವನ್ನು ವಿಕಸಿತವಾಗುವಂತೆ ಮಾಡಿ ಜಗತ್ತನ್ನು ನಮಗೆ ಒಲಿಸುತ್ತದೆ. ಅದರ ದಿವ್ಯ ಸ್ಪರ್ಶದಿಂದ ಸರ್ವವೂ ಮನೋಹರವಾಗಿ ಪರಿಣಮಿಸುತ್ತದೆ. ಮಿಂಚಿ ಮಾಯವಾಗುವ ಪರಮಾನಂದವನ್ನು ಅವಿಚ್ಛಿನ್ನವಾಗುವಂತೆ ಮಾಡುತ್ತದೆ.
ಫಾರಸಿ ಮೂಲದಿಂದ ಹರಿದು ಬಂದ ಈ ಗಜಲ್ ಗಂಗೋತ್ರಿ ಭಾರತೀಯ ಭಾಷೆಗಳಲ್ಲಿ ಉರ್ದು, ಸಿಂಧಿ, ಗುಜರಾತಿ, ಪಂಜಾಬಿ, ಹಿಂದಿ, ಮರಾಠಿ, ಕನ್ನಡ ಹಾಗೂ ಇನ್ನಿತರ ಭಾಷೆಗಳಲ್ಲಿಯೂ ಸಮೃದ್ಧ ಕಾವ್ಯ ಕೃಷಿಗೆ ಕಾರಣವಾಗಿದೆ. ಇದು ತನ್ನದೇ ಆದ ಲಯ, ನಿಯಮ ಹಾಗೂ ಲಕ್ಷಣಗಳನ್ನು ಹೊಂದಿದೆ. ಇದರ ಕುರಿತು ಶಾಂತರಸ, ಜಂಬಣ್ಣ ಅಮರಚಿಂತ, ಸಿದ್ದರಾಮ ಹಿರೇಮಠ, ಚಿದಾನಂದ ಸಾಲಿ, ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ, ಅಲ್ಲಗಿರಿರಾಜ…. ಮುಂತಾದ ಗಜಲ್ ಗಾರುಡಿಗರು ಅನುಷಂಗಿಕವಾಗಿ ಚರ್ಚಿಸಿದ್ದರಾದರೂ ‘ಸಮಗ್ರ ಆಕರ ಗ್ರಂಥ’ ದ ಕೊರತೆ ನವ ಉತ್ಸಾಹಿ ‘ಗಜಲ್ ಗೋ’ ರವರನ್ನು ಕಾಡುತ್ತಿದೆ. ಅಂತೆಯೇ ಇಂದು ‘ಗಜಲ್ ಗೋಯಿ’ ತುಂಬಾ ಸವಾಲಿನಿಂದ ಕೂಡಿದೆ. “ಗಜಲ್ ಸಹಜವಾಗಿ ಒಲಿಯುವುದಿಲ್ಲ. ಮನಬಂದಂತೆ ಬರೆಯಲು ಇದು ಮುಕ್ತ ಛಂದವೂ ಅಲ್ಲ. ಇಲ್ಲಿ ನಿಯೋಜಿತವಾದ ಛಂದಸ್ಸು ಇದೆ. ಹಲವಾರು ಪ್ರಕಾರದ ವೃತ್ತಗಳು ಇವೆ. ಅವು ಯಾವುದನ್ನು ನಾವು ಕನ್ನಡದವರು ಗಮನಿಸುತ್ತಿಲ್ಲ” ( ಶ್ರೀಮತಿ ಪ್ರಭಾವತಿ ಎಸ್. ದೆಸಾಯಿ : ಭಾವಗಂಧಿ: ಪು- ೧೨) ಎಂದು ಗಿರೀಶ್ ಜಕಾಪುರೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದು ಗಜಲ್ ಪರಂಪರೆ ಹುಲುಸಾಗಿ ಬೆಳೆಯುತ್ತಿದೆಯಾದರೂ ಛಂದೋ ನಿಯಮವನ್ನು ಪಾಲಿಸದೆ ಇರುವುದು ಆತಂಕದ ಜೊತೆಗೆ ವಿಷಾದವನ್ನು ಮೂಡಿಸುತ್ತಿದೆ. ಈ ಬಗ್ಗೆ ಕವಿ ಮಜಹರ್ ಇಮಾಮ್ ಅವರ ಒಂದು ಷೇರ್ ಅನ್ನು ಇಲ್ಲಿ ಗಮನಿಸಬಹುದು.
“ಕಹನೆ ಕೊ ಯೆ ಗಜಲ್ ಹೈ, ಕ್ಯಾ ಗಜಲ್ ಹೈ ಜಿಸೆ
ನಜ್ಮ್ ಕಹಾ ನ ಜಾಯೆ, ನ ತರಾನಾ ಕಹಾ ಜಾಯೆ”
ಇದರಲ್ಲಿ ಅವರು ಗಜಲ್ ಹೆಸರಿನಲ್ಲಿ ಬರುತ್ತಿರುವ ಗಜಲ್ ಅಲ್ಲದ ಕಾವ್ಯದ ಬಗ್ಗೆ ಬರೆಯುತ್ತ ಇಂತಹ ರಚನಾ ವಿಧಾನವನ್ನು ಖಂಡಿಸಿದ್ದಾರೆ.
‘ಗಜಲ್’ ಎಂದರೆ ಒಂದು ಅರ್ಥ ನಲ್ಲೆಯೊಂದಿಗೆ ಸಂವಾದ, ಮತ್ತೊಂದು ಅರ್ಥ ಸಿಕ್ಕಿಬಿದ್ದ ಜಿಂಕೆಯ ಆಕ್ರಂದನ. ಈ ಎರಡೂ ಅರ್ಥಗಳ ಭಾವನಾ ವಿಶೇಷಗಳೂ ಗಜಲ್ ಪ್ರಕಾರದೊಳಗೆ ಆಳವಾಗಿ ಬೇರೂರಿವೆ. ಈ ಕಾರಣಕ್ಕಾಗಿಯೇ “ಗಜಲ್ ಎಂದರೆ ಪ್ರೇಮಗೀತೆ ಮಾತ್ರ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿರುವುದು” (ಡಿ. ಆರ್. ನಾಗರಾಜ್ (ಸಂ) ; ಉರ್ದು ಸಾಹಿತ್ಯ ; ಪು- XXVI) ಎಂಬ ಡಿ. ಆರ್. ನಾಗರಾಜ್ ರವರ ಮಾತು ಉಲ್ಲೇಖನೀಯ. ಪ್ರೇಮ ಎನ್ನುವುದು ಒಂದು ಭಾಷೆ, ಒಂದು ನಿರ್ದಿಷ್ಟ ಮನಸ್ಥಿತಿ. ಅಲ್ಲಿ ಎಲ್ಲ ವಸ್ತುಗಳು, ತಾತ್ವಿಕ ಸಂಗತಿಗಳು, ಅನುಭವಗಳು ಶೋಧನೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ “ಜಗದಲ್ಲಿರುವುದು ವಿರಹದ ನೋವೊಂದೆ ಅಲ್ಲ, ಇನ್ನೆಷ್ಟೋ ನೋವುಗಳಿವೆ” ಎಂಬ ಫೈಜ್ ಅಹ್ಮದ್ ಫೈಜ್ ರವರ ಹೇಳಿಕೆ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಮಿರ್ಜಾ ಗಾಲಿಬ್ ಉರ್ದು ಗಜಲ್ ಪರಂಪರೆಯ ಹೆಮ್ಮೆಯ ವಾರಸುದಾರರು. ಗಾಲಿಬ್ ನ ಉರ್ದು ‘ದಿವಾನ್’ ದಲ್ಲಿ ಹತ್ತು ಹಲವು ವೈವಿಧ್ಯಮಯ ವಿಷಯಗಳ ಸಂಗಮವಿದೆ. ಅವುಗಳಲ್ಲಿ ಕೆಲವೊಂದು ಉದಾಹರಣೆಗಾಗಿ…
“ಸಮಸ್ತ ವಿಶ್ವದ ವಸ್ತುಕೋಟಿಯಲಿ ನೀನಿಲ್ಲದೆ ಇಲ್ಲಾ
ಅದರೂ ಒಂದು ವಸ್ತುವು ನಿನಗೆ ಸಮ-ಸಾಟಿಯೆ ಅಲ್ಲಾ”
“ನನ್ನ ದೃಷ್ಟಿಯಲ್ಲಿ ಜಗವೆಂಬುದು ಮಕ್ಕಳ ಚೆಲ್ಲಾಟ
ನನ್ನ ಎದುರಿನಲಿ ಹಗಲೂ ಇರುಳೂ ನಡೆಯುವ ನಗೆಯಾಟ”
“ಕಾಯಿಲೆ ಬಿದ್ದರೆ ನೋಡಿಕೊಳ್ಳಲಿಕ್ಕೆ ಯಾರೂ ಬೇಡ ನನ್ನ ಬಳಿ
ಕೊನೆಯುಸಿರೆಳೆದರೆ ಅತ್ತು ಕರೆಯಲಿಕೆ ಯಾರೂ ಇರದಿರಲಿ”
“ಬದುಕಿನ ತಳಹದಿಯಲ್ಲಿಯೆ ಅವಿತಿವೆ ನಾಶದ ಬೀಜಗಳು
ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು”
ಗಜಲ್ ಮಾನವ ಪ್ರೇರಿತ, ನಿಸರ್ಗದ ಆಧಾರಿತ ಎಲ್ಲ ವಿಷಯಗಳನ್ನು ತನ್ನ ಮಡಿಲಲ್ಲಿಕೊಟ್ಟುಕೊಂಡು ಕಾವು ಕೊಡುತಿದೆ. ಯಾವ ವಿಷಯವೇಯಾದರೂ ಹೇಳುವ ರೀತಿ ಮಾತ್ರ ಕೋಮಲ ಹಾಗೂ ಹೃದಯ ತಟ್ಟುವಂತೆ ಇರಬೇಕು.ಆದರೆ ಹಿರಿಯ ತಲೆಗಳು ಮಾತ್ರ ಗಜಲ್ ಎಂದರೆ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಭಕ್ತಿ, ಅಧ್ಯಾತ್ಮ… ಕುರಿತು ಬರೆಯಬೇಕು ಎನ್ನುತ್ತಾರೆ.
‘ರದೀಫ್’ ಗಜಲ್ ಗೆ ಗೇಯತೆಯನ್ನು ನೀಡುತ್ತದೆ. ಲಾಲಿತ್ಯ ಹೆಚ್ಚಿದಷ್ಟು ಭಾವ ತೀವ್ರತೆ ಉದಯಿಸಿ ಸಂಗೀತದ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದರ ಬಳಕೆ ಮಾತ್ರ ಔಚಿತ್ಯದಿಂದ ಕೂಡಿರಬೇಕು. ಅದು ಅನಗತ್ಯವಾಗಿರದೆ ಇಡೀ ಗಜಲ್ ಗೆ ಮೆರುಗು ನೀಡುವಂತಿರಬೇಕು. ಆದರೆ ಗಜಲ್ ಗಳಲ್ಲಿ ರದೀಫ್ ಗಳ ಆಯ್ಕೆಯ ಬಗ್ಗೆಯೇ ಸಾಕಷ್ಟು ಗೊಂದಲಗಳಿವೆ. ರದೀಫ್ ಗಳು ಸಹೃದಯ ಓದುಗರನ್ನು ಯೋಚನೆಗೆ ಹಚ್ಚುವಂತಿರಬೇಕು. ಸಖಿ, ಸಖಾ, ಗೆಳೆಯ, ಗೆಳತಿ, ಮಿತ್ರ, ಸಾಕಿ, ಗಾಲಿಬ್, ನಾವು, ನೀವು… ಇಂತಹ ರದೀಫ್ ಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಇದರಿಂದ ಕೆಲವೊಮ್ಮೆ ಗಜಲ್ ನ ಧ್ವನಿಯ ರಸಭಂಗವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ..! ರದೀಫ್ ನ ಬಳಕೆ ಪ್ರತಿ ಗಜಲ್ ನಲ್ಲಿಯೂ ಭಿನ್ನವಾಗಿರಬೇಕು. ಇಲ್ಲದಿದ್ದರೆ ಅದು ಕೇವಲ ‘ಏಕತಾನತೆ’ಯನ್ನು ಉಂಟು ಮಾಡುತ್ತದೆಯಷ್ಟೇ..! ರದೀಫ್… ಇಡೀ ಗಜಲ್ ಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಯಾವ ರದೀಫ್ ಕೂಡ ಒತ್ತಾಯಪೂರ್ವಕವಾಗಿ ಬರಬಾರದು, ಉಸಿರಿನಂತೆ ಸರಳವಾಗಿ, ಸುಲಲಿತವಾಗಿ ಬರಬೇಕು ; ಬರದೇ ಇದ್ದರೂ ನಡೆದೀತು! ಏಕೆಂದರೆ ಗಜಲ್ ಗೆ ರದೀಫ್ ಅನಿವಾರ್ಯವಲ್ಲ, ಅವಶ್ಯಕತೆಯಷ್ಟೆ. ಇದನ್ನು ಗಜಲ್ ಛಂದಶಾಸ್ತ್ರಜ್ಞರಾದ ಅಲ್ಲಾಮ ಅಖ್ಲಾಕ್ ದೆಹಲವಿಯವರು ತಮ್ಮ ‘ಘನ ಶಾಯರಿ’ ಕೃತಿಯಲ್ಲಿ ರದೀಫ್ ಕುರಿತು ಹೀಗೆ ಹೇಳಿದ್ದಾರೆ. “ರದೀಫ್ ಇಲ್ಲದಿದ್ದರೂ ನಡೆದೀತು, ಕಾಫಿಯಾ ಇಲ್ಲದಿದ್ದರೆ ಅದು ಗಜಲ್ ಆಗುವುದಿಲ್ಲ”. ಇದೇ ಅರ್ಥದ ಮಾತುಗಳನ್ನು ಮಮ್ತಾಜ್ ಉರ್ರಷಿದ್ ರವರು ತಮ್ಮ ‘ಇಲ್ಮ್ ಕಾಫಿಯಾ’ ಪುಸ್ತಕದಲ್ಲಿ ಹೇಳಿದ್ದಾರೆ. ಇದು ‘ಕವಾಫಿ’ ಯ ಮಹತ್ವ, ಅನಿವಾರ್ಯತೆಯನ್ನು ಸಾರುತ್ತದೆ. ಗಜಲ್ ಗೋ ರದೀಫ್ ಬಳಸುವುದಕ್ಕಿಂತ ಮುಂಚೆ ಅದರ ಪ್ರಕಾರ, ಅದರ ಅರ್ಥ, ಸಾಧ್ಯತೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ರದೀಫ್ ನಲ್ಲಿ ಚೋಟಿ ರದೀಫ್, ಮಜಲಿ ರದೀಫ್ ಹಾಗೂ ಲಂಬಿ ರದೀಫ್ ಎಂಬ ಮೂರು ಪ್ರಕಾರಗಳಿವೆ. ರದೀಫ್ ಇಲ್ಲದೆ ಗಜಲ್ ಗಳ ಸೃಷ್ಟಿಕಾರ್ಯ ನಡೆದಿದೆ. ಫಿರಾಖ್ ಮತ್ತು ಅಲ್ಲಮಾ ಇಕ್ಬಾಲ್ ರಂತಹ ಮಹಾಕವಿಗಳು ರದೀಫ್ ರಹಿತ ಗಜಲ್ ಗಳನ್ನು ರಚಿಸಿದ್ದಾರೆ. ಇದಕ್ಕೆ ಗೈರ್ ಮುರದ್ದಫ್ ಗಜಲ್/ಕಾಫಿಯಾನ ಗಜಲ್ ಎಂದು ಕರೆಯುತ್ತಾರೆ.
ಕಾಫಿಯಾ.. ಗಜಲ್ ನ ಜೀವಾಳ. ಇದು ಕನ್ನಡ ಕಾವ್ಯಗಳಲ್ಲಿ ಬರುವಂತಹ ‘ಪ್ರಾಸ’ ಅಲ್ಲ. ಇದೊಂದು ಸಾಮಾನ್ಯ ಅಂತ್ಯ ಪದವಾಗಿರದೆ ಬದಲಾವಣೆ ಬಯಸುವ ಒಳಪ್ರಾಸವಾಗಿದೆ. “ರದೀಫ್ ಇಲ್ಲದೆಯೂ ಗಜಲ್ ರಚನೆ ಸಾಧ್ಯವಿದೆ. ಆದರೆ ಕಾಫಿಯಾ ಇಲ್ಲದೆ ಗಜಲ್ ರಚನೆ ಸಾಧ್ಯವಿಲ್ಲ” (ಗಿರೀಶ್ ಜಕಾಪುರೆ ; ಸಾವಿರ ಕಣ್ಣಿನ ನವಿಲು; ಪು- ೧೮) ಎಂದು ಗಿರೀಶ್ ಜಕಾಪುರೆಯವರು ಹೇಳಿರುವುದು ಗಜಲ್ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಹಾಗಂತ ‘ಕಾಫಿಯಾ’ ಅನಾವಶ್ಯಕವಾಗಿ, ಪ್ರಾಸದ ನೆಪದಲ್ಲಿ ಬಳಕೆಯಾಗಬಾರದು. ಅದೊಂದು ಸುಂದರ ಸ್ವತಂತ್ರ ಪದ, ಶಬ್ಬವಾಗಿರಬೇಕು. ಕಾಫಿಯಾದ ಕೊನೆಯ ಅಕ್ಷರ ‘ರವಿ’ ಮಾತ್ರ ಇಲ್ಲಿ ಮುಖ್ಯವಾಗುವುದಿಲ್ಲ, ಅದರೊಂದಿಗೆ ಕಾಫಿಯಾದ ಹಲವು ಪ್ರಕಾರಗಳೂ ಮುಖ್ಯವಾಗುತ್ತವೆ. ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಮುಂತಾದವುಗಳ ಪರಿಚಯ ಅಗತ್ಯವೆನಿಸುತ್ತದೆ. ಇದುವೆ, ಅದುವೆ… ಇವುಗಳು ಕಾಫಿಯಾ ಆಗುವುದಿಲ್ಲ. ಸೂರ್ಯನೆ, ಅವನೆ, ನೀನೆ, ಏನೆ… ಇವುಗಳೂ ಕವಾಫಿ ಅಲ್ಲ. ಕೇವಲ ‘ರವಿ/ರವೀಶ್’ ನ ಅನುಕರಣೆಯಿಂದ ಕಾಫಿಯಾ ಪರಿಫೂರ್ಣವಾಗುವುದಿಲ್ಲ. ಪ್ರತಿ ‘ಕವಾಫಿ’ ಯಲ್ಲಿ ಅರ್ಥ ಹೊಂದಾಣಿಕೆಯ ಜೊತೆಗೆ ವಚನ, ಕಾಲ, ಲಿಂಗ, ಪ್ರತ್ಯಯಗಳಲ್ಲಿಯೂ ಹೊಂದಾಣಿಕೆ ಇರಬೇಕು, ಇರಲೆಬೇಕು. ಆದರೆ ಹೆಚ್ಚಿನ ಗಜಲ್ ಗಳು ‘ಕವಾಫಿ’ಗೆ ಅವಮಾನ ಮಾಡುತ್ತಿರುವಂತೆ ಭಾಸವಾಗುತ್ತದೆ. ಇದರಿಂದಾಗಿಯೇ ಗಜಲ್ ಗಳು ಹೃದ್ಯವೆನಿಸದೆ ಕೇವಲ ಸಂಖ್ಯೆಯ ಸೌಧಗಳಾಗುತ್ತಿವೆ…!!
ಗಜಲ್ ನ ಪ್ರತಿಯೊಂದು ‘ಷೇರ್’ ಗಜಲ್ ನ ಪ್ರತ್ಯೇಕ ಒಂದು ಅಂಗವಿದ್ದಂತೆ. ಅದು ತನ್ನಷ್ಟಕ್ಕೆ ತಾನು ಅರ್ಥವುಳ್ಳ ಸಂಪೂರ್ಣ ಘಟಕ. ಈ ಅರ್ಥದಲ್ಲಿ ಪ್ರತಿ ಗಜಲ್ ತನ್ನ ‘ಅಶ್ಅರ್’ ನಷ್ಟು ಸ್ವತಂತ್ರ ಕಾವ್ಯಗಳಾಗಿರುತ್ತವೆ. ಇದೊಂದು ಬೇರೆ ಬೇರೆ ಹೂಗಳ ಸುಂದರ ಗುಲ್ದಸ್ತ. ಗಜಲ್ ನ ಪ್ರತಿ ಷೇರ್ ನ ‘ಮಿಸರೈನ್’ ಸ್ವತಂತ್ರವಾಗಿರಬೇಕು, ಒಂದಕ್ಕೊಂದು ಬೆಸೆದುಕೊಂಡಿರಬಾರದು. ಅವು ಪೂರಕವಾಗಿ ಇಲ್ಲವೆ ವಿರುದ್ಧವಾಗಿಯಾದರೂ ಇರಬಹುದು. ಎರಡು ಮಿಸರೈನ್ ಪರಸ್ಪರ ಬೆಸೆದುಕೊಂಡರೆ ಅದು ಒಂದು ‘ಮಿಸ್ರಾ’ ಆಗುತ್ತದೆಯೆ ಹೊರತು ಷೇರ್ ಆಗುವುದಿಲ್ಲ. ಒಂದು ಮಿಸ್ರಾ ಯಾವತ್ತೂ ಷೇರ್ ಅನಿಸಿಕೊಳ್ಳದು. ಗಜಲ್ ನ ಅಶ್ಅರ್ ಮೇಲುನೋಟಕ್ಕೆ ಚೆಲ್ಲಾಪಿಲ್ಲಿಯಾಗಿ ಕಾಣುತ್ತದೆ. ಒಂದು ಷೇರ್ ಇಲ್ಲಿ ಒಂದು ಘಟಕವಾಗುತ್ತದೆ. ಒಂದು ಘಟಕಕ್ಕೂ ಮತ್ತೊಂದು ಘಟಕಕ್ಕೂ ನೇರ ನಿರಂತರತೆ ಇರುವುದಿಲ್ಲ. ಆದರೆ ಅಲ್ಲಿರುವುದು ಮೂಲತಃ ಭಾವನಾತ್ಮಕ ಐಕ್ಯತೆ, ವಾತಾವರಣದ ಐಕ್ಯತೆ. ವಸ್ತುವೊಂದು ತನ್ನ ಬೌದ್ಧಿಕ ತರ್ಕದಲ್ಲಿ ಬೆಳೆಯುತ್ತ ಹೋಗುವುದಿಲ್ಲ. ಬದಲಾಗಿ ಭಾವನಾ ವಾತಾವರಣದಲ್ಲಿ ಸಾಮ್ಯವಿರುವ, ಪರಸ್ಪರ ಅಖಂಡವಾಗಿ ಬೆರೆಯಬಲ್ಲ ಭಾವಗಳು ಬೆರೆತು, ಒಂದು ವಿಶಿಷ್ಟ ಅನುಭವ ಸೃಷ್ಟಿಯಾಗುತ್ತದೆ. “ತುಂಬ ಚೆದುರಿದಂತೆ ಕಾಣುವ ಘಟಕಗಳನ್ನು ದಾಟಿ ಅದರ ಭಾವ ಸ್ಥಿತಿಗಳಿಗೆ ಸ್ಪಂದಿಸುವ ಪ್ರಯತ್ನ ಮಾಡಿದಾಗ ಗಜಲ್ ಗಳ ತೀವ್ರಾನುಭವ ಸಾಧ್ಯವಾಗುತ್ತದೆ”. (ಡಿ. ಆರ್. ನಾಗರಾಜ್ (ಸಂ); ಉರ್ದು ಸಾಹಿತ್ಯ ; ಪು – XXVI ) ಎಂಬ ಡಿ. ಆರ್. ನಾಗರಾಜ್ ಅವರ ಮಾತು ಸತ್ಯವಾಗಿದೆ. ಗಜಲ್ ನ ಸಮಗ್ರ ಅನುಭವ ಒಂದು ಇಡೀ ಸಂಸ್ಕೃತಿಯ ಮುಖ್ಯ ವಿವರಗಳ ತಿಳುವಳಿಕೆಯನ್ನು ನೀಡುತ್ತದೆ.
ಭಾಷೆಯ ದೃಷ್ಟಿಯಿಂದ ನೋಡುವುದಾದರೆ, ಉದ್ದಕ್ಕೂ ದ್ವಿಭಾಷಾ ಅಂದರೆ ಕನ್ನಡ-ಉರ್ದು ಸಂದರ್ಭದಲ್ಲಿ ನಿಂತು ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬೇಕಾಗಿ ಬಂದ ಕನ್ನಡ ಗಜಲ್ ಕಾರರು ತಮ್ಮ ಗಜಲ್ ನಲ್ಲಿ ಉರ್ದುವನ್ನು ಎಷ್ಟರಮಟ್ಟಿಗೆ ತಮ್ಮ ಗಜಲ್ ಭಾಷೆಯೊಳಗೆ ಅಳವಡಿಸಿಕೊಳ್ಳಬೇಕು ಎನ್ನುವ ಸಂಘರ್ಷ ಮತ್ತು ವಿವೇಚನೆ ತುಂಬಾ ಪ್ರಮುಖವೆನಿಸುತ್ತದೆ. ಸ್ವಂತಿಕೆ ಮತ್ತು ಅನ್ಯದ ನಡುವಣ ಸಂಘರ್ಷವು ಇಲ್ಲಿದೆ. ಕನ್ನಡ ಗಜಲ್ ಗಳಲ್ಲಿ ಉರ್ದು ಭಾಷೆಯ ಪದಗಳನ್ನು ಬಳಸುವ ಕುರಿತು ದೀರ್ಘ ಚರ್ಚೆ ಸಾಗುತ್ತಿದೆ. ಗೋರಿ, ಬಿಸ್ತರ್, ಫಕೀರ್, ಕಫನ್’, ದಫನ್, ದರ್ದ್, ಜನಾಜ, ಡೋಲಿ, ನಸೀಬ್, ಗರೀಬ್, ಜನ್ನತ್…. ಮುಂತಾದ ಶಬ್ದಗಳ ಬಳಕೆಯನ್ನು ಯಥೇಚ್ಛವಾಗಿ ಕಾಣುತ್ತೇವೆ. ಭಾಷೆ ನಿಂತ ನೀರಲ್ಲವಾದರೂ ಅನಗತ್ಯವಾಗಿ ಬಳಸಬಾರದು. ಇದನ್ನು ನಯಸೇನ, ಮುದ್ದಣ್ಣನಂತಹ ಕವಿಗಳು ಸಾಂದರ್ಭಿಕವಾಗಿ ಎಚ್ಚರಿಸುತ್ತಲೆ ಬಂದಿದ್ದಾರೆ. ಯಾವುದೇ ಸಾಹಿತ್ಯ ರೂಪದಲ್ಲಿಯೂ ಅನ್ಯಭಾಷೆಯ ಪದಗಳನ್ನು ಅನಗತ್ಯವಾಗಿ ಬಳಸುವುದು ತಪ್ಪು…! ಯಾವ ಪದಗಳಿಗೆ ಸಂವಾದಿಯಾಗಿ ಬೇರೆ ಪದಗಳು ಇಲ್ಲವೊ, ಯಾವ ವಿಷಯ ವಸ್ತು ಅನ್ಯ ಭಾಷೆಯ ಪದಗಳನ್ನು ಬಯಸುತ್ತದೆಯೊ ಅಲ್ಲಿ ಬಳಸಬಹುದು. ಆದರೆ ಅದುವೇ ಅತಿಯಾಗಬಾರದು.
‘ಮತ್ಲಾ’ ಎಂದರೆ ಆರಂಭ, ಉದಯ. ಗಜಲ್ ನ ಮೊದಲ ಷೇರ್ ಗೆ ‘ಮತ್ಲಾ’ ಎನ್ನುವರು. ಅದರ ಎರಡೂ ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬರಲೆಬೇಕು. ಆದರೆ ದುರಂತವೆಂದರೆ ಕೆಲವು ಗಜಲ್ ಕಾರರು ಪ್ರಯೋಗ, ಸಂಶೋಧನೆ, ಪ್ರಯತ್ನದ ಹೆಸರಿನಲ್ಲಿ ಗಜಲ್ ನ ಆರಂಭದ ಷೇರ್ ನ ಎರಡು ಮಿಸರೈನ್ ನಲ್ಲಿ ಕಾಫಿಯಾ, ರದೀಫ್ ಬಳಸದೇ, ಅದರ ಸಾನಿ ಮಿಸ್ರಾದಲ್ಲಿ ಮಾತ್ರ ಬಳಸುತಿದ್ದಾರೆ. ಇದರಿಂದ ಗಜಲ್ ನ ಮೂಲ ಲಕ್ಷಣ ‘ಮತ್ಲಾ’ ವನ್ನೇ ಕಡೆಡಣಿಸುತ್ತಿರುವುದು ವಿಷಾದನೀಯ. ಗಜಲ್ ಅನ್ನು ಮುರಿದು ಕಟ್ಟುವ ಭರದಲ್ಲಿ ಗಜಲ್ ಗೆ ಅಪಚಾರವೆಸಗುತಿದ್ದಾರೆ..!! ಮೀಟರ್… ಗಜಲ್ ನ ಚಂದದ ನಡಿಗೆ. ಪ್ರತಿ ಷೇರ್ ನ ಮಿಸರೈನ್ ಸಮವಾಗಿರಬೇಕು. ಇದು ಸಂಗೀತಕ್ಕೆ ತುಂಬಾ ಅವಶ್ಯಕ. ಕಾರಣ, ಗಜಲ್ ಮೂಲತಃ ಹಾಡುಗಬ್ಬ. ಒಂದು ಮಿಸ್ರಾ ಉದ್ದವಿದ್ದರೆ, ಮತ್ತೊಂದು ಮಿಸ್ರಾ ಚಿಕ್ಕದಿರುವುದು ಗಜಲ್ ನ ಲಕ್ಷಣವಲ್ಲ. ಇದರ ನಿರ್ಲಕ್ಷ ಸಲ್ಲದು. ಇದರ ಕಡೆಗೆ ನಾವು ಗಮನ ಕೊಡಬೇಕಿದೆ. ದುರಂತವೆಂದರೆ ಕೆಲವು ತಪ್ಪುಗಳೆ ಮುಂದೆ ಗಜಲ್ ಪ್ರಕಾರಗಳಾಗಿವೆ..!! ಇನ್ನೂ ಗಜಲ್ ನಲ್ಲಿ ಮಾತ್ರೆಗಳ ಬಳಕೆ ನಮ್ಮಿಂದ ದೂರವೇ ಉಳಿದಿದೆ. ಈ ಹಿನ್ನೆಲೆಯಲ್ಲಿ ನಾವು ಮೊದಲು ಗಜಲ್ ಕಾವ್ಯ ಕನ್ನಿಕೆ ಯಾರನ್ನು ಪ್ರೀತಿಸಬೇಕಾಗಿದೆ, ಗಜಲ್ ಪರಂಪರೆಯನ್ನು ಅಧ್ಯಯನ ಮಾಡಬೇಕಿದೆ. ಗಜಲ್ ರಚನೆಗಿಂತಲೂ ಮುಂಚೆ ಗಜಲ್ ನ ಕುರಿತು ಆಳವಾದ ಮತೆ ಗಂಭೀರವಾದ ಅಧ್ಯಯನ ಮಾಡಬೇಕಿದೆ.
‘ಮಕ್ತಾ’ ಎಂದರೆ ಅಂತ್ಯ, ಮುಕ್ತಾಯ ಎಂದರ್ಥ. ಗಜಲ್ ನ ಕೊನೆಯ ಷೇರ್ ಗೆ ಮಕ್ತಾ ಎಂದು ಕರೆಯುವರು. ಈ ಮಕ್ತಾದ ಯಾವ ಮಿಸ್ರಾದಲ್ಲಾದರೂ ‘ಗಜಲ್ ಗೊ’ ತಮ್ಮ ‘ತಖಲ್ಲಕಸನಾಮ’ ಬಳಸಬಹುದಾಗಿದೆ. ಈ ತಖಲ್ಲುಸನಾಮ ಅನಿವಾರ್ಯವಲ್ಲವಾದರೂ ಅದು ಇದ್ದರೆ ಮಾತ್ರ ಆ ಷೇರ್ ‘ಮಕ್ತಾ’ ಎನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅದೊಂದು ಕೇವಲ ಷೇರ್ ಅನಿಸಿಕೊಳ್ಳುವುದು. ಹಾಗಂತ ಈ ತಖಲ್ಲುಸನಾಮದ ಬಳಕೆ ಒತ್ತಾಯ, ಅನಗತ್ಯವೆನಿಸದೆ ಭಾವನೆಗಳಿಗೆ ವೇದಿಕೆಯನ್ನು ಒದಗಿಸಿಕೊಡುವಂತಿರಬೇಕು.
‘ತರಹೀ ಗಜಲ್’ ಗಜಲ್ ನ ಪ್ರಕಾರಗಳಲ್ಲಿ ತುಂಬಾ ಪ್ರಮುಖವೆನಿಸುತ್ತದೆ. “ಹಿಂದಿ, ಉರ್ದುವಿನ ‘ತರಹ’, ‘ಇಸ್ ತರಹ’, ಎಂಬ ಶಬ್ಧಗಳಿಂದ ‘ತರಹೀ’ ಎಂಬ ಪದ ಹುಟ್ಟಿದೆ. ಕನ್ನಡದಲ್ಲಿ ಇವುಗಳಿಗೆ ಸಂವಾದಿಯಾಗಿ ‘ಇಂತಹ’, ‘ಇದರಂತಹ’, ಎಂಬ ಶಬ್ದಗಳನ್ನು ಬಳಸಲಾಗುತ್ತದೆ. ಅಂದರೆ ಮಾದರಿಯಾಗಿ ನೀಡಲಾಗಿರುವ ಮಿಸ್ರಾದಂತಹ ಜಮೀನನ್ನು ಬಳಸಿ ಬರೆಯುವ ಗಜಲ್ ಗಳಿಗೆ ‘ತರಹೀ ಗಜಲ್’ ಎನ್ನುತ್ತಾರೆ. (ಗಿರೀಶ್ ಜಕಾಪುರೆ: ನಿನ್ನ ಮರೆಯುವ ಮಾತು: ಪು-xiii ) ತರಹೀ ಗಜಲ್ ಬರೆಯುವ ಗಜಲ್ ಕಾರರು ತಾವು ಪರರ ಯಾವ ಮಿಸ್ರಾ ಪಡೆಯಬೇಕು, ಪಡೆದಂತಹ ಮಿಸ್ರಾವನ್ನು ತಮ್ಮ ಗಜಲ್ ನಲ್ಲಿ ಎಲ್ಲಿ ಬಳಸಬೇಕು ಎಂಬುದು ಬಹು ಚರ್ಚೆಯ ವಿಚಾರ. “ಮತ್ಲಾದ ಊಲಾ ಮಿಸ್ರಾ ಮತ್ತು ಸಾನಿ ಮಿಸ್ರಾಗಳಲ್ಲಿ ಹೆಚ್ಚಾಗಿ ಸಾನಿ ಮಿಸ್ರಾ ಆಯ್ದುಕೊಂಡಿರುವ ಉದಾಹರಣೆಗಳು ಹೆಚ್ಚಾಗಿವೆ” ಎನ್ನುತ್ತಾರೆ ಗಿರೀಶ್ ಜಕಾಪುರೆ. (ಗಿರೀಶ್ ಜಕಾಪುರೆ : ನಿನ್ನ ಮರೆಯುವ ಮಾತು : ಪು-xv ) ತೆಗೆದುಕೊಂಡ ‘ಸಾನಿ ಮಿಸ್ರಾ’ ವನ್ನು ತರಹೀ ಗಜಲ್ ಬರೆಯುವ ‘ಗಜಲ್ ಗೋ’ ತಮ್ಮ ಗಜಲ್ ನಲ್ಲಿಯೂ ‘ಸಾನಿ ಮಿಸ್ರಾ’ ವನ್ನಾಗಿಯೇ ಬಳಸಬೇಕು ಎನ್ನಲಾಗುತ್ತಿದೆ. ಇನ್ನೂ ಷೇರ್ ನಿಂದ ತರಹೀ ಮಿಸ್ರಾ ಆಯ್ದುಕೊಳ್ಳಬೇಕಾದರೆ ‘ಸಾನಿ ಮಿಸ್ರಾ’ ವನ್ನೇ ಆಯ್ದುಕೊಳ್ಳಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ಸಂದೇಹಗಳು ಮನದಲ್ಲಿ ಉಳಿಯುತ್ತವೆ. ಇವುಗಳಿಗೆ ಪರಿಹಾರ ದೊರೆಯಬೇಕಾದರೆ ನಮ್ಮಲ್ಲಿ ‘ಮುಶಾಯಿರಾ’ ಸಂಸ್ಕೃತಿಯು ಬೆಳೆಯಬೇಕು ಹಾಗೂ ಗಜಲ್ ಕುರಿತು ಶಾಸ್ತ್ರೀಯ ಅಧ್ಯಯನ ನಡೆಯಬೇಕು.
ಸಾಮಾನ್ಯವಾಗಿ ಯಾವುದೇ ಕಾವ್ಯ ಪ್ರಕಾರವು ಪದಗಳ ಪುನರಾವರ್ತನೆಯನ್ನು ಬಯಸುವುದಿಲ್ಲ. ಒಂದು ವೇಳೆ ಒಂದೇ ಶಬ್ಧಕ್ಕೆ ಬೇರೆ ಬೇರೆ ಅರ್ಥಗಳಿದ್ದರೆ ಬಳಸಬಹುದು. ಇದೇನು ಲಿಖಿತ ನಿಯಮವಲ್ಲ, ಇದೊಂದು ಅಧ್ಯಹಾರ! ಇದಕ್ಕೆ ಶಬ್ದಸಂಪತ್ತು, ಅಧ್ಯಯನ, ಅಧ್ಯಾಪನದ ಅವಶ್ಯಕತೆ ಇದೆ.
ಈ ರೀತಿಯಲ್ಲಿ ಗಜಲ್ ಮಧುಶಾಲೆಯಲ್ಲಿ ಹಲವಾರು ಸಂದೇಹ, ಸವಾಲುಗಳು ಇವೆ. ಇವುಗಳನ್ನು ಮೆಟ್ಟಿ ನಿಲ್ಲಬೇಕಾದರೆ ಗಜಲ್ ಪರಂಪರೆಯ ಪರಿಚಯ ಅಗತ್ಯವೆನಿಸುತ್ತದೆ. ಗಜಲ್ ಬರೆಯುವುದಕ್ಕಿಂತ ಮುಂಚೆ ನಾವು ಗಜಲ್ ಛಂದಸ್ಸು, ಆಶಯಗಳನ್ನು ಕುರಿತು ಅರಿಯಬೇಕಿದೆ. ಗಜಲ್ ಬರಹ ಮನೋರಂಜನೆಯ ಸರಕಲ್ಲ, ಸಮಯ ಕೊಲ್ಲುವ ಅಸ್ತ್ರ ಅಲ್ಲ. ಅದೊಂದು ಧ್ಯಾನ ಬಯಸುವ ಅನುಪಮ ಸಾಹಿತ್ಯ ರೂಪ. ಇದಕ್ಕೆ ಬದ್ಧತೆ ಹಾಗೂ ಫ್ಯಾಷನ್ ಬೇಕು. ಈ ಹಿನ್ನೆಲೆಯಲ್ಲಿ ‘ಋಷಿಯಾಗದವನು ಕವಿಯಾಗಲಾರ’ ಎಂಬುದು ಸಾರ್ವತ್ರಿಕವೆನಿಸುತ್ತದೆ. ಈ ಸೂಕ್ಷ್ಮತೆಯನ್ನು ಅರಿತು ಕವಿ ರಕೀಬ್ ಮುಕ್ತಾರ್ ಅವರು ಈ ರೀತಿಯಲ್ಲಿ ಹೇಳಿದ್ದಾರೆ.
“ಗಜಲ್ ಗಜಲ್ ಮೆ ಬಡಾ ಫರ್ಕ್ ಹೈ ಮೇರೆ ಭಾಯಿ
ಕಹೀ ಉತಾರೀ ಗಯೀ ಹೈ ಕಹೀ ಬನಾಯೀ ಗಯೀ ಹೈ”
ಪರಾಮರ್ಶನ ಗ್ರಂಥಗಳು
೦೧. ಬಿ. ಎ. ಸನಾದಿ (ಅನು) : ಮಿರ್ಜಾ ಗಾಲಿಬ್ : ೧೯೯೩
೦೨. ಶಾಂತರಸ : ಗಜಲ್ ಮತ್ತು ಬಿಡಿ ದ್ವಿಪದಿ : ೨೦೦೪
೦೩. ಡಿ. ಆರ್. ನಾಗರಾಜ್ : ಉರ್ದು ಸಾಹಿತ್ಯ : ೨೦೧೫
೦೪. ರಂ. ಶ್ರೀ. ಮುಗುಳಿ : ಕನ್ನಡ ಸಾಹಿತ್ಯ ಚರಿತ್ರೆ : ೨೦೧೫
೦೫. ಶ್ರೀಧರ್ ಹೆಗಡೆ ಭದ್ರನ್ (ಸಂ) : ಸಾಹಿತ್ಯ ಚಳುವಳಿಗಳು : ೨೦೧೮
೦೬. ಗಿರೀಶ್ ಜಕಾಪುರೆ : ಸಾವಿರ ಕಣ್ಣಿನ ನವಿಲು : ೨೦೧೮
೦೭. ಗಿರೀಶ್ ಜಕಾಪುರೆ : ನಿನ್ನ ಮರೆಯುವ ಮಾತು : ೨೦೧೯
೦೮. ಶ್ರೀ ಪ್ರಭಾವತಿ ಎಸ್. ದೇಸಾಯಿ : ಭಾವಗಂಧಿ : ೨೦೨೦
೦೯. ಅಂತರ್ಜಾಲ…