ಪುಸ್ತಕ ಸಂಗಾತಿ
ಗಾಯಗೊಂಡ ಹೃದಯದ ಸ್ವಗತ
ಗಾಯಗೊಂಡ ಹೃದಯದ ಸ್ವಗತ
ತೆಲುಗು ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಕನ್ನಡಕ್ಕೆ : ರೋಹಿಣಿ ಸತ್ಯ
ಪ್ರ : ಸ್ನೇಹ ಬುಕ್ ಹೌಸ್
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೭೦
ಪುಟಗಳು : ೬೪
ಇದು ಒಂದು ನೀಳ್ಗವನ. ತನ್ನ ಗೃಹಕೃತ್ಯದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನೆರವೇರಿಸುತ್ತಿದ್ದ ಗೃಹಿಣಿಯೊಬ್ಬಳು ಸ್ತನದ ಕ್ಯಾನ್ಸರಿನಿಂದ ಬಳಲಿ ಚಿಕಿತ್ಸೆಯ ಅನೇಕ ಯಾತನಾಪೂರ್ಣ ಹಂತಗಳನ್ನು ದಾಟಿ, ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ ಸಾವನ್ನು ಗೆಲ್ಲುವುದು ಈ ಕವಿತೆಯ ವಸ್ತು. ಇದು ಕವಯಿತ್ರಿ ಅಯಿನಂಪೂಡಿ ಶ್ರೀಲಕ್ಷ್ಮಿಯವರ ನಿಜ ಕಥೆಯೂ ಹೌದು. ಕವನದ ಉದ್ದಕ್ಕೂ ನಾವು ನಿರೂಪಕಿಯ ಬದುಕು ಹಾಗೂ ಆಕೆಯ ವ್ಯಕ್ತಿತ್ವದ ವಿವಿಧ ಮುಖಗಳನ್ನು ನೋಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದು ಓದುಗನ ಮನಸ್ಸನ್ನು ಶುದ್ಧೀಕರಣಕ್ಕೊಳಗಾಗಿಸುವ ಕೆಥಾರ್ಸಿಸ್ ಪರಿಣಾಮವಿರುವ ಕಾವ್ಯ.
ಇದು ಒಂದು ಸ್ವಗತದ ನಿರೂಪಣೆಯಾದರೂ ಸ್ತ್ರೀಯ ಅಗಾಧವಾದ ಜೀವ ಚೈತನ್ಯ ಮತ್ತು ಧಾರಣ ಶಕ್ತಿಗಳಿಗೆ ಬರೆದ ಭಾಷ್ಯವೇ ಆಗಿದೆ ಅನ್ನಬಹುದು. ಕ್ಯಾನ್ಸರ್ ಅನ್ನುವುದು ಎಲ್ಲರೂ ಹೆದರಿ ನಡುಗುವ ಒಂದು ಭಯಾನಕ ಕಾಯಿಲೆ. ಬದುಕಿನ ಬಗೆಗಿನ ಭರವಸೆಗಳನ್ನೆಲ್ಲ ಬುಡಮೇಲು ಮಾಡಿ ವ್ಯಕ್ತಿಯನ್ನು ಭಯ-ತಲ್ಲಣಗಳ ಅಂಚಿಗೆ ದೂಡುವ ಒಂದು ಮಹಾಮಾರಿ. ಆದರೆ ಇಲ್ಲಿನ ಕಥಾನಾಯಕಿ ಸಾಮಾನ್ಯಳಲ್ಲ. ಇಂಥ ಒಂದು ಗದಗುಟ್ಟಿಸುವ ಸನ್ನಿವೇಶ ಎದುರಾದಾಗಲೂ ಅದನ್ನು ಆಕೆ ಲೀಲಾಜಾಲವಾಗಿ ಮುಗುಳ್ನಗೆಯೊಂದಿಗೆ ಅತ್ಯಂತ ಸಹಜವಾಗಿ ನಿಭಾಯಿಸುತ್ತಾಳೆ. ಮನಸ್ಸಿನ ತುಂಬಾ ಕೋಲಾಹಲವೇ ಆದರೂ ಅದನ್ನು ತನ್ನೊಳಗೇ ಪರಿಹರಿಸಿಕೊಳ್ಳುತ್ತ, ಹೊರಗೆ ತೋರಗೊಡದೇ ಇರುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಯಾಕೆಂದರೆ ಇದೆಲ್ಲವನ್ನೂ ತಾನು ಒಂದು ದಿನ ಗೆದ್ದೇ ಗೆಲ್ಲುತ್ತೇನೆಂಬ ದೃಢವಾದ ನಂಬಿಕೆ ಅವಳಲ್ಲಿದೆ.
ಈ ನೀಳ್ಗವನವನ್ನು ಪ್ರೋಲಾಗ್, ಇಂಟ್ರೋ, ಸ್ಟೇಜ್ ೧, ಸ್ಟೇಜ್ ೨, ಸ್ಟೇಜ್ ೩, ಫ್ಲಾಷ್ಬಾಕ್, ಫ್ಲಾಷ್ ಪ್ರೆಸೆಂಟ್, ಇನ್ ದ ಥಿಯೇಟರ್, ಪಿಂಕ್ ಹೋಪ್, ಮರಣಾಮರಣ-ಎಂದು ಒಂದು ಪಾಶ್ಚಾತ್ಯ ಪ್ರಾಚೀನ ನಾಟಕದ ರೂಪದಲ್ಲಿ ವಿಭಾಗಿಸಲಾಗಿದೆ. ಪ್ರಾಯಶಃ ಬದುಕು ಆಕಸ್ಮಿಕ ಸನ್ನಿವೇಶಗಳ ನಾಟಕವೆಂಬ ಕವಯಿತ್ರಿಯ ಧೋರಣೆ ಇದಕ್ಕೆ ಕಾರಣವಾಗಿರಬಹುದು. ಕವಯಿತ್ರಿ ತನ್ನ ನೋವುಗಳನ್ನೂ ಭಾವನಾತ್ಮಕ ಸಂವೇದನೆಗಳನ್ನೂ ತಾತ್ವಿಕ ಚಿಂತನೆಗಳನ್ನೂ ಇಲ್ಲಿ ಸುಂದರವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುವಾದದ ಶೈಲಿಯೂ ಅಷ್ಟೇ ಕಾವ್ಯಾತ್ಮಕವಾಗಿದ್ದು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. ಆರಂಭದಲ್ಲಿ ಎಂ.ಎಸ್.ಆಶಾದೇವಿಯವರ ಸೊಗಸಾದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಕಾವ್ಯವೇ ಒಂದು ಚಿಕಿತ್ಸೆ ಎಂಬ ಅರ್ಥದಲ್ಲಿ ಮಾಮಿಡಿ ಹರಿಕೃಷ್ಣ ಅವರು ಬರೆದ ‘ಪೋಯಟ್ರಿ ಒಂದು ಫೀಲಿಂಗ್, ಒಂದು ಕೆಥಾರ್ಸಿಸ್ ಒಂದು ಥೆರಪಿ’ ಎಂಬ ಲೇಖನ, ಈ ಕಾವ್ಯದ ಹಿನ್ನೆಲೆಯನ್ನು ವಿವರಿಸಿ ಮೂಲ ಲೇಖಕಿ- ಅನುವಾದಕಿಯರ ಮಾತುಗಳಿವೆ.
************************************************************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ