ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ

ಲೇಖನ

ಪಾಠವಷ್ಟೇ ಅಲ್ಲ, ಆಟವೂ

ಬದಲಾಗಿದೆ

ಅಕ್ಷತಾ ರಾಜ್ ಪೆರ್ಲ

15 Outdoor Indian Games on the verge of extinction

        “ಆಂಟೀ ಸ್ವಲ್ಪ ನಿಲ್ಲಿ” ಗೇಟಿನ ಬಳಿಯೇ ಪುಟಾಣಿಯೊಬ್ಬಳು ನಿಲ್ಲಿಸಿದಾಗ “ಯಾಕೆ?” ಕೇಳಿದೆ. “ನಿಮ್ದು ಬಿಸಿ ನೋಡ್ಲಿಕ್ಕಿದೆ” ಮುದ್ದಾಗಿ ಹೇಳುತ್ತಾ ಪಟಾಕಿ ಸಿಡಿಸುವ ಪಿಸ್ತೂಲೊಂದನ್ನು ನನ್ನ ಹಣೆಗೆ ತೋರಿಸಿದಳು. “ಬಿಸಿ ಇದ್ರೆ ಏನ್ಮಾಡ್ತೀಯಾ?” ಮತ್ತೆ ಕೇಳಿದೆ. “ಅಲ್ಲಿಗೆ ಹಾಕ್ತೇನೆ” ಅವಳು ತೋರಿಸಿದ ದಿಕ್ಕಿನತ್ತ ನೋಡಿದೆ, ಆಗಷ್ಟೇ ತನ್ನ ಮರಿಗಳೊಡನೆ ಸೇರಿಕೊಂಡ ಕೋಳಿಗೂಡು ಕಂಡಿತು. ಮನದಲ್ಲೇ ನಗುತ್ತಾ “ಅದ್ಯಾಕೆ ಹಾಗೆ?ನನ್ನ ಅಲ್ಲೇ ಯಾಕೆ ಹಾಕ್ಬೇಕು?” ಗಲ್ಲ ಚಿವುಟಿ ಪ್ರಶ್ನಿಸಿದೆ. “ಟಿ.ವಿ, ಪೇಪರ್ ಎಲ್ಲ ಏನೂ ನೋಡಲ್ವಾ! ಅಮ್ಮ ಈ ಆಂಟಿಗೆ ಏನೂ ಗೊತ್ತಿಲ್ಲ” ಸರ್ಟಿಫಿಕೇಟ್ ಕೊಟ್ಟೇ ಬಿಟ್ಟಳು ಪೋರಿ. “ಹೌದು ಇದೆಲ್ಲ ಎಲ್ಲಿ ಕಲಿತೆ ನೀನು” ಪುನಹ ಕೇಳಿದಾಗ “ಈಗ ಎಲ್ಲಾ ಕಡೆ ಮಾಡ್ತಾರೆ ಹೀಗೆ, ನನ್ನ ಮನೆಗೂ ಬರಬೇಕಾದರೆ ಟೆಸ್ಟು ಮಾಡಿಸ್ಬೇಕು” ಎಂದವಳೇ ಪಿಸ್ತೂಲನ್ನು ಕೆಳಗಿಳಿಸಿ ಪಕ್ಕದಲ್ಲಿದ್ದ ಪುಟ್ಟತಮ್ಮನಲ್ಲಿ “ನಾಲ್ಕು” ಹೇಳಿದಾಗ ಆತ ಪುಟ್ಟ ಚೀಟಿಯಲ್ಲಿ ಬರೆದು ನನ್ನ ಕೈಗಿತ್ತು ಸಾಬೂನು ನೀರನ್ನು ಪಿಚಕಾರಿಯಲ್ಲಿ ಸಿಡಿಸಿ ಗೇಟು ತೆರೆದ. “ಹ್ಞೂಂ, ಈಗ ಹೋಗ್ಬಹುದಾ ಒಳಗೆ?” ಕೇಳಿದಾಗ “ಹೋಗ್ಬಹುದು, ಹತ್ತು ಬಂದ್ರೆ ಮಾತ್ರ ಅಲ್ಲಿಗೆ” ಕೋಳಿ ಗೂಡು ತೋರಿಸಿದಾಗ “ಓಹೋ ಇವರ ಲೆಕ್ಕದಲ್ಲಿ ನಾಲ್ಕಾದರೆ ನಾರ್ಮಲ್, ಹತ್ತಾದರೆ ಅಬ್‌ನಾರ್ಮಲ್” ನನಗೆ ನಾನೇ ಹೇಳಿಕೊಳ್ಳುತ್ತಿರುವಾಗ “ಬಂದ್ರಾ! ನಿಮ್ಮನ್ನೂ ಕಾಡಿಸಿದ್ವಾ ಈ ಮಕ್ಳು? ಈಗ ಇದೇ ಆಟ ಇವುಗಳಿಗೆ….ಯಾರು ಬಂದ್ರೂ ಥರ್ಮಲ್ ಸ್ಕ್ಯಾನ್, ಮೊನ್ನೆ ತೆಂಗಿನಕಾಯಿ ಕೊಯ್ಯೋಕೆ ಬಂದ ಶಂಕ್ರನನ್ನು ಕೋಳಿಗೂಡಿಗೆ ಹಾಕ್ತೇವೆ ಅಂಥ ಎಳ್ಕೊಂಡು ಹೋಗಿದ್ದಾರೆ, ಶಾಲೆ ಆದ್ರೂ ಶುರು ಆಗ್ಬಾರ್ದಾ!” ಗೆಳತಿ ಗೊಣಗುತ್ತಾ ನನ್ನನ್ನು ಒಳಕರೆದೊಯ್ದಾಗ ಪುಟಾಣಿಗಳೂ ಓಡುತ್ತಾ ಬಂದು ಸೋಫಾದಲ್ಲಿ ಕುಳಿತರು.

          ಅದ್ಯಾಕೋ ಈ ಮಕ್ಕಳ ಆಟ ಕಂಡಾಗ ಬಾಲ್ಯ ನೆನಪಾಯಿತು. ಮನೆ ತುಂಬಾ ಮಕ್ಕಳಿದ್ದ ಕಾಲದಲ್ಲಿ ಹೀಗೆ ಇತ್ತಲ್ಲವೇ ನಮ್ಮ ಬಾಲ್ಯ? ಅಪ್ಪ ಅಮ್ಮನ ಕಣ್ಗಾವಲಿರಲಿಲ್ಲ, ‘ಅಲ್ಲಿ ಹೋದರೆ ಬೀಳುವೆ, ಇಲ್ಲಿ ಬಂದರೆ ಅಳುವೆ” ಎಂಬ ಮುಂಜಾಗರೂಕತೆಯಿರಲಿಲ್ಲ. ಮರ ಹತ್ತುವಾಗಲೂ, ನೀರಿನೊಳಗೆ ಬೀಳುವಾಗಲೂ ಸಿಕ್ಕ ಕೈಗಳು ನಮ್ಮ ಕೈಗಳಿಗಿಂತ ತುಸುವೇ ನೀಳವಾಗಿದ್ದವು ಅಷ್ಟೇ! ಅಡುಗೆಮನೆಯಿಂದ ಉಮೇದುಗೊಂಡು ಯಾವುದೋ ಮರದ ಕೆಳಗೆ ಹಾಕುತ್ತಿದ್ದ ಒಲೆಯಲ್ಲಿ ಅದೆಷ್ಟು ವಿಧದ ಅಡುಗೆಗಳು ತಯಾರಾಗುತ್ತಿದ್ದವೆಂದರೆ ಮುಂದೆ ಅಡುಗೆಯ ಬಗೆಗಿನ ಆಸಕ್ತಿಗೆ ಅದೂ ಒಂದು ಪಾಠವಾಗುವಷ್ಟು ! ಅಪ್ಪನೊಡನೆ ಹೋಗುತ್ತಿದ್ದ ಆ ದಿನಸಿ ಅಂಗಡಿಯಿಂದ ಪಡಸಾಲೆಯಲ್ಲಿ ತಲೆಯೆತ್ತಿದ ಗೂಡಂಗಡಿಗೆ ಎಣ್ಣೆಯ  ಹಳೆಯ ಶೀಶೆಯೋ ಅಥವಾ ತೂತು ಮಂಡಗೆಯೋ ಭರಣಿಯಾಗಿ ಅದ್ಯಾವಾಗಲೋ ಅಪ್ಪ ಕೊಟ್ಟ ಚಿಲ್ಲರೆಕಾಸಿನಲ್ಲಿ ಕೊಂಡ ಕಟ್ಲೀಸುತುಂಡು ಅದರಲ್ಲಿ ತುಂಬಿಕೊಳ್ಳುತ್ತಿತ್ತು. ಆಗಿನ ಕೆಲವು ಗೆಳೆಯರು ಇಂದು ಯಶಸ್ವಿ ವ್ಯಾಪಾರಿಗಳಾಗಲು ಈ ಪಡಸಾಲೆ ಗೂಡಂಗಡಿ ಬಹುಮುಖ್ಯ ಭೂಮಿಕೆ. ಸುರೇಶ ಮಾಸ್ತರರ ದಪ್ಪ ಕನ್ನಡಕ ಎಷ್ಟರ ಮಟ್ಟಿಗೆ ಆಕರ್ಷಿಸಿತ್ತೆಂದರೆ ಹುಣಸೇಮರದ ಕೆಳಗೆ ಅಮ್ಮನ ಹಳೆಯ ಸೀರೆ ಮದೆ ಕಟ್ಟಿ ಆಡುತ್ತಿದ್ದ ಶಾಲೆಯಾಟಕ್ಕೆ ಅಜ್ಜನ ದಪ್ಪ ಕನ್ನಡಕ ಮೇಸ್ತರಾಗಿ ನಿಂತ ದಿನಗಳು ಇಂದಿಗೂ ಟೀಚರ್ ಎಂದರೆ ಇಂತಹುದೇ ಗಾಂಭೀರ್ಯ ಬೇಕೆನ್ನುವಷ್ಟು ಛಾಪು ಮೂಡಿಸಿದ್ದು ಹೌದು. ಇವೆಲ್ಲವೂ ಒಳಾಂಗಣ ಆಟಗಳ ಪಟ್ಟಿಗೆ ಸೇರಿದರೆ ಹೊರಾಂಗಣ ಆಟಗಳ ರುಚಿಯೇ ಬೇರೆ ರೀತಿಯದ್ದು.  ಲಗೋರಿಯಾಟದಲ್ಲಿ ಬೀಳುತ್ತಿದ್ದ ಚೆಂಡಿನ ಪೆಟ್ಟು, ಕಣ್ಣಾಮುಚ್ಚಾಲೆಯಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದ ಗಲ್ಲಿಯ ಮೂಲೆಮೂಲೆಗಳು, ಕಬ್ಬಡ್ಡಿ – ಖೋಖೋ, ಮುಟ್ಟಾಟಗಳಲ್ಲಿ  ಬಿದ್ದ ಗಾಯಕ್ಕೆ ಯಾವುದೋ ಕಾಡುಸೊಪ್ಪನ್ನು ಅರೆದು ಕಟ್ಟುತ್ತಿದ್ದ ಬ್ಯಾಂಡೇಜ್  ಇಂದು ನೆನಪಾದಾಗ ಅನ್ನಿಸುವುದಿದೆ ಬಹುಶಃ ಸ್ವರಕ್ಷಣಾ ಪದ್ಧತಿ ಅದಾಗಿದ್ದಿರಬಹುದೇನೋ ! ಚಕ್ರವೇ ಇರದ ಬಸ್ಸಿನ ಚಾಲಕ, ನಿರ್ವಾಹಕನಲ್ಲೂ ಬದುಕಿನ ಬಂಡಿಯನ್ನು ನಾನು ಮುನ್ನಡೆಸಬಲ್ಲೆಯೆಂಬ ಆತ್ಮವಿಶ್ವಾಸ ಇದ್ದಂತಿತ್ತು. ವಿಭಿನ್ನ ವ್ಯಕ್ತಿತ್ವಗಳನ್ನು ಆವಾಹಿಸಿಕೊಂಡು ಆಡುತ್ತಿದ್ದ ಆ ಆಟಗಳು ಆಟವಷ್ಟೇ ಆಗಿರದೆ ಪ್ರತಿನಿತ್ಯದ ಕಲಿಯುವಿಕೆಯ ಒಬ್ಬ ಪ್ರತಿನಿಧಿಯಾಗಿ ನಿಲ್ಲುತ್ತಿದ್ದ.  ಇಲ್ಲಿ ಕೌಟುಂಬಿಕ ಸಂಬಂಧದ ಜೊತೆಗೆ ಸಮಾಜದೊಳಗೆ ನಾವು ಹೇಗೆ ಗುರುತಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿ ನಾವೇನು? ಎಂಬ  ನೈತಿಕ ಪಾಠವೂ ಸಿಗುತ್ತಿತ್ತು. ಆಟದಿಂದ ದೂರ ಉಳಿದುಬಿಟ್ಟರೆ ‘ಬೆಕ್ಕಿನ ಬಿಡಾರ ಬೇರೆ” ಎಂದೂ ಆಟದಲ್ಲಿ ಮೂಗೇಟಾದರೆ ಅಥವಾ ಸೋತೆನೆಂದು ಅತ್ತರೆ ‘ಅಳುಮುಂಜಿ’ಯೆಂದು ಕರೆಯುತ್ತಾರೆಂಬ ಅಂಜಿಕೆಯ ಒಳಗೆ ಹೊಸ ನಾಯಕ ಹುಟ್ಟುತ್ತಿದ್ದುದು ನಮ್ಮ ಅರಿವಿಗೆ ಬಾರದ್ದು. ಅಂದು ಆಟವಾಡಲು ಸಮಯ ಬೇಕಾದಷ್ಟು ಇತ್ತೇ ಎಂಬುದನ್ನು ಪ್ರಶ್ನಿಸಿದರೆ ಸಿಗುವ ಉತ್ತರ ‘ಅಪ್ಪನೊಡನೆ ಗೊಬ್ಬರ ಹೊರಲು ಹೆಗಲು ಕೊಟ್ಟದ್ದು, ಅಮ್ಮ ಕಟ್ಟುತ್ತಿದ್ದ ಬೀಡಿಗೆ ಸುರುಟುತ್ತಿದ್ದ ನೂಲು ಅಥವಾ ಶಾಲೆಯ ಪುಸ್ತಕಗಳಿಗಾಗಿ ಮಾಡುತ್ತಿದ್ದ ಅಂದಿನ ಕಾಲದ ಪಾರ್ಟ್ಟೈಮ್ ಕೆಲಸಗಳು’. ಆದುದರಿಂದ ಅಂದು ಆಡುತ್ತಿದ್ದ ಯಾವುದೇ ಆಟಗಳಾದರೂ ಅದು ಸಮಯ ಕಳೆಯಲು ಆಡುವಂತಹದ್ದಾಗಿರಲಿಲ್ಲ; ಬದಲಾಗಿ  ದಣಿದ ದೇಹಗಳಿಗೆ ಚೈತನ್ಯ ತುಂಬುವಂತಹದ್ದಾಗಿತ್ತು. ಆ ಕಾರಣಕ್ಕಾಗಿಯೇ ಅಂದಿನ ಬಹುತೇಕ ಆಟಗಳು ಒಬ್ಬನೇ ಆಡುವ ಆಟವಾಗಿರದೆ ಅಲ್ಲೊಂದು ಸಂಘ ಅನಿವಾರ್ಯವಾಗಿತ್ತು. ಲಗೋರಿಯ ಪಲ್ಲೆಯನ್ನು ನುಣುಪಾಗಿಸುವವನು ಒಬ್ಬನಾದರೆ, ಸಮಗಾತ್ರದ ಕಲ್ಲುಗಳನ್ನು ಆಯ್ಕೆ ಮಾಡುವವನೊಬ್ಬ, ಗೆರೆಯೆಳೆದು ಕೋಟೆ ಕಟ್ಟುವವನೊಬ್ಬ, ಉರುಳಿಸುವವನು ಇನ್ನೊಬ್ಬ!  ಬಿದ್ದೆದ್ದರೂ, ಅತ್ತು ನಕ್ಕರೂ, ಗುದ್ದಾಡಿ ಬಡಿದಾಡಿಕೊಂಡರೂ ನಡೆದುದು ದೊಡ್ಡವರ ತನಕ ಹೋಗಲೇಬಾರದೆಂಬ ಅಲಿಖಿತ ಒಪ್ಪಂದದ ಸಣ್ಣವರ ಆಟದಲ್ಲಿ ನಾವು ನೀವೆಲ್ಲರೂ ‘ಮಕ್ಕಳ ಸಮಾಜ’ದ ಅಧಿನಾಯಕರಾಗಿದ್ದವರು.

ಡಿಜಿಟಲ್ ಬಾಲ್ಯ

                ‘ಆಡಿ ಬಾ ನನ ಕಂದ ಅಂಗಾಲ ತೊಳೆದೇನ’ ಎಂಬಲ್ಲಿAದ ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಎಂಬ ಕಾಲಘಟ್ಟಕ್ಕೆ ಬಂದು ನಿಂತಾಗ ಮನೆಯಿಂದ ಮಗು ಹೊರಗೆ ಕಾಲಿಟ್ಟರೆ ಕಾಲಿಗೆಲ್ಲಿ ಮಣ್ಣು ಮೆತ್ತಿಸಿಕೊಳ್ಳುವುದೋ ! ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿ ಬಿದ್ದರೆ ಮಗು ನೋವೆಲ್ಲಿ ತಡೆದುಕೊಂಡೀತು ಎಂಬ ಭಯ, ಜೊತೆಯಲ್ಲಿ ನಾವಿಲ್ಲದಿದ್ದರೆ ಮಗು ಹೇಗೆ ಸಂಭಾಳಿಸಿಕೊಂಡೀತು? ಎಂಬ ಅತಿಯಾದ ಜಾಗರೂಕತೆ ಕರೆದೊಯ್ದಿದ್ದು ಡಿಜಿಟಲ್ ಬಾಲ್ಯದತ್ತ. ಯಂತ್ರಯುಗಕ್ಕೆ ವಿಭಕ್ತ ಕುಟುಂಬ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿದಾಗ ಅಜ್ಜನ ಕೋಲೆಲ್ಲಿ? ಅಜ್ಜಿಯ ಕತೆಯೆಲ್ಲಿ? ಅತ್ತಾಗೊಂದು ಕಾರ್ಟೂನ್, ನಕ್ಕಾಗೊಂದು ಚಾಕ್ಲೇಟು ಎಂಬ ದಿನಗಳಲ್ಲಿ ಮರಕೋತಿಯಾಟ, ಪೆಪ್ರ‍್ಮೆಂಟು ಸವಿ ಸವಕಲು ನಾಣ್ಯವಾಗಿದ್ದೂ ಹೌದು. ಅಪ್ಪ ಅಮ್ಮ ಒಬ್ಬ ಮಗು ಹೀಗಿರುವ ಕಾಲದಲ್ಲಿ ಒತ್ತಡಗಳ ನಡುವೆ ಚೌಕಾಬಾರ, ಚೆನ್ನೆಯ ಮಣೆಗಳಿಗೆ ಜಾಗವಿಲ್ಲದಾದಾಗ ಆ ಸ್ಥಳವನ್ನು ಆಕ್ರಮಿಸಿಕೊಂಡಿದ್ದೇ ವೀಡಿಯೋ ಗೇಮ್ಸ್ಗಳು. ಇದು ಎಲ್ಲಿಯ ತನಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತೆಂದರೆ ಅಂತರ್ಜಾಲವೆಂಬ ಹೊಸಲೋಕ ತೆರೆದುಕೊಳ್ಳುವವರೆಗೆ, ನಂತರದ ಮಿಂಚಿನ ಬದಲಾವಣೆಗಳು ನಮ್ಮನ್ನು ಎಷ್ಟು ದೂರ ತಂದು ನಿಲ್ಲಿಸಿಬಿಟ್ಟಿತೆಂದರೆ ಮನೆಯವರಿಗೆ ಅಪರಿಚಿತರಾಗಿ ಲೋಕಕ್ಕೆ ಪರಿಚಿತರಾಗುವಷ್ಟು. ಇಷ್ಟು ರೂಪಾಂತರಗೊಂಡಾಗ ಆ ಆಟಗಳು ಉಳಿದೀತೇ? ದಣಿವಾರಿಸಿಕೊಳ್ಳಲು ಆಡುತ್ತಿದ್ದ ಆಟಗಳು ಮರೆಯಾಗಿ ಹೊತ್ತು ಕಳೆಯಲು ಬಹಳಷ್ಟು ಆಟಗಳು ಬಂದವು. ಸಮಯವಿಲ್ಲವೆಂದು ಹಲುಬುವ ಜೊತೆಗೆ ಆಟಕ್ಕೆಂದೇ ಸಮಯ ಮೀಸಲಿಡುವಂತಾಯಿತೆಂದರೆ ಅಭ್ಯಾಸ ಚಟವಾಗುವ ಎಲ್ಲಾ ಸೂಚನೆಗಳೂ ಸಿಕ್ಕಿಬಿಟ್ಟಿತ್ತು. ಆಟಗಳು ಗೇಮ್ಸ್ಗಳಾಯಿತು ಹಾಗೂ ಅದರದ್ದೇ ಜಗತ್ತಿನಲ್ಲಿ ಒಂದಿಷ್ಟು ಜಿದ್ದು ಮತ್ತು ಕ್ರೌರ್ಯಗಳು ಬುಸುಗುಡಲಾರಂಭಿಸಿ ಅವುಗಳಿಗೆ ಒಗ್ಗಿಹೋಗಿದ್ದೇವೆಂಬುದು ಸ್ಪಷ್ಟವಾಗಿದ್ದೇ ಕೆಲವೊಂದು ಗೇಮ್ಸ್ಗಳು ನಿಷೇಧಿಸಲ್ಪಟ್ಟಾಗ ಜಗತ್ತೇ ಮುಳುಗಿಹೋಯಿತೆನ್ನುವಷ್ಟು ಅತ್ತವರು ಸಾಕ್ಷಿಯಾದಾಗ, ಯಾಕೆ ಹೀಗೆ? ಅಂದಿನ ನಮ್ಮ ಬಾಲ್ಯದ ಆಟಗಳು ವಯಸ್ಸಿನ ಒಂದು ಹಂತಕ್ಕೆ ತಲುಪಿದಾಗ ತನ್ನಷ್ಟಕ್ಕೇ ನಿಂತು ಹೊಸತಕ್ಕೆ ಒಗ್ಗಿಕೊಳ್ಳುತ್ತಿತ್ತು ಮತ್ತು ಅವು ಬೇಕೇ ಬೇಕೆಂದು ಅನ್ನಿಸಿಯೇ ಇರಲಿಲ್ಲ. ಆದರೆ ಡಿಜಿಟಲ್ ಗೇಮ್ಸ್ಗಳು ಹಾಗಿವೆಯೇ! ‘ಹಳ್ಳಿಗೂ – ದಿಲ್ಲಿಗೂ ಎಲ್ಲಿಯ ದೂರ’ ಎನ್ನುವ ಜಮಾನದಲ್ಲಿ ಈ ಗೇಮ್‌ಗಳು ವಯಸ್ಸಿನ ಅಂತರವಿಲ್ಲದೆಯೇ ಪ್ರಿಯವಾಗುತ್ತಾ ಹೋಗುತ್ತದೆ ಬಿಟ್ಟಿರಲಾರದಷ್ಟು, ಅಲ್ಲಿ ತೆರೆದುಕೊಳ್ಳುವ ಲೋಕ ‘ಮಕ್ಕಳ ಸಮಾಜ’ ಎಂಬ ಕಾರಕವಾಗಿ ಅಲ್ಲ ‘ಚಟ’ ಎಂಬ ಮಾರಕವಾಗಿ !

ಮತ್ತೆ ಬರುತ್ತಿದೆ ಆಟಗಳು

                       ಕಾಲ ಬಹಳಷ್ಟು ಪಾಠಗಳನ್ನು ಇತ್ತೀಚಿನಿಂದ ಕಲಿಸಲಾರಂಭಿಸಿದೆ. ನಮ್ಮ ಮನೆಯೊಳಗೆ ನಾವು ಬಂಧಿಯಾಗಿದ್ದಾಗ ಹಳೆಯದೆಲ್ಲವೂ ನೆನಪಾಗಲಾರಂಭಿಸಿದೆ. ಏನು ಪಡೆದುಕೊಂಡೆವು? ಏನನ್ನು ಕಳೆದುಕೊಂಡೆವು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದೇ ಮೊದಲ ಉತ್ತರವಾಗಿ ಸಿಕ್ಕಿದ್ದು ಅದೇ ಆಟಗಳು. ಒಂದು ಕಾಲಕ್ಕೆ ಮಕ್ಕಳನ್ನು ಓಲೈಸಲು ಮೊಬೈಲ್ ಕೊಟ್ಟು ಕುಳ್ಳಿರಿಸುತ್ತಿದ್ದೆವು, ನಂತರ ಮಕ್ಕಳು ಅದಕ್ಕೆ ಸಮ್ಮೋಹಿತರಾಗುತ್ತಾರೆಯೆಂದು ತಿಳಿದೊಡನೆ ಮೊಬೈಲಿಗೂ ಟೈಮ್ ಟೇಬಲ್ ಮಾಡಿಕೊಟ್ಟೆವು. ಆದರೆ ಕಾಲಚಕ್ರ ! ಇವೆಲ್ಲವನ್ನೂ ಗಮನಿಸಿಕೊಂಡು ಮುನ್ನಡೆಯುತ್ತಿದೆ. ಮೊಬೈಲ್ ಹಿಡಿದರೆ ಮಕ್ಕಳು ಕೆಡುತ್ತಾರೆಂಬ ಆತಂಕದಲ್ಲಿದ್ದವರಿಗೆ ಈ ಕೋವಿಡ್ ಮಹಾಮಾರಿ ಕೊಟ್ಟ ಬಹುದೊಡ್ಡ ಶಿಕ್ಷೆ ‘ಆನ್ಲೈನ್ ಕ್ಲಾಸ್‌ಗಳು’. ಅಪ್ಪ ಅಮ್ಮನ ಮೊಬೈಲಿಗಾಗಿ ಹಠ ಮಾಡುತ್ತಿದ್ದ ಮಕ್ಕಳು ಇಂದು ಅವುಗಳೊಡನೆ ಕಲಿಯಬೇಕಾಗಿದೆ. ‘ಸಿಗದಿರುವುದಕ್ಕೆ ಆಸೆ ಹೆಚ್ಚು ಮತ್ತು ಬಳಿಯಿರುವುದಕ್ಕೆ ಬೆಲೆ ಕಡಿಮೆ’ ಎಂಬ ಮಾತಿನಂತೆ ಮೊಬೈಲ್ ಯಾವಾಗ ಮಕ್ಕಳ ಪಾಠದ ಒಂದು ಸಾಧನವಾಗಿ ಬಳಕೆಯಾಗತೊಡಗಿತೋ ಅಂದಿನಿಂದ ಮಕ್ಕಳು ಮೊಬೈಲಿನಿಂದಾಚೆಯ ಹೊಸ ಬೆಳಕನ್ನು ಹಂಬಲಿಸತೊಡಗಿದ್ದಾರೆ. ದಿನವಿಡೀ ಹೈರಾಣಾಗಿಸುವ ಆನ್ಲೈನ್ ಕ್ಲಾಸುಗಳಿಂದ ದಣಿದ ಜೀವಗಳಿಗೆ ಇಂದು ಮತ್ತೆ ಆಹ್ಲಾದ ಬೇಕಾಗಿದೆ; ಆ ಕಾರಣಕ್ಕಾಗಿ ತಾನು ನೋಡಿದ ವಿಷಯಗಳ ಬಗ್ಗೆ, ಅನುಭವಿಸಿದ ಅನುಭವಗಳ ಮೇಲೆ ಆಟಗಳ ಸ್ಕ್ರಿಪ್ಟ್ ಬರೆಯಲಾರಂಭಿಸಿದ್ದಾರೆಯೆಂದರೆ ನಾವೂ ಮಕ್ಕಳ ಈ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲುವುದು ಕರ್ತವ್ಯವಾಗುತ್ತದೆ. ಮತ್ತೆ ಮರೆಯಾಗುತ್ತಿರುವ ಆ ಆಟಗಳ ದಿನಗಳು ಮರಳುತ್ತಿದೆಯೇನೋ! ಅನ್ನಿಸಿದ್ದು ಈ ಮಕ್ಕಳನ್ನು ನೋಡಿದಾಗ. ಮಕ್ಕಳಿಗೆ ಈಗ ಮೊಬೈಲ್ ಆಟದ ವಸ್ತುವಾಗಿರದೆಯೇ ಬ್ಯಾಗ್ ತುಂಬಿಸಿಕೊಳ್ಳುತ್ತಿದ್ದ ಪುಸ್ತಕಗಳಾಗಿವೆ. ಎಲ್ಲೋ ನೋಡಿದ ಆ ಥರ್ಮಲ್ ಸ್ಕ್ಕಾನ್ ಅದೆಷ್ಟು ಸೂಕ್ಷ್ಮ ವಾಗಿ ಗಮನಿಸಿ ಟೆಂಪರೇಚರ್ ಹೆಚ್ಚಾಗಿದ್ದರೆ ಕ್ವಾರೆಂಟೈನ್ ಅನುಸರಿಸಬೇಕೆಂಬುದನ್ನು ಕೋಳಿಗೂಡಿನ ಮೂಲಕ ಹೇಳಿದಾಗ ಈ ಬುದ್ಧಿ ದೊಡ್ಡವರಿಗೆ ಸರಿಯಾಗಿ ಬಂದಿದ್ದರೆ ರೋಗವೊಂದು ಹೀಗೆ ಆಕ್ರಮಿಸಿಕೊಳ್ಳುತ್ತಿರಲಿಲ್ಲ ಅಂದುಕೊಳ್ಳುತ್ತಿರುವಾಗಲೇ “ಆಂಟೀ ಕೊರೊನಾ ಯಾವಾಗ ಹೋಗುತ್ತೆ? ಮತ್ತೆ ಎಚ್ಚರಿಸಿದಳು ಪೋರಿ. “ಯಾಕೆ?” ಕೇಳಿದಾಗ “ಶಾಲೆಗೆ ಕೊರೊನಾ ಬಂದಿದೆ, ಹೊಸ ಚೀಲ, ಛತ್ರಿ ಯಾವುದೂ ಇಲ್ಲ ಪುಟ್ಟತಮ್ಮ ಹೇಳಿದ. “ನಿಮ್ಮ ಶಾಲೆಗೆ ಮಾತ್ರ ಅಲ್ಲಪ್ಪಾ, ಲೋಕಕ್ಕೇ ಬಂದಿದೆ” ನುಡಿದೆ. “ಅದು ಗೊತ್ತಿಲ್ಲ, ನಮ್ಮ ಶಾಲೆಯಿಂದ ಹೋದ್ರೆ ಸಾಕು, ಪೋಲಿಸ್ ಮಾಮನಲ್ಲಿ ಹೇಳ್ಬೇಕು ಕೊರೊನಾ ಅರೆಸ್ಟ್ ಮಾಡ್ಲಿಕ್ಕೆ” ತುಂಟಿ ಮಾತು ಮುಗಿಸುವಷ್ಟರಲ್ಲಿ ಮತ್ತೆ ಗೇಟಿನ ಸದ್ದು ಕೇಳಿ “ಬಾರೋ ಚೆಕ್ ಮಾಡ್ಬೇಕು” ತಮ್ಮನನ್ನು ಎಳ್ಕೊಂಡು ಹೋದವಳನ್ನು ಕಂಡಾಗ ‘ಏನು ಮುದವಿದೆ ಈ ಬಾಲ್ಯಕ್ಕೆ! ಎಲ್ಲವನ್ನೂ ಒಪ್ಪಿಕೊಳ್ಳುವಷ್ಟು ಮತ್ತು ಪ್ರಶ್ನಿಸುವಷ್ಟು” ಅಂದುಕೊಂಡೆ ನನ್ನೊಳಗೆ.

**********************************************************

One thought on “ಪಾಠವಷ್ಟೇ ಅಲ್ಲ, ಆಟವೂ ಬದಲಾಗಿದೆ

  1. ಒಳ್ಳೆಯ ಲೇಖನ, ಮತ್ತು ಒಂದೇ ತಲೆಮಾರಿನ ಅಂತರದಲ್ಲಿ ಆದ ʼಬಾಲ್ಯʼ ದ ವಿಪರೀತ ಬದಲಾವಣೆ! ಈ ವೇಗದ ಆಧುನಿಕ ಯುಗದಲ್ಲಿ ಮುಂದೆ ಮಕ್ಕಳಾಟಕ್ಕೂ ಮಾರ್ಕೆಟಿಂಗ್‌ ಸ್ಟ್ರಾಟಜಿ ಬಂದರೂ ಸೋಜಿಗವಲ್ಲವೇನೋ ಅನಿಸ್ತದೆ.

Leave a Reply

Back To Top