ಪ್ರವಾಸ ಕಥನ

ಜಾರಕಬಂಡೆಕಾವಲ್ ವೃಕ್ಷ ಉದ್ಯಾನ

ಚಂದ್ರಮತಿ ಪುರುಷೋತ್ತಮ್ ಭಟ್


ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ.



ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ  ನಿಸರ್ಗಾರಾಧಕರಿಗೆ ಆಗಾಗ ತವರೂರು ನೆನಪಾಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಗರ ನರಕ ಸಮಾನವೆಂದೆನಿಸಿ ಬಿಡುತ್ತದೆ.  ಉಸಿರು ಕಟ್ಟುವ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಎಲ್ಲಾದರೂ ನಿರ್ಜನ ಹಾಗೂ ಪ್ರಕೃತಿಯಿರುವಲ್ಲಿ ಕಾಲಕಳೆಯ ಬೇಕೆನಿಸುವುದರಲ್ಲಿ ತಪ್ಪೇನಿದೆ.
ನಗರಗಳು ಕದಂಬ ಬಾಹುವಿನಂತೆ ಹಳ್ಳಿ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು  ಬೆಳೆಯುತ್ತಿರುವಾಗ ಪಶ್ಚಿಮಘಟ್ಟಗಳಿಂದ ಬಂದ ನಮಗೆ ಮರಗಿಡಗಳ ಹಾಗೂ ಹಕ್ಕಿಗಳ ಕಲರವ ನೀರಿನ ಜುಳುಜುಳು ನಾದ ನೆನಪಾಗದೇ ಉಳಿಯಲು ಸಾಧ್ಯವೇ ?



ಅಕ್ಟೋಬರ್ ಇಪ್ಪತ್ತಾರನೇ ದಿನದಂದು ನಮ್ಮ ಮನೆಯಿಂದ ಸುಮಾರು ಇಪ್ಪತ್ತು ಮೈಲು ದೂರದಲ್ಲಿರುವ  ವೃಕ್ಷ ಉದ್ಯಾನಕ್ಕೆ ಹೊರಟೆವು.  ಸ್ವಲ್ಪ ನಗರದ ವಾಹನ ದಟ್ಟಣೆ ಕಳೆದ ತಕ್ಷಣ ಮರಗಳ ಸಾಲುಗಳು ನಮ್ಮನ್ನು ಕೈಬೀಸಿ ಕರೆದವು. ನಗರದಿಂದ ಅನತಿ ದೂರದಲ್ಲಿ ಇದ್ದ ಈ ವೃಕ್ಷಗಳು ಸ್ವೇಚ್ಛೆಯಾಗಿ ನೀಳವಾಗಿ ಎತ್ತರವಾಗಿ ವಿಸ್ತಾರವಾದ ಈ ಪ್ರದೇಶದಲ್ಲಿ ಕಂಗೊಳಿಸುತ್ತಿದ್ದವು. ವಾವ್ ಎನ್ನುವ ವಾತಾವರಣ ಹಾಯ್ ಎನ್ನಿಸಿದ್ದು
ಇದೇ ರಾಮಗೊಂಡನ ಹಳ್ಳಿಯಲ್ಲಿರುವಂತಹ  ‘ ಜಾರಕಬಂಡೆ ಕಾವಲ್ ವೃಕ್ಷ ಉದ್ಯಾನ ವನ ‘. ಇದು ನಿಸರ್ಗ ಪ್ರಿಯರಿಗೆ ಹೇಳಿಸಿದ ತಾಣ. ಸುಮಾರು ಸಾವಿರ ಹೆಕ್ಟೇರ್ ಜಾಗವನ್ನು ಒಳಗೊಂಡ ಈ ಉದ್ಯಾನವನದಲ್ಲಿ ಸುಮಾರು 5000 ಸಸ್ಯ ಪ್ರಬೇಧ‌ಗಳಿವೆ.
ಇಕ್ಕೆಡೆಗಳಲ್ಲಿ ಮರ ಹಾಗೂ ಅಲ್ಲಲ್ಲಿ ದಣಿವು ತಣಿಸಿಕೊಳ್ಳಲು ಕಲ್ಲು ಆಸನಗಳೂ ಇವೆ. ಈ ಉದ್ಯಾನವನವನ್ನು ತುಂಬಾ ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಇದರ ಒಳಗಡೆ ಹಳ್ಳಿಯಲ್ಲಿ ಇರುವಂತಹ ಮಣ್ಣಿನ ರಸ್ತೆ , ಕಾಲುದಾರಿ ,ವಿವಿಧ ರೀತಿಯ ಗಿಡಗಳು ಪೊದೆಗಳು ಹೀಗೆ ನಡೆದಾಡುವ ಅಭ್ಯಾಸ ಇರುವವರಿಗೆ ಮನೋಲ್ಲಾಸವನ್ನು ನೀಡುತ್ತದೆ. ಅಲ್ಲಲ್ಲಿ ಕಣ್ತಣಿಸುವ ಮಲೆನಾಡಿನ ಸಸ್ಯಗಳನ್ನು ನಾವು ಕಾಣಬಹುದು. ನಾವು ಬಾಲ್ಯದಲ್ಲಿ ತಿನ್ನುತ್ತಿದ್ದ ಕೆಲವೊಂದು ಗಿಡಗಳೂ ಅಲ್ಲಿ ಫಲಭರಿತವಾಗಿ ಕಂಡು ಬಂದವು. ಪಕ್ಷಿ ಪ್ರಿಯರಿಗೂ ಅದ್ಭುತ ಸ್ಥಳ.


ಅಲ್ಲಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೋದರೆ ಅಲ್ಲಿ ಚಿಟ್ಟೆಗಳ ಪ್ರಪಂಚ ಇರುವುದರಿಂದ  ವರ್ಣರಂಜಿತ ವಿವಿಧ ರೀತಿಯ ಚಿಟ್ಟೆಗಳನ್ನೂ ಕಾಣಬಹುದು.
ಬೈಸಿಕಲ್ ಸವಾರರಿಗೆ ಮತ್ತು ಕಾಲುನಡಿಗೆ ಮಾಡುವವರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ. ಸುಮಾರು ಏಳೂವರೆ ಮೈಲಿಯಷ್ಟು ನಡಿಗೆ.  ತುಂಬಾ ವಿಸ್ತಾರವಾದ ಜಾಗವಾಗಿರೋದ್ದರಿಂದ ಒಬ್ಬರೇ ಹೋಗುವುದಕ್ಕಿಂತ  ಜೊತೆಯಲ್ಲಿ ಹೋಗುವುದು ಸುರಕ್ಷಿತ .ಮುಖ್ಯದಾರಿಯ ನಂತರ ಕಾಲು ದಾರಿಗಳಲ್ಲಿ ನಡೆಯುತ್ತಾ ನಡೆಯುತ್ತಾ ಮೈಮರೆತರೆ ಪುನ: ಹೊರಗಡೆ ಬರುವುದು ಕಷ್ಟವಾಗ ಬಹುದು. ಮಖ್ಯದ್ವಾರದಲ್ಲಿ ಇರುವ ಸಿಬ್ಬಂಧಿಗಳಲ್ಲಿ ವಿಚಾರಿಸಿಕೊಂಡು ನಿಮ್ಮ ಪ್ರಯಾಣವನ್ನು ಶುರು ಮಾಡುವುದು ಒಳ್ಳೆಯದು. ಬೆಳಿಗ್ಗೆ ಆರು ಗಂಟೆಯಿಂದ ಹತ್ತರವರೆಗೆ ಹಾಗೂ ಸಂಜೆ ಮೂರು ಗಂಟೆಯಿಂದ ಆರರವರೆಗೆ ತೆರೆದಿರುವುದರಿಂದ  ಸೂರ್ಯೋದಯ  ಮತ್ತು ಸಂಜೆಯ ಸೂರ್ಯಾಸ್ತದ ಸಮಯವನ್ನು ಆನಂದಿಸ ಬಹುದು. ನಾವು ಮುಸ್ಸಂಜೆಯಲ್ಲಿ ಹಕ್ಕಿಗಳ ಕಲರವದ ಜೊತೆಜೊತೆಗೆ ಸೂರ್ಯಾಸ್ತದ ಸಮಯವನ್ನು ಆನಂದಿಸಿದೆವು.  ಮೂರು ಘಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಮುಖ ಕವಚವಿಲ್ಲದೆ ಶುದ್ಧ ಪ್ರಾಣವಾಯುವನ್ನು ಸೇವಿಸುತ್ತಾ ನಡೆಯುತ್ತಾ ಮಲೆನಾಡು ಸೊಬಗನ್ನು ಸವಿದೆವು. ಸೂರ್ಯಾಸ್ತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಮನೆಯತ್ತ ಸಾಗಿದೆವು.


ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಹಸಿರು ಸೊಬಗನ್ನು ಬಹುಶಃ: ಅಲ್ಲಿ ಕಾಣಬಹುದು.ದಯವಿಟ್ಟು ಅಲ್ಲಿಗೆ ನಿಸರ್ಗ ಪ್ರೇಮಿಗಳು ಮಾತ್ರ ಹೋಗಬೇಕು ಏಕೆಂದರೆ ಈ ಮಹಾನಗರ ವ್ಯಾಪ್ತಿಯಲ್ಲಿ ಇದು ಅಳಿದುಳಿದು ಕೊಂಡಂತಹ ಏಕೈಕ ತಾಣ ಹಾಗೂ ನೈಸರ್ಗಿಕವಾಗಿ ಕಲ್ಮಷರಹಿತವಾಗಿಟ್ಟಂತಹ ನೆಮ್ಮದಿಯ ತಾಣ ಎಂದರೂ ಅತಿಶಯೋಕ್ತಿಯಾಗಲಾರದು. ಅಂತಹ ಅಮೂಲ್ಯವಾದ ಜಾಗಗಳನ್ನು ಹಾಗೇ ಉಳಿಸಿಕೊಳ್ಳೋಣ. ಗೌರವಿಸೋಣ.
*******************************************




One thought on “ಪ್ರವಾಸ ಕಥನ

Leave a Reply

Back To Top