ಅಂಕಣ ಬರಹ

ಸುಜಾತಾ ಎನ್. ರವೀಶ್

ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ.


ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದ
ಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.


ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ


ಮುಖಾಮುಖಿಯಲ್ಲಿ ಈ ಸಲ

ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ

ನಾಗರಾಜ ಹರಪನಹಳ್ಳಿ.

ನಾನು ದೇವರನ್ನು ಖಂಡಿತಾ ನಂಬುತ್ತೇನೆ “

ಕವಿತೆಗಳನ್ನು ಯಾಕೆ ಬರೆಯುತ್ತೀರಿ

ನನ್ನ ಮನಸ್ಸಿನ ನೋವನ್ನಾಗಲಿ,  ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ,  ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ .

  ಕವಿತೆ ಹುಟ್ಟುವ ಕ್ಷಣ ಯಾವುದು ?

    ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ .

ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? .

ಹೆಚ್ಚಾಗಿ ನನ್ನ  ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ      ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ .

ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ.

ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ?

ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ .

 ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ.  ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ .  ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ .

 ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು  ಗಮ್ಯವನ್ನೇ ಮುಟ್ಟುತ್ತವೆ. 

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

        ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ.  ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ.

ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ  ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ .   

ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

 ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ.

ಇನ್ನು ಪರಿಷತ್ತು ಹಾಗೂ  ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ  ಹಿಡಿಯಬೇಕಾದ ಹಾದಿಯನ್ನು ಬಿಟ್ಟು   ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ .

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ  ಮತ್ತೊಂದು ಇತಿಹಾಸ     ಸೃಷ್ಟಿಸುವ ಕೆಲಸ ಆಗಬೇಕಿದೆ.  ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ.  ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು .

ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?

    ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ.  ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ  ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ.

ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ?

ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು.

ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ  ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ.

ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ .

ಈಚೆಗೆ ಓದಿದ ಕೃತಿಗಳಾವವು?

ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು  ” ಅಪ್ಪನ ಹೆಗಲು “.

ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ

ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ.

ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು

 ನಿಮಗೆ ಇಷ್ಟವಾದ ಕೆಲಸ ಯಾವುದು?

ಓದು ಬರವಣಿಗೆ ಬಿಟ್ಟರೆ,  ಅಡುಗೆ ಮಾಡುವುದು

 ನಿಮಗೆ ಇಷ್ಟವಾದ ಸ್ಥಳ ಯಾವುದು ?

ಕುಪ್ಪಳ್ಳಿಯ ಕವಿಶೈಲ.  ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ,  ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ .

 ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು?

ಹಿಂದಿಯ ದೋ ಆಂಖೆ ಬಾರಹ್  ಹಾಥ್ ಹಾಗೂ ಕನ್ನಡದ ಶರಪಂಜರ

ನೀವು ಮರೆಯಲಾರದ‌ ಘಟನೆ‌ ಯಾವುದು?

     ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ  ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು.  ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು

ಹೇಳಲೇ ಬೇಕಾದ ಕೆಲ ಸಂಗತಿಗಳು;

ಕಾಲೇಜು ಓದುವ ಕಾಲದಲ್ಲಿ ಬರೆಯುವ  ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ. 

ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ  “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ .

ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ .

ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ  ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ,  ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ.

************************************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

31 thoughts on “

    1. ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ತುಳಸಿ

  1. ಅಭಿನಂದನೆಗಳು ಗೆಳತಿ ಸುಜಾತಾ..ಸಂದರ್ಶನ ತುಂಬಾ ಚೆನ್ನಾಗಿದೆ.ಎಲ್ಲವನ್ನು ಓದಿದೆ ಖುಷಿಯಾಯಿತು.. ಸಂದರ್ಶಕರಿಗು ನಿಮಗೂ ಮತ್ತೊಮ್ಮೆ ಅಭಿನಂದನೆಗಳು..
    ಲಲಿತಾ ಬೆಳವಾಡಿ

    1. ತುಂಬಾ ಧನ್ಯವಾದಗಳು ಲಲಿತಾ ನಿಮ್ಮಂಥ ಸ್ನೇಹಿತರ ಪ್ರೋತ್ಸಾಹವೇ ನನ್ನ ಬಲ

  2. ಅಭಿನಂದನೆಗಳು ಮೇಡಮ್ ನಿಮ್ಮ ಸಾಹಿತ್ಯ ದ ಸೌಗಂಧ ಜಗದಗಲ ಹರಡಲಿ

    1. ನಿಮ್ಮ ಶುಭ ಹಾರೈಕೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

  3. ಸೂಪರ್ ಸಂದರ್ಶನ ತುಂಬಾ ಚೆನ್ನಾಗಿದೆ ಸುಜಾ ಮಾಮ್ ಅಭಿನಂದನೆಗಳು ತಮಗೆ

  4. ನಿಮ್ಮ ಅಭಿಮಾನಿ ಸಾವಿತ್ರಿ ಮಾಡುವ ಹೃದಯ ಪೂರ್ವಕ ಅಭಿನಂದನೆಗಳು ಸಂದರ್ಶನ ತುಂಬಾ ಚೆನ್ನಾಗಿದೆ ಶುಭವಾಗಲಿ

    1. ನಿಮ್ಮೆಲ್ಲರ ಸ್ನೇಹ ಅಭಿಮಾನಗಳೇ ನನ್ನ ಬರವಣಿಗೆಯನ್ಹು ಹುರಿದುಂಬಿಸುತ್ತಿರುವುದು ಸಾವಿತ್ರಿ ಸಂದರ್ಶನ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು

  5. ಅಭಿನಂದನೆಗಳು ಸುಜಾತ ಮೇಡಂ…. ನಿಮ್ಮ ಸಾಧನೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸುವ
    ಶಾಯಿನಾಇಮ್ರಾನ್

  6. Sujatha. ninna sandarshana odi thumba thumba khushiyaythu. Ninna bhasheyalli entha proudime prabhiddathe bandide. Ninna bagge hemme anisutthe. Neenu innu ettharakke beli.

    1. ಧನ್ಯವಾದಗಳು ಲೀಲಾ ನಿನ್ನ ಶುಭ ಹಾರೈಕೆಗೆ ವಂದನೆಗಳು

    2. ಸಂದರ್ಶನ ತುಂಬಾ ಚೆನ್ನಾಗಿದೆ .
      ಮೇಡಂ , ನಿಮ್ಮ ಪಯಣದ ಹಾದಿ, ಸಾಹಿತ್ಯದ ಬಗೆಗಿನ ತುಡಿತ , ಈವರೆಗಿನ ಸಾಧನೆ ಎಲ್ಲ ಓದಿ ತುಂಬಾ ಖುಷಿಯಾಯ್ತು. ಹಾಗೇ — ಧರ್ಮ, ರಾಜಕೀಯ, ದೇಶದ ಅಭಿಮಾನದ ಬಗ್ಗೆ, ಬದಲಾದ ಸಾಂಸ್ಕೃತಿಕ ವಾತಾವರಣದ ಬಗೆಗಿನ ನಿಮ್ಮ ಅಭಿಪ್ರಾಯಗಳೂ ಇಷ್ಟ ಆಯ್ತು.. ಅಭಿನಂದನೆಗಳು ಗೆಳತಿ .

      —-ಪ್ರಭಾವತಿ ಹಗಗಡೆ

      1. ಮೆಚ್ಚುಗೆಗೆ ತುಂಬಾ ತುಂಬಾ ಧನ್ಯವಾದಗಳು ಪ್ರಭಾವತಿ ಆತ್ಮೀಯ ವಂದನೆಗಳು

        ಸುಜಾತಾ

  7. ಕನ್ನಡದ ಶ್ರೇಷ್ಟ ಕವಿಯಿತ್ರೀಯ ಸಂದರ್ಶನ ಓದಿ ತುಂಬಾ ಸಂತೊಷವಾಯಿತು

    1. ಶ್ರೇಷ್ಠ ಪದ ದಯವಿಟ್ಟು ಬೇಡ ನಾನು ಆ ಮಟ್ಟಕ್ಕೆ ಬೆಳೆದಿಲ್ಲ ನಿಮ್ಮ ವಿಶ್ವಾಸಕ್ಕೆ ನಾನು ಚಿರರುಣಿ ಧನ್ಯವಾದಗಳು

  8. ಹಾಯ್ ಸುಜಾತ ನಿಮ್ಮ ಸಂದರ್ಶನ ಓದಿದೆ ನಾಗರಾಜ ಹರಪನಹಳ್ಳಿ ಯವರು ನಡೆಸಿದ ಸಂದರ್ಶನ ಓದಿ ಬಹಳ ಸಂತೋಷವಾಯಿತು ನೀವು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ಬಂದ ಹಾದಿ, ನಿಮ್ಮ ಪಯಣ ಬಹಳ ಸೊಗಸಾಗಿದೆ, ಹಾಗೂ ನನಗೆ ಇಷ್ಟವಾಯಿತು. ಅಭಿನಂದನೆಗಳು ಸುಜಾತ.

  9. ತುಂಬ ತುಂಬ ಧನ್ಯವಾದಗಳು ಓದಿ ಪ್ರತಿಕ್ರಯಿಸಿದ್ದಕ್ಕಾಗಿ ವಂದನೆಗಳು

  10. ಸೂಕ್ತ ಪ್ರಶ್ನೆಗಳನ್ನು ಹಾಕಿ ನನ್ನ ಅಂತರಂಗವನ್ನು ತೆರೆದಿಡಲು ಸಹಕರಿಸಿದ ಮತ್ತು ಪರಿಚಯಿಸಿದ ಶ್ರೀ ನಾಗರಾಜ ವರಿಸೆ ನನ್ನ ಹೃದಯಾಂತರಾಳದ ಧನ್ಯವಾದಗಳು.

    ಈ ಸಂದರ್ಶನವನ್ನು ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ಅನಂತ ವಂದನೆಗಳು.

    ಸುಜಾತಾ

  11. ಅಭಿನಂದನೆಗಳು ಅಕ್ಕಾ.. ನಿಮ್ಮ ಸಾಹಿತ್ಯ ಕೃಷಿ ಇನ್ನಷ್ಟು ಮುಂದುವರೆಯಲಿ ಯಾವುದೇ ಅಡೆತಡೆಗಳಿಲ್ಲದೆ.. ನೀವು ಸಾಗಿ ಬಂದ ದಾರಿ ನಮ್ಮಂತವರಿಗೆ ಬೆಳಕಾಗಲಿ..
    ಸುಚಿತ್ರಾ

Leave a Reply

Back To Top