ಬಸ್ ಪಯಣ
ಬಸ್ ಪಯಣ
ಎಂ. ಆರ್. ಅನಸೂಯ
ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ ! ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ !
ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ನಾನು ಪ್ರಯಾಣ ಮಾಡುವಾಗ ನಿದ್ದೆ ಮಾಡುವುದಿಲ್ಲ. ಅದು ಹಳ್ಳಿಗಳನ್ನು ಸುತ್ತಿಕೊಂಡು ಹೋಗುವಂಥ ಖಾಸಗಿ ಬಸ್.ಬಸ್ ನಲ್ಲಿ ಎಲ್ಲಾಆಸನಗಳು ಭರ್ತಿಯಾಗಿದ್ದವು ಎನ್ನುವುದಕ್ಕಿಂತ ಬಸ್ನಲ್ಲಿ ಜನರನ್ನು ತುಂಬಿದ್ದರು ಎಂಬ ಹೇಳಿಕೆಯೇ ಸೂಕ್ತ. ತುಂಬಿದ ಬಸುರಿ ಹೆಣ್ಣಿನಂತೆ ಗಜ ಗಮನೆಯಂತೆ ಬಸ್ ಚಲಿಸತೊಡಗಿತು. ದಾರಿ ಸಾಗುತ್ತ ಹಳ್ಳಿಗಳು ಬಂದಾಗ ಜನರಿಳಿದಂತೆ ಬಸ್ಸಲ್ಲಿದ್ದವರೆಲ್ಲಾ ಸಾವಕಾಶವಾಗಿ ಕುಳಿತರು. ಇದ್ದಕ್ಕಿದ್ದಂತೆಯೇ ” ಅಣ್ಣಾ ಡ್ರೈವರಣ್ಣ ಬಸ್ ನಿಲ್ಲಿಸಣ್ಣ” ಎಂದು ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಳು. ಡ್ರೈವರ್ ನೊಂದಿಗೆ ಮಾತು ಕತೆಯಲ್ಲಿ ಮಗ್ನನಾಗಿದ್ದ ಬಸ್ ಕಂಡಕ್ಟರ್ “ಯಾಕೆ, ಏನು ಏನಾಯ್ತು “ಎಂದು ಗಾಬರಿಯಾಗಿ ಕೇಳಿದ. ಎಲ್ಲರೂ ಆ ಧ್ವನಿ ಬಂದ ಕಡೆಗೆ ತಿರುಗಿದರು. ಆ ಹೆಣ್ಣುಮಗಳೊಬ್ಬಳು ಡ್ರೈವರ್ ಹತ್ತಿರ ಬಂದು,”ಅಣ್ಣ,ಬಸ್ ನಿಲ್ಲಿಸಣ್ಣ ನನ್ನ ಈ ಕಿವಿದು ವಾಲೆ( ಓಲೆ)ಕಳೆದು ಹೋಗೈತೆ. ಹುಡುಕ್ತೀನಣ್ಣ” ಕೈಮುಗಿಯುತ್ತ ಅವಳು ಅಂಗಲಾಚಿ ಬೇಡಿಕೊಂಡಳು. ತಕ್ಷಣವೆ ಬಸ್ ನಿಂತಿತು. ಅವಳು ಹಾಕಿಕೊಂಡಿದ್ದ ಎರಡು ಕಿವಿಯೋಲೆಯಗಳಲ್ಲಿ ಒಂದು ವಾಲೆಯು ಎಲ್ಲೋ ಬಿದ್ದು ಹೋಗಿದ್ದು ಈಗ ಅದು ಅವಳ ಅರಿವಿಗೆ ಬಂದಿತ್ತು.ತಕ್ಷಣ ಗಾಬರಿಯಿಂದ ಕೂಗಿಕೊಂಡಿದ್ದಳು. ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಲೇ ಡ್ರೈವರ್ ಕಡೆ ಬಂದಳು.ಸುಮಾರು ನಲವತ್ತರ ವಯೋಮಾನ. ಆಗ ಕಂಡಕ್ಟರ್ “ಎಲ್ಲಿ ಬಿತ್ತೊ ಏನು ಕತೆನೋ ನೀನು ಮನೆಯಿಂದ ಬರುವಾಗ ಕಿವಿಲೇ ಇತ್ತೇನಮ್ಮ ಎಲ್ಲಿ ಅಂತ ಹುಡುಕ್ತೀಯ ಎಂದಾಗ “ಅಣ್ಣ ನಾನು ಕುಂತಿರ ಸೀಟ್ ಹಿಂದೆ ಮುಂದೆಲ್ಲ ಹುಡುಕ್ತೀನಿ” ಎಂದು ಹೇಳಿದಳು. ಬಸ್ ನಲ್ಲಿದ್ದವರು ಅವಳ ಮನವಿಗೆ ಸ್ಪಂದಿಸಿ ಬೇಗನೆ ಕೆಳಗಿಳಿದು ಸಹಕರಿಸಿದರು “ಬೇಗ ಬೇಗ ನೋಡ್ಬೇಕಮ್ಮ” ಕಂಡಕ್ಟರ್ ಹೇಳಿದಾಗ “ಅಣ್ಣ ನಾನಿವತ್ತು ವಾಲೆ ಕಳ್ಕೊಂಡು ಮನೆಗೆ ಹೋದ್ರೆ ನನ್ನ ಗಂಡ ಹೊಡೆದು ಸಾಯಿಸಿಬಿಡ್ತಾನೆ” ಎಂದು ಹೇಳಿದಾಗ ಎಲ್ಲರು ಅಯ್ಯೋ ಪಾಪ ಎಂದು ಮರುಗುತ್ತ ಕೆಲವರು ಅವಳೊಡನೆ ತಾವು ಸಹಾ ಹುಡುಕಿದರು.ಅದು ಬಸ್ನಲ್ಲೆ ಬಿತ್ತೋ ಅಥವ ಬಸ್ ಹತ್ತುವ ಮೊದಲೇ ಬಿದ್ದಿತ್ತೊಎಂಬ ಬಗ್ಗೆ ಅವಳಿಗೂ ಸಹ ಖಾತ್ರಿಯಿರಲಿಲ್ಲ ಒಂದು ಇಪ್ಪತ್ತು ನಿಮಿಷ ಹುಡುಕಿದ್ರೂ ಸಿಗಲಿಲ್ಲ.ಆಗ ಕಂಡಕ್ಟರ್ “ಅದೆಲ್ಲಿ ಬಿದ್ದೋಯ್ತೋ ಏನೋ ಸಿಗಲ್ಲ. ಬಸ್ ಬಹಳ ಹೊತ್ತು ನಿಲ್ಲಿಸಕ್ಕಾಗಲ್ಲಮ್ಮ. ಎಲ್ಲರು ಬನ್ರಿ. ಕುಳಿತ್ಕಳಿರಿ” ಎಂದಾಗ ಎಲ್ಲರೂಬಸ್ ನಲ್ಲಿ ಬಂದು ಕೂತರು. ನಿಲ್ಲದ ಆ ಹೆಂಗಸಿನ ಅಳುವನ್ನು ಕಂಡು ಎಲ್ಲರ ಮನ ಕರಗಿತ್ತು. ಅವಳ ದು:ಖ ನೋಡಲಾಗದೇ ಹಿರಿಯ ವ್ಯಕ್ತಿಯೊಬ್ಬರು “ಹೋಗ್ಲಿ ಬಿಡಮ್ಮ ಆಗಿದ್ದು ಆಗೋಯ್ತು ಸಮಾಧಾನ ಮಾಡ್ಕಳಮ್ಮ”ಎಂದು ಹೇಳಿದಾಗ ಅವಳು “ನನ್ನ ಗಂಡನ ಬುದ್ಧಿ ನಿನಗೆ ಗೊತ್ತಿಲ್ಲಪ್ಪ. ನನ್ನ ಹೊಡೆದು ಸಾಯಿಸಿಬಿಡ್ತಾನೆ” ಎನ್ನುತ್ತ ಕಣ್ಣೀರು ಹಾಕಿದಳು. ವಾಲೆ ಕಳೆದುಕೊಂಡ ದುಃಖಕ್ಕಿಂತ ಹೆಚ್ಚಾಗಿ ತನಗೆ ಬೀಳಲಿರುವ ಗಂಡನ ಬಡಿತಗಳಿಗೆ ಬೆಚ್ಚಿ ಬಿದ್ದಂತೆ ಕಂಡಳು. ಸುಮ್ಮನೇ ಮೌನವಾಗಿ ತನ್ನ ಸೀಟ್ ನಲ್ಲಿ ಕುಳಿತು ಬಿಟ್ಟಳು.ಏನಾದ್ರು ಆಗಲಿ ಎಲ್ಲದಕ್ಕೂ ತಾನೂ ಸಿದ್ದವಾಗಿದ್ದೇನೆಂಬಂತಿದ್ದ ಆ ಹೆಣ್ಣುಮಗಳು ಅಸಹಾಯಕತೆಯ ಪರಮಾವಧಿಯಂತೆ ಕಂಡಳು.ಆಕೆ ಬಸ್ ಇಳಿದು ಹೋಗುವಾಗ “ಏನು ಆಗಲ್ಲ ಧೈರ್ಯವಾಗಿರಕ್ಕ. ದೇವರ ಮೇಲೆ ಭಾರ ಹಾಕಕ್ಕ’ ಎಂದು ಕಂಡಕ್ಟರ್ ಧೈರ್ಯ ಹೇಳಿದನು.ಅವಳ ಸಿಡುಕ ಗಂಡನಿಗೆ ಕೆಟ್ಟಸಿಟ್ಟು ಬಾರದಂತೆ ಮಾಡಪ್ಪ ದೇವರೇ ಎನ್ನುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದು. ಅವಳ ಮನೆಯಲ್ಲಿ ಮಂದೆ ನಡೆಯಲಿರುವ ಎಲ್ಲಾ ಸನ್ನಿವೇಶಗಳನ್ನು ನನ್ನದೇ ಆದ ರೀತಿಯಲ್ಲಿ ಕಲ್ಪನೆ ಮಾಡಿಕೊಂಡು ಮನೆ ಸೇರಿ ಆ ಗುಂಗಿನಲ್ಲೇ ಎರಡು ದಿನ ಕಳೆದಿದ್ದೆ. ಉದ್ದೇಶಪೂರ್ವಕವಾಗಿ ತಾನು ಮಾಡದಿದ್ದರೂ ತನಗರಿವಿಲ್ಲದೆ ಆಕಸ್ಮಿಕವಾಗಿ ಆದ ತಪ್ಪಿನಿಂದ ಆ ಹೆಣ್ಣು ಮಗಳು ಎಂಥಾ ಶಿಕ್ಷೆ ಅನುಭವಿಸಿದಳೋ ಆ ದೇವರಿಗೇ ಗೊತ್ತು! ಅಷ್ಟೊಂದು ಭಯ ಬಿದ್ದ ಅವಳಿಗೆ ಅವಳ ಕೆಟ್ಟ ಗಂಡನ ಹೊಡೆತಗಳು ಅದೆಷ್ಟು ನೋವು ಕೊಟ್ಟಿರಬೇಕು ! ನಮ್ಮ ಹೆಣ್ಣುಮಕ್ಕಳ ಮೇಲಿನ ಕೊನೆಯಿಲ್ಲದ ಕ್ರೌರ್ಯದ ಶೋಷಣೆಯ ನಾನಾ ರೂಪಗಳು! ಆದೆಷ್ಟು ವರ್ಷಗಳು ಕಳೆದರೂ ಆ ಘಟನೆ ಮಾತ್ರ ನನ್ನ ಚಿತ್ತದಲ್ಲಿ ಹಾಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ !
ಇಂತಿಪ್ಪ ಬಸ್ ಪಯಣದಲ್ಲೇ,ಒಮ್ಮೆ ನಾನೂ ಸಹ ನನ್ನ ರಿಸ್ಟ್ ವಾಚ್ ಕಳೆದುಕೊಂಡಿದ್ದೆ. ಅದು ನನ್ನ ಮಗ ನನಗೆ ತನ್ನ ಮೊದಲ ಸಂಬಳದಲ್ಲೇ ಕೊಡಿಸಿದ್ದ ಬೆಲೆ ಬಾಳುವ ವಾಚು.ಕಳೆದುಕೊಂಡ ಬೇಸರದಲ್ಲಿ ಬೇಸರದಲ್ಲೆ ನಾನು ವಿಷಯವನ್ನು ಮಗನಿಗೆ ತಿಳಿಸಿದೆ. ಇದನ್ನು ಕೇಳಿಧ ನನ್ನ ಮಗನು ಒಂದಿಷ್ಟೂ ಬೇಸರ ಪಡದೆ “ಹೋಗ್ಲಿ ಬಿಡಮ್ಮ” ಎಂದು ಸಲೀಸಾಗಿ ಹೇಳಿದ್ದಲ್ಲದೆ ಅಂತಹದೆ ಮತ್ತೊಂದು ವಾಚ್ ಕೊಡಿಸಿದ್ದನು.ಎಲ್ಲವು ಅಷ್ಟೆ ಅವರವರ ಭಾವಕ್ಕೆ!
ನಾನು ಬಿ.ಇಡಿ. ಓದುವಾಗ ಪ್ರತಿದಿನ ಬಸನಲ್ಲಿ ದುರ್ಗಕ್ಕೆ ಪಯಣ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆಂದೇ ಮೀಸಲಾದಂತಿತ್ತು. ಆ ದಿನ ನಮಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಿಯೋಜಿಸಲ್ಪಟ್ಟಿದ್ದ ಶಾಲೆಗೆ ನಾವು ಸರಿಯಾದ ವೇಳೆಗೆ ತಲುಪಬೇಕಾಗಿತ್ತು. ರೋಡ್ ಬ್ಲಾಕ್ ಆದ ಕಾರಣ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಕಾರಣ ಕೆಲವೇ ಕ್ಷಣಗಳ ಹಿಂದೆ ಅಲ್ಲೊಂದು ಅಪಘಾತವಾಗಿತ್ತು. ರಾಷ್ಟೀಯ ಹೆದ್ದಾರಿ ಬೇರೆ ನಮಗೆ ಆತಂಕ ಶುರು ಆಯಿತು. ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ಸಾಧ್ಯವೇ ಎಂದು. ನಾವು ಡ್ರೈವರ್ ಅವರನ್ನ ಕೇಳಿದೆವು. ಹತ್ತಿರದ ಇನ್ನೊಂದು ದಾರಿಯಲ್ಲಿ ಹೋಗಿರಿ ನಮಗೆ ಎಕ್ಸಾಂ ಇದೆ. ಅವರು ಇಲ್ಲ ಅದು ಸಾಧ್ಯವಾಗಲ್ಲ ಎಂದರು. ಆಗ ನಾವು ಪೆಚ್ಚು ಮೋರೆ ಹಾಕಿಕೊಂಡೆವು. ಆಗ ಅವರು ಸಾವಧಾನವಾಗಿ ಅವರದೇ ಆದ ಕೆಲವು ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಒತ್ತಾಯಕ್ಕೆ ಮಣಿದು ಅವರು ಬೇರೆ ರೂಟ್ ನಲ್ಲಿ ಹೋದಾಗ ಅಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅವನ ತಪ್ಪೆಂದು ಪರಿಗಣಿಸಿ ಅವನನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ಯಾವುದೇ ಕ್ಷೇತ್ರ ಇರಬಹುದು, ಅಲ್ಲಿನ ಒಳ ಹೊರಗು ಅಲ್ಲಿ ಇರುವವರಿಗೆ ತಿಳಿದಿರುವುದೆ ಹೊರತು ದೂರದಲ್ಲಿ
ನಿಂತು ಮಾತನಾಡುವವರಿಗಲ್ಲ. ಇದು ಎಲ್ಲಕ್ಕು ಅನ್ವಯ
ಆಗುತ್ತದೆಯಲ್ಲವೇ ?
ನಾವು ತರಗತಿಗಳನ್ನು ತೆಗೆದುಕೊಳ್ಳಲು ನಿಯೋಜಿಸಿದ ಶಾಲೆಗೆ ನಾವು ಹೋಗಬೇಕಿತ್ತು. ಅಂತಹ ದಿನಗಳಲ್ಲಿಯೇ ಅನಿವಾರ್ಯ ಕಾರಣಗಳಿಂದ ನಮಗೆ ಬಸ್ ಸಿಗುವುದು ತಡವಾಗುತ್ತಿತ್ತು.ಮಾಗಿ ಕಾಲದ ದಿನಗಳಾಗಿದ್ದರೆ ಬೇಗನೆ ಕತ್ತಲು ಕವಿದು ಬಿಡುತ್ತಿತ್ತು ಕೆಲವು ಬಸ್ ನಿರ್ವಾಹಕರು ಪಾಸ್ ಸೌಲಭ್ಯ ಹೊಂದಿದ ನಮ್ಮ ಮೇಲೆ ಸಿಡುಕುತ್ತಾ ಸಹನೆಯಿಲ್ಲದೆ ನೀವೆಲ್ಲಾ ಮ್ಯಾಟ್ನಿ ( ಮಧ್ಯಾನ್ಹದ ಚಲನ ಚಿತ್ರ ಪ್ರದರ್ಶನ )ಸಿನಿಮಾ ನೋಡಿಕೊಂಡು ಬರ್ತಿರಾ ಎಂದು ಗೊಣಗುತ್ತಾ ಪೂರ್ವಾಗ್ರಹ ಪೀಡಿತ ತೀರ್ಪನ್ನು ಕೊಟ್ಟೇ ಬಿಡುತ್ತಿದ್ದರು.ಆಗ ನಾವು ನಮಗೇನೂ ಕೇಳಿಸೇ ಇಲ್ಲವೆಂಬಂತೆ ಇರುತ್ತಿದ್ದೆವು.ಒಮ್ಮೆ ಹೀಗೆ ತಡವಾಗಿ ಬಸ್ ಹತ್ತಿ ಕೂತು ಅಂದಿನ ತರಗತಿ ಹಾಗೂ ವಿಷಯದ ಬಗ್ಗೆ ಮಾತನಾಡುತ್ತಾ ಅಂದಿನ ಬಸ್ ಕಂಡಕ್ಟರ್ ಗೆ ಪಾಸ್ ತೋರಿಸಿದಾಗ”ನೀವೆಲ್ಲಾ ಬಿ.ಇಡಿ. ಓದುತ್ತಿದ್ದೀರಾ?ನೀವು ಸ್ಕೂಲ್ ಗಳಿಗೆ ಹೋಗಿ ಪಾಠ ಮಾಡಬೇಕು ಅಲ್ವೇನ್ರಮ್ಮ. ನನ್ನ ಮಗಳೂ ಬಿ. ಇಡಿ. ಮಾಡ್ತಾ ಇದಾಳೆ ‘ ಎಂದವರು
ಹೇಳಿದಾಗ ಒಬ್ಬ ಸಹೃದಯ ಸಜ್ಜನರಂತೆ ಕಂಡುಬಂದರು
ಕಾಲೇಜು ವಿದ್ಯಾರ್ಥಿಗಳಿದ್ದ ಆ ಬಸ್ನಲ್ಲಿ ಜೋರು ಮಾತು ಕತೆ, ವಿನಾಕಾರಣ ನಗು,ಸಿನಿಮಾ,ರಾಜಕೀಯ,ಕಾಲೇಜ್ ಟೀಕೆ ಟಿಪ್ಪಣಿ, ತರಲೆ ತುಂಟಾಟಗಳ ಲವಲವಿಕೆ ತುಂಬಿದ ಉತ್ಸಾಹ ಪುಟಿಯುತ್ತಿತ್ತು !
ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಪ್ರತಿದಿನ ನಾವು
ಬಸ್ ನಲ್ಲಿ ಹೋಗಬೇಕಿತ್ತು. ಹದಿನೈದುನಿಮಿಷದ ಅಲ್ಲಿನ
ಪ್ರಯಾಣಕ್ಕೆ ಅರ್ಧಗಂಟೆಗೂ ಹೆಚ್ಚಿನ ಸಮಯವೆ ಬೇಕು
ಪ್ರತಿಯೊಂದು ಹಳ್ಳಿಯಲ್ಲೂ ಹತ್ತಿ ಇಳಿಯುವವರಿಂದಾಗಿ ಅದು ಅನಿವಾರ್ಯ ಸಹ. ಒಮ್ಮೆಬಸ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆಯೇ ಗದ್ದಲ ಎದ್ದಿತು. ಏನೋ ದುರ್ವಾಸನೆ ಬರುತ್ತಿದೆ ಎಂದು ಎಲ್ಲರು ಜೋರಾಗಿ ಹೇಳತೊಡಗಿದರು ದುರ್ವಾಸನೆ ಬೀರುವ ವಸ್ತುವನ್ನು ಬಸ್ಸಲ್ಲಿ ಇಡಲಾಗಿದೆ ಎಂದು ಜನರು ಗುಮಾನಿ ಪಟ್ಟರು.ಆಗ ಬಸ್ ಕಂಡಕ್ವರ್
( ಖಾಸಗಿ ಬಸ್) ಅಂತಹುದೇನೂ ಇಟ್ಟಿಲ್ಲ ಎಂಬುದಾಗಿ ಸ್ವಷ್ಟಪಡಿಸಿದನು. ಆಗ ಬಸ್ ನಲ್ಲಿದ್ದ ಯಾರೋ ಒಬ್ಬರು ಮತ್ತೊಬ್ಬನ ಕಡೆ ಕೈ ತೋರಿಸುತ್ತ “ಅಗೋ ಅವನಿಂದಲೇ ಆ ಕೆಟ್ಟ ದುರ್ವಾಸನೆ ಬರ್ತಾ ಇರೋದು ಅವನ ಕಾಲಿಗೆ ಕೊಳಕು ಮಂಡಲ(ಒಂದು ರೀತಿಯಹಾವು) ಕಚ್ಚಿಬಿಟ್ಟಿದೆ ಅದಕ್ಕೆ ಈ ವಾಸನೆ”ಎಂದರು ಬಹಳಷ್ಟು ಜನರು ವಾಸನೆ ತಡಯಕಾಗ್ತಿಲ್ಲ ಅವನನ್ನು ಕೆಳಗಿಳಿಸಿ ಎಂದಾಗ ಅವನು ತಾನೇ ತಾನಾಗಿ ಮುಖಕ್ಕೆ ಟವಲ್ ಮುಚ್ಚಿಕೊಂಡು ಕೆಳಗೆಇಳಿದು ಬಿಟ್ಟ. ಅಬ್ಬಾ! ಎಷ್ಟೊಂದು ಅವಮಾನ ! ಎಷ್ಟು ತಿರಸ್ಕಾರ ! ನನಗಂತು ಆ ರೀತಿಯ ಹಾವಿನ ಕಡಿತದ ಬಗ್ಗೆ
ಅದರ ಪರಿಣಾಮ ಏನೂ ಗೊತ್ತಿಲ್ಲ ಎಲ್ಲವೂ ಹೊಸದೇ ಅದು ನಿಜ ಅಥವ ಸುಳ್ಳೇಎಂಬುದು ಸಹ ತಿಳಿದಿರಲಿಲ್ಲ ಅವನಿಗೆ ಅಂಥ ಅವಮಾನ ಮಾಡಿ ನಿರ್ದಯಿಗಳಾದ ಕಟುಕರಂತೆ ಕೆಳಗೆ ಇಳಿಸಿದ್ದು ಮಾತ್ರ ಅಮಾನುಷ ಕೃತ್ಯ ಎನಿಸಿತು. ಅಂತಹದೊಂದು ಹೀನಾಯ ಕ್ರಿಯೆಗೆ ನಾನು ಮೂಕ ಪ್ರೇಕ್ಷಕಳಂತೆ ಇದ್ದದ್ದು ತುಂಬಾನೇ ಕೆಡುಕೆನಿಸಿತು. ಕೆಲವೊಮ್ಮೆ ಜನರು ಸಮೂಹ ಸನ್ನಿಗೊಳಗಾದವರಂತೆ ವರ್ತಿಸುತ್ತಾರೆ ಅನಿಸಿತು.
ನಾನು ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಶಾಲೆಗೆ ಅಕ್ಕಪಕ್ಕ ಅಕ್ಕಪಕ್ಕದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿದ್ದರು. ಆಗ ಸರ್ಕಾರಿ ಬಸ್ ಗಳ ಸ್ಟಾಪ್ ಇರಲಿಲ್ಲ.ಖಾಸಗಿ ಬಸ್ಗಳೆ ನಮ್ಮಆಪತ್ಬಾಂಧವರು ಹತ್ತು ಗಂಟೆಗೆ ಸರಿಯಾಗಿ ನಾವು ಶಾಲೆಯಲ್ಲಿರ ಬೇಕಿತ್ತು. ಒಂಭತ್ತು ಗಂಟೆಗೆ ಹೊರಡುತ್ತಿದ್ದ ಏಕೈಕ ಬಸ್ “ರಾಘವೇಂದ್ರ’ ನಮ್ಮನ್ನು ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ ! ಎಂಬಂತೆ ನಾವು ಅದನ್ನೇ ನಂಬಿದ್ದೆವು. ಪ್ರತಿಯೊಂದು ಸ್ಟಾಪನಲ್ಲೂ ನಮ್ಮವಿದ್ಯಾರ್ಥಿಗಳು ಹತ್ತುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ನಿಲ್ಲುವಷ್ಟು ಜಾಗ ಸಿಕ್ರೆ ಸಾಕು ಎಂದು ಬಸ ನಲ್ಲಿ ತೂರಿ ಬಿಡುತ್ತಿದ್ದರು.ಆದ್ರೆ ನಮ್ಮ ಹುಡುಗ್ರು ಮಾತ್ರ ಬಸ್ ನಿಂತಾಕ್ಷಣ ಚಕ್ಕನೆ ಬಸ್ ಮೇಲೆ ಹತ್ತಿ ಕೂತುಬಿಡುತ್ತಿದ್ದರು ಜಾಗ ಇಲ್ಲದಿದ್ದರೆ ಅವರು ತಾನೇ ಏನು ಮಾಡಿಯಾರು! ಆ ಬಸ್ ಬಿಟ್ಟರೇ ನಮಗೆ ಬೇರೆ ಬಸ್ ಇಲ್ಲ. ಹುಡುಗರು ಬಸ್ ಮೇಲೆ ಹತ್ತುವಾಗ ಸುಮ್ಮನಿರುತ್ತಿದ್ದ ಕಂಡಕ್ಟರಪ್ನ ಅವರೆಲ್ಲ ಇಳಿಯುವಾಗ ಅವರನ್ನು ಬೈಯುತ್ತಾ”ಇದೇ ಏನ್ರೋ ನೀವು ಸ್ಕೂಲಲ್ಲಿ ಕಲಿಯೋದು?” ಪರೋಕ್ಷವಾಗಿ ನಮ್ಮ ಮೇಲೆ ಆರೋಪ ಹೊರಿಸಿ ಕೂಗಾಡುತ್ತಿದ್ದ. ಆಗೆಲ್ಲ ಬೇಸರವಾದರೂ ಸಹ ನಮ್ಮ ಮಕ್ಕಳದೇ ತಪ್ಪಾಗಿರುತ್ತಿದ್ದ
ಕಾರಣ ನಾವೂ ಸುಮ್ಮನಿರುತ್ತಿದ್ದೆವು. ದಿನಾ ಅದೇ ರಾಗ ಆಗಿದ್ದರಿಂದ ನಾವು ನಮ್ಮ ಮಕ್ಕಳು ಮೊಂಡು ಬಿದ್ದಿದ್ದೆವು ದಿನದಲ್ಲಿ ಎಂಟು ಗಂಟೆ ಮಾತ್ರ ಮಕ್ಕಳು ಶಿಕ್ಷಕರೊಂದಿಗೆ ಇರುತ್ತಾರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಹಿರಿದೆಂಬುದರಲ್ಲಿ ಎರಡು ಮಾತಿಲ್ಲ. ಅದರೂ ಮಕ್ಕಳ ಬದುಕಿನಲ್ಲಿ ತಂದೆತಾಯಿಗಳ ಪಾತ್ರವೇನೂ ಇಲ್ಲ ಎಂಬಂತೆ ಆಡುವ ಮಾತುಗಳನ್ನು ಕೇಳಿದಾಗ ಶಿಕ್ಷಕರಿಗೆ ಬೇಸರವಾಗುವುದು ಸಹಜವೇ ಆಗಿದೆ.
ಒಮ್ಮೊಮ್ಮೆ ವಿಚಿತ್ರವಾದರೂ ನಿಜವೆನಿಸುವಂಥ ಅನೇಕ
ಪ್ರಸಂಗಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತೇವೆ. ಶಿಕ್ಷಕರೆ ಹೆಚ್ಚು
ಹೋಗುವ ಆ ಬಸ್ ನಲ್ಲಿ ಬೇರೆ ಬೇರೆ ಶಾಲೆಯ ಶಿಕ್ಷಕರು
ಶಿಕ್ಷಕಿಯರು ಬರುತ್ತಿದ್ದರು. ಒಬ್ಬ ಶಿಕ್ಷಕಿಯವರು ತುಂಬಾ ಸಂಕೋಚ ಸ್ವಭಾವದವರಾಗಿದ್ದರು. ಆ ಮೇಡಂ ಟೆಕೆಟ್ ದುಡ್ಡು ಕೊಡುವಾಗ ತಮ್ಮ ಅಂಗೈ ಸ್ವಲ್ಪ ಮೇಲೆತ್ತಿಯೇ ದುಡ್ಡನ್ನು ಕಂಡಕ್ಟರ್ ಕೈಗೆ ಹಾಕುತ್ತಿದ್ದರು. ನಾನೂ ಅದನ್ನು ಗಮನಿಸುತ್ತಿದ್ದೆ. ಒಮ್ಮೆ ಕಂಡಕ್ಟರ್ ಸ್ವಲ್ಪ ಸಿಡುಕಿನಿಂದಲೇ “ಏನ್ರಿ ಮೇಡಂ,ಯಾಕೆ ಅಷ್ಟು ಮೇಲಿಂದ ದುಡ್ಡು ಹಾಕ್ತಿ ನಾವೇನೂ ಮುಟ್ಟಿಸಿಕೊಳ್ಳದವರ”ಎನ್ನುತ್ತ ತನ್ನ ಬೇಸರ
ಹೊರಹಾಕಿದ್ದನು. ಈ ರೀತಿಯ ವಿಚಿತ್ರ ಸನ್ನಿವೇಶಗಳೆಲ್ಲಾ ಎದುರಾಗುವುದು ಬಸ್ ಪಯಣ ಮಾಡಿದಾಗ ಮಾತ್ರ !
ಕೆಲವೊಮ್ಮೆ ವಯೋವೃದ್ಧರು, ತುಂಬು ಗರ್ಭಿಣಿಯರು ಮಗು ಎತ್ತಿಕೊಂಡಿರುವ ತಾಯಂದಿರು ನಿಂತಿದ್ದರೂ ಸಹ ಗಮನಿಸಿಲ್ಲವೆಂಬಂತೆ ಯುವ ಜನತೆ ಕುಳಿತಿರುವುದನ್ನು ನೋಡಿದಾಗ, ಸೀಟಿಗಾಗಿ ಜೋರು ಮಾತಿನ ಮಾತುಕತೆ, ಅಜ್ಜಿಯನ್ನು ಬೀಳ್ಕೊಡಲು ಬಂದ ಮೊಮ್ಮಗುವಿನ ಅಳು
ಅಮ್ಮನನ್ನು ಊರಿಗೆ ಕಳಿಸ ಬಂದ ಮಗನ ಎಚ್ಚರಿಕೆಯ ಮಾತುಗಳು, ಯಾವುದೊ ಊರಿನ ಇಂಥ ಸ್ಟಾಪ್ ನಲ್ಲಿ ಇಳಿಸಿ ಎಂದು ಕಂಡಕ್ಟರ್ ಬಳಿ ನಮ್ರ ಮನವಿ ಮಾಡುವ ಮಗ, ಅಜ್ಜಿಗೆ ಹಣ್ಣುಹಂಪಲು, ಕುರುಕಲು ತಿಂಡಿಯನ್ನು ತಂದುಕೊಟ್ಟು ಹಾಗು ಟಿಕೇಟ್ ಕೊಡಿಸಿ ಬಸ್ ಹೊರಡೊ ತನಕ ಕಿಟಕಿ ಬಳಿ ನಿಂತು ಅಕ್ಕರೆಯ ವಿದಾಯ ಹೇಳುವ ಮೊಮ್ಮಗ, ಊರು ತಲುಪಿದ ತಕ್ಷಣ ಮೆಸೇಜ್ ಮಾಡು ಎಂದು ತಂಗಿಗೆ ಹೇಳುವ ಅಣ್ಣ,ಮಕ್ಕಳು ಹುಷಾರು ಕಣೆ ಎಂದು ಪತ್ನಿಗೆ ಹೇಳುವ ಪತಿರಾಯ ಇಂತಿಪ್ಪ ಭಾವುಕತೆ ತುಂಬಿದ ಮಾತುಕತೆಯ ಸನ್ನಿವೇಶಗಳೆಲ್ಲ ಪ್ರತ್ಯಕ್ಷವಾಗಿ ಕಂಡು ಬರುವುದು ಬಸ್ ಪಯಣದಲ್ಲಿ ಮಾತ್ರ. ಹೀಗಾಗಿ ಬಸ್ ಪಯಣದ ಕಡೆಗೆ ನನಗಿನ್ನೂ ಆಕರ್ಷಣೆ ಉಳಿದಿದೆ
**********************************************************************
ಬಸ್ ಅನುಭವ ಚನ್ನಾಗಿದೆ ಅನಸೂಯ ಅವರ ಅನುಭವ ದ ಹಾಗೆ ನನಗೂ ಹಿರಿಯೂರು ನಿಂದ ಚಿತ್ರ ದುರ್ಗ ಕ್ಕೆ ಲಾ ಕಾಲೇಜಿಗೆ ಹೋಗುವಾಗ ಆಗಿದ್ದು ಒಂದು ಪರೀಕ್ಷೆ ನೇ ಬರೆದಿರಲಿಲ್ಲ. ಆದರೂ ಬಸ್ ಪ್ರಯಾಣ ಅಂದರೆ ಒಂದು ಥರಾ ಖುಷಿ.
ಧನ್ಯವಾದಗಳು
ಬಾಲ್ಯದಲ್ಲಿ ಬಸ್ ಪಯಣ ನೆನಪಿಸಿತು
ಮೇಡಂ ನಾನೂ ಕೂಡ ನಿಮ್ಮ ವಿದ್ಯಾರ್ಥಿ ಸರ್ಕಾರಿ ಜೂನಿಯರ್ ಕಾಲೇಜು ಹಿರಿಯೂರು ಎರಡುಸಾವಿರದ ಎಂಟನೇ ಸಾಲು ನಿಮ್ಮ ಬಸ್ ಪಯಣದ ಸ್ವಾರಸ್ಯಕರ ಸಂಗತಿಗಳು ನಮ್ಮ ಜೀವನ ಅನುಭವದಲ್ಲಿಯೂ ಅಗಿಯೂ ಬಸ್ ಪಯಣದ ಖುಷಿಯೇ ಬೇರೆ ನಾವು ಬಿ ಇಡಿ ಒದುವಾಗ ಚಿತ್ರದುರ್ಗ ಕ್ಕೆ ದಿನಂಪ್ರತಿ ಪ್ರಯಾಣ ಮಾಡುತ್ತಿದ್ದೇವು
ಚಂದದ ಲೇಖನ
ಬಸ್ ಪ್ರಯಾಣದ ಅನುಭವ ಚೆನ್ನಾಗಿತ್ತು.