ಪ್ರತಿ ಎರಡು ವಾರಕ್ಕೊಮ್ಮೆ(ಎರಡನೆ,ನಾಲ್ಕನೇ ಶುಕ್ರವಾರ) ಕನ್ನಡದ ಕವಿಯೊಬ್ಬರು ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ಇಲ್ಲಿ ಪರಿಚಯಿಸಲಾಗುವುದು. ಈಸರಣಿಯ ಮೊದಲ ಕವಿಯ ಬದುಕು-ಬರಹ ನಿಮ್ಮ ಮುಂದಿದೆ:
ಸತ್ಯಮಂಗಲ ಮಹಾದೇವ
ಸತ್ಯಮಂಗಲ ಮಹಾದೇವ 1983 ಜೂನ್ 12 ರಂದು ತುಮಕೂರು ಜಿಲ್ಲೆಯ ಸತ್ಯಮಂಗಲಗ್ರಾಮದಲ್ಲಿ, ಬುಟ್ಟಿ ಹೆಣೆಯುವುದು, ಹಚ್ಚೆಹಾಕುವುದು, ವಿವಿಧ ವೃತ್ತಿಗಳಲ್ಲಿ ತೊಡಗಿದ್ದ ಅಲೆಮಾರಿ ಕುಟುಂಬದ ರಾಜಣ್ಣ ಮತ್ತು ಜಯಮ್ಮ ದಂಪತಿಗಳ ಎರಡನೆಯ ಮಗನಾಗಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಸತ್ಯಮಂಗಲದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮತ್ತು ಶ್ರೀಶಿವಾನಂದಪ್ರೌಢಶಾಲೆಯಲ್ಲಿ ವ್ಯಾಸಂಗ. ಪದವಿ ವಿದ್ಯಾಭ್ಯಾಸ ಯೂನಿಯನ್ ಕ್ರಿಶ್ಚಿಯನ್ ಕಾಲೇಜು.ಶಿರಾಗೇಟ್ ತುಮಕೂರು. ಎಸ್.ಎಫ್.ಐ ವಿದ್ಯಾರ್ಥಿ ಸಂಘಟನೆಯಲ್ಲಿ ತುಮಕೂರು ತಾಲ್ಲೂಕು ಅಧ್ಯಕ್ಷರಾಗಿ ಸಕ್ರಿಯವಾಗಿ ಪಾಲ್ಗೊಂಡು ಬಸ್ ಪಾಸ್ ದರ ಹೆಚ್ಚಳದ ವಿರುದ್ಧ ಚಳುವಳಿ, ಜೈಲುವಾಸ.ವಿದ್ಯಾರ್ಥಿ ಸಮಸ್ಯೆಗಳ ಕುರಿತು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ. ಪದವಿ ವಿಧ್ಯಾಭ್ಯಾಸದಲ್ಲಿದ್ದಾಗ ಕನ್ನಡ ಪ್ರಾಧ್ಯಾಪಕ ಪ್ರೊ.ಅಜಿತ್ ಕುಮಾರ್ ಗುರುಗಳಲ್ಲಿ ಕಾವ್ಯರಚನೆಯ ಮೊದಲತೊದಲು ಪ್ರಾರಂಭ. ಅನಂತರ ಕಾವ್ಯರಚನೆಯ ಸೂಕ್ಷ್ಮಗಳನ್ನು ಕಲಿತದ್ದು. ಪದವಿಯ ಅಂತಿಮ ವರ್ಷದಲ್ಲಿ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಆಯೋಜಿಸಿದ್ದ ಡಾ.ದ.ರಾ.ಬೇಂದ್ರೆ ಅಂತರಕಾಲೇಜು ಕವನ ಸ್ಪರ್ದೆಯಲ್ಲಿ ರಾಜ್ಯಮಟ್ಟದ ಕಾವ್ಯಬಹುಮಾನ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿಎಂ.ಎಸ್ಸಿ.ಮನೋವಿಜ್ಞಾನ.ಸಿದ್ಧಲಿಂಗಯ್ಯ, ಕಿರಂನಾಗರಾಜು, ನಟರಾಜ್ ಹುಳಿಯಾರ್, ಇವರಕಾಳಜಿಯಿಂದ ಭಾವತೀರದ ಹಾದಿಯಲ್ಲಿ ಮೊದ ಕವನಸಂಕನ ಬಿಡುಗಡೆ.ಸುಬ್ಬು ಹೊಲೆಯಾರ್ ಅವರಿಂದ ಜೀವಪರ ಮೌಲ್ಯಗಳ ಸೂಕ್ಷ್ಮಸಂವೇದಿ ನೆಲೆಗಳ ಅರಿವು. ಹೊಸತಲೆಮಾರಿನ ಸೂಕ್ಷ್ಮಸಂವೇದಿ ಕವಿಗಳಲ್ಲಿ ಪ್ರಮುಖ ಸ್ಥಾನ. ಮನೋವಿಜ್ಞಾನ ಆಪ್ತಸಮಾಲೋಚಕನಾಗಿ ಕೆಲಸ. ಸಾಮಾಜಿಕ ಕಾರ್ಯ ಕರ್ತ ಪ್ರೊ.ಕೆ.ಟಿ.ತಿಪ್ಪೇಸ್ವಾಮಿ ಅವರ ಪ್ರೋತ್ಸಾಹ ಮತ್ತು ಜೀವಪ್ರೀತಿಯ ಕಾಳಜಿಯಿಂದ ಹೆಜ್ಜೆಮೂಡಿದಮೇಲೆ ಎರಡನೆಯ ಕವನಸಂಕಲನ ಪ್ರಕಟ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಿಂದ ಕನ್ನಡಎಂ.ಎ.ಯಲ್ಲಿ ಪ್ರಥಮ ಶ್ರೇಣಿ. 2012 ರಿಂದ 2018 ರವರೆಗೆ ಬಿ.ಎನ್.ಇ.ಎಸ್.ಪದವಿಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ. ರಾಷ್ಟ್ರೀಯ ಸೇವಾಯೋಜನೆಯ ಕಾರ್ಯನಿರ್ವಹಣೆ ಅಧಿಕಾರಿ2016-2018 ರವರೆಗೆ. 2017 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕನ್ನಡ ಪತ್ರಿಕೆಗಳ ಸಂಯೋಜನೆ ಮತ್ತು ಮೌಲ್ಯಮಾಪನ. ಭಾರತ ಚುನಾವಣಾ ಆಯೋಗದ ಕ್ಯಾಂಪಸ್ ರಾಯಭಾರಿ2017 ರಲ್ಲಿ. ಅವಿಭಜಿತ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳ ಆಂತರಿಕ ಸ್ಕ್ವಾಡ್ 2015-2016. 2014 ಆಗಸ್ಟ್ 12 ರಿಂದ 2019 ಮೇ 14 ರವರೆಗೆ ಬೇಂದ್ರೆ ಮತ್ತು ಮಧುರಚೆನ್ನರಕಾವ್ಯಗಳಲ್ಲಿ ಅನುಭಾವ: ತೌಲನಿಕ ಅಧ್ಯಯನ? ಎಂಬ ವಿಷಯದಲ್ಲಿ ರೇವಾ ವಿಶ್ವವಿದ್ಯಾಲಯ ಕನ್ನಡವಿಭಾಗಕ್ಕೆ ಪಿಎಚ್.ಡಿ ಪದವಿಗಾಗಿ ಮಹಾಪ್ರಬಂಧ ಸಲ್ಲಕೆ. 2015 ರಲ್ಲ ‘ಯಾರಹಂಗ್ಲಿಬೀಸುವಗಾಳಿಗೆ’ ಮೂರನೆಯ ಕವನ ಸಂಕಲನವು ಪ್ರೊ.ಮಲ್ಲೇಪುರಂಜಿ.ವೆಂಕಟೇಶ ಹಾಗೂ ಸುಬ್ಬುಹೊಲೆಯಾರ್ ಅವರ ಕಾಳಜಿ ಮತ್ತು ಮುತುವರ್ಜಿಯಿಂದ ಪ್ರಕಟ. ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವೂ ಸೇರಿದಂತೆ ಒಟ್ಟು ಏಳು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆಭಾಜನವಾಗಿದೆ. ಬೆಂಗಳೂರು ಆಕಾಶವಾಣಿಯ ರಸಗಂಗೆ ಕಾರ್ಯಕ್ರಮದಲ್ಲಿ ಕೃತಿಗಳ ಪರಿಚಯ.ದೂರದರ್ಶನ ಚಂದನದಲ್ಲಿ ಕಾವ್ಯವಾಚನ. ಪ್ರಜಾವಾಣಿ, ವಿಜಯವಾಣಿ,ಮಯೂರ, ಸಮಾಹಿತ,ಸಂವಾದ, ಅನಿಕೇತನ, ಅಗ್ನಿ, ಮುಂತಾದ ಪತ್ರಿಕೆಗಳಲ್ಲಿ ಕಾವ್ಯಗಳ ಪ್ರಕಟಣೆ. ಅವಧಿ, ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಗಳಲ್ಲಿಯೂ ಕವಿತೆಗಳ ಪ್ರಕಟಣೆ. 2016 ನೇ ಸಾಲಿನ ತುಮಕೂರು ಜಿಲ್ಲಾ ಸಾಹಿತ್ಯಸಮ್ಮೇಳನದಲ್ಲಿ ಕವಿಗೋಷ್ಠಿಯ ಆಶಯ ಭಾಷಣ. 1000ಕ್ಕೂ ಹೆಚ್ಚು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರಸಂಕಿರಣಗಳ ಆಯೋಜನೆ, ಭಾಗವಹಿಸುವಿಕೆ ಮತ್ತುಪ್ರಬಂಧಮಂಡನೆ. ಶ್ರೀದರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಸಂತ ಲಯೋಲಾ ಕಾಲೇಜುಬೆಂಗಳೂರು, ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಕಾವ್ಯಕಮ್ಮಟಗಳ ನಿರ್ದೇಶಕಮೈಸೂರು ದಸರಾ ಕವಿಗೊಷ್ಠಿ, ಕೇರಳ-ಕೊಚ್ಚಿ, ಮಹಾರಾಷ್ಟ್ರ-ದಾದರ್, ಅಸ್ಸಾಂ-ಗೌಹಾತಿ,ಪಂಜಾಬ್-ಚಂಡೀಗಡಗಳಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡವನ್ನು ಪ್ರತಿನಿಧಿಸಿ ಕವಿತೆ ವಾಚನ. ಆಳ್ವಾಸ್ ನುಡಿಸಿರಿ-2018 ರಲ್ಲಿ ಕವಿನಮನದಲ್ಲಿ ಕಾವ್ಯವಾಚನ. ಕಣ್ಣಕಾಡು-ಗೆ ಬೆಳಕು ಸಂಪಾದಿತ ಕೃತಿ, ಪ್ರೊ.ಕೆ.ಈ.ರಾಧಾಕೃಷ್ಣ ವ್ಯಕ್ತಿಚಿತ್ರಕೃತಿ. ಇವರ ಸಾಹಿತ್ಯ ಸೇವೆ ಗುರುತಿಸಿ ತುಮಕೂರು ಜಿಲ್ಲಾ ಯುವಸಬಲೀಕರಣ ಇಲಾಖೆಯು2015ರ ಯುವಜನೋತ್ಸವದಲ್ಲಿ ಸನ್ಮಾನ. ಇವರ ಕಾವ್ಯಕೃತಿಗಳಿಗೆ ದ.ರಾ.ಬೇಂದ್ರೆ ಸ್ಮೃತಿ ಪ್ರಶಸ್ತಿ,ಸಂಚಯ ಸಾಹಿತ್ಯ ಪ್ರಶಸ್ತಿ, ಡಾ.ಶ್ಯಾಮಸುಂದರ ಕಾವ್ಯಪ್ರಶಸ್ತಿ, ಮುಳ್ಳೂರು ನಾಗರಾಜ ಕಾವ್ಯಪ್ರಶಸ್ತಿ,ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯಪ್ರಶಸ್ತಿ, ಶಾ.ಬಾಲೂರಾವ್ ಯುವಪುರಸ್ಕಾರ, ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕಬಹುಮಾನ, ವರ್ದಮಾನ ಉದಯೋನ್ಮುಖ ಕಾವ್ಯಪ್ರಶಸ್ತಿ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿಸೇವೆಯಲ್ಲಿ ನಿರತರಾಗಿದ್ದಾರೆ
***********************************************************************
ನಿಮ್ಮ ಓದಿಗಾಗಿ ಅವರದೊಂದು ಕವಿತೆ
ಜೀನ್ಸುತೊಟ್ಟ ಚಕ್ರವರ್ತಿ
ಜೀನ್ಸುತೊಟ್ಟ ಚಕ್ರವರ್ತಿಯ ನೋಡಿದೆ
ಆತ ಸಮುದ್ರದ ದಡದಲ್ಲಿ
ಕ್ಯಾಮರಾ ಮುಂದೆ
ಅಲ್ಲಿ ಹರಡಿದ್ದ ಪ್ಲಾಸ್ಟಿಕ್ ಆಯುತಿದ್ದ
ಎತ್ತರದ ದನಿಯಲ್ಲಿ ಮಾತನಾಡುತ್ತಿದ್ದ
ಉಕ್ಕಿನ ಮನುಷ್ಯನ ನೋಡಿದೆ
ಆತ ಕನಸುಗಳ ಮಾರುತ್ತಿದ್ದ
ಕೊಳ್ಳಲು ಹಣವಿರಲಿಲ್ಲ
ನರೆ ಬಂದ ನೀರಲ್ಲಿ ನಿಂತಿದ್ದೆ ನಾನು
ಸುಂಕದವರ ನೋಡಿದೆ
ಸುಖ ದುಃಖ ಕೇಳದೆ ಜಡದಂತಾಗಿ
ರಾಜನ ಮುಖವಾಡದಲಿ ಬೆವತು
ಬೆಂಡಾಗಿ ಬೆನ್ನುಮೂಳೆಯ ಮಾರಿಕೊಂಡು
ಊರೂರು ಅಲೆದವರು
ಕೈ ಹಿಡಿದವರು ಈಗ ಕಮಲ ಹಿಡಿದು
ಓಡುತ್ತಿದ್ದಾರೆ ಸಾರಥಿ ಹೇಳಿದ ಕಡೆಗೆ ಕುದುರೆಗಳಂತೆ.
ಸವಿಮಾತುಗಳ ಉಲಿಯುತಿದ್ದ
ಕೋಗಿಲೆಗಳು ಈಗ ಕುರ್ಚಿ ಕುರ್ಚಿ ಎನ್ನುತ್ತಿವೆ
ಕಿವಿಯೂ ತಾನು ಕೇಳುವ ಚಾನಲ್ಲುಗಳ
ಬದಲಾಯಿಸಿಕೊಳ್ಳುತಿದೆ
ಈಗೀಗ ಬೊಗಳುವ ಭಾಷೆಗಳ
ವರ್ಣಮಾಲೆಗಳನ್ನು ಬದಲಿಸುತ್ತಿವೆ
ಗ್ರಾಮಸಿಂಹಗಳು.
ಬೆಂಕಿ ಕಪ್ಪು ಹೊಗೆ ಬಿಳಿ
ರೂಪಗಳು ವಿರೂಪದ ರೂಪಾಂತರಗಳಾಗಿ
ನವಿಲುಗರಿ ಖಡ್ಗದ ರೂಪಾಗಿ
ಎಳನೀರು ಮತ್ತು ತರಿಸುವಂತೆ
ಎಲ್ಲವೂ ಎಲ್ಲರೋಳಗೂ ಈಗ
ಪರ್ವ ಕಾಲ ಎಲ್ಲವೂ ಸರಿ ಎಂದೊಮ್ಮೆ
ಎಲ್ಲವೂ ಸರಿಯಿಲ್ಲ ಎಂದೊಮ್ಮೆ
ಮಮ್ಮಲ ಮರುಗುವ ಮನಸು
ಮಾಯದ ಮಾಂಸ ಮಜ್ಜೆಯ ಮನೆಯೊಳಗೆ
ಧ್ಯಾನಕ್ಕೆ ಕೂರಬೇಕಿದೆ ಆತ್ಮ..
==================
ಸತ್ಯಮಂಗಲ ಮಹಾದೇವ