ಲಲಿತ ಪ್ರಬಂಧ
ನನ್ನ ಲಿಯೋ
ಸಮತಾ ಆರ್.
ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು ದೂರದಿಂದ ಉತ್ತರ ಬಂತು.”ಅಯ್ಯೋ ದೇವರೇ! ಯಾಕೆ ನಿಂತಿದ್ದೀಯ ಮರದ ಕೆಳಗೆ? ಯಾವುದಾದರೂ ಕಾಗೆ ನಿನ್ನ ಮೇಲೆ ಹೇತರೆ ಅದನ್ನು ತೆಗೆಯಲು ಇನ್ನೂ ಐದು ನಿಮಿಷ ಹಾಳು, ಈಗ್ಲೇ ಲೇಟಾಗಿದೆ, ಬಸ್ ಹೊರಟು ಹೋದರೆ ಸ್ಕೂಲಿಗೆ ಲೇಟಾಗ ಲ್ವೇನೋ? ಒಂದಿಷ್ಟಾದರೂ ಕಾಮನ್ ಸೆನ್ಸ್ ಇದೆಯಾ ನಿನಗೆ”, ಎಂದು ಗೊಣಗುತ್ತಾ ಅವನನ್ನು ಎಳೆದುಕೊಂಡು ಧಾವಿಸಿದೆ.
“ಅಕ್ಕ, ನಾನೇನ್ ಮಾಡ್ಲಿ, ನಿನ್ನ ಗಂಡನೇ ನನ್ನ ಸುಮ್ಮನೆ ಇರೋ ಜಾಗದಲ್ಲಿ ಇರಲು ಬಿಡದೆ,’ ನಿಮ್ಮಕ್ಕ ಬರೋ ಗಂಟ ಬಿಸಿಲಲ್ಲಿ ಯಾಕೋ ಒಣಗುತ್ತಿಯಾ? ಮರದ ಕೆಳಗೆ ನೆರಳಿನಲ್ಲಿ ಇರಬಾರದ’ ಅಂತ ಅಲ್ಲಿ ನಿಲ್ಲಿಸಿದ, ನಂಗ್ಯಾಕೆ ಸುಮ್ಮನೆ ಬೈದೆ ನೀನು”, ಎಂದು ಗುರ್ ಗುಟ್ಟಿದ.
“ಲೋ, ಮೊದಲು ಸರಿಯಾಗಿ ರಸ್ತೆ ನೋಡಿಕೊಂಡು ಹೋಗೋದು ಕಲಿ, ಎಷ್ಟೊಂದು ಟ್ರಾಫಿಕ್ ಇದೆ, ನಿನ್ನತಂಟೆಗೆ ಹೋಗಬೇಡ ಅಂತ ನನ್ ಗಂಡಂಗೆ ನಾನು ಹೇಳಿಕೊಳ್ಳುತ್ತೇನೆ, ಈಗ ನನಗೆ ತೊಂದರೆ ಆಗದ ಹಾಗೆ ಸುಮ್ನೆ ಬಾ,” ಎಂದಿದ್ದಕ್ಕೆ” ಅಕ್ಕ ಇದೇನು ನಾನು ಕಾಣದೇ ಇರೋ ಟ್ರಾಫಿಕ್ ಅಲ್ಲ, ಹೆದುರ್ಕೋಬೇಡಾ ಬಾ, ನಾನೆಲ್ಲ ಮ್ಯಾನೇಜ್ ಮಾಡ್ತೀನಿ “ಎಂದು ನನ್ನನ್ನು ತನ್ನ ಹೆಗಲಿನಲ್ಲಿ ಹೇರಿಕೊಂಡು ಮುನ್ನುಗ್ಗಿದ.
ಬಸ್ ಸೇರುವ ಮುನ್ನ ಲಿಯೋನನ್ನ ಮಾಮೂಲಿನಂತೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಅವನ ಬಾಯಿಗೆ ಬೀಗ ಹಾಕಿ, ಓಡೋಡುತ್ತ ,ಆಗಲೇ ಹೊರಟು ನಿಂತಿದ್ದ ಬಸ್ ಹತ್ತಿದ್ದಾಯಿತು. ಬಸ್ನಲ್ಲಿ ಕುಳಿತು ಒಂದಿಷ್ಟು ಸುಧಾರಿಸಿಕೊಂಡು ಯೋಚಿಸುತ್ತಿರುವಾಗ ಒಮ್ಮೆಗೆ ಲಿಯೋನ ಬಗ್ಗೆ ಅಪಾರ ಪ್ರೀತಿ ಉಕ್ಕಿಬಂತು .”ಅಯ್ಯೋ ಪಾಪ ಅವನಿಲ್ಲದೇ ಹೋಗಿದ್ದರೆ ನನ್ನ ಕಥೆ ಏನಾಗುತ್ತಿತ್ತು ?ಎಲ್ಲಿಗೆ ಕರೆದರೂ ಜೊತೆಯಲ್ಲಿ ಬರ್ತಾನೆ ,ಎಷ್ಟು ಭಾರ ಹೇರಿ ದರೂಸುಮ್ನೆ ಹೊರುತ್ತಾನೆ ,ಆಗಾಗ ಚೆನ್ನಾಗಿ ಹೊಟ್ಟೆ ತುಂಬಿಸಿ ,ಮೈತೊಳೆದು ಕೊಟ್ಟರೆ ಅದೇ ಅವನಿಗೆ ಸ್ವರ್ಗ. ಈ ಶನಿವಾರ ಅವನಿಗೊಂದು ಒಳ್ಳೆ ಸರ್ವಿಸ್ ಕೊಡಿಸ ಬೇಕು” ಅಂದುಕೊಂಡೆ.
ಅದರಂತೆ ಆ ಶನಿವಾರ ಲಿಯೋನನ್ನು ಹೊರಡಿಸಿ ಕೊಂಡು, ಗರಾಜಿಗೆ ಹೋಗಿ ಅಲ್ಲಿಯ ಮೆಕ್ಯಾನಿಕ್ ಕೈಗೆ ಒಪ್ಪಿಸಿದಾಗ ಆತ ,”ಪರ್ವಾಗಿಲ್ಲ ಮೇಡಂ ,ಸ್ಕೂಟಿ ಚೆನ್ನಾಗಿ ಇಟ್ಟುಕೊಂಡಿದ್ದೀರಾ, ಅಂತ ಏನು ತೊಂದರೆ ಕಾಣಿಸ್ತಿಲ್ಲ ,ನಾಳೆ ಬಂದ್ ತಗೊಂಡು ಹೋಗಿ ,ಸರ್ವಿಸ್ ಮಾಡಿ ಇಟ್ಟಿರುತ್ತೇನೆ ,ಇನ್ನೊಂದು ವರ್ಷ ಯಾವ ಯೋಚನೆ ಇರಲ್ಲ “ಎಂದ.
ಅಲ್ಲಿಂದ ಹೊರಟು ಮನೆಯ ಕಡೆಗೆ ಕಾಲೆಳೆದುಕೊಂಡು ಹೋಗುವಾಗಲೂ ಲಿಯೋನದೇ ಯೋಚನೆ. ನನ್ನ ಲಿಯೋನನ್ನು ಯಾರಾದರೂ ಸ್ಕೂಟಿ ಗೀಟಿ ಎಂದರೆ ನನಗೆಕೆಟ್ಟ ಕೋಪ ಬರುತ್ತದೆ. ಆತ ನನ್ನ ತಮ್ಮ ,ನನ್ನ ಆತ್ಮಬಂಧು, ನನ್ನೆಲ್ಲಾ ಗುಟ್ಟುಗಳ ಕಿವಿ, ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ಕರೆದೊಯ್ಯುವ ವೀರ ,ಎಲ್ಲದಕ್ಕಿಂತ ಮುಖ್ಯವಾಗಿ ಪತಿಯ ಅವಲಂಬನೆಯನ್ನು ತಪ್ಪಿಸಿ ರುವ ಪರದೈವ.
ಈಗ ಒಂದೈದು ವರ್ಷಗಳ ಹಿಂದೆ, ಕೆಲಸಕ್ಕೆ ಸೇರಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಶಾಲೆಯಿಂದ ವರ್ಗವಾಗಿ ಮನೆಗೆ ಸಮೀಪದಲ್ಲಿದ್ದ ಶಾಲೆಗೆ ಬಂದದ್ದಾಯಿತು.
ಮೊದಲಿದ್ದ ಶಾಲೆ ಮನೆಯಿಂದ ದೂರ ಎಂದು ದಿನವೂ ಬಸ್ಸಿನಲ್ಲೇ ಅಲೆದಾಡಿದ್ದೆ.
ಈಗಿನ ಹೊಸ ಶಾಲೆ ಮನೆಗೆ ಕಿಲೋಮೀಟರ್ ಗಳ ಲೆಕ್ಕದಲ್ಲಿ ಹತ್ತಿರವಿದ್ದರೂ , ಮನೆಯಿಂದ ದೂರವಾಗಿದ್ದ ಆಟೋ ನಿಲ್ದಾಣಕ್ಕೆ ನಡೆದುಹೋಗಿ ,ಅಲ್ಲಿ ನಿಮಿಷ ಗಟ್ಟಳೆ ಶಾಲೆ ಇರುವ ಏರಿಯಾಗೆ ಹೋಗುವ ಆಟೋವನ್ನು ಕಾಯಬೇಕಿತ್ತು. ಆಟೋ ಸಿಕ್ಕರೂ ಶಾಲೆಯಿಂದ 2 ಪರ್ಲಾಂಗು ದೂರದಲ್ಲಿ ಇಳಿದುಕೊಂಡು, ನಡೆದುಕೊಂಡು ಶಾಲೆ ತಲುಪುವಷ್ಟರಲ್ಲಿ ಸಾಕಾಗುತ್ತಿತ್ತು.ಇದೆಲ್ಲಾ ರಗಳೆಯೇ ಬೇಡವೆಂದು ಸಹೋದ್ಯೋಗಿಗಳಲ್ಲಿ ಇಬ್ಬರುತಮ್ಮ ತಮ್ಮ ಸ್ಕೂಟಿ ಗಳನ್ನು ಏರಿ ಆರಾಮಾಗಿ ಓಡಾಡುತ್ತಿದ್ದರು.
ಸ್ವಲ್ಪ ದಿನ ಆಟೋದಲ್ಲಿ ಹೈರಾಣಾದ ನಂತರ ನನಗೂ ನಾನ್ಯಾಕೆ ಸ್ಕೂಟಿ ತಗೊಂಡು ಆರಾಮಾಗಿ ಸುಯ್ ಎಂದು ಶಾಲೆಗೆ ಬರಬಾರದು ಎನಿಸಿತು. ಜೊತೆಗೆ ಎಲ್ಲಿಗೆ ಹೋಗಬೇಕಾದರೂ ನನ್ನ ಗಂಡನನ್ನು” ರೀ “ಎನ್ನುತ್ತಾ ಅವನ ಹಿಂದೆಯೇ ಸುತ್ತ ಬೇಕಿತ್ತು. ಈಗ ನಾನೇ ನಾನಾಗಿ ,ನನಗೆ ಬೇಕಾದ ಕಡೆಗೆಲ್ಲ ಸುತ್ತುವ ಸಲುವಾಗಿ ಲೋನ್ ಮಾಡಿಸಿಕೊಂಡು ಸ್ಕೂಟಿ ಖರೀದಿಸಲು ನಿರ್ಧರಿಸಿದೆ.
” ಇದೊಂದು ಅವತಾರ ಬೇರೆ ಬಾಕಿ ಇತ್ತು” ಎಂದ ಮಾತು ಕೇಳಿಸಲಿಲ್ಲ
ನಂತರ ಎದುರಾದದ್ದು ಆಯ್ಕೆಯ ಪ್ರಶ್ನೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ಮಾದರಿಯ, ಬೆಲೆಯ ,ಸ್ಕೂಟಿ ಗಳ ಲೋಕದಿಂದ ಯಾವುದನ್ನು ಮನೆಗೆ ತರುವುದು? ಶೋರೂಮ್ ನಿಂದ ಶೋ ರೂಂಗೆ ಅಲೆದಾಡಿ ,ನನ್ನ ಬಜೆಟ್ ಗೆ ಹೊಂದಬೇಕು, ಓಡಿಸಲು ಹಗುರವಾಗಿ ಇರಬೇಕು ಎಂದು ಹುಡುಕಾಡಿದೆ. ಆಗ ನನಗೆ ಶೋ ರೂಂ ಒಂದರಲ್ಲಿ ಹಳದಿ ಬಣ್ಣದ ಸುಂದರಾಂಗ ವಿದೇಶಿ ಸ್ಕೂಟಿ ಒಬ್ಬನ ಮೇಲೆ ಕಣ್ಣುಬಿತ್ತು. ಟೆಸ್ಟ್ ರೈಡ್ ಎಂದು ಓಡಿಸಿಯೂ ನೋಡಿಯಾಯಿತು. ಎಷ್ಟು ಹಗುರ !ಎಂತಹ ರೋಡ್ ಗ್ರಿಪ್! ಎಂತಹ ಚೆಲುವ! ಎಂದು ಅವನ ಮೇಲೆ ಆಸೆಯಾಯಿತು. ಆದರೆ ಅವನ ದರ ಕೇಳಿದಾಗ ಧರೆಗಿಳಿದು ಹೋಗಿ ,ಅವನೊಬ್ಬ ಕೈಗೆಟುಕದ ನಕ್ಷತ್ರ ಎಂದುಕೊಂಡು ಸುಮ್ಮನಾದೆ. ಹಾಗೆ ಹುಡುಕಿದಾಗ ಕಪ್ಪು ಬಣ್ಣದ, ಸಾಕಷ್ಟು ಸ್ಟೈಲಿಶ್ ಆಗಿದ್ದ ,ಹಗುರವಾಗಿ ತೇಲುವ ಹಾಗೆ ಓಡುವ, ಜೊತೆಗೆ ನನ್ನ ಪರ್ಸುನಲ್ಲೂ ಹಿಡಿಯುವಂತಹ ನನ್ನ ಲಿಯೋ ಒಂದು ಹೊಸ ಶೋರೂಂನಲ್ಲಿ ಸಿಕ್ಕ. ಸರಿ ,ಖರೀದಿಸಿ ಮನೆಗೆ ತಂದ ದಿನವೇ ಮಕ್ಕಳಿಬ್ಬರನ್ನು ಕೂರಿಸಿಕೊಂಡು ನಮ್ಮ ಬಡಾವಣೆಯಲ್ಲಿ ನಾಲ್ಕು ಐದು ಸುತ್ತುಸುತ್ತಿಸಿ ಖುಷಿ ಪಟ್ಟಿದ್ದಾಯಿತು.
ಚಿಕ್ಕಂದಿನಲ್ಲಿ ಶಾಲೆಗೆ ವರುಷಗಟ್ಟಲೆ ಸೈಕಲ್ ಹೊಡೆದದ್ದು ಈಗ ಬಳಕೆಗೆ ಬಂತು. ನೀರಿಗಿಳಿದ ಮೀನಿನಂತೆ ಸಲೀಸಾಗಿ ಲಿಯೋ ಎರಡೇ ದಿನಗಳಲ್ಲಿ ನನ್ನ ಹಿಡಿತಕ್ಕೆ ಬಂದ.ಸರಿ, ಮೊದಮೊದಲು ಇಪ್ಪತ್ತು ಮೂವತ್ತು ಕಿಲೋಮೀಟರ್ ಪ್ರತಿ ಗಂಟೆಗೆ ಸ್ಪೀಡಿನಲ್ಲಿಓಡಿಸಿದ್ದಾಯಿತು.ಸಹೋದ್ಯೋಗಿಗಳು ,”ಮೇಡಂ ನಿನ್ನೆ 1 ಸೈಕಲ್ ನಿಮ್ಮನ್ನು ಓವರ್ಟೇಕ್ ಮಾಡಿದ್ದು ನೋಡಿದೆ ಎಂದು ಕಿಚಾಯಿಸಿದರೂ “ಅರೆ, ಸ್ಪೀಡಾಗಿ ಓಡಿಸಿ ಎಲ್ಲೋ ಸೇರಿಕೊಳ್ಳುವ ಬದಲು, ನಿಧಾನವಾಗಿ ಓಡಿಸಿಮನೆಸೇರಿಕೊಳ್ಳುತ್ತೇನೆ ಬಿಡ್ರಿ” ಎಂಬ ಭಂಡತನದ ಉತ್ತರ ನನ್ನಿಂದ.
ಲಿಯೋ ನನ್ನು ಏರಿದ ಬಳಿಕ ನನ್ನ ಮತ್ತು ಅವನ ಇಬ್ಬರ ಬೇರೊಂದು ಲೋಕತೆರೆದುಕೊಳ್ಳುತ್ತದೆ .ಮೊದಮೊದಲು ಮಾತನಾಡಲು ಹಿಂಜರಿದರೂ, ನಂತರ ನಿಧ ನಿಧಾನವಾಗಿ ನನ್ನನ್ನು ಕೇಳಲಾರಂಭಿಸಿದ. ಮನದಲ್ಲಿರುವ ಎಲ್ಲವೂ ,ಹೇಳಲಾಗದ್ದು ಹೇಳಬಾರದ್ದು,ಎಲ್ಲವನ್ನು ಲಿಯೋನ ಕಿವಿಗೆ ತುಂಬಿ ನಿರಾಳವಾಗುತ್ತೇನೆ.
ದಿನವೂ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕ? ಮಕ್ಕಳನ್ನು ಶಾಲೆಗೆ ಬಿಡಬೇಕ? ಡ್ಯಾನ್ಸ್ ಕ್ಲಾಸಿಂದ ಕರೆತರಬೇಕ? ಸುಮ್ಮನೆ ಊರು ಸುತ್ತಬೇಕ? ಆಸ್ಪತ್ರೆಯಲ್ಲಿರುವ ನೆಂಟರನ್ನು ನೋಡಬೇಕ?ಎಟಿಎಂನಿಂದ ಹಣ ತರಬೇಕ? ಎಲ್ಲದಕ್ಕೂ”ನಡಿಯಕ್ಕ” ಎಂದು ಈತ ಸಿದ್ಧ.ಒಂದು ದಿನ ಸಿಗ್ನಲ್ ನಲ್ಲಿ ಕೆಂಪುದೀಪ ಹಸಿರಾಗಿ ಇನ್ನೇನು ನುಗ್ಗಲು ಸಿದ್ಧರಾದಾಗ ಪಕ್ಕದ ಬೈಕ್ ನ ಪಿಲಿಯನ್ ನಲ್ಲಿದ್ದವ “ಗಾಡಿ ಒಳ್ಳೆ ಸಕ್ಕತ್ತಾಗಿದೆ”ಎನ್ನುತ್ತಾ ಹೋಗಬೇಕ!”ಲಿಯೋ ನಡಿಯೋ, ಆ ನನ್ ಮಗನ್ನ ಗುದ್ದಿ ಬೀಳಿಸಿ ,ಸರ್ಯಾಕ್ಬುದ್ಧಿ ಕಲಿಸೋಣ” ಎಂದರೆ “ಹೋಗ್ಲಿ ಬಿಡಕ್ಕ, ಹುಡುಗರೇ ಹಂಗೆ ,ಯಾಕೆ ನೀನೇನು ಚೆನ್ನಾಗಿಲ್ವಾ ?”ಎಂದು ರೇಗಿಸಬೇಕೆ?
ಮತ್ತೊಂದು ದಿನ ರಾತ್ರಿ ಗಂಡನೊಂದಿಗೆ ಸಿಕ್ಕಾಪಟ್ಟೆಜಗಳವಾಡಿ ,”ಇನ್ನು,ನಾನಿರಲಾರೆ” ಎಂದು ಕೂಗಾಡಿ ಲಿಯೋಜೊತೆರಾತ್ರಿಯ ತಂಗಾಳಿಯಲ್ಲಿ ಮೈ ನೆನೆ ಸುತ್ತ ಹೋಗುತ್ತಿರುವಾಗ,” ಅಕ್ಕ ,ಮಕ್ಕಳಿಗೆ ಎನ್ ಅಡಿಗೆ ಮಾಡಿದ್ದೀಯ”ಎಂದ ಮಾತಿಗೆ ಮನೆಗೆ ಹಿಂದಿರುಗಿ ಮಕ್ಕಳನ್ನು ತಬ್ಬಿ ಕೊಂಡಿದ್ದಾಯಿತು.
ಹೀಗಿರುವಾಗ ಒಂದು ದಿನ ಹೋಗುವಾಗ “ಅಕ್ಕ ಒಂದು ಹಾಡು ಹೇಳಕ್ಕ” ಎಂದು ಕೇಳಿಕೊಂಡಾಗ ,ನನ್ನ ಕತ್ತೆರಾಗವನ್ನು ನಾನೇ ಮೆಚ್ಚಿಕೊಳ್ಳುತ್ತಾ, ಹಾಡುತ್ತ ,ತೇಲುತ್ತಾ ಹೋಗುತ್ತಿರುವಾಗ ಅದ್ಯಾವ ಮಾಯದಲ್ಲೋ ಹಿಂದಿನಿಂದ ಒಂದುಹೊಟ್ಟೆ ಡುಮ್ಮ ,ಕುಂಡಿ ಎತ್ತರದ ಬೈಕೊಂದು ಬಂದು, ಗುದ್ಧಿ ,ಮಿಂಚಿನಂತೆ ಪಕ್ಕದಲ್ಲೇ ಸುಳಿದು, ಕ್ಷಣಾರ್ಧದಲ್ಲಿ ನುಗ್ಗಿ ನುಸುಳಿ ಓಡಿ ಮಾಯವಾದ.
ಗುದ್ದಿದ ಕ್ಷಣವೇ “ಅಯ್ಯೋ, ಅಕ್ಕ ಮೊದಲು ನನ್ನಿಂದ ದೂರ ನೆಗೆಯೇ” ಎನ್ನುತ್ತಾ ನನ್ನ ಲಿಯೋ ಹಾರಿ ಬಿದ್ದು ನೆಲಕಚ್ಚಿದ .ಅವನು ಹೇಳಿದಾಕ್ಷಣವೇನೆಗೆದಿದ್ದಕ್ಕೆನಾನುಬದುಕಿದೆ. ಆದರೆ ಅವನು ತನ್ನ ಕೈಕಾಲುಮುರಿದುಕೊಂಡು, ದೀಪದ ಕಣ್ಣೋಡಕೊಂಡು ಬಿದ್ದಿದ್ದನ್ನು ನೋಡಿದಾಗ ನನಗೆ ಅಳುವೋ ಅಳು.ಅಷ್ಟರಲ್ಲಿ ಸುತ್ತಮುತ್ತ ನೆರೆದ ಜನ ನಮ್ಮಿಬ್ಬರನ್ನು ಎತ್ತಿ ನಿಲ್ಲಿಸಿ ಸಾಂತ್ವನ ಹೇಳಿದರು.ನನಗೇನು ಹೆಚ್ಚು ಪೆಟ್ಟಾಗಿರಲಿಲ್ಲ. ಆದರೆ ತೀವ್ರವಾಗಿ ಜಖಂಗೊಂಡಿದ್ದ ಲಿಯೋ ರಿಪೇರಿಯಾಗಿ ಮನೆಗೆ ಬರುವಷ್ಟರಲ್ಲಿ ತಿಂಗಳು ಕಳೆದಿತ್ತು.
ನಂತರವೂ ಅಪಘಾತದ ನೆನಪಿನಿಂದ ಹೊರಬರದ ನಾನು, ಲಿಯೋ ಎಷ್ಟೇ ಕರುಣಾಜನಕ ನೋಟವನ್ನು ನನ್ನತ್ತ ಬೀರಿದರೂ, ಅವನೆಡೆಗೆ ನೋಡದೆ, ನನ್ನ ಕಣ್ಣೀರು ಅವನಿಗೆ ಕಾಣದಂತೆ ಮುಖತಿರುಗಿಸಿ, ಹಲ್ಲು ಕಚ್ಚಿ, ನನ್ನ ನೋವು ನಾನು ನುಂಗಿದೆ. ಗಂಡನ ಸುಪರ್ದಿಗೆ ಅವನನ್ನು ಒಪ್ಪಿಸಿ ,ದಿನವೂ ಆಟೋದಲ್ಲಿ ಶಾಲೆಗೆ ತಿರುಗ ತೊಡಗಿದೆ.
ಹಾಗಿದ್ದಾಗ ನನ್ನ ಗಂಡ ಹೊಸ ಕಾರ್ ಖರೀದಿಸಿ ಝುಮ್ಮೆಂದು ತಿರುಗಲು ಶುರುಮಾಡಿದರು.”ಸ್ಕೂಟಿಗಿಂತ ಕಾರ್ ಸೇಫ್ ಅಲ್ವಾ ,ಒಳಗೆ ಕುತ್ಕೊಂಡು ಓಡಿಸುವುದಲ್ಲ, ಏನು ಆಗಲ್ಲ’ ಎಂದುಕೊಂಡು, ಕಾರ್ ಓಡಿಸಲು ಕಲಿಯುವ ಹಂಬಲದಿಂದ ಡ್ರೈವಿಂಗ್ ಕ್ಲಾಸ್ ಗೆ ಸೇರಿದ್ದಾಯ್ತು.ಡ್ರೈವಿಂಗ್ ಕ್ಲಾಸ್ ನಲ್ಲಿ ನನ್ನ ಟೀಚರ್ ಇನ್ನೂ ಚಿಕ್ಕ ವಯಸ್ಸಿನ ಒಬ್ಬ ಹುಡುಗ. ಡ್ರೈವಿಂಗ್ ಕಲಿಸುವುದರ ಜೊತೆಗೆ ಆತನ ಕುತೂಹಲದ 108 ಪ್ರಶ್ನೆಗಳ ಬಾಣ ಬೇರೆ! “ಮೇಡಂ ಏನ್ ಮಾಡ್ಕೊಂಡಿದ್ದೀರಾ? ಓಹ್ ಟೀಚರ! ಸ್ಕೂಲಿಗೆ ದಿನ ಹೇಗೆ ಹೋಗ್ತೀರಾ? ಸ್ಕೂಟಿ ಇಲ್ವಾ ಮನೇಲಿ? ಆಟೋದಲ್ಲಿ ಯಾಕೆ? ಕಾರ್ನಲ್ಲಿ ಸ್ಕೂಲಿಗೆ ಹೋಗ್ಬೇಕು ಅನ್ನೋ ಆಸೆನಾ?” ಇತ್ಯಾದಿ, ಇತ್ಯಾದಿ, ಕೇಳಿ ಕೇಳಿ ನಾನು ಸಾಕಾಗಿ ಲಿಯೋ ಮತ್ತು ನನ್ನ ಅಪಘಾತದ ಸುದ್ದಿಯನ್ನೆಲ್ಲ ಬಿಚ್ಚಿಟ್ಟೆ.
ನಮ್ಮ ಕಥೆ ಕೇಳಿ ಅವನಿಗೆ ನಗುವೋ ನಗು.”ಅಲ್ಲಾ ಮೇಡಂ ಒಂದ್ಸಾರಿ ಬಿದ್ದಿದ್ದಕ್ಕೆ ಸ್ಕೂಟಿ ಓಡ್ಸೋದೆ ಬಿಟ್ ಬಿಡೋದೇ?ಎಡವಿ ಬೀಳ್ತಿವಿ ಅಂತ ನಡೆಯೋದೆನ್ ನಿಲ್ಲಿಸ್ತಿವ? ರಸ್ತೇಲಿ ಹೋಗೋ ವೆಹಿಕಲ್ ನವ್ರೆಲ್ಲ ‘ ಇವತ್ತು ಮೇಡಂ ಸ್ಕೂಟಿಏರಿ ಹೋಗ್ತಿರುವಾಗ ನಾವು ಅವ್ರನ್ನ ಗುದ್ದಿ ಬಿಳಿಸ್ಬೇಕು’ಅಂತ ಸ್ಕೆಚ್ ಏನಾದ್ರೂ ಹಾಕ್ಕೊಂಡು ಬರ್ತಾರ? ಸುಮ್ನೆ ಸ್ಕೂಟಿ ಆಚೆ ತಗೀರಿ “ಅಂತ ಧೈರ್ಯ ಕೊಟ್ಟ.
ಮತ್ತೆ ಮನೆಗೆ ಬಂದು” ಲಿಯೋ “ಎಂದು ಕರೆದಾಗ ಒಂದೇ ಕಿಕ್ ಗೆ ಹಾರಿ ನೆಗೆದು “ಅಕ್ಕ” ಎಂದ ಅವನನ್ನು ನೋಡಿ ಕಣ್ಣೀರು ಉಕ್ಕಿ ಬಂತು.ಹಲವು ದಿನಗಳಿಂದ ನೀರು ನಿಡಿ ಕಾಣದೇ,ತಲೆಕೂದಲುಕೆದರಿಕೊಂಡು, ಗೊಣ್ಣೇ ಸುರಿಸಿಕೊಂಡು ದಿಕ್ಕೆಟ್ಟು ನಿಂತಿರುವ ತಬ್ಬಲಿ ಮಗುವಿನಂತೆ ಕಂಡ ಆತನನ್ನು ನೋಡಿ ನನ್ನ ಹೃದಯ ಬಾಯಿಗೆ ಬಂತು.ಆತನನ್ನು ಚೆನ್ನಾಗಿ ತೊಳೆದು ಒಂದು ಒಳ್ಳೆ ಸರ್ವಿಸ್ ಮಾಡಿಸಿ, ಹೊಟ್ಟೆ ತುಂಬಾ ಪೆಟ್ರೋಲ್ ಹಾಕಿಸಿ ಒಂದು ದಾರಿಗೆ ತಂದೆ.
ಅಲ್ಲಿಂದ ಮತ್ತೆ ಶುರುವಾದ ನನ್ನ ಮತ್ತು ಅವನಒಡನಾಟಇನ್ನೂಮುಂದುವರೆದಿದೆ.ಅನಿವಾರ್ಯ ಕಾರಣಗಳಿಂದ ಶಾಲೆಯಿಂದ ಮನೆಗೆ ದೂರವಾಗಿ ,ದಿನವೂ ಬಸ್ ನಲ್ಲಿ ತಿರುಗುವ ಹಾಗಾದರೂ, ಬಸ್ ನಿಲ್ದಾಣದ ವರೆಗಾದರೂ ಜೊತೆಯಲ್ಲೇ ಬರುತ್ತಾನೆ.ಹೇಗಿದ್ದರೂ ಬೇರೆಲ್ಲೆಡೆಗೆ ತಿರುಗಾಡುವುದು ಇದ್ದೇ ಇದೆಯಲ್ಲ.ಆಗಾಗ್ಗೆ ದಾರಿಯಲ್ಲಿ ಕಾಣ ಸಿಗುವ ಆ ಹಳದಿ ಬಣ್ಣದ ಸುಂದರಾಂಗ ವಿದೇಶಿ ಸ್ಕೂಟಿ ನಮ್ಮಿಬ್ಬರನ್ನು ನೋಡಿ ಕಣ್ಣು ಹೊಡೆದು ಹಲ್ಲು ಕಿರಿದು ಅಣಕಿಸಿದರೂ ಈಗೆನೂ ಬೇಸರವಿಲ್ಲ.
ಲಿಯೋ ಬೆನ್ನೇರಿ ಹೋಗುವಾಗ ಸಿಗುವ ಗಾಳಿಯ ಸ್ಪರ್ಶ,ಕಣ್ಣಿನ ನೋಟ,ಏಕಾಂತದ ಸುಖ ಮತ್ತೆ ಇನ್ನೆಲ್ಲಿ ಸಿಕ್ಕೀತು? ಹಾಗಾಗಿ “ಲಿಯೋಗೆ ಜೈ” ಅನ್ನುತ್ತಾ ಅವನೊಂದಿಗೆ ಒಡನಾಡುತ್ತ ನನ್ನ ಜೀವನವೀಗ ಓಡುತ್ತಿದೆ.
****************************************
ಬಹಳ ತಮಾಷೆಯಾಗಿ ಬರೆದಿದ್ದೀರಿ. ಓದಲು ಆಪ್ತ ಎನಿಸಿತು…