ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’

ಕವಿತ

ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ

ವಸುಂಧರಾ ಕದಲೂರು

OldMan,Me,Ballpoint,2019 : Art

ನನ್ನಪ್ಪನಿಗೆ ಹೆಚ್ಚೇನೂ ಆಸೆಗಳಿರಲಿಲ್ಲ
ನಮ್ಮ ಓದಿನ ಕುರಿತೂ…
ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ
ಮದುವೆಯಾದರೆ ಸಾಕು. ಒಳ್ಳೆಯ
ಹುಡುಗ ತನಗೆ ಅಳಿಯನಾಗಿ,
ಮಕ್ಕಳಿಗೆ ಬಲವಾದ ಗಂಡನಾಗಿ
ಒಟ್ಟಾರೆ ಚೆಂದಾಗಿ ಬದುಕಿದರೆ ಸಾಕು.

ಇಷ್ಟೇ…

ನನ್ನಪ್ಪ ಎಂದೂ ಯಾವ
ಹೆಣ್ಣುಮಕ್ಕಳನ್ನು ಹೀಗಳೆಯಲಿಲ್ಲ,
ನಿಮ್ಮ ಕೈಲಾಗದ ಕೆಲಸವಿದೆಂದು
ಹೇಳಿ ನಮ್ಮ ಚೈತನ್ಯವನೆಂದೂ
ಉಡುಗಿಸಲಿಲ್ಲ.
ನಾವೊಂದು ಹೊರೆಯೆಂದು
ನಡೆ ನುಡಿಯಲೆಂದೂ ತೋರಲಿಲ್ಲ.
ಗಂಡುಮಕ್ಕಳೊಡನೆ ಹೋಲಿಸಿ
ಜರಿಯಲಿಲ್ಲ. ಜರಿಯ ಲಂಗ ಹೊಲೆಸಿ
ಕೊಡುವುದ ಮರೆಯಲಿಲ್ಲ.

ನನ್ನಪ್ಪನಿಗೆಂದೂ ಅಪಾರ
ಆಸ್ತಿ ಗಳಿಸುವ ಹುಕಿ ಹುಟ್ಟಿರಲಿಲ್ಲ.
ಬಂಧುಜನ ಪ್ರೀತಿ; ಗಳಿಸಿದ ಸ್ನೇಹ
ವಿಶ್ವಾಸಗಳನು ಜೋಪಾನ- ಜತನ
ಮಾಡುವ ರೀತಿ ಇಷ್ಟೇ ಆತ ಕೊನೆಗೆ
ನಮಗಾಗಿ ಗಳಿಸಿಟ್ಟ ಆಸ್ತಿ..

ಅಪ್ಪನಿಗೆಂದೂ ಇತರೆ ಆಸೆಗಳಿರಲಿಲ್ಲ

ತನ್ನ ಮಕ್ಕಳಿಗಿಂತಲೂ
ಕಾಣದ ಮೊಮ್ಮಕ್ಕಳ ಮೇಲೆಯೇ
ಹೆಚ್ಚು ಮೋಹ! ಆಗಾಗ್ಗೆ ಕನಸುಕಟ್ಟಿ
ನುಡಿಯುವ ಹುಚ್ಚು ವ್ಯಾಮೋಹ.
‘ನಿಮಗೆ ಮದುವೆಯಾಗಿ, ಮೊಮ್ಮಕ್ಕಳೆಲ್ಲಾ
ದೊಡ್ಡವರಾಗಿ ಊರ ಮನೆ ಬಾಗಿಲಿಗೆ
ಕಾರುಭಾರಿನ ಭರಾಟೆಯಲಿ
ಬರುವಾಗ ಅಂಗಳದಿ ನಿಂತು ಆದರದಿ ಬರಮಾಡಿಕೊಳುವೆ..’ ಹೀಗೆ..

ಒಂದು ನಿರಪಾಯಕಾರಿ ಕನಸು ಕಾಣುತ್ತಾ ನಿರುಮ್ಮಳವಾಗಿದ್ದ ಅಪ್ಪ ಮರಳಿ ಬಾರದ
ಊರಿಗೆ ತೆರಳಿ; ಈಗ ಅವರ ಮಕ್ಕಳನೂ
ಮೊಮ್ಮೊಕ್ಕಳನೂ ಊರಿಗೊಮ್ಮೆ ಬನ್ನಿರೆಂದು ಕರೆಯಲಾರದ ಕನಸಾಗಿ ಉಳಿದರು. ಹಬ್ಬ
ಹರಿದಿನಗಳಲಿ ಹೋದೆವೆಂದರೂ ‘ನಾಕು
ದಿನ ಹೆಚ್ಚು ನಿಲ್ಲಿರೆಂದು’ ತಡೆಯಲಾರದ
ಊರು ಈಗ ಸವೆಯಲಾರದ ದಾರಿಯಲ್ಲಿದೆ.

ಆ ನನ್ನಪ್ಪನಿಗೆ ಹೆಚ್ಚು ಆಸೆಗಳಿರಲಿಲ್ಲ
ಇದ್ದವುಗಳನೂ ಈಡೇರಿಸಿಕೊಳಲು
ಕಾಲನೆಂಬ ಕಟುಕ ಕರುಣೆ ತೋರಲಿಲ್ಲ.

           *********

7 thoughts on “ಅಪ್ಪನಿಗೆ ಹೆಚ್ಚೇನು ಆಸೆಗಳಿರಲಿಲ್ಲ’

  1. ಚಂದದ ಅಭಿವ್ಯಕ್ತಿ!! ಮಾರ್ಮಿಕ ಕವಿತೆ! ಹೆಣ್ಣುಮಕ್ಕಳನ್ನೂ ಗಂಡು ಮಕ್ಕಳಂತೆಯೇ ಬೆಳೆಸುವ ಅಪ್ಪ ಸದಾ ಆದರ್ಶನೀಯ. ಕಾಲನೆಂಬ ಕಟುಕ ಕರುಣೆ ತೋರಲಿಲ್ಲ ಎಂಬ ಕೊನೆಯ ಸಾಲು ಹೃದಯ ಆರ್ದ್ರವಾಗಿಸಿತು.. ನೆನಪುಗಳೊಂದಿಗೆ.. !!

    1. ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು…

  2. ಎಷ್ಟೋ ಹೆಣ್ಣು ಮಕ್ಕಳ ಸಂಕಟಕ್ಕೆ ನಿಮ್ಮ ಕವಿತೆ ಧ್ವನಿಯಾಗಿದೆ
    ನನ್ನ ಸಂಕಟವೂ ಅರಿವಿಗೆ ಬಂದು ಕಣ್ಣೀರಾದೆ ಅಂತಃಕರಣ ಕಲಕಿದ ಕವಿತೆ

    1. ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು…

  3. ಅಪ್ಪನಿಗೆ ಹೆಚ್ಚೇನೂ ಆಸೆಗಳಿರಲಿಲ್ಲ,

    ಅವರಿಗೆ ಗಂಡೂ ಹೆಣ್ಣೂ ಮಕ್ಕಳೇ.

    ಅಪ್ಪನಿಗೆ ಮಕ್ಕಳ ಖುಷಿಯೇ ಹಿರಿಯಾಸೆ.

    ಪಾಲಕರನ್ನು ಕಣ್ಮುಂದೆ ತಂದ ಪದ್ಯ.

Leave a Reply

Back To Top