ಲಹರಿಸಂಗಾತಿ
ಕಲ್ಪನಾ ಎಸ್ ಪಾಟೀಲ್
“ಒಂಟಿ ಚಪ್ಪಲಿಯ ಗೋಳಾಟ”


ನಾಲ್ಕು ದಿನ ಅಂತ ಊರಿಗೆ ಹೋಗಿದ್ದೆ
ಮರಳಿದಾಗ ಅನಿಸ್ತಿತ್ತು ಏನೋ ಇಲ್ಲಲಾ
ಮನೆ ಮುಂದ ಅಂಗಳದಾಗ,ಏನಿಲ್ಲ,?ಏನಿಲ್ಲ ಅಂತ ಒಳಗ ಕಾಲಿಡೊದ್ರಾಗ ಒಂಟಿ ಚಪ್ಪಲಿ ಗೋಳಾಡತಿತ್ತು.
ಗೊಳೋ ಅಂತ ಅಳತಿತ್ತು ಕುಂಯ್ಯೋss ಮರೋss ಅಂತ ಆಗಾಗ ನಿಟ್ಟುಸಿರು ಬಿಡತಾನೆ ಇತ್ತು. ನಾ ಏಕಾಂಗಿ ಆಗೇನಿ ಅಂತ ಬಿಕ್ಕಿ ಬಿಕ್ಕಿ ಅಳೋದನ್ನ ನೋಡಿ..
ಏನಾಯಿತು? ಯಾಕೆ ಈ ರೋದನೆ? ಬಿಸಿಲ ಜಾಸ್ತಿ ಆಯಿತಾ?
ಮನಸ್ಸು ಪ್ರಶ್ನೆ ಹಾಕಿತು,ತಕ್ಷಣ ನೆರಳಲ್ಲಿ ಬಿಡೋಕ ಬಲಕಾಲು ಮುಂದೆ ಬಂದು, ಗಬಕ್ಕನ ಹಿಂದೆ ಸರಿದು ಸುಮ್ನ ನಿಲ್ಲತು.
ಯಾಕ ನಿನಗೇನಾತು? ನೀ ಯಾಕ ನಿಂತಿ ನೆರಳಾಗ ಬಿಡಾಕತ್ತಿದ್ದ್ಯಲ್ಲ.?
ಅಲ್ಲಿವರೆಗೂ ಅದು ಎಡಗಾಲಿನ ಚಪ್ಪಲಿ, ಅಂತ ನನ್ನ ತಲೆಗೆ ಹೊಳದಿರಲಿಲ್ಲ. ಹೌದಲ್ಲ.
ಹೌದು, ಎಲ್ಲಿ ನನ್ನ ಜೊತೆಗಾರ? ನೀನು ಹೋದಾಗಿನಿಂದ ನಾನು ಒಂಟಿಯಾಗಿದ್ದೀನಿ ಅಂತ ಗೋಳಾಡಾಕತ್ತು. ನಾವಿಬ್ಬರೂ ಎಂದೂ ಅಗಲತಿರಲಿಲ್ಲ, ಎಲ್ಲಿ ಹೋದರೂ ಇಬ್ಬರೂ ಜೊತೆಯಾಗೆ ಹೋಗತಿದ್ದವಿ. ಒಟ್ಟಿಗೆ ಇರತಿದ್ದವಿ.
ಅದ ಯಾವ ನಾಯಿ ನಮ್ಮನ್ನ ಬ್ಯಾರೆಮಾಡಿದೆಯೋ? ಮುಗಿತಿನ್ನು ನನ್ನ ಕತಿ,ನೀನು ನನ್ನ ದೂರ ಮಾಡತಿ.
ಕಸದಾಗ ಎಸಿತಿ?
ನನ್ನ ನೋವು ನಿನಗೆಲ್ಲಿ ಕಾಣಿಸಬೇಕು. ನನ್ನ ನೀನ ತಯಾರ ಮಾಡಿ, ಆದ್ರೂ ನನಗ ಮಾತು ಬರುದಿಲ್ಲ.
ಅದೇನೋ ಅಂತೀರಲ್ಲ ನೀವು ಮಿಸ್ ಮ್ಯಾಚಂತ ಹಂಗ ಮಾಡಕೊ.
ನಾ ಎಲ್ಲಿ ಹೋಗುದಿಲ್ಲ ಅಂತು.
ಹುಂ, ಆಯಿತ ಆಯಿತ ಸರಿ ನೋಡತಿನಿ ತಡೆ.
ಮಿಸ್ ಮ್ಯಾಚಂತ,ಆಹಹಹಾ…
ಈ ನಮ್ಮ ಕರಿಯಗ ಚಪ್ಪಲಿಯಂದ್ರ ಬಾಳ ಪ್ರೀತಿ. ನನಗ ಅವನ ಮ್ಯಾಲ ಸಂಶಯ ಬರಾಕತ್ತಿತ್ತು.
ನನ್ನ ನೋಡಿ ಎದೆ ಎತ್ತರಕ್ಕ ಜಿಗಿದ, ಮುಖ ನೆಕ್ಕಿ ಅರಿವಿ ಜಗ್ಗಿ ನನ್ನ ಯಾಕ ಬಿಟ್ಟ ಹೋಗಿದ್ದೆ? ಅಂತ ಕೇಳತಿತ್ತು.
ಲೇ ಕರಿಯ ಚಪ್ಪಲಿ ಎಲ್ಲ್ಯಲೇ? ನಾ ನೋಡಿಲ್ಲ ಅಂತ ವರದಿ ಒಪ್ಪಿಸಿತು.
ಬಾಳಷ್ಟು ಓಣ್ಯಾಗ ಹೋಗವ್ರನ್ನ ಸ್ನೇಹಿತರನ್ನ ಮಾಡಿಕೊಂಡಿದ್ದ.
ಮನಿಯೆಲ್ಲ ಹುಡಕಾಡಿ, ಒಳಗ ಎಲ್ಲ ಹುಡಕಾಡಿದೆ.
ಈಗರ ಬಂದಿ, ಕುಂಡರು, ನೀರು ಕುಡಿ ಅಂದಳು ಆಯಿ. ಸಿಗತೈತಿ ಇಲ್ಲೆ, ಎಲ್ಲ್ಯರ ಬಿದ್ದಿರತೈತಿ.
ನನಗೂ ಅದ ಸಿಗೂತನ ಸಮಾಧಾನ ಇರಲಿಲ್ಲ. ಯಾಕೋ ಬಾಳ ಕೆಟ್ಟ ಅನಿಸಾಕತ್ತಿ, ನಾನು- ನನ್ನ ಸ್ನೇಹಿತರಿಂದ ದೂರಾದಂಗ ಅನಿಸಾಕತ್ತ.
ಹೊರಗಡೆ ಹೋಗಿ ಮನೆಯ ಹಿಂದೆ, ಅಗ್ಗಲ-ಮಗ್ಗಲ ಒಂದು ಸುತ್ತ ಹೊಡೆದು ಸ್ವಲ್ಪ ದೂರ ಹೊದಾಗ ಅಲ್ಲಿ ಒಂದು ಚಪ್ಪಲಿ ಕಾಣಿಸಿತು, ಹತ್ತಿರ ಹೋಗಿ ನೋಡಿದ್ರ ಬಲಗಾಲಿನ ಚಪ್ಪಲಿ ಅನಾಥವಾಗಿ ಬಿದ್ದಿತ್ತು.
ಇದರದು ಅದ ಗೋಳು. ಅಯ್ಯೋ, ಯಾರಿಗೆ ಹೇಳಲಿ ನನ್ನ ಗೋಳು? ನಮಗೂ ಮನುಷ್ಯರ ತರ ಮಾತಾಡೋಕ ಬರತಿದ್ರ, ಕೂಗಬಹುದಿತ್ತು. ಚೀರಿ ಹೇಳಬಹುದಿತ್ತು. ಗಂಟಲೆ ಇಲ್ಲ. ತಮ್ಮ ಪಾದಗಳನ್ನ ಸುರಕ್ಷಿತವಾಗಿಟ್ಟುಕೊಳ್ಳಾಕ ನಮ್ಮನ್ನ ಸೃಷ್ಟಿ ಮಾಡಿಕೊಂಡ ಮನ್ಷ್ಯಾ ಆವಾಗವಾಗ, ಕಳೆದುಕೊಂಡಾಗಲೂ “ಹೋಗಲಿ ಬಿಡ ಪೀಡಾ ಹೋತಂತ” ಅಂತಿರಿ. ನೀವು ಕಳೆದು ನಮ್ಮನ್ನ ಪೀಡಾ ಅಂತಿರಿ. ಇದು ಖರೇನ, ಹಿಂಗ ಎಷ್ಟ ಸಲ ನಮ್ಮ ಮನ್ಯಾನವ್ರು, ಮದುವೆಗೆ, ಮಣ್ಣಿಗೆ ಹೋದಾಗ, ಯಾರೋ ಹಳೆಯ ಹರಿದ,ಸವೆದ,ಬಣ್ಣ ಮಾಸಿದ, ಉಂಗುಟ ಕಿತ್ತಿದ ಜೋಡುಗಳನ್ನ ಬಿಟ್ಟು ಇವರ ಹೊಸ ಜೋಡನ್ನ ಧರಿಸಿ ಹೋಗಿದ್ದಾಗ ಬರಿಗಾಲಲ್ಲಿ ಮನೆಗೆ ಬಂದಾಗ ಹಂಗ ಹೇಳಿದ್ದ ನೆನಪಾಯಿತು.
ಅಷ್ಟರಾಗ, ಇದು ಓsss ನೀವೇನು ನನ್ನ ಹುಡಕ್ಕೊಂಡ ಬಂದ್ರಾ ಅಂತ ಕೇಳತು.
ಹುಂ ಅಂದೆ..
ನೀವು ಊರಗೆ ಹೋಗಬೇಕಾದ್ರ ನಮ್ಮನ್ನ ಎತ್ತಿಟ್ಟು ಹೋಗೊದಲ್ಲ! ನಮಗೇನು ಎದ್ದ ಹೋಗಾಕ ನಿಮ್ಮ ತರಹ ಕಾಲಿದ್ದಾವಾ… ನಮಗ ಜೀವ ಇಲ್ಲದಂಗ ಸೃಷ್ಟಿ ಮಾಡಿರಿ.
ಬೇರೆ ಬೇರೆ ದೇಶದಾಗ ಮಕ್ಕಳಿಂದ ಹಿಡಿದು ದೊಡ್ಡವರು ಧರಿಸೊ ಜೋಡಗಳೊಳಗ ಬಣ್ಣ ಬಣ್ಣದ ವಿದ್ಯುತ್ ಲೈಟ್ , ಮ್ಯುಜಿಕ್ ಹಾಕತಾರ.
ನಮ್ಮನ್ನ ಇಡಾಕ ಚಂದ ಚಂದ ಕಪಾಟ ಮಾಡಸ್ತಾರ.
ನೀವು ಅದಿರಿ ಕೋಟಿಗಟ್ಟಲೆ ರೊಕ್ಕ ಖರ್ಚ ಮಾಡಿ ಮನೆ ಕಟ್ಟಸ್ತಿರಿ, ಹೊರತು ನಮಗ ಜಾಗ ಮಾತ್ರ ಇರುದಿಲ್ಲ. ಹಾಂ, ಇನ್ನೊಂದೇನದ ಹೊರಗಿನಿಂದ ಬರುವವರಗೆ ನಾವು ಮೊದಲ ಕಾಣಿಸಬಾರದಂತಿರಿ. ಹೇಳಿ ಮಾಡಸಿದ ಜೋಡಿ ಸಿಗುದಂದ್ರ ನಾವ ಅಲ್ಲೇನ, ಮತ್ತೇನ ಸಿಗತೈತಿ ನಿಮಗ?
ಅಂದಾಗ ನನಗ “ಹೇಳಿ ಮಾಡಿಸಿದ ಜೋಡು ಸಿಗುವುದು ಚಪ್ಪಲಿಯಲ್ಲಿ ಮಾತ್ರ ಉಳಿದೆಲ್ಲ ಹೊಂದಾಣಿಕೆ” ಅಂತ ಎಲ್ಲೋ ಓದಿದ್ದ ನೆನಪಾಯಿತು.
ನಾನಂದೆ ಹೋಗಲಿ ಬಿಡು, ಈಗ ಸುಮ್ಮನ ನಡಿ ಅಂತ ಒಂಟಿಯಾದ ಜೋಡನ್ನ ಧರಿಸಿ ಮನೆಗೆ ಬಂದು ಒಂಟಿಯಾಗಿದ್ದರ ಪಕ್ಕ ಬಿಟ್ಟಾಗ, ಎರಡು ಬಾಳ ಖುಷಿ ಪಟ್ಟಂತೆ ಭಾಸವಾಗತಿತ್ತು.
ಎರಡು ಕೋಪ,ಇರಿಸುಮುರಿಸನ್ನ ಬಿಟ್ಟು ಎಲ್ಲ ಬೇಗ ಮರೆತು ಶಾಂತ ಅದವು.
ನನ್ನ ಮನಸ್ಸು ಹೇಳಿತು, ನೋಡು ನೀವು ನರಮಾನವರು ಇರತಿರಿ, ಎನಾದ್ರೂ ಆದ್ರ ಲಗೂ ಮರೆಯೊದಿಲ್ಲ, ದುಃಖಿಸ್ತಿರಿ, ಮತ್ತ ಮತ್ತ ನೆನೆಸಿಕೊಂಡು ಅಳತಿರಿ. ಏನೋ, ಆದರೂ ಮನುಷ್ಯ ಅನ್ನೋ ವಿಚಿತ್ರ ಪ್ರಾಣಿನ ಆ ಭಗವಂತ ಅದೆಷ್ಟು ತಾಳ್ಮೆಯಿಂದ ಸೃಷ್ಟಿ ಮಾಡಿದ್ದಾನಲ್ಲ ಅಂತು.
ಹುಂ, ಅದಕ್ಕ ಅಲ್ಲ ನನ್ನಲ್ಲಿ ಅಷ್ಟ ತಾಳ್ಮೆ ಐತಿ ಅಂದೆ, ಅದು ಶಾಂತವಾಗಿ ನಸುನಕ್ಕಿತು. ನನಗೂ ಖುಷಿ ಆಯಿತು.
“ಹುಂ, ಚಪ್ಪಲಿ ಸಿಕ್ಕಿತಲ್ಲ, ಬಾ ಇನ್ನsss ಒಳಗ, ಬಿಸಿಲ ಬಾಳೈತಿ ಹೊರಗ” ಅಂತ ಆಯಿಯ ಕೂಗು ಕೇಳಿಸಿ ಒಳ ನಡೆದೆ.
ಕಲ್ಪನಾ ಎಸ್ ಪಾಟೀಲ
ಕಾವ್ಯಧರೆ



