ಕಾವ್ಯ ಸಂಗಾತಿ
ನೀನು ಶಿಲೆಯಾದರೆ…
ತೆಲುಗು ಮೂಲ : ಜೂಕಂಟಿ ಜಗನ್ನಾಥಂ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್



ನೀನು ಒಂದು ಕಲ್ಲು ಆದರೆ
ಇನ್ನು ಮುಂದೆ ಈ ದಾರಿಯಲಿ ರಾಮನು ಬರುವುದಿಲ್ಲ,
ಒಂದು ವೇಳೆ ಬಂದರೂ, ಪಾದದ ಧೂಳಿ ಸೋಕಿ
ನೀನು ಅಹಲ್ಯೆಯಾಗಿ ಆಕಾರ ಪಡೆಯಲಾರೆ.
ಆದರೆ ಅಥವಾ ಆದರೆ,
ನೀನು ಒಡ್ಡರನ ಕೈಯಲ್ಲಿ
ಚೂರುಚೂರಾಗಿ ಜಲ್ಲಿಕಲ್ಲು ಆಗಿ
ಮುಂದಿನ ತಲೆಮಾರುಗಳಿಗಾಗಿ
ದಾರಿಯನ್ನು ನಿರ್ಮಿಸಲಾಗುತ್ತಿ.
ಇಲ್ಲ, ಬೇಡ ಎಂದರೆ,
ನಾಲ್ಕು ಮೂಲೆಗಳಲಿ ಕತ್ತರಿಸಲ್ಪಟ್ಟು,
ನೀನು ಬೆವರು ಸುರಿಸಿ ಕಡೆದ ಕಟ್ಟಡದ ಕಲ್ಲಾಗಿ
ಅನಾದಿಯಾಗಿ ಕಾಣದಂತೆ ಪಾಯವಾಗಿ
ಮನೆಮನೆಗೂ ಆಸರೆಯಾಗುತ್ತಿ.
ಅಥವಾ ಅವರು ದಯೆಯಿಲ್ಲದೆ ನಿನ್ನ ತುಳಿದು
ಮೇಲಕ್ಕೆ ಏರಿಹೋಗುವ ಮೆಟ್ಟಿಲುಗಳಾಗಿ ಮಾರ್ಪಡುತ್ತಿ.
ಆದರೂ ನೀನು ಆಗಬೇಕು ಎಂದರೆ,
ಶಿಲ್ಪಿಯ ಸುತ್ತಿಗೆ ಮತ್ತು ಉಳಿಯ ಏಟುಗಳಿಗೆ
ನಿಶ್ಯಬ್ದವಾಗಿ ಬೊಬ್ಬೆ ಹಾಕುತ್ತಾ,
ಚೂರುಚೂರಾಗಿ ಹೋಗಿ,
ಒಂದು ಆಕಾರ ತೆಗೆದುಕೊಂಡು,
ಅಮಾಯಕ ಜನರಿಂದ
ದೇವತೆಯಾಗಿ ಪೂಜಿಸಲ್ಪಡಬಹುದು.
ಆದರೂ ಸುಳಿವು ಸದ್ದು ಇಲ್ಲದೆ,
ಒಂದು ಸಾಧಾರಣ ಕಲ್ಲಿನಂತೆ ಬದುಕುತ್ತೇನೆ ಎಂದರೆ,
ಯಾರಿಗೂ ದೊಡ್ಡ ಆಕ್ಷೇಪಣೆ ಇರಲಿಕ್ಕಿಲ್ಲ.
ನಿನ್ನ ರೆಕ್ಕೆಗಳ ಕಷ್ಟ ನಿಂದೇ ಹೊರತು,
ನೀನು ಎಷ್ಟೇ ಆರಾಟಪಟ್ಟು ದಾರಿಯ ಬದಿಯಲಿ
ಕಣ್ಣು ಕಾಯುವಂತೆ ಕಾದಿದ್ದರೂ,
ರಾಮನೂ, ದೇವರೂ ಬರಲಾರರು.
ಅಲ್ಲಾ ಬಂದು ಸುಂದರವಾದ ತೋಟವನ್ನು ದಯಪಾಲಿಸಲಾರ.
ಕುರುಬನು ಬಂದು ತೋಳಗಳ ಕಾಟದಿಂದ
ಕುರಿಗಳನ್ನು ಕಾಪಾಡಲಾರ.
ಒಂದು ವೇಳೆ ಬಂದರೆಂದರೆ,
ಕರುಣೆಯುಳ್ಳ ಮನುಷ್ಯ ಬರುತ್ತಾನೆ,
ಆದರೆ ಅವನ ಪಾದದ ಧೂಳಿನಿಂದ
ಶವದ ಆಕಾರವೇ ಹೊರತು
ನವಜೀವನದ ರೂಪ ವಿಮೋಚನೆ
ಪಡೆಯಲಾರೆ ಮತ್ತು ಪಡೆಯಲಾರೆ.
ತೆಲುಗು ಮೂಲ : ಜೂಕಂಟಿ ಜಗನ್ನಾಥಂ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್



