ಕಾವ್ಯ ಸಂಗಾತಿ
ಡಾ.ಮೀನಾಕ್ಷಿ ಪಾಟೀಲ್
“ಆಕಾಶ ಪಯಣ”


ದೊಡ್ಡದಾದ ಬಯಲು
ಮೈದಾನ ಅದರೊಳಗೆ
ಸಣ್ಣ ಹಕ್ಕಿಗಳಂತೆ
ಭಾಸವಾಗುವ
ದೊಡ್ಡ ರೆಕ್ಕೆಗಳ
ಉಕ್ಕಿನ ಹಕ್ಕಿಗಳು
ಒಳಗೆ ಹೋದಂತೆಲ್ಲ
ಮಕ್ಕಳಾಟದ ರಾಕ್ಷಸನ
ಬಾಯಿಂದ ಹಾದು ಹೋದಂತೆ
ಹೋದಂತೆಲ್ಲ ದಾರಿ ತಪ್ಪಿದಂತಾಗಿ
ಹೊರ ದಾರಿ ಹುಡುಕುತ್ತಾ
ನಡೆದಂತೆಲ್ಲ
ಸುರಂಗದಲ್ಲಿ ನುಸುಳಿದಂತೆ
ಗಗನಸಖಿಯೊಬ್ಬಳು
ವೈಯಾರದಿ
ನಮಸ್ತೆ ವೆಲ್ಕಮ್ ಎಂದುಸುರಿ
ಮಾಯವಾದಳು
ಪುಷ್ಪಕ ವಿಮಾನದ ಗೊಂಬೆ
ಕಾಳರಾತ್ರಿ ಭರ್ರನೆ ಒಂದೇ ಜಿಗಿತಕ್ಕೆ
ಮೇಲೆ ಹಾರಿದಾಗ
ಒಂದು ಕ್ಷಣ ಯಾರೋ ಹಿಡಿದು
ಅಲ್ಲಾಡಿಸಿದಂತೆ
ಮತ್ತೊಂದು ಕ್ಷಣಕ್ಕೆ
ಗಾಳಿಯಲ್ಲಿ ಹಗುರವಾಗಿ ತೇಲಿದಂತೆ
ತೇಲುತ್ತಾ ತೇಲುತ್ತಾ ಆಕಾಶದಲ್ಲಿ
ಆಕಾಶ ಸೂರ್ಯ ಚಂದ್ರ ತಾರೆಗಳ
ನಾಡಿನಲ್ಲಿ ವಿಹರಿಸಿ
ಭೂಮಿಗಿಳಿದಾಗ
ಸ್ವರ್ಗದಿಂದ ಧರೆಗಿಳಿದ
ಗಂಧರ್ವರಂತೆೆ
ಡಾ. ಮೀನಾಕ್ಷಿ ಪಾಟೀಲ್




