ಅನುವಾದ ಸಂಗಾತಿ
ಶರಾ ಮಾಮೂಲಿ!!!
ತೆಲುಗು ಮೂಲ : ಸಡ್ಲಪಲ್ಲಿ ಚಿದಂಬರರೆಡ್ಡಿ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್



ಈ ಲೋಕವು ಹುಡುಕುತ್ತಿರುತ್ತದೆ
ಯಂತ್ರಗಳ ದುರ್ಬೀನುಗಳಿಂದ
ತರಬೇತಿಗೊಂಡ ತಂತ್ರಗಳಿಂದ
ಸ್ಕ್ಯಾನಿಂಗ್ ಮಾಡುತ್ತಲೇ ಇರುತ್ತದೆ
ಯಾರೋ ಒಬ್ಬರಿಗಾಗಿ ಯಾವಾಗಲೂ…….
ಆ ಯಾರೋ ನೀನೇ ಎಂದುಕೊಂಡು
ಅಮಾಯಕರಾಗಿ ಎಲ್ಲಿಂದಲೋ -ಹಾರಿ ಬೀಳುವೆ…
ಇನ್ನೇನಿದೆ?!! ಈ ಲೋಕವು–
ಅನಿರೀಕ್ಷಿತವಾಗಿ ನಿನ್ನನ್ನು ಆಕಾಶಕ್ಕೇರಿಸುತ್ತದೆ!!
ನಿನ್ನನ್ನು ಕುರಿತ ಸ್ತೋತ್ರಗಳೂ,
ಕೀರ್ತನೆಗಳು, ಭಜನೆಗಳು
ಆನಂದ ಆಶ್ಚರ್ಯಗಳಿಂದ ಆಸ್ವಾದಿಸುತ್ತಾ
ನಿನ್ನ ಹಿರಿಮೆಗೆ ನೀನೇ ನಿಬ್ಬೆರಗಾಗುವೆ!
ಏನೋ ಮಾಡಲೆಂದೋ, ಹೇಳಲೆಂದೋ ಪ್ರಯತ್ನಿಸುವ ನಿನ್ನನ್ನು
ಆತುರದಿಂದ ಅಕಶೇರುಕ ಸಮೂಹವು
ಹೆಬ್ಬಾವುಗಳಾಗಿ ಸುತ್ತಿಕೊಳ್ಳುತ್ತವೆ.
ದುರಾಸೆಯಿಂದ ಪರಾವಲಂಬಿ ಕ್ರಿಮಿಗಳು
ರಕ್ತ ಪಿಶಾಚಿಗಳಾಗಿ ಅಂಟಿಕೊಳ್ಳುತ್ತವೆ.
ಕಲವರಗೊಂಡು
ಅಸ್ತಿತ್ವ ಕಳೆದುಕೊಂಡು
ಅಳಲುವ ನಿನ್ನನ್ನು
ನಿರ್ದಯವಾಗಿ
ನಕ್ಷೆಯ ಅಮೃತಶಿಲೆಯ ಗೋರಿಯಲ್ಲಿ ಸೇರಿಸಿ
ಪೂರ್ಣ ಗಾತ್ರದ ಶಿಲಾ ವಿಗ್ರಹವಾಗಿ ಮಾರ್ಪಡಿಸಿ
ನಿನ್ನ ಪ್ರತಿಮೆಗೆ ನೀನೇ ಕ್ಷೀರಾಭಿಷೇಕ ಮಾಡುವಂತೆ
ನಿನ್ನ ಕಾಲುಗಳಿಗೆ ನೀನೇ ನಮಸ್ಕರಿಸುವಂತೆ
ಭಜನೆಗಳು, ಸ್ತೋತ್ರಗಳು, ಕೀರ್ತನೆಗಳು….
ವಾಹ್…..!! ಅದ್ಭುತ!!
ಮತ್ತೊಬ್ಬ ಯಾರೋ ಬಂದು ಬೀಳುವವರೆಗೆ…
ಶರಾ ಮಾಮೂಲಿಯೇ!!!!!
ತೆಲುಗು ಮೂಲ : *ಸಡ್ಲಪಲ್ಲಿ ಚಿದಂಬರರೆಡ್ಡಿ*
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್




ಶ್ರೀಶ್ರೀ ಕವಿತೆಯನ್ನು ನೆನಪಿಸಿತು.