ಕಾವ್ಯ ಸಂಗಾತಿ
ನಿಶ್ಚಿತ ಎಸ್
“ಗಂಟು ಮೂಟೆ ಕಟ್ಟಿ”


ಇವರು ಯಾರೆಂದು ನಾ ತಿಳಿದಿರಲಿಲ್ಲ…
ಇವರೇನೆಂದು ನಾ ಅರಿದಿರಲಿಲ್ಲ….
ಇವರು ಹಾಕಿದ ಈ ಮೂರು ಗಂಟಿಗೆ…
ನಾ ಬಂದೆ ನನ್ನೆಲ್ಲ ಭಾವನೆಗಳನ್ನು ಗಂಟು ಮೂಟೆ ಕಟ್ಟಿ….
ಇವರ ರೀತಿ ನೀತಿಗೆ ಬದಲಾಗಿ…
ಇವರ ಜೀವನಕೆ ನಾ ಗೆಳತಿಯಾಗಿ…
ಇವರ ಮನೆಗೆ ಸೊಸೆಯಾಗಿ…
ನಾ ಬಂದೆ ನನ್ನ ಜೀವನ ಶೈಲಿಯನ್ನು
ಗಂಟುಮೂಟೆ ಕಟ್ಟಿ…
ಇವರು ಏನೇ ಹೇಳಿದರೂ
ಹೂ ಅನ್ನುತ್ತಾ..
ಮನೆಯವರು ಏನೇ ಹೇಳಿದರು
ಹಾ ಅನ್ನುತ್ತಾ…
ಅವರು ಹೇಳಿದ ತತ್ವಗಳಿಗೆ ಶರಣಾಗುತ್ತಾ…
ನಾ ಬಂದೆ ನನ್ನೆಲ್ಲಾ ಸೋಮಾರಿತನವ ಗಂಟು ಮೂಟೆ ಕಟ್ಟಿ…
ಅವರು ಹೇಳಿದ ಮಾತು ಸರಿ ಇದ್ದರು…
ಅವರು ಹೇಳಿದ ಮಾತು
ಸರಿ ಇಲ್ಲದಿದ್ದರೂ…
ಎಲ್ಲಾ ಮಾತಿಗೂ ಮರು
ಮಾತನ್ನು ಆಡದೆ…
ನಾ ಬಂದೆ ನನ್ನೆಲ್ಲಾ ಸ್ವಾಭಿಮಾನವ ಗಂಟು ಮೂಟೆ ಕಟ್ಟಿ…
ಅಪ್ಪನಿಗೆ ನಾ ಅರಗಿಣಿಯಾಗಿದ್ದರು…
ಅಮ್ಮನಿಗೆ ನಾ ಆಸರೆಯಾಗಿದ್ದರೂ…
ಬಂದು ಬಳಗಕ್ಕೆ ನಾನೊಲುಮೆಯಾಗಿದ್ದರು…
ನಾ ಬಂದೆ ಇವರಿಗಾಗಿ ನನ್ನೆಲ್ಲ ಬಟ್ಟೆಯನ್ನು ಗಂಟು ಮೂಟೆ ಕಟ್ಟಿ…
ನನ್ನೆಲ್ಲಾ ಭಾವನೆಗಳಿಗೆ ಬೆಲೆ ಇಲ್ಲದಿದ್ದರೂ…
ನನ್ನೆಲ್ಲಾ ಮಾತುಗಳಿಗೆ ಮೌಲ್ಯವಿಲ್ಲದಿದ್ದರೂ…
ನನ್ನ ಆಚರಣೆಗಳನ್ನು ಪಾಲಿಸದಿದ್ದರೂ…
ನಾ ಬಂದೆ ಎಲ್ಲವನ್ನು ಸಹಿಸಿ…
ಇವರ ಪ್ರೀತಿಗೆ ಶರಣಾಗಿ ನನ್ನ ಸರ್ವಸ್ವವನ್ನು ಗಂಟು ಮೂಟೆ ಕಟ್ಟಿ….
ನಿಶ್ಚಿತ ಎಸ್



