ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪತಿಯು ಎತ್ತರದ ಧ್ವನಿಯಲ್ಲಿ ಮಗನ ಜೊತೆ ಮಾತನಾಡುತ್ತಾ ಇರುವುದನ್ನು ಸುಮತಿ ಹಿತ್ತಲಿನಿಂದಲೇ ಕೇಳಿಸಿಕೊಂಡು  ” ಅಯ್ಯೋ ಇವರು ಕೆಲಸದಿಂದ ಇಷ್ಟು ಬೇಗ ಬಂದರೇ? ಮಗನನ್ನು ಬಯ್ಯುತ್ತಿರುವಂತೆ ಕೇಳುತ್ತಿದೆಯಲ್ಲ”…ಎಂದುಕೊಳ್ಳುತ್ತಾ ಮಗಳನ್ನು ಎತ್ತಿಕೊಂಡು ಓಡು ನಡಿಗೆಯಲ್ಲೇ ಮನೆಯ ಒಳಗೆ ಬರುವ ಹೊತ್ತಿಗೆ ಸರಿಯಾಗಿ ವೇಲಾಯುಧನ್ ವಿಶ್ವನ ಕೆನ್ನೆಗೆ ಹೊಡೆದದ್ದು ಸುಮತಿಗೆ ಕಂಡಿತು…. “ಅಯ್ಯೋ!! ಅವನಿಗೆ ಮತ್ತೆ ಜ್ವರ ಬಂದಿದೆ…. ಹೊಟ್ಟೆ ನೋವು ಕೂಡಾ ಇದೆ…ಆರೋಗ್ಯ ಸರಿ ಇಲ್ಲದ ಮಗುವಿಗೆ ಹೊಡೆದಿರಲ್ಲಾ” ಎನ್ನುತ್ತಾ ವಿಶ್ವನ ಬಳಿಗೆ ಓಡೋಡಿ ಬಂದಳು. ಅಪ್ಪ ಕೆನ್ನೆಗೆ ಹೊಡೆದ ಕೂಡಲೇ ವಿಶ್ವನಿಗೆ ತಲೆ ತಿರುಗಿದಂತೆ ಆಯಿತು. ಕಣ್ಣು ಕಟ್ಟಲಿಟ್ಟಿತು. ತನ್ನ ಮುಂದೆ ಹಲವಾರು  ಬಣ್ಣಗಳು ಒಮ್ಮೆಲೇ ಗಾಢವಾಗಿ ಕಂಡಂತಾಗಿ ಅವನ ಕಣ್ಣು ಮಂಜಾಯಿತು. ಅಮ್ಮನ ಧ್ವನಿ ಕ್ಷೀಣವಾಗಿ ಕೇಳಿಸುತ್ತಿತ್ತು ಆದರೆ ಅಮ್ಮನ ಬಿಂಬವು ಅವನ ಕಣ್ಣಿಗೆ ಕಾಣಲಿಲ್ಲ. ಏನೋ ಅವ್ಯಕ್ತ ಸಂಕಟವಾಗುತ್ತಿದೆ ಅನಿಸಿತು ವಿಶ್ವನಿಗೆ. ಅಮ್ಮನ ಧ್ವನಿ ಕೇಳಿದಲ್ಲಿಗೆ ಹೋಗಲೆಂದು ಮುಂದೆ ಅಡಿಯಿರಿಸಿದ ಆದರೆ ಕದಲಲೂ ಅವನಿಂದ ಸಾಧ್ಯವಾಗಲಿಲ್ಲ. ಬವಳಿ ಬಂದಂತಾಗಿ ನಿಂತಲ್ಲಿಯೇ ಕುಸಿದು ಕುಳಿತ ವಿಶ್ವ.  ಅಷ್ಟು  ಹೊತ್ತಿಗೆ ಅಲ್ಲಿಗೆ ಓಡೋಡಿ ಬಂದ ಸುಮತಿ ಮಗಳನ್ನು ಕೆಳಗೆ ಕುಳ್ಳಿರಿಸಿ ಮಗನೆಡೆಗೆ ಗಾಬರಿಯಿಂದ ಬಂದಳು. ಅವಳ ಎದೆ ಡವಡವ ಎಂದು ಅವಳ ಕಿವಿಗೇ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಮಗನ ಹತ್ತಿರ ಬಂದವಳೇ ಕುಸಿದು ಕುಳಿತ ಮಗನನ್ನು  ಬಾಚಿ ತಬ್ಬಿಕೊಂಡಳು. ಅಷ್ಟು ಹೊತ್ತಿಗೆಲ್ಲ ವಿಶ್ವ ಪ್ರಜ್ಞೆಯನ್ನು ಕಳೆದುಕೊಂಡಿದ್ದ. ಕುತ್ತಿಗೆ ಪಕ್ಕಕ್ಕೆ ವಾಲಿತು. ಪ್ರಜ್ಞಾಶೂನ್ಯನಾದ ಮಗನನ್ನು ಕಂಡು ಸುಮತಿ ಗಾಭರಿಗೊಂಡಳು. 

“ಅಯ್ಯೋ ಏನಾಯ್ತು ಮಗನೇ ಎನ್ನುತ್ತಾ ತನ್ನ ಮಡಿಲಲ್ಲಿ ಅವನ ತಲೆಯನ್ನು ಇಟ್ಟುಕೊಂಡು ಕೆನ್ನೆ ತಟ್ಟುತ್ತಾ  “ವಿಶ್ವ…. ಎದ್ದೇಳು ಮಗುವೇ… ನೋಡು ಇಲ್ಲಿ ಅಮ್ಮ ಇದ್ದಾಳೆ… ಕಣ್ಣು ಬಿಟ್ಟು ಈ ಅಮ್ಮನನ್ನು ನೋಡು…ಎಂದು ಆರ್ದ್ರ ಧ್ವನಿಯಲ್ಲಿ ಮಗನನ್ನು ಎಬ್ಬಿಸುವ ಪ್ರಯತ್ನ ಮಾಡಿದಳು. ಆದರೆ ವಿಶ್ವ ಕದಲಲೇ ಇಲ್ಲ. ಕಣ್ಣು ಬಿಡಲಿಲ್ಲ. ಮೂಗಿನ ಹತ್ತಿರ ಕೈ  ಇಟ್ಟು ಅವನು ಉಸಿರಾಡುತ್ತಿರುವುದನ್ನು ಖಾತ್ರಿ ಪಡಿಸಿಕೊಂಡು ಪತಿಯನ್ನು ಉದ್ದೇಶಿಸಿ ಹೇಳಿದಳು…” ಏನೂಂದ್ರೆ ವಿಶ್ವ ಕಣ್ಣು ಬಿಡುತ್ತಿಲ್ಲ ಕದಲುತ್ತಲೂ ಇಲ್ಲ… ದಯವಿಟ್ಟು ಅಡುಗೆ ಮನೆಗೆ ಹೋಗಿ ಸ್ವಲ್ಪ ನೀರು ತೆಗೆದುಕೊಂಡು ಬನ್ನಿ…ಈಗ ತಾನೇ ಸ್ವಲ್ಪ ಹೊತ್ತಿನ ಮೊದಲು ಶಾಲೆಯಿಂದ ಬಂದವನೇ ಅಮ್ಮಾ ನನಗೆ ಬಹಳ ಆಯಾಸವಾಗಿದೆ ಎಂದಿದ್ದ ಹಣೆ ಮುಟ್ಟಿ ನೋಡಿ ಜ್ವರ ಇರುವುದನ್ನು ತಿಳಿದು….ಅಪ್ಪ ಬಂದ ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಾಣೋಣ ಎಂದು ಹೇಳಿ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೋ ಎಂದಿದ್ದೆ. ನಾನು ಹಿತ್ತಲಿಗೆ ಹೋಗಿ ಅಡುಗೆಗೆ ಬೇಕಾದ ತರಕಾರಿಯನ್ನು ಕೊಯ್ಯುತ್ತಿದ್ದೆ”…ಎನ್ನುತ್ತಾ ಮತ್ತೊಮ್ಮೆ ಮಗನ ಕೆನ್ನೆ ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದಳು. ಅಷ್ಟು ಹೊತ್ತಿಗೆ ವೇಲಾಯುಧನ್ ಚೊಂಬಿನಲ್ಲಿ ನೀರು ತೆಗೆದುಕೊಂಡು ಬಂದರು. ಪತಿಯ ಕೈಯಿಂದ ಚೊಂಬು ಪಡೆದುಕೊಂಡು “ವಿಶ್ವ ಎದ್ದೇಳು…. ಇಗೋ ಒಂದು ಗುಟುಕು ನೀರನ್ನು ಕುಡಿ ಮಗುವೇ…ಎಂದು ಹೇಳುತ್ತಾ ಮಗನಿಗೆ ನೀರನ್ನು ಕುಡಿಸುವ ಪ್ರಯತ್ನ ಮಾಡಿದಳು. ಆದರೆ ವಿಶ್ವ ನೀರು ಕುಡಿಯಲು ಬಾಯಿ ತೆರೆಯಲಿಲ್ಲ. ಮತ್ತೊಮ್ಮೆ ಅವನ ಕೆನ್ನೆ ತಟ್ಟಿದಳು. ನಿಧಾನವಾಗಿ ವಿಶ್ವ ಅರ್ಧ ಕಣ್ಣು ತೆರೆದು ಅಮ್ಮನನ್ನು ನೋಡಿದ. ಏನೋ ಹೇಳಲು ಪ್ರಯತ್ನಿಸಿದ. ಆದರೆ ಅವನ ಗಂಟಲಿನಿಂದ ಧ್ವನಿ ಆಚೆ ಬರಲಿಲ್ಲ.

ಪುನಃ ಅವನಿಗೆ ಕಣ್ಣು ಕಟ್ಟಲಿಡುತ್ತಾ ಇರುವಂತೆ ಅನಿಸಿತು. ವಿಶ್ವ ಬಾಯಿ ತೆರೆದ ಕೂಡಲೇ ಒಂದು ಗುಟುಕು ನೀರನ್ನು ಕೊಟ್ಟಳು. ಸ್ವಲ್ಪ ಬಾಯ ಒಳಗೆ ಹೋಗಿ ಉಳಿದ ನೀರು ಹೊರ ಬಂದಿತು. ಸುಮತಿ ವಿಶ್ವನ ಮುಖ ನೋಡಿದಳು. ಅವನ ಕಣ್ಣುಗಳು ಮುಚ್ಚಿ ಹೋದವು…” ಏನೂಂದ್ರೆ….ವಿಶ್ವನಿಗೆ ಏನೋ ಆಗಿದೆ…ಬಹಳ ನಿತ್ರಾಣನಾಗಿದ್ದಾನೆ…ನೀವು ಹೊಡೆದ ಪೆಟ್ಟಿನಿಂದ ತತ್ತರಿಸಿ ಹೋಗಿದ್ದಾನೆ… ಮೊದಲೇ ಜ್ವರದಿಂದ ಬಳುತ್ತಿದ್ದ ಮಗು…ದಯವಿಟ್ಟು ಇವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದಳು…”ಅವನಿಗೆ ಏನೂ ಆಗಿಲ್ಲ ಪ್ರಜ್ಞೆ ಕಳೆದುಕೊಂಡಿರುವನು”…ಎಂದು ಹೇಳುತ್ತಾ ವೇಲಾಯುಧನ್ ಕೂಡಾ ಮಗನನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಅವನು ಪ್ರತಿಕ್ರಿಯೆ ತೋರಲಿಲ್ಲ. ಕೂಡಲೇ ಮಗನನ್ನು ಎತ್ತಿಕೊಂಡು ಮನೆಯಿಂದ ಆಚೆ ಬಂದು ಅದೇ ದಾರಿಯಲ್ಲಿ ಬರುತ್ತಿದ್ದ ಒಂದು ಜೀಪನ್ನು ತಡೆದು ನಿಲ್ಲಿಸಿ. ಸುಮತಿಗೆ ಮಗಳನ್ನು ಎತ್ತಿಕೊಂಡು ಬಾಗಿಲ ಚಿಲಕ ಭದ್ರಪಡಿಸಿ ಜೊತೆಗೆ ಬರುವಂತೆ ಸೂಚಿಸಿದರು. ಸುಮತಿ ಬೇಗ ಮಗಳನ್ನು ಎತ್ತಿಕೊಂಡು ಸೀರೆಯ ಸೆರಗಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಬಾಗಿಲಿಗೆ ಬೀಗವನ್ನು ಹಾಕಿ ಅಳುತ್ತಲೇ ಓಡೋಡಿ ಬಂದು ಜೀಪು ಹತ್ತಿದಳು. ಮಗನನ್ನು ತೊಡೆಯ ಮೇಲೆ ಕುಳ್ಳಿರಿಸಿ, ಭುಜಕ್ಕೆ ಅವನ ತಲೆಯನ್ನು ಒರಗಿಸಿಕೊಂಡು ವೇಲಾಯುಧನ್ ಜೀಪಿನಲ್ಲಿ ಕುಳಿತುಕೊಂಡರು. ಸುಮತಿ ಮಗಳನ್ನು ತನ್ನ ತೋಳಿನಲ್ಲಿ ಒರಗಿಸಿಕೊಂಡು ಪತಿಯ ಪಕ್ಕದಲ್ಲಿ ಕುಳಿತುಕೊಂಡಳು. ಜೀಪು ಶರವೇಗದಲ್ಲಿ ಸಕಲೇಶಪುರದ ಕಡೆಗೆ ಹೋಯಿತು. ಕೆಲವೇ ನಿಮಿಷಗಳಲ್ಲಿ ಜೀಪು ಸಕಲೇಶಪುರದ ಸರ್ಕಾರಿ ಆಸ್ಪತ್ರೆಯನ್ನು ತಲುಪಿತು. ಮಗನನ್ನು ಎತ್ತಿಕೊಂಡು ಜೀಪಿನಿಂದ ಇಳಿದ ವೇಲಾಯುಧನ್ ತುರ್ತು ಚಿಕಿತ್ಸಾ ಕೊಠಡಿಯ ಕಡೆಗೆ ಓಡಿದರು. 

ಕೊಠಡಿಯ ಬಾಗಿಲಲ್ಲಿ ನಿಂತಿದ್ದ ಜವಾನ ಅವರನ್ನು ತಡೆದು ಏನೆಂದು ಕೇಳಲು ಮಗನ ಆರೋಗ್ಯ ಸರಿ ಇಲ್ಲ ಪ್ರಜ್ಞೆ ತಪ್ಪಿರುವನು ಕೂಡಲೇ ತುರ್ತಾಗಿ ವೈದ್ಯರನ್ನು ಕಾಣಬೇಕು ಎಂದು ವೇಲಾಯುಧನ್ ಮನವಿ ಮಾಡಿಕೊಂಡರು. ಸುಮತಿ ಕೂಡಾ ಪತಿಯ ಜೊತೆಗೆ ಮಗಳನ್ನು ಎತ್ತಿಕೊಂಡೆ ಒಳಗೆ ನಡೆದರು. ಒಳಗೆ ಹೋದಾಗ ವೈದ್ಯರು …”ಹುಡುಗನನ್ನು ಇಲ್ಲಿ ಹಾಸಿಗೆಯ ಮೇಲೆ ಮಲಗಿಸಿ   ನೀವಿಬ್ಬರೂ ಸ್ವಲ್ಪ ದೂರ ನಿಂತುಕೊಳ್ಳಿ” ಎಂದರು. ವೈದ್ಯರು ವಿಶ್ವನನ್ನು ಪರಿಸಿಲಿಸಿದರು. ಮಗನಿಗೆ ಏನಾಯಿತು ಎಂದು ಕೇಳಿದಾಗ ಸುಮತಿ ನಡೆದ ಘಟನೆಯನ್ನು ವಿವರಿಸಲು ಮುಂದಾದಳು. ಕೂಡಲೇ ಪತ್ನಿಯನ್ನು ತಡೆದ ವೇಲಾಯುಧನ್…”ಸ್ವಲ್ಪ ದಿನಗಳ ಮೊದಲೇ ಇವನಿಗೆ ಜ್ವರ, ಹೊಕ್ಕುಳುಸುತ್ತು ಹಾಗೂ ಅರಿಶಿನ ಕಾಮಾಲೆ ಆಗಿದೆ ಎಂದು ಇಲ್ಲಿನ ವೈದ್ಯರೇ ಚಿಕಿತ್ಸೆ ಮಾಡಿದ್ದರು. ಗುಣಮುಖನಾಗಿದ್ದ ಆದರೆ ಈಗ ಮತ್ತೆ ಜ್ವರ ಹೊಟ್ಟೆ ನೋವು ಕಾಣಿಸಿಕೊಂಡಿದೆ ಜ್ವರದ ತಾಪಕ್ಕೆ ಹಾಗೂ ನೋವು ತಾಳಲಾರದೇ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಇಲ್ಲಿಗೆ ಎತ್ತಿಕೊಂಡು ಬಂದೆವು” ಎಂದರು.  ಪತಿಯ ಮಾತುಗಳನ್ನು ಕೇಳಿದ ಸುಮತಿ ಆವಕ್ಕಾದಳು. ಪತಿಯೆಡೆಗೆ ದೈನ್ಯತೆಯಿಂದ ನೋಡಿದಳು. ವೇಲಾಯುಧನ್ ಪತ್ನಿಯೆಡೆಗೆ ನೋಡಿ ಏನನ್ನೂ ಹೇಳಬಾರದು ಎಂದು ಕಣ್ಣಲ್ಲೇ ಸೂಚಿಸಿ ತಾಕೀತು ಮಾಡಿದರು. ಸುಮತಿಗೆ ಬೇರೆ ದಾರಿ ಇರಲಿಲ್ಲ. ಪತಿಗೆ ಹೆದರಿ ಮೌನವಾದಳು. ಅವಳ ಕಣ್ಣಿಂದ ನೋವು ಹಾಗೂ ಅಸಹಾಯಕತೆಯ ಕಣ್ಣೀರ ಧಾರೆ ಹರಿಯಿತು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ಆದರೆ ವೈದ್ಯರ ಪ್ರಯತ್ನ ಫಲಕಾರಿಯಾಗಲಿಲ್ಲ. ಸುಮತಿ ಹಾಗೂ ವೇಲಾಯುಧನ್ ರನ್ನು ನೋಡಿ ವೈದ್ಯರು, ವಿಶ್ವ ಇನ್ನಿಲ್ಲ ಎಂದು ಹೇಳಿ ಕೈ ಚೆಲ್ಲಿದರು. ವೈದ್ಯರ ಮಾತನ್ನು ಕೇಳಿದ ಸುಮತಿ ತನ್ನ ಕಿವಿಯನ್ನು ನಂಬಲಾರದೇ…”ವೈದ್ಯರೇ ಇನ್ನೊಮ್ಮೆ ನನ್ನ ಮಗನನ್ನು ಪರಿಶೀಲಿಸಿ ನೋಡಿ”…ಎಂದು ಹೇಳುತ್ತಾ ನೆಲದ ಮೇಲೆ ಕುಸಿದು ಕುಳಿತಳು. ತನ್ನ ಸುತ್ತಲಿನ ಜನರು, ವೈದ್ಯರು ಜೊತೆಗೆ ಇಡೀ ಆಸ್ಪತ್ರೆಯ ಕಟ್ಟಡವೇ ಸುತ್ತುತ್ತಿರುವಂತೆ ಅವಳಿಗೆ ಭಾಸವಾಯಿತು.


About The Author

Leave a Reply

You cannot copy content of this page

Scroll to Top