ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ವಾರ್ಷಿಕ ವಿಶೇಷಾಂಕ

ಜಿ ಎಂ ಆರ್ ಆರಾಧ್ಯ

ಇಂಥವರ ಪರಿಗಣಿಸಿದರೆ

ಪ್ರಶಸ್ತಿಗೂ ಒಂದು ಮೌಲ್ಯ –

ಗಂಗಾಧರ ಬಿ ಎಲ್ ನಿಟ್ಟೂರ್

ಸುಮಾರು 22 ವರ್ಷಕ್ಕೂ ಹೆಚ್ಚು ಕಾಲ ಜನ ಮಿಡಿತ ಪತ್ರಿಕೆಯನ್ನು , ಸಂಸ್ಥಾಪಕ ಸಂಪಾದಕರಾಗಿ  ಮುನ್ನಡೆಸಿದ ಶ್ರೀಯುತ ಜಿ ಎಂ ಆರ್ ಆರಾಧ್ಯ ಅವರದ್ದು ದಾವಣಗೆರೆ ಪತ್ರಿಕಾರಂಗದಲ್ಲಿ ಎಂದಿಗೂ ಮರೆಯಲಾಗದ ಅನನ್ಯ ಸೇವೆ. ಯಾರಿಗೂ ಅಂಜದೆ, ಅಳುಕದೆ ಪತ್ರಿಕಾಧರ್ಮವನ್ನು ಎತ್ತಿ ಹಿಡಿದು ತಮ್ಮದೇ ಆದ ವಿಶೇಷ ಛಾಪು ಮೂಡಿಸಿ, ವಿಶಿಷ್ಠ ಮ್ಯಾನರಿಸಂ ಮತ್ತು ETHICS ನಿಂದ ವೃತ್ತಿ ಧರ್ಮ ನಿಭಾಯಿಸಿರುವ, ಪತ್ರಿಕಾ ರಂಗವನ್ನೇ ಉಸಿರಾಗಿಸಿಕೊಂಡಿರುವ ಪ್ರತಿಭಾವಂತ ಹಿರಿಯ ಪತ್ರಕರ್ತರು.

ನೇರ, ನಿಷ್ಠುರ ನಡೆ ನುಡಿಯ ಜೊತೆ ಸ್ವಾಭಿಮಾನ, ಸರಳತೆ ಮತ್ತು ಸಜ್ಜನಿಕೆಯನ್ನು ರೂಢಿಸಿಕೊಂಡಿರುವ, ಅತ್ಯಂತ ಸೂಕ್ಷ್ಮ ಹಾಗೂ ” ವಜ್ರಾದಪಿ ಕಠೋರಾನಿ ಕುಸುಮಾದಪಿ ಕೋಮಲಾನಿ ” ಎಂಬಂತಹ  ವ್ಯಕ್ತಿತ್ವ. ಯತಾರ್ಥವಾಗಿ ಹೇಳುವುದಾದರೆ ” ಅವರು ಅನ್ಯಾಯಕ್ಕೆ ತಲೆ ಬಾಗದ ವ್ಯಕ್ತಿ. ಒಳ್ಳೆಯವರಿಗೆ ತುಂಬಾ ಒಳ್ಳೆಯವರು ಹಾಗೆಯೇ ಸಮಾಜ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವ ಗುರುಗಳು.” ಅಷ್ಟೇ ಕ್ಷಮಾಗುಣಿ.  ತಪ್ಪು, ಲೋಪ – ದೋಷಗಳನ್ನು ಪ್ರೀತಿಯಿಂದ ತಿದ್ದಿ ತೀಡುವ ಮಮತಾಮಯಿ ಗುಣವೂ ಸಹ ಅವರಲ್ಲಿದೆ. ಕೆಲವೊಮ್ಮೆ ಕೆಲವರಿಗೆ ವಿಚಿತ್ರ ಎನಿಸಬಹುದಾದ ವಿರಳ ವ್ಯಕ್ತಿತ್ವದ  ಅಪರೂಪದ ಆದರ್ಶ ಪ್ರಾಯರು.

ಕಲಿಯುವ ಆಸಕ್ತಿ ಇರುವ ಎಲ್ಲರಿಗೂ ಅವರ ಪತ್ರಿಕಾಲಯ ಒಂದು ವಿಧದ ಗ್ರಂಥಾಲಯ ಹಾಗೂ ತರಬೇತಿ ಕೇಂದ್ರವೇ ಸರಿ. ಅವರ ಗರಡಿಯಲ್ಲಿ ಪಳಗಿ  ಕಲಿತ ಸಾಕಷ್ಟು ವರದಿಗಾರರು ಇಂದು ಅನೇಕ ಪತ್ರಿಕೆಗಳಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈಯಕ್ತಿವಾಗಿ ನನಗೂ ಸಹ ಅವರ ಮಾರ್ಗದರ್ಶನದಲ್ಲಿ 2008 ರಿಂದ 2014 ರ ವರೆಗೆ 6 ವರ್ಷಗಳ ಕಾಲ ಸೇವೆ ಸಲ್ಲಿಸುವ ಅಮೂಲ್ಯ ಅವಕಾಶ ಒದಗಿ ಬಂದದ್ದು ನನ್ನ ಸೌಭಾಗ್ಯ ಎಂದೇ ಭಾವಿಸುತ್ತೇನೆ.

ವಸ್ತು ನಿಷ್ಠ ಬರವಣಿಗೆ, ಸತ್ಯತೆ, ಯಥಾರ್ಥ ಚಿತ್ರಣ, ಅಚ್ಚುಕಟ್ಟು, ಕ್ರಮಬದ್ಧತೆ, ಶಿಸ್ತು, ಒಪ್ಪ ಹೂರಣಕ್ಕೆ ಹೆಸರಾಗಿರುವ ಜನ ಪತ್ರಿಕೆಯ ಬೆನ್ನೆಲುಬಾದ ಆರಾಧ್ಯ ಸರ್ ಅವರ ಕ್ರಿಯಾಶೀಲ, ಸೃಜನಶೀಲ ಚಿಂತನೆಯ ಫಲ ಸ್ವರೂಪವಾಗಿ ಈಗ್ಗೆ ಸುಮಾರು ವರ್ಷಗಳಿಂದ ರಾಜ್ಯಾದ್ಯಂತ ಬರಹಗಾರರನ್ನು ಗುರುತಿಸಿ ಪ್ರೊತ್ಸಾಹಿಸಿ ಬೆಳಕಿಗೆ ತರುವ ಸಾಹಿತ್ಯಕ – ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಂಡಿದೆ. ವಿವಿಧ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ, ಸಾಧನೆಯ ಕನಸು ಹೊತ್ತು ಚಲಿಸುತ್ತಿರುವ ಮತ್ತು ಈಗಾಗಲೇ ಸಾಧಿಸಿರುವ ಸಾಧಕರನ್ನು  ಜನ ಮಿಡಿತ ನಾಡಿಗೆ ಪರಿಚಯಿಸುವ ಜೊತೆ  ಕನ್ನಡ, ನಾಡು, ನುಡಿ, ಸಂಸ್ಕೃತಿ, ಭಾಷೆ, ಗಡಿ ಗುಡಿಗೆ ತನ್ನದೇ ಆದ ಕೊಡುಗೆ ಸಲ್ಲಿಸುತ್ತಾ ಸಾಗುತ್ತಿದೆ. ಇದರ ಹಿಂದಿನ ರುವಾರಿಯಾಗಿರುವ ಆರಾಧ್ಯ ಸರ್ ಅವರ ಪರಿಶ್ರಮ, ತಾರ್ಕಿಕ ಚಿಂತನೆ, ಕಳಕಳಿ ಮತ್ತು ಕಾಳಜಿ ಖಂಡಿತ  ಶ್ಲಾಘನೀಯ. ಇತ್ತೀಚಿಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ಎದೆಗುಂದದೆ ಪತ್ರಿಕೆ ಮುನ್ನಡೆಸುತ್ತಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಬೇಸರ, ವಿಷಾದದ ನಡುವೆಯೂ ಅನುಕಂಪಕ್ಕಿಂತಲೂ ಹೆಚ್ಚಾಗಿ ಅವರ ಉತ್ಸಾಹ, ಮನೋಬಲ ಮತ್ತು ಆತ್ಮವಿಶ್ವಾಸ ಕಂಡು ಹೆಮ್ಮೆಯ ಭಾವ ಮೂಡುತ್ತದೆ. ಇಂಥವರ ಸೇವೆ ಸಮಾಜಕ್ಕೆ ಇನ್ನಷ್ಟು ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಭಾವ ಉಮ್ಮಳಿಸುತ್ತದೆ.

ಅವರು ಈವರೆಗೂ ಯಾವುದೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದಾಗಲಿ ಅಥವಾ ಅವರಿವರ ಮುಖಾಂತರ ಒತ್ತಡ ಹೇರಿ ಪ್ರಶಸ್ತಿ  – ಪುರಸ್ಕಾರ ಪಡೆಯಲು ಹವಣಿಸುವ ಲಾಬಿ – ಲೋಭಿ ಕೋರರ ಸಾಲಿನಲ್ಲಿ ನಿಲ್ಲದೆ ಇದ್ದರೂ ಸರ್ಕಾರಿ ಇಲಾಖೆಗಳಿಂದ ಹಾಗೂ ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿರುವುದು ಅವರ ವ್ಯಕ್ತಿತ್ವದ ಶ್ರೇಯಸ್ಸಿಗೆ ಕನ್ನಡಿ ಹಿಡಿದಿರುವ ಸಂಗತಿ ಎಂದರೆ ಅತಿಶಯೋಕ್ತಿಯೇನಲ್ಲ .

ಇಂತಹ ವಿಶೇಷ, ವಿಶಿಷ್ಠ ವ್ಯಕ್ತಿಗೆ ರಾಜ್ಯೋತ್ಸವ ಪುರಸ್ಕಾರಕ್ಕೆ ಆಯ್ಕೆ ಮಾಡಿದರೆ ಅವರ ಕರ್ತವ್ಯ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಗೆ ಗೌರವಿಸುವ ಜೊತೆ  ತಮ್ಮ ಪತ್ರಿಕೆ ಮೂಲಕ ಶ್ರೀಯುತರು ಕನ್ನಡ ನಾಡಿಗೆ ನೀಡಿರುವ ಕೊಡುಗೆಯನ್ನು ಸಹ ಪರಿಗಣಿಸಿ ಗೌರವಿಸಿದಂತಾಗುತ್ತದೆ.


ಗಂಗಾಧರ ಬಿ ಎಲ್ ನಿಟ್ಟೂರ್

About The Author

Leave a Reply

You cannot copy content of this page

Scroll to Top