ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮೀನಾಕ್ಷಿ ಸುರೇಶ್ ಭಾಂಗಿ

ನನ್ನವನೆಂದರೆ

ನನ್ನೊಳಗಣ ಅನಂತ ಚೇತನ
ಮನಸ ಬೇಗುದಿಗೆ ಮುತ್ತನಿರಿಸಿ
ಬಾಳ ಬಾನಲ್ಲಿ ಬಣ್ಣ ತುಂಬಿದವನು
ಕೈ ಕೈ ಜೋಡಿಸಿ,ಕೈ ಬಿಡಲಾರದ
ಅಸ್ಮಿತೆಯ ಸ್ಮಿತವದನದ
ಸುಂದರ ಗಾಳಿಪಟ ಹಾರಿಸಿದವನು…

ನನ್ನವನೆಂದರೆ…
ನಡೆದಾಡುವ ವಿಶ್ವಕೋಶ
ಬದುಕ ನಾಟಕದ ಎಲ್ಲ ಪಾತ್ರಗಳ
ಏಕತಾನತೆಯ ಕಿತ್ತೊಗೆದು
ಅನುಭವಿಸಿ ನುಡಿವ ಅನುಭಾವಿ ಇವನು
ದಿಕ್ಕೆಟ್ಟ ಮನಸಿನ ಓಟಕೆ
ದಿಟ್ಟತನದಲಿ ತೆರೆಕಟ್ಟಿ
ಅಧ್ಯಾತ್ಮದ ಅಮೃತವ ಉಣಬಡಿಸಿದವನು

ನನ್ನವನೆಂದರೆ…
ನನ್ನ ಪ್ರಾಣ,ನನ್ನೊಳಗಣ ಜೀವನ್ಮಿಡಿತ
ಕಣ್ಣ ಹನಿಗಳಿಗೆ ಮುತ್ತ ಪೇರಿಸಿ
ಸಿರಿಯ ಸುಖಕೆ ಒಲವ ಸೇರಿಸಿ
ಜೀವ ಜೀವದ ಜೀವವಾದವನು
ಮನದ ಮರೆವಿಗೆ,
ಇಂದ್ರಿಯ ತಾಮಸಕೆ
ವಿಷಯಕ್ಕೆಳಿಸಿದ
ಮನದ ಮರ್ಕಟಕೆ
ಕಾಯಕದ ಹಣತೆ ಹಚ್ಚಿ
ಬಾಳ ಬೆಳಗಿದವನು…

ನನ್ನವನೆಂದರೆ,…
ಹಾಲುಗೆನ್ನೆಯ ಹಸುಗೂಸು
ನನ್ನಲ್ಲಿಯ ತಾಯ ಹಂಬಲಕೆ
ಸಂದ್ಯೆಯ ಸೆರಗಿನಲ್ಲಿ
ಕರು ನೆನಪಾದ ಹಸುವಿನಂತೆ
ಪ್ರೀತಿ ಸೆಳೆತಕೆ ಕಿವಿಯಾದವನು
ಅವನೇ ಪ್ರಾಣ,ತ್ರಾಣ,ಜೀವನ
ಸಾಟಿಯಿಲ್ಲ ಅವಗೆ,
ಜೀವನಾಡಿಯ ಕಂಪನ
ನನ್ನೆದೆಯ ಕಸುವಿಗೆ,
ಜ್ಞಾನದ ಹಸಿವಿಗೆ
ಪತಿ ಎಂಬ ಹೆಸರಿನಿಂದ ಉಸಿರಾದವನು..


ಮೀನಾಕ್ಷಿ ಸುರೇಶ್ ಭಾಂಗಿ

About The Author

6 thoughts on “ಮೀನಾಕ್ಷಿ ಸುರೇಶ್ ಭಾಂಗಿ-ನನ್ನವನೆಂದರೆ”

  1. ಅದ್ಭುತ ಕಾವ್ಯ ಮೇಡಂ. ತುಂಬು ಹೃದಯದ ಅಭಿನಂದನೆಗಳು.

Leave a Reply

You cannot copy content of this page

Scroll to Top