ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತಾತಪ್ಪ.ಕೆ

ದೈವರೂಪ

ಮನದ ಮುಂದೆ
ಮಹಾರೂಪ
ಭಕ್ತಿಯ ಮುಂದೆ
ಭವ್ಯರೂಪ
ಮಿಡಿವ ಮನದ
ಮಾಯಾ ರೂಪ ನೀ
ಕಣ್ಣಿಗೆ ಶಿಲಾರೂಪ ನೀ
ಅದುವೇ ದೈವದ ಸ್ವರೂಪ.

ಗುಡಿ,ಚರ್ಚು,ವಿಹಾರ
ಬಸದಿ,ಮಸೀದಿ,ಗುರುದ್ವಾರ
ಗುಡ್ಡಬೆಟ್ಟ ಪರ್ವತ ಶಿಖರ
ಗುಹೆ ಬಾವಿ ಆಳ ಪಾತಾಳ.
ನೀಲಾಕಾಶ,ಧರಣಿ
ವಾಯು ,ಮೇಘ
ಮುಗಿಲು,ದಿಗಂತದೆಲ್ಲೆಲ್ಲೂ
ನಿನ್ನದೇ ರೂಪ..
ಕಾಣುವುದೇ ಅಪರೂಪ..

ಚಿತ್ರ ,ಸುಚಿತ್ರಾ
ವಿಚಿತ್ರ ಸಚಿತ್ರ ರೂಪ
ನಿನ್ನದೇ ಭೌಮ್ಯರೂಪ
ಮೂರ್ತವೂ ನೀನೇ
ಅಮೂರ್ತವೂ ನೀನೇ
ಹೇ ದೇವಾ ಅಗೋಚರನೋ
ನೀ ಗೋಚರನೋ
ಗೊಂದಲವು ಎನ್ನಾಲಯದೊಳಗೆ..

ಓ ದೇವರೇ
ಚಿಕ್ಕ ಮನುಷ್ಯನ ಮುಂದೆ
ದೊಡ್ಡರೂಪ
ದೊಡ್ಡಮನುಷ್ಯನ ಮುಂದೆ
ಚಿಕ್ಕ ರೂಪ.
ಎಲ್ಲಿದೆ ಸಮರಸದ ,
ಸಾಮರಸ್ಯದ ಅನುರೂಪ
ಸಾತ್ವಿಕತೆಯ ಸಮರೂಪ?

ಓ ದೇವಾ…..
ತರುಲತೆ ಎಲೆ,
ನೆಲೆಮಲೆಯೊಳಗೆ
ನಿನಗೆ ನಾವು ಕೊಟ್ಟ
ಮೂರ್ತರೂಪ..
ಅದನ್ನು ಕಾಣದ ನೀ
ಬಹುರೂಪಿ..
ಸಾದೃಶ್ಯ ಅಸಾದೃಶ್ಯದ
ನಡುವಿನ ದೃಶ್ಯಚೇತನ ನೀ.
ಆಡಂಬರವು ನೀನೇ
ಅಲಂಕಾರವೂ ನೀನೇ
ನಿರಾಭರಣನೂ ನೀನೇ
ಅಭಯನೂ ನೀನೇ
ನಿರ್ಭಯನೂ ನೀನೇ

ಓ ದೈವವೇ…
ಆರ್ತನಾದವ ಅರಿಯುವ
ಬಗೆ ಯಾವುದು ನಿನ್ನದು.?
ಅಂತರಾಳದ ಅಂತರಂಗವ
ತಿಳಿಯುವ ಪಥ ಯಾವುದು?
ನಿನ್ನ ಲೀಲೆ ಅನಂತ
ನೀನು ನಿರ್ದಿಗಂತ
ಭರವಸೆಯ ಬೆಳಕು ನೀ
ಚೆಂದನೆಯ ಚೆಂಬಳಕು ನೀ…


ತಾತಪ್ಪ.ಕೆ

About The Author

7 thoughts on “ತಾತಪ್ಪ.ಕೆ ಕವಿತೆ-ದೈವರೂಪ”

    1. ನುಡಿಗಳಲ್ಲಿನ ಒಂದೊಂದು ಪದವು ಅರ್ಥ ಪೂರ್ಣವಾಗಿದೆ ಸರ್…..

Leave a Reply

You cannot copy content of this page

Scroll to Top