ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಟಿ.ದಾದಾಪೀರ್ ತರೀಕೆರೆ

ಮಣಿಪುರದ ಚಿತ್ರಾಂಗದೆ

ಬಬ್ರುವಾಹನನ ಮತ್ತೆ ಹಡೆಯಲಿ’

ಮಹಾಭಾರತ ಮುಗಿದಿದೆ
ಅಂದು ಕೊಳ್ಳಬೇಡ
ಭಾರತದಲ್ಲಿ ಅವೆಲ್ಲಾ ಪಾತ್ರಗಳು
ಇನ್ನು ಜೀವಂತವಾಗಿವೆ

ತ್ರಿಪುರ ಸುಂದರಿ ಚಿತ್ರಾಂಗದೆಯ
ಮಣಿಪುರದಲ್ಲಿ ದ್ರೌಪದಿಯರ ಸೀರೆ ಬಿಚ್ಚಲಾಗಿದೆ
ಬೆತ್ತಲೆ ಹೆಣ್ಣುಗಳ ಮೆರವಣಿಗೆ
ದುಶ್ಯಾಸನರ ವಿಜಯೋತ್ಸವ

ಗೆಳತಿ ನಿನ್ನ ಘನತೆಯನ್ನು
ನಾನು ಪ್ರೀತಿಸಿದರಷ್ಟೆ ಸಾಲದು
ದ್ರೌಪದಿಯರ ಘನತೆಯನ್ನು
ಜಗತ್ತು ಪ್ರೀತಿಸಬೇಕು

ಜನಾಂಗೀಯ ಶ್ರೇಷ್ಠತೆ
ಮೀಸಲಾತಿ, ರಾಜಕೀಯ
ಕಾಮದ ಪಗಡೆಯಾಟಗಳಿಗೆ
ಇನ್ನೆಷ್ಟು ದ್ರೌಪದಿಯರು
ಬಲಿಯಾಗಬೇಕು…?

ದಾನಮ್ಮ
ಸೌಜನ್ಯ
ಆಸೀಫಾ
ಬಲ್ಕೀಷ್ ಬಾನು
ಒಬ್ಬಳೋ, ಇಬ್ಬಳೋ..?

ಯಾವ ಟೆಕ್ನಾಲಜಿಗೂ
ಪುರುಷ ಪ್ರತಿಷ್ಟೆಯ
ಕುರುಡು ಧೃತರಾಷ್ಟ್ರ ರ
ಕಣ್ಣಿನ ಪೊರೆಗಳ ಕಳಚಲು
ಇನ್ನು ಸಾಧ್ಯವಾಗಿಲ್ಲ
ಕುರುಡು
ಕಿವುಡು
ಮಾತನಾಡದ ಮೂಗುತನ

ಗೆಳತಿ ನೀನು ಗಾಂಧಾರಿಯಂತೆ
ಕಣ್ಣಿಗೆ ಬಟ್ಟೆ ಸುತ್ತಿ
ಏನೂ ಗೊತ್ತಿಲ್ಲದವಳಂತೆ
ನಾಟಕ ಆಡಬೇಡ
ಕಣ್ಣಗಲಿಸಿ ನೋಡುತ್ತಿರು
ಗಾಂಧಾರಿ ಪಾತ್ರವಾದರು ಸಾಯಲಿ

ಮಣಿಪುರದ ಚಿತ್ರಾಂಗದೆ ಮತ್ತೆ ಬಬ್ರುವಾಹನನ ಹಡೆಯಬಹುದು
ಈ ಪಾತ್ರವು ತಕ್ಷಣ ಹುಟ್ಟಲಿ
ಏಕೆಂದರೆ ಮಹಾಭಾರತ
ಭಾರತದಲ್ಲಿ ಇನ್ನು ಮುಗಿದಿಲ್ಲ


ಟಿ.ದಾದಾಪೀರ್ ತರೀಕೆರೆ

About The Author

Leave a Reply

You cannot copy content of this page

Scroll to Top