ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ಗಜಲ್

ಅಕ್ಷರಗಳ ಮುಷ್ಕರದಲಿ ಹೇಗೆ ಬಣ್ಣಿಸಲಿ ಭಾವಗಳ
ಹೊತ್ತಿಗೆಗಳ ಹೊಲದಲಿ ಹೇಗೆ ಬಿತ್ತರಿಸಲಿ ಭಾವಗಳ

ಚಿತ್ತ ಭಿತ್ತಿಯಲಿ ಚಿಂತೆಗಳ ಬಣ್ಣ ಬಣ್ಣದ ಚಿತ್ತಾರಗಳು
ಇತಿಹಾಸದ ಪುಟಗಳಲಿ ಹೇಗೆ ಹುಡುಕಲಿ ಭಾವಗಳ

ಮನದ ಮೌನವು ಮಮ್ಮಲ ಮರುಗುವುದ ಕಂಡೀರಾ
ಕಂಬನಿಯ ಕಡಲಿನಲಿ ಹೇಗೆ ಹತ್ತಿಕ್ಕಲಿ ಭಾವಗಳ

ತುಂಬು ಬಸಿರ ಹೊತ್ತ ಸುಪ್ತ ಸ್ವಪ್ನಗಳಿಗೆ ಪ್ರಸವ ವೇದನೆ
ವ್ಯಾಕುಲತೆಯ ವ್ಯೂಹದಲಿ ಹೇಗೆ ಭೇದಿಸಲಿ ಭಾವಗಳ

ನಿಸ್ಸಾರಗೊಂಡಿವೆ ಪದಪುಂಜಗಳಲಿ ಕನಸುಗಳ ಕಚಗುಳಿ
ಕುಂದಿದ ಕಸುವಿನಲಿ ಹೇಗೆ ಆಸ್ವಾದಿಸಲಿ ಭಾವಗಳ

ಸಾಫಲ್ಯಗಳ ಸಮ್ಮೋಹನದಲಿ ಸರಸವಿಹುದೇ ಅರ್ಚನಾ
ಸತ್ಯ ಮಿಥ್ಯಗಳ ಶೈಶವದಲಿ ಹೇಗೆ ಸಲಹಲಿ ಭಾವಗಳ


About The Author

Leave a Reply

You cannot copy content of this page

Scroll to Top