ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಾತ್ರೆ

Image result for girl walking on rope

ಅಂಜನಾ ಹೆಗಡೆ

ಬಯಲಿಗಿಳಿದ ದೇವರೆದುರು
ತಲೆಬಾಗಿ ನಿಂತರೆ
ಮೆದುಳಿಂದ ಮೃದುವಾಗಿ ಎದೆಗಿಳಿದ
ಜಯಜಯ ಶಂಕರಿ ಜಯ ಜಗದೀಶ್ವರಿ….
ತಂಪಾದ ಹಾಡು
ತಲೆಗೆ ಮೆತ್ತಿದ ಬಣ್ಣಕ್ಕೂ
ಎದೆಗಿಳಿದ ಮೆದುಳಿಗೂ
ಸಂಪರ್ಕವೇ ಇಲ್ಲದಂತೆ

ದೇವರೇ ಮೈಮೇಲೆ ಬಂದಂತೆ
ಮನಬಂದಂತೆ ಒದರುವ ಮೈಕಿನಲ್ಲಿ
ಧೂಮ್ ಮಚಾಲೇ ಧೂಮ್…
ತಲೆ ಕುಣಿಸುತ್ತ ನಿಂತ
ತೊಟ್ಟಿಲ ಸಾಲು
ತಿರುಗಿಸುವವನನ್ನು ಕಂಡವರಿಲ್ಲ
ಹತ್ತಾರು ಸುತ್ತು ಸುತ್ತಿ
ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ….
ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ
ನಿಂತುಹೋದ
ತೊಟ್ಟಿಲಿಂದ ಇಳಿದ ಪೋರ
ಹುಡುಕಿದ್ದು ಅಪ್ಪನ ಕಿರುಬೆರಳಿಗೆ

ಹರಕೆ ತೀರಿಸಿ
ಬೆವರೊರೆಸಿಕೊಳ್ಳುವವಳ
ಕೈಗಂಟಿದ ಕುಂಕುಮದ ಚಿತ್ರ
ಕುತ್ತಿಗೆ ಮೇಲೆ
ಕುತ್ತಿಗೆಯಿಂದ ಬೆನ್ನಿಗಿಳಿದ
ಕೆಂಪು ಬೆವರಿಗೆ
ಬಣ್ಣದ ಘಮ
ಸ್ಲೀವ್ ಲೆಸ್ ಟಿ ಶರ್ಟಿನ
ಹುಡುಗನ ಕುತ್ತಿಗೆ ಮೇಲೊಂದು
ತ್ರಿಶೂಲದ ಟ್ಯಾಟೂ

ಘನಗಾಂಭೀರ್ಯದಿಂದ
ಹಗ್ಗದ ಮೇಲೆ ನಡೆಯುತ್ತಿದ್ದಾಳೆ ಹುಡುಗಿ
ಏಳುಬೀಳಿನ ಭಯವಿಲ್ಲದಂತೆ
ಭವದ ಸದ್ದುಗಳಿಗೆ
ಕಿವುಡಾದ ಬಾಲೆ
ಹಗ್ಗದ ಮೇಲೆಯೇ
ಭುವನೇಶ್ವರಿಯಾಗುತ್ತಾಳೆ
ದೂರದಿಂದ ಘಂಟೆಯ ಸದ್ದು
ಬೆಚ್ಚಗೆ ಎದೆಗಿಳಿಯುತ್ತಿದೆ

*******

About The Author

6 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top