ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಂಜುಂಡು ನಗು ಹಂಚಿದ ಪರಮೇಶ್ವರ:

ಎಸ್. ವಿ. ಪಿ.

ಡಾ.ಗೋವಿಂದ ಹೆಗಡೆ

ಇಂದು ಫೆಬ್ರವರಿ ೮, ಹಲವು ರೀತಿಗಳಲ್ಲಿ ಕನ್ನಡದ ತೇರನ್ನು ಕಟ್ಟಿದ ಪ್ರೊ ಎಸ್ ವಿ ಪರಮೇಶ್ವರ ಭಟ್ಟರ ಜನ್ಮದಿನ.
ಆ ಪ್ರಯುಕ್ತ ಕನ್ನಡದ ಕಟ್ಟಾಳುವಿಗೆ ನಮನಗಳನ್ನು ಸಲ್ಲಿಸುತ್ತ ಅವರ ನೆನಪಿನ ಈ ಬರಹ.
ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ.
(೧೯೧೪-೨೦೦೦)

೧೯೮೫-೮೯ರವರೆಗೆ , ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಗ ಅಲ್ಲಿನ ತಾತಯ್ಯನವರ ವಿದ್ಯಾರ್ಥಿನಿಲಯ ‘ಅನಾಥಾಲಯ’ದಲ್ಲಿ ವಾಸವಾಗಿದ್ದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯ ಸೌಲಭ್ಯ ಕೊಡುವ ವಿದ್ಯಾರ್ಥಿ ನಿಲಯ ಅದು.
೧೯೮೮ರಲ್ಲಿ ಇರಬೇಕು, ಆಲಯದ ವಿದ್ಯಾರ್ಥಿ ಸಂಘದ-ಇದಕ್ಕೆ ಸಾಹಿತ್ಯ ಸಂಘ ಎಂದು ಹೆಸರು- ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕೊನೆಯಲ್ಲಿ ವಾರ್ಷಿಕೋತ್ಸವಕ್ಕೆ ಅತಿಥಿಗಳನ್ನು ಹುಡುಕುವ ಕೆಲಸದಲ್ಲಿ ನಿರತನಾಗಿದ್ದೆ. ಎಸ್ ವಿ ಪರಮೇಶ್ವರ ಭಟ್ಟರನ್ನು ಕರೆಯಬಹುದು ಎಂದು ಯಾರೋ ಸೂಚಿಸಿದರು. ಒಂದು ಸಂಜೆ ಸ್ನೇಹಿತ ಸುದರ್ಶನ್ ಜೊತೆಗೆ ಕೃಷ್ಣಮೂರ್ತಿಪುರಂ ನ ಗಣೇಶ ಟಾಕೀಸ್ ನ ಪಕ್ಕದ ರಾಮಯ್ಯರ್ ರಸ್ತೆಯಲ್ಲಿದ್ದ ಭಟ್ಟರ ಮನೆಗೆ ಹೋದೆ.

ಕುಳ್ಳನೆಯ ಆಳು, ಮುಖದ ತುಂಬ ತುಂಬಿದ ನಗು, ಬಿಳಿಯ ಪಂಚೆ ಜುಬ್ಬ.. ಬಂದ ಕೆಲಸವನ್ನು ವಿಚಾರಿಸಿದ ಭಟ್ಟರು ತಮ್ಮ ಅನಾರೋಗ್ಯದ ದೆಸೆಯಿಂದಾಗಿ ಅತಿಥಿಯಾಗಿ ಬರಲು ಒಪ್ಪಲಿಲ್ಲ. ಆದರೆ ಅವರ ಪುಸ್ತಕಗಳತ್ತ ನಾವು ಕಣ್ಣು ಹಾಯಿಸಿದ್ದೇ ತಡ, ಭಟ್ಟರಿಗೆ ಹರಯ ಹಿಂದಿರುಗಿ ಬಂತು!
ಅವರು ಅನುವಾದಿಸಿದ ಕಾಳಿದಾಸ ಮಹಾಸಂಪುಟ,ಹರ್ಷ ಮಹಾಸಂಪುಟ, ಭಾಸ ಮಹಾಸಂಪುಟಗಳು ಸೇರಿದಂತೆ,ಅವರು ರಚಿಸಿದ ಹೆಚ್ಚಿನ ಪುಸ್ತಕಗಳ ಬಹಳಷ್ಟು ಪ್ರತಿಗಳು ಅಲ್ಲಿದ್ದವು.. ಪುಸ್ತಕದಂಗಡಿಯಲ್ಲಿ ನಾವು ನಿಂತ ಹಾಗಿತ್ತು.

ಒಂದೊಂದು ಗ್ರಂಥವನ್ನೂ ಕೈಗೆತ್ತಿಕೊಂಡು ಆ ಬಗ್ಗೆ ಕೆಲವು ವಿವರಗಳನ್ನು ನೀಡಿದರು. ಕೊನೆಯಲ್ಲಿ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ-
“ಒಂದು ಶಾಕುಂತಲವನ್ನು ಅನುವಾದಿಸಿದ್ದಕ್ಕೆ ಬಸಪ್ಪ ಶಾಸ್ತ್ರಿಗಳು ‘ಅಭಿನವ ಕಾಳಿದಾಸ’ ಎನ್ನಿಸಿಕೊಂಡರು. ಕಾಳಿದಾಸನ ಎಲ್ಲ ಕೃತಿಗಳನ್ನು ಹಾಗೆಯೇ ಹರ್ಷ, ಭಾಸನ ಎಲ್ಲ ಕೃತಿಗಳ ಸಂಪುಟಗಳನ್ನು ನಾನು ಅನುವಾದಿಸಿ ಪ್ರಕಟಿಸಿದ್ದೇನೆ. ಹಾಗಾದರೆ ನಾನು?”

ಕೇವಲ ಅನುವಾದ ಎಸ್ ವಿ ಪಿ ಅವರ ಕೊಡುಗೆಯಲ್ಲ. ಕಾವ್ಯದಲ್ಲಿ ಭಟ್ಟರ ಕೊಡುಗೆ ಅಮೂಲ್ಯ. ಒಂದು ಸಾಲಿನ ಕಾವ್ಯದ ರಚನೆಯಿಂದ ಹಿಡಿದು ಎರಡು ಸಾಲಿನ ಏಳೆ , ಮೂರು ಸಾಲುಗಳ ತ್ರಿಪದಿ, ನಾಲ್ಕರ ಸಾಂಗತ್ಯ ಹೀಗೆ ವಿವಿಧ ಛಂದಸ್ಸುಗಳಲ್ಲಿ ಪ್ರಯೋಗ ಮಾಡಿದವರು ಭಟ್ಟರು. ಭಾವಗೀತೆ ವಚನಗಳಲ್ಲಿಯೂ ಅವರ ಕೊಡುಗೆ ಮೌಲಿಕವಾದದ್ದು.
ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಚಾಪ, ಗಗನಚುಕ್ಕಿ, ಉಪ್ಪುಕಡಲು,ಕಂಬಾರ, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದ್ದಾರೆ.
ಅವರೊಬ್ಬ ಮಾದರಿ ಅಧ್ಯಾಪಕ.
ಸ್ನಾತಕೋತ್ತರ ಕೇಂದ್ರದ ಪ್ರಥಮ ನಿರ್ದೇಶಕರಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಸ್ತಿಭಾರ ಹಾಕಿದವರು ಅವರು.

ಅವರ ಸಾಂಸಾರಿಕ ಜೀವನ (ಪತ್ನಿಯ ಮಾನಸಿಕ ತೊಂದರೆಯಿಂದಾಗಿ) ಸಂಕಷ್ಟಮಯವಾಗಿತ್ತು ಎಂದು ಕೇಳಿದ್ದೇನೆ. ಎಲ್ಲ ನೋವು ನುಂಗಿ ಕಾವ್ಯದ ಅಮೃತವನ್ನು ಹಂಚಿದ ನಂಜುಂಡ ಅವರು.
‘ಶಾರದೆಯ ನೆಲದಲ್ಲಿ ನನ್ನದೂ ಸಣ್ಣ ಹೊಲವಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಕೃಷಿ ಮಾಡಿದ್ದೇನೆ’ ಎಂದ, ನಿಜ ಅರ್ಥದ ಈ ನುಡಿ ಸೇವಕನನ್ನು ಕಂಡ ಭಾಗ್ಯ ನನ್ನದು.

‘ಸದಾಶಿವ ಗುರು’ವಿಗೆ ನಮನಗಳು.

(ಸದಾಶಿವ ಗುರು-ಎಸ್.ವಿ.ಪಿ. ಅವರು ತಮ್ಮ ವಚನಗಳಲ್ಲಿ ಬಳಸಿದ ಅಂಕಿತ)

*********************************

About The Author

1 thought on “ನಾನು ಕಂಡ ಹಿರಿಯರು”

  1. T S SHRAVANA KUMARI

    ಒಳ್ಳೆಯ ಪರಿಚಯ. ನನ್ನ ಕಾಲೇಜು ದಿನಗಳಲ್ಲಿ ಅವರ ಕಾಳಿದಾಸ ಮಹಾ ಸಂಪುಟವನ್ನು ಸ್ವಲ್ಪ ಮಟ್ಟಿಗೆ ಓದಿದ್ದೆ.

Leave a Reply

You cannot copy content of this page

Scroll to Top