ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಯಿ ಬೇಕಾ ನಾಯಿ!

short-coated brown and black dog lying on ground

ತಾರಾ ಸತ್ಯನಾರಾಯಣ

ನಾಯಿ ಬೇಕಾ ನಾಯಿ!

ನನ್ನ ನಾಲ್ಕು ವರ್ಷದ ಮಗಳು ಸೋನುಗೆ ನಾಯಿ ಕಂಡರೆ ತುಂಬಾ ಇಷ್ಟ.ಎಲ್ಲೇ ಹೋಗ್ತಾ ಇದ್ದರೂ……… ಬೀದಿ ನಲ್ಲಿ ಯಾವ ನಾಯಿ ನೋಡಿದರೂ……. .ನೋಡುತ್ತಾ ನಿಂತುಬಿಡುತ್ತಿದ್ದಳು.ಆ ಸ್ಥಳದಲ್ಲೇ ನಂಗೂ ನಾಯಿಮರಿಬೇಕು ತಂದುಕೊಡು ಅಂತ ಹಠ ಮಾಡುತ್ತಿದ್ದಳು. ಇವಳ ಜೊತೆ ನನ್ನ ಹೆಂಡತಿ ಬೇರೆ, “ನೋಡಿ ಮಗು ನಾಯಿಮರಿ ಬೇಕು ಅಂತ ಎಷ್ಟು ಹಠ ಮಾಡುತ್ತಾಳೆ ಅವಳ ಜೊತೆಗೆ ಒಂದು ನಾಯಿಮರಿ ಇದ್ದರೆ ಅವಳ ಪಾಡಿಗೆ ಅವಳು ಆಟ ಆಡಿಕೊಂಡಿರುತ್ತಾಳೆ. ಇಲ್ಲ ಅಂದ್ರೆ ನನಗೆ ಒಂದು ಕೆಲಸ ಮಾಡೋಕೆ ಬಿಡಲ್ಲ” ಇದು ನನ್ನ ಹೆಂಡತಿಯ ಊವಾಚ ವಾಗಿತ್ತು.ಮಲಗಲು ಹೋದರೆ ಸಾಕು ಮಗಳು ಸೋನು, “ಪಪ್ಫಾ ನೀನು ಯಾವಾಗ ನಾಯಿ ತಂದುಕೊಡುವುದು? ನೀನು ನಾಯಿ ತಂದು ಕೊಡಲ್ವಾ?” ರಾತ್ರಿಯೆಲ್ಲ ಬರಿಇದೇ ಮಾತು. ಇವಳು ಮಗಳ ಮಾತೆಗೆ ಅನುಮೋದನೆ ಬೇರೆ. “ನೋಡಿ,ಈ ಅಪಾರ್ಟ್ಮೆಂಟ್ ನಲ್ಲಿ ಯಾವ ಮಕ್ಕಳು ಇಲ್ಲ. ಕೆಲವರಿದ್ದಾರೆ ಅವರ ಜೊತೆ ನಮ್ಮ ಸೋನುನಾ ಆಟಕ್ಕೆ ಕಳಸಕ್ಕೆ ಇಷ್ಟನೇ ಆಗಲ್ಲ. ಒಟ್ಟಿನಲ್ಲಿ ಅವಳಿಗೆಆಡೋಕೆ ಒಂದು ನಾಯಿಮರಿ ಬೇಕೇ ಬೇಕು”ಅಂದ್ಲು ಇವರ ಕಾಟ ತಡೆಯಲಾರದೆ ;ನಾಯಿ ತರುವುದಾಗಿ ಒಪ್ಪಿಕೊಂಡೆ.ಒಳ್ಳೆ ನಾಯಿ ನೋಡೋಣ ಎಂದು ನೋಡಿದರೆ ಒಂದು ನಾಯಿ ಮರಿಗೆ ಹತ್ತು ಹನ್ನೆರಡು ಸಾವಿರ ಯಾಕೋ ಜಾಸ್ತಿ ಆಯ್ತು ಅನ್ನಿಸ್ತು. ಇದರ ಬದಲು ಸರ್ಕಾರದವರು ನಾಯಿಯನ್ನು ದತ್ತು ಸ್ವೀಕಾರ ಪದ್ಧತಿ ಮಾಡಿದ್ದಾರಲ್ಲ ನೋಡೋಣ ಅಂತ ಅಂದುಕೊಂಡೆ.

‌ ಒಂದು ದಿನ ನಾಯಿಯನ್ನು ದತ್ತು ಸ್ವೀಕಾರ ಮಾಡಿಕೊಳ್ಳಲು ಮಗಳನ್ನು ಕರೆದುಕೊಂಡು ಹೋದೆ. ಇಪ್ಪತ್ತು ದಿನದ ಒಂದು ಹೆಣ್ಣು ನಾಯಿಮರಿಯನ್ನು ಸೋನು ತುಂಬಾ ಇಷ್ಟಪಟ್ಟಳು. ಅವಳ ಇಷ್ಟದಂತೆ ಆ ನಾಯಿಮರಿಯನ್ನು ದತ್ತು ತೆಗೆದುಕೊಂಡೆ. ನಂತರ ಅವರು ಆ ನಾಯಿಮರಿಗೆ ಏನೇನು ಉಪಚಾರ ಮಾಡಬೇಕೆಂದು ತಿಳಿಸಿದರು. ನಾಯಿಗೆ ಎರಡು ತಿಂಗಳು ಆಗುತ್ತಿದ್ದಂತೆಯೇ ತಿಂಗಳಿಗೊಮ್ಮೆ ಸಿರಪ್ಪು, ಎರಡು ತಿಂಗಳು ತುಂಬಿದ ಮೇಲೆ ಅದಕ್ಕೆ ಪಪ್ಪಿ ಡೇಪಿ ವ್ಯಾಕ್ಸಿನೇಷನ್ ಹದಿನೈದು ದಿನಕ್ಕೊಮ್ಮೆ ಶಾಂಪು ಅಥವಾ ಅದರದೇ ಆದ ಸೋಪಿನಿಂದ ಸ್ನಾನ ಮಾಡಿಸಬೇಕು ನಾಲ್ಕು ತಿಂಗಳಿಗೆ ರೇಬಿಸ್ ವ್ಯಾಕ್ಸಿನೇಷನ್ ಕೊಡಿಸಬೇಕು. ಆರು ತಿಂಗಳು ತುಂಬಿದ ಮೇಲೆ ಅದರ ತೂಕಕ್ಕೆ ಅನುಸಾರವಾಗಿ ಮಾತ್ರೆ ಹಾಕಬೇಕು. ವರ್ಷ ತುಂಬಿದ ಮೇಲೆ ವರ್ಷವರ್ಷಕ್ಕೂ ವ್ಯಾಕ್ಸಿನೇಷನ್ ಕೊಡಿಸಬೇಕು. ಇಷ್ಟು ಲಸಿಕೆಯ ವಿಚಾರವಾದರೆ, ಅದರ ಊಟದ ಬಗ್ಗೆ ಈ ರೀತಿ ಹೇಳಿದರು. ಎರಡು ತಿಂಗಳ ಮಜ್ಜಿಗೆ ಅನ್ನ ಕೊಡಬೇಕು ಮಜ್ಜಿಗೆ ಹುಳಿಇರಬಾರದು. ಪ್ಯಾಕೆಟ್ ಫುಡ್ ತಂದು ಕೊಟ್ಟರೆ ಒಳ್ಳೆಯದು.ಇಲ್ಲಾಮನೆಯಲ್ಲಿ ನೀವೇ ತಯಾರಿಸಿ ಕೊಡುವುದಾದರೆ, ಉಪ್ಪು ಹುಳಿ ಖಾರ ಇರಬಾರದು. ಬೀಜಗಳು ಇರೋ ತರಕಾರಿ ಹಾಕಬಾರದು. ಪ್ರೋಟಿನ್ ಇರೋ ಅಡುಗೆ ಮಾಡಿ ಬಿಸಿಬಿಸಿಯಾಗಿ ಹಾಕಬೇಕು. ಆಮೇಲೆ ಜಾಯಿಂಟ್ ಪೈನ್ ಮಸಲ್ಸ್ ಪೈನ್ ಬರದ ಹಾಗೆ ದಿನಕ್ಕೆರಡು ಬಾರಿ ಮೂರು ಕಿಲೋಮೀಟರ್ ನಾಯಿಯನ್ನ ಓಡಿಸಬೇಕು. ಮಲಗಲು ಹಾಸಿಗೆ ಅದಕ್ಕಾಗಿಯೇ ಇರಬೇಕು. ಅದನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಎಂದು ಹೇಳಿ, ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು, ನಾಯಿಮರಿಯನ್ನು ನನ್ನ ಜೊತೆ ಕಳುಹಿಸಿದರು. ಮನೆಗೆ ತಂದ ಕೂಡಲೇ ಹೆಂಡತಿ ಆರತಿಯೆತ್ತಿದ ನಂತರ ನಾಯಿಮರಿಯ ಪ್ರವೇಶವಾಯಿತು. ಮಗಳು ಅದಕ್ಕೆ ಟೀನು ಎಂದು ಹೆಸರಿಟ್ಟಳು. ಮುದ್ದು ಮುದ್ದಾದ ನಾಯಿ ಮರಿ, ಹೆಂಡತಿಗೆ ಮಗಳಿಗೆ ಅಂತೂ ತುಂಬಾ ಇಷ್ಟ ಆಯ್ತು. ಅದು ಗಲೀಜು ಮಾಡಿದಾಗ ಅದನ್ನು ತೆಗೆಯುವುದು ನನ್ನ ಕೆಲಸವಾಯಿತು. ನಾನಿಲ್ಲದಾಗ ಮಾತ್ರ ಕೆಲಸದವಳ ಕೆಲಸವಾಗಿತ್ತು.

‌ ನಮ್ಮ ಟೀನುಗೆ ಮನೆಯಲ್ಲಿ ಅದಕ್ಕೆತಕ್ಕಂತೆ ಅಡುಗೆ ಮಾಡಿ ಹಾಕುವುದು ಕಷ್ಟವಾಗಿ ಪ್ಯಾಕೆಟ್ ಡ್ರೈ ಫುಡ್ ನ್ನೇ ಅವಲಂಬಿಸಿದೆವು. ದಿನಕಳೆದಂತೆ ಬೆಳೆದು ಬೊಗಳುವುದು ಜಾಸ್ತಿ ಆಯ್ತು. ಅಕ್ಕ ಪಕ್ಕದ ಮನೆಯವರು” ಸ್ವಾಮಿ, ನಾಳೆ ಬೆಳಗ್ಗೆ ನಾವು ಆಫೀಸಿಗೆ ಹೋಗಬೇಕು ನಿಮ್ಮ ನಾಯಿಗೆ ಸ್ವಲ್ಪ ಸುಮ್ಮನಿರಕ್ಕೆ ಹೇಳ್ತೀರಾ!” ಅಂತ ದೂರುಗಳು ಬರೋಕೆ ಶುರುವಾಯ್ತು. ನಾವು ಮೇಲ್ಗಡೆ ರೂಮಿನಲ್ಲಿ ಒಂದು ಗೂಡು ಮಾಡಿಸಿ ಹಾಸಿಗೆ ರೆಡಿ ಮಾಡಿ ಬಿಟ್ಟಿದ್ದೂ ಆಯಿತು. ಆದರೂ ಒಮ್ಮೊಮ್ಮೆ ಏನಾದರೂ ಶಬ್ದ ವಾದರೆ ಸಾಕು ಎಲ್ಲರನ್ನೂ ಬೊಗಳಿ ಎಬ್ಬಿಸುತ್ತಿತ್ತು. ಮತ್ತೆ ಅಕ್ಕಪಕ್ಕದವರ ಗೊಣಗಾಟ ನಡೆಯುತ್ತಿತ್ತು. ಇದು ಹೋಗಲಿ ಅಂದರೆ ಬೆಳಗ್ಗೆ ವಾಕಿಂಗ್ ಕರ್ಕೊಂಡು ಹೊರಟರೆ ಅಲ್ಲಿಯೂ ನಮ್ಮ ಟೀನು ಸಲುವಾಗಿ ಬೈಸಿ ಕೊಳ್ಳ ಬೇಕಿತ್ತು ಏಕೆಂದರೆ ಕಾರು ಬೈಕು ಎತ್ತರವಾಗಿ ಏನು ಕಂಡರೂ ಸರಿ ನಮ್ಮ ಟೀನು ಅಲ್ಲಿ ಕಾಲೆತ್ತಿ ಗಲೀಜು ಮಾಡತ್ತಿತ್ತು. ಅವರು ನನ್ನ ಬಯ್ಯೋರು. ಒಟ್ಟಿನಲ್ಲಿ ಮುದ್ದಾಡುವುದು ಆಟ ಆಡೋದು ಎಲ್ಲ ಹೆಂಡತಿ-ಮಕ್ಕಳಿಗೆ ಮೀಸಲು. ನಾಯಿಗೋಸ್ಕರ ಕಷ್ಟಪಡುವುದು ಬೇರೆಯವರ ಹತ್ತಿರ ಅನ್ನಿಸಿಕೊಳ್ಳುವುದು ಅದು ನನಗೆ ಮೀಸಲಾಗಿತ್ತು. ಅವರೆಲ್ಲ ಸಾರಿಸಿ ರಂಗೋಲಿ ಹಾಕುತ್ತಿದ್ದರೆ ನಮ್ಮ ಟೀನು ಹೋಗಿ ಗಲೀಜು ಮಾಡುತ್ತೆ ಅನ್ನೋವಷ್ಟರಲ್ಲಿ ನಾನು ಬೇಗ ಅದನ್ನ ಕರ್ಕೊಂಡು ಹೋಗುತ್ತಿದದ್ದೆ ಅನ್ನಿ.ಒಟ್ಟಿನಲ್ಲಿ ನಮ್ಮ ಟೀನು ದೆಸೆಯಿಂದ ನಾನು ಸ್ಲಿಂಆದೆ. ನೋಡಿದೋರೆಲ್ಲ ನನ್ನ ವಯಸ್ಸಿಗಿಂತ ಚಿಕ್ಕೋನಾಗಿ ಕಾಣ್ತೀಯಾ ಅನ್ನುತಿದ್ರು. ಇದು ನನ್ನಾಕೆಗೆ ಇಷ್ಟ ಆಗ್ತಿರಲಿಲ್ಲ.
‌ ಯಾರದಾದರೂ ಮನೆಯಲ್ಲಿ ಮದುವೆ ಮುಂಜಿ ಏನೇ ಆಗಲಿ ಅಮ್ಮ-ಮಗಳು ಹೊರಟು ಬಿಡುತ್ತಿದ್ದರು.ನನಗೆ ನಾಯಿ ನೋಡಿಕೊಂಡು ಕಾಯುವ ಕೆಲಸ ನನ್ನದಾಗಿತ್ತು. ಅದನ್ನು ನೋಡಿಕೊಳ್ಳುತ್ತಾ ನೋಡಿಕೊಳ್ಳುತ್ತಾ ಕ್ರಮೇಣ ನನ್ನ ಮಗಳು ಸೋನು, ಹೆಂಡತಿ ಗಿಂತಲೂ ನಾಯಿನೇ ಹೆಚ್ಚಾಯಿತೇನೋ ಅನ್ನೋವಷ್ಟರ ಮಟ್ಟಿಗೆ ನನಗಾಗಿತ್ತು. ಹೆಂಡತಿ ನೀವು ನನಗಿಂತ ನನ್ನ ಮಗಳಿಗಿಂತ ನಿಮಗೆ ನಾಯಿಯೇ ಹೆಚ್ಚಾಯ್ತು ಅಂತ ಎರಡೆರಡು ದಿನ ನನ್ನ ಜೊತೆ ಮಾತೇ ಬಿಟ್ಟು ಬಿಡೋದಕ್ಕೆ ಶುರುಮಾಡಿದ್ಲು. ಈಗ ಮಗಳು ಸೋನು “ಪಪ್ಪಾ ನಾಯಿಮರಿ ದೊಡ್ಡದಾಯಿತು ಅದಕ್ಕೆ ನೀನು ಬೇಕು. ನಿಂಗೆ ನಾಯಿನೇ ಬೇಕು. ಎಲ್ಲಾದರೂ ಬಿಟ್ಟು ಬಾಪ್ಪ ನಾಯಿನ!” ಅಂತ ಮಗಳು ಕೂಡ ಹೇಳೋಕೆ ಶುರು ಮಾಡಿದ್ಲು. ಹೀಗೆ ದಿನಗಳು ಉರುಳುತ್ತಿತ್ತು ನಾನು ಟೀನು ತುಂಬಾ ಹತ್ತಿರವಾದೆವು.
‌ ಟೀನು ದೊಡ್ಡದಾಗಿ ನಾಲ್ಕುಮರಿಯನ್ನು ಹಾಕುವುದರಮೂಲಕ ತಾಯಿ ಆಯಿತು. ಆ ಮರಿಗಳನ್ನು ಏನು ಮಾಡೋದು? ಒಪ್ಪಂದದ ಪ್ರಕಾರ ನಾಯಿ ಮರಿಯನ್ನು ಅಲ್ಲಿ ಇಲ್ಲಿ ಎಲ್ಲೂ ಬಿಡುವ ಹಾಗಿಲ್ಲ. ನಾವು ಕೂಡ ಬೇರೆಯವರಿಗೆ ದತ್ತುನೇ ಕೊಡಬೇಕಿತ್ತು. ಒಂದು ನಾಯಿಗೆ ವಿಪರೀತ ಖರ್ಚು ಬರುತ್ತಿತ್ತು. ಇನ್ನು ನಾಲ್ಕು ಮರಿಗಳನ್ನ ಹೇಗೆ ಸಾಕೋದು? ಏನು ಮಾಡುವುದು! ಅಂದುಕೊಂಡು ಮಕ್ಕಳಿರುವ ಮನೆ ಗಳಿಗೆ ಹೋಗಿ ನಾಯಿಮರಿ ಬೇಕಾ ?ನಾಯಿ ಮರಿ ಬೇಕಾ?ಅಂತ ಕೇಳಿದ್ದೇ ಆಯ್ತು. ಆದರೆ ಯಾರೂ ನಾಯಿಬೇಕು ಅಂತ ಹೇಳಲಿಲ್ಲ. ಬಲವಂತ ಮಾಡಿದೆ. ಪರಿಪರಿಯಾಗಿ ಕೇಳಿದಾಗ, ನಮ್ಮ ಮಕ್ಕಳಿಗೆ ಮೊಬೈಲ್ ಇದೆ ಕಂಪ್ಯೂಟರ್ ಇದೆ. ನಾಯಿಮರಿ ಜತೆ ಆಟ ಆಡೋಕೆ ಟೈಮಿಲ್ಲ. ನಮಗೇ ಅಡುಗೆ ಮಾಡಿಕೊಳ್ಳುವುದೇ ಕಷ್ಟ; ಇನ್ನಾ ನಾಯಿಗಾಗಿ ಹೇಗೆ
ಅಡುಗೆ ಮಾಡಿ ಹಾಕೋಣ ?ಎಂದು ಎಲ್ಲರೂ ಬೇಡ ಅಂತಾನೆ ಹೇಳಿ. ಈಗ ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಮನೆಯಲ್ಲಿ ಮಗಳು ಹೆಂಡತಿ ನನ್ನ ಜೊತೆ ಮಾತಾಡಲ್ಲ ನಾಯಿಮರಿ ವಿಚಾರ ತಲೆಯಲ್ಲಾ ತುಂಬಿ ಬಿಟ್ಟಿದೆ. ನಾನು ಎಲ್ಲೇ ಹೋಗಲಿ ಯಾರಾದ್ರೂ ಸಿಗಲಿ ನಿಮಗೆ ನಾಯಿ ಬೇಕಾ? ಅನ್ನುವ ಸ್ಥಿತಿ ನನ್ನದಾಗಿದೆ ಈಗ ಇದಕ್ಕೆಏನು ಪರಿಹಾರ ಅಂತ ನೀವು ಹೇಳ್ತೀರಾ!!

**********

About The Author

Leave a Reply

You cannot copy content of this page

Scroll to Top