ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಬ್ಬಿಯ ಅಳಲು

Image result for images of indian birds

ತಾರಾ ಸತ್ಯನಾರಾಯಣ

“ಗುಬ್ಬಿಯ ಅಳಲು”

               ನನ್ನ ಸಂಸಾರದ ಹೊಟ್ಟೆ ತುಂಬಿಸಲು ನಾನು ದೂರ ಬಹುದೂರ ಬಂದರೂ ……ಎಲ್ಲಿಯೂ ನನಗೆ ಹಣ್ಣುಗಳಿರುವ ಮರಗಳೇ ಕಾಣುತ್ತಿಲ್ಲ.ಎಲ್ಲಿ ನೋಡಿದರೂ ಬರೀ ಕಟ್ಟಡ ಕೆಲವಂತೂ ಗಗನಚುಂಬಿ ಕಟ್ಟಡಗಳು ಕೆಳಗಡೆ ನೋಡಿದರೆ ಟಾರಿನ ರಸ್ತೆಗಳು ಹೋಗಲಿ ಮನೆಗಳಿರುವ ಕಡೆಯೇ ಹೋಗೋಣವೆಂದರೆ ಅಲ್ಲೂ ಕೂಡ ಮನೆಯ ಸುತ್ತ ಮುತ್ತ ಸಿಮೆಂಟಿನಿಂದ ಕೂಡಿದ ನೆಲ. ಮನೆಯ ಮುಂಭಾಗದಲ್ಲಿ ಮನೆಯ ಹಿಂಭಾಗದಲ್ಲಿ ಗಿಡಮರಗಳಿಲ್ಲ. ಎರಡು  ಮೂರು ಅಂತಸ್ತಿನ ಮನೆಗಳು. ಮರ,ಗಿಡ,ಮಣ್ಣಿನ ನೆಲ-ಜಲ ಎಲ್ಲಾ ಮಂಗಮಾಯ

              ಹಿಂದೆ ನನ್ನಮುತ್ತಾತ ಮುತ್ತಜ್ಜಿ ಅವರೊಡನೆ ನಿಧಾನಕ್ಕೆ ಹಾರುತ್ತ( ಆಗ ನಾನು ತುಂಬಾ ತುಂಬಾ ಚಿಕ್ಕ ಮರಿ )ನಾನು ಅವರ ಜೊತೆ ಬರ್ತಾಇದೆ. ಆಗ ನಮ್ಮ ಗೂಡು ಬಿಟ್ಟು ತುಂಬಾ ದೂರ ಬರ್ತಿರ್ಲಿಲ್ಲ ನಮ್ಮ ಗೂಡಿನ ಆಜು-ಬಾಜಿನಲ್ಲಿ ಅನೇಕ ತರದ ಹಣ್ಣುಗಳಿಂದ ಕೂಡಿದ ಗಿಡಮರಗಳು ಇರುತ್ತಿದ್ದವು ಗಿಡ-ಮರಗಳಲ್ಲಿ ತರಹೇವಾರಿ ಹುಳ ಹುಪ್ಪಟೆಗಳು ಸಿಕ್ಕರೆ, ಹಣ್ಣು ಕಾಯಿಗಳು ಬೇಕಾದಷ್ಟು ಸಿಗುತ್ತಿತ್ತು. ಅಲ್ಲದೆ ಅಕ್ಕ -ಪಕ್ಕದ ಮನೆಗಳ  ಮುಂದೆ ಹೋದರೆ, ಅಕ್ಕಿ ಆಯ್ದ ಭತ್ತಗಳು, ಹುಳ-ಹುಪ್ಪಟೆಗಳು ಸಿಕ್ಕರೆ,ಧವಸ-ಧಾನ್ಯವನ್ನು ಮೊರದಲ್ಲಿ ಮಾಡುತ್ತಿದ್ದರಿಂದ,ಅದರಲ್ಲಿದ್ದ ಕಸ-ಕಡ್ಡಿಗಳ ಜತೆ ಬರುತ್ತಿದ್ದ ಧಾನ್ಯವನ್ನು ಎಸೆಯುತ್ತಿದ್ದರು.   ಅದೇ ನಮಗೆ ಬೇಕಾದಷ್ಟು ಸಿಗುತ್ತಿತ್ತು. ಮನೆ ಹಿಂದೆ,ಹಿತ್ತಲಿಗೆ ಹೋದರೆ ಮುಸುರೆ ಯಲ್ಲಿರುತ್ತಿದ್ದ ಅನ್ನ, ಬೆಂದ ಬೇಳೆಕಾಳುಗಳು ನೀರು,ಯಥೇಚ್ಛವಾಗಿ ಸಿಗುತ್ತಿತ್ತು. ನಾವು ಮನೆ ಒಳಗೆ ಹೋಗಿ ಅಕ್ಕಿ ಕಾಳು ಬೇಳೆಗಳನ್ನು ತಿಂದರೂ….ನಮ್ಮನ್ನು ಯಾರು ಓಡಿಸುತ್ತಿರಲಿಲ್ಲ. ಅವರ ಮನೆಯಲ್ಲಿದ್ದ ಕನ್ನಡಿಯಲ್ಲಿ ನಮ್ಮನ್ನೆ ನೋಡಿಕೊಂಡು ಕುಕ್ಕಿ, ಚಿಲಿಪಿಲಿ ಗುಟ್ಟಿದಾಗ ಅವರಿಗೆಲ್ಲ ಅದೇನೋ ಸಂಭ್ರಮ. ಮನೆಯಲ್ಲಿ ಎಲ್ಲರೂ ನಮ್ಮನ್ನ ಇಷ್ಟಪಡುತ್ತಿದ್ದರು. ಅಲ್ಲದೆ ನಮ್ಮನ್ನು ನೋಡುತ್ತಾ ನಮ್ಮ ಮೇಲೆ ಹಾಡು ಹೇಳುತ್ತಿದ್ದರು. ಹಾ! ಯಾವ ಹಾಡು! ಗೊತ್ತಾಯ್ತು; ಬಾಬಾ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ ನಾವೆಲ್ಲ ತಿನ್ನೋಣ ಬಾ ಬಾ ಬಾ :ಅಂತ ಹೇಳ್ತಿದ್ದರು ಎಷ್ಟು ಚೆನ್ನಾಗಿತ್ತು.

          ಹಕ್ಕಿಯಾ ದ ನಮಗೆ ಹಾರಲು ವಿಶೇಷ ಗುಣಗಳಿರಬೇಕು ಅವು ಯಾವುವೆಂದರೆ,ದೇಹಕ್ಕೆ ಬಳುಕುವ ಬಲ ಇರಬೇಕು. ಅಧಿಕ ಪ್ರಮಾಣದಲ್ಲಿ ಗಾಳಿ ಒದಗಬೇಕು ಅತಿವೇಗದಲ್ಲಿ ರಕ್ತ ಪರಿಚಲನೆ ನಡೆಯಬೇಕು. ಹಗುರ ಶರೀರ, ಬಲಿಷ್ಟ ಹೃದಯ, ತೀಕ್ಷ್ಣ ದೃಷ್ಟಿ ವಿಶಿಷ್ಟ ಉಸಿರಾಟ ಕ್ರಮ ಹೆಚ್ಚಿನ ಆಹಾರ ಪೂರೈಕೆ ಆಗಬೇಕು. ಈ ಎಲ್ಲದರ ಜೊತೆಗೆ ಬಲಿಷ್ಟ ರೆಕ್ಕೆಗಳಿರಬೇಕು. ಈ ಎಲ್ಲಾ ಗುಣಗಳಿಂದ ನಾವು ಮೇಲೆ ಹಾರಾಡಬಹುದು. ಮೇಲೆ ಹಾರಲು ಸಾಕಷ್ಟು ಶಕ್ತಿ ಬೇಕು ಶಕ್ತಿ ಪಡೆಯಲು ನಮ್ಮ ದೇಹದ ತೂಕದ ಅರ್ಧದಷ್ಟಾದರೂ ಶಕ್ತಿಯುತವಾದ ಆಹಾರ ತಿನ್ನಬೇಕು ನಾವು ಬೇಳೆಕಾಳುಗಳು, ಹುಳ ಹುಪ್ಪಟೆಗಳು ನೆರೆ-ತೊರೆಯಲ್ಲಿರುವ ಮೀನುಗಳು, ಅಲ್ಲದೆ ಬೆಳೆಯುತ್ತಿದ್ದ ಪೈರಿಗೆ ಹತ್ತುತ್ತಿದ್ದ ಹುಳ ಹುಪ್ಪಟೆಗಳನ್ನು ತಿನ್ನುತ್ತಿದ್ದೆವು.ಆಗ ನಮ್ಮನ್ನು ರೈತನ ಮಿತ್ರ ಎಂದೇ ಹೇಳುತ್ತಿದ್ದರು.

            ಚಲನೆಯ ವಿಧದಲ್ಲಿ ಹಾರಾಟ ತುಂಬಾ ಶ್ರಮ ವಾದದ್ದು ಆದ್ದರಿಂದ ನಮ್ಮ ಹೃದಯದ ಬಡಿತ ಮನುಷ್ಯರಿಗಿಂತ ಜಾಸ್ತಿ ನಮ್ಮ (ಹಕ್ಕಿಗಳ)ಉಷ್ಣತೆ 107 ‘ಡಿಗ್ರಿ ಮೀರುತ್ತದೆ ಈ ಎಲ್ಲ ಜೈವಿಕ ಕ್ರಿಯೆಗಳು ಸುಸೂತ್ರವಾಗಿ ನಡೆಯಬೇಕಾದರೆ ನಾವು ತಿನ್ನುತ್ತಲೇ ಇರಬೇಕು ತಿನ್ನುವುದರಿಂದ ಇಂಜಿನ್ ನಂತೆ ಇರುವ ನಮ್ಮ ರೆಕ್ಕೆಗಳಿಗೆ ಶಕ್ತಿ ಬರುವುದು !ಆಗ ನಾವು ಎಲ್ಲೆಂದರಲ್ಲಿ ಹಾರಬಹುದು. ಈಗ ನಂಗೆ ಮುತ್ತಜ್ಜಿ, ಮುತ್ತಾತ,ಅಜ್ಜಿ-ತಾತನೂ ಇಲ್ಲ.ಅದು ಹೋಗಲಿ ಅಪ್ಪ ಅಮ್ಮನೂ ಇಲ್ಲ. ನನಗೆ ಹೆಂಡತಿ, ಇನ್ನೂ ಗುಟುಕುಣಿಸುವ ಮಕ್ಕಳಿದ್ದಾರೆ. ಅವರನ್ನ ಸಾಕುವ ಹೊಣೆ ನನ್ನದು.ಈಗ ನಮಗೆ ಬೇಕಾದಂತಹ ಗಿಡಮರಗಳು ಕಡಿಮೆ. ಯಾರ ಮನೆ ಮುಂದೆಯೂ ಭತ್ತವಾಗಲಿ,ಕಾಳಾಗಲೀ…. ಹುಳಹುಪ್ಪಟೆ ಗಳಾಗಲಿ ಸಿಗುತ್ತಿಲ್ಲ. ಅಲ್ಲದೆ ಹಿತ್ತಲಲ್ಲಿ ಪಾತ್ರೆ ತೊಳೆಯುವುದು ತುಂಬಾ ಕಡಿಮೆ. ಕೆಲವರ ಮನೆಯಲ್ಲಿ ಹಿತ್ತಲೇ ಇರುವುದಿಲ್ಲ ಈಗ ಎಲ್ಲರೂ ಅಂಗಡಿಯಿಂದ ಕ್ಲೀನಾಗಿರೋ ಆಹಾರ ಪದಾರ್ಥವನ್ನೇ ತರುತ್ತಾರೆ.ಇನ್ನು ಹೇಳಬೇಕೆಂದರೆ ಕೆಲವರು ready-to-eat ಪ್ಯಾಕೆಟ್ ತಂದು ಅದನ್ನು ಬಿಸಿ ಮಾಡಿ ತಿನ್ನುತ್ತಾರೆ. ಆದರೂ ಕೆಲವರು ಮನೆಗಳಲ್ಲಿ ಏನಾದರೂ ಸಿಕ್ಕೇ ಸಿಗುತ್ತದೆ ಎಂದು ಅಲ್ಲಿಗೆ ಹೋಗೋಣವೆಂದರೆ ಈಗ ಮೊಬೈಲ್ ಎಂಬ ಸಲಕರಣೆ ಬಂದು, ಬಹುತೇಕ ಎಲ್ಲರ ಮನೆಯಲ್ಲೂ ಇರುವುದರಿಂದ ಅದರಿಂದ ಬರುವ ಕ್ಷ- ಕಿರಣಗಳು ನಮ್ಮ ಉಸಿರಾಟಕ್ಕೆ(ಭಯವಾಗಿ) ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ನಾವು ಮನೆಗಳ, ಅಂಗಡಿಗಳ ಮುಂದೆ ಹೆದರಿ  ಬರುವುದೇ ಇಲ್ಲ.

             ನಗರದ ಸಹವಾಸ ಬೇಡ ಹಳ್ಳಿಗೆ ಹೋಗೋಣವೆಂದರೆ ಅಲ್ಲಿಯೂ ಸುಖವಿಲ್ಲ.ರೈತ ಬೆಳೆಯುವ ಆಹಾರ ಧಾನ್ಯಗಳಿಗೆ, ಹುಳುಗಳು ಹತ್ತಬಾರದೆಂದು  ಕ್ರಿಮಿನಾಶಕ ಸಿಂಪಡಿಸುತ್ತಾರೆ. ಅವುಗಳನ್ನು ತಿಂದು,ನನ್ನ ಬಳಗದ ಅನೇಕರಿಗೆ ಆರೋಗ್ಯವೇ ಹಾಳಾಗಿದೆ. ಗಿಡ,ಮರ ಬಳ್ಳಿಗಳಲ್ಲಿ ಬಿಡುವ ಹಣ್ಣನ್ನಾ ದರೂ ತಿನ್ನೋಣ ವೆಂದರೆ,ಹಣ್ಣುಗಳು ಚೆನ್ನಾಗಿ ಬರಲೆಂದು ಬಣ್ಣವಾಗಿಕಾಣಲೆಂದು ಇಂಜಕ್ಷನ್ ಹಾಕುತ್ತಾರಂತೆ.ಅವುಗಳನ್ನು ತಿನ್ನ ಬಾರದೆಂದು ನಮಗೆ ತಿಳಿಯುವುದಿಲ್ಲ.ಮನುಷ್ಯರು ಗಳಾದರೆ ಅವುಗಳನ್ನು ಚೆನ್ನಾಗಿ ತೊಳೆದು ತಿನ್ನುತ್ತಾರೆ ನಮಗೆ ಆ ಭಾಗ್ಯ ಇಲ್ಲವಲ್ಲ !ಮೀನು ಹಿಡಿದು ತಿನ್ನೋಣವೆಂದರೆ, ನೀರು ಕಲುಷಿತಗೊಂಡಿದೆ. ಕಲುಷಿತಗೊಂಡ ನೀರಿಗೆ ಸೊಳ್ಳೆಗಳು ಬರುತ್ತದೆಂದು ನೀರಿಗೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಹಾಗಾಗಿ ನಮಗೆ ಹಳ್ಳಿಯಲ್ಲೂ ಸುಖವಿಲ್ಲ.

ನಗರದಲ್ಲಿ ಕಾರ್ಖಾನೆ ಅಲ್ಲದೆ ಸಣ್ಣ ಕೈಗಾರಿಕೋದ್ಯಮದ ವರು ಕೂಡ ಅದರಲ್ಲಿ ಬರುವ ಕಲುಷಿತ ನೀರನ್ನು ನದಿಗೆ ಬಿಟ್ಟು ನೀರನ್ನು ಹಾಳು ಮಾಡುವುದರಿಂದ ಅದರಲ್ಲಿರುವ ಮೀನುಗಳು ಸಾವನ್ನಪ್ಪಿವೆ.ಹಾಗಾಗಿ ನಾವು ಸಣ್ಣ ಪುಟ್ಟ ಮೀನುಗಳನ್ನು ಅರಸಿ ಹೋಗುವುದು ಕಷ್ಟದ ಕೆಲಸವಾಗಿದೆ. ಈ ಎಲ್ಲಾ ಕಾರಣದಿಂದ ನಮ್ಮ ಸಂತತಿ ಅಳಿವಿನ ಅಂಚಿನಲ್ಲಿದೆ.ಏನೋ ನನ್ನ ಅದೃಷ್ಟಕ್ಕೆ ನನಗೆ ಗೂಡು ಕಟ್ಟಿಕೊಳ್ಳಲು ಒಂದು ದೊಡ್ಡ ಮರ ಸಿಕ್ಕಿದೆ. ಆ ಮರದ ಮೇಲೆ ಗೂಡು ಕಟ್ಟಿದ್ದೇನೆ. ನನ್ನ ಹೆಂಡತಿ ಮಕ್ಕಳು ಅಲ್ಲೇ ಇದ್ದಾರೆ ಈಗ ಮೆಟ್ರೋ ಬಂದು ಅರ್ಧದಷ್ಟು ಮರಗಳನ್ನು ಕಳೆದು ಹಾಕಿದ್ದಾರೆ ಆಗಾಗ ಉಕ್ಕಿನ ಸೇತುವೆ ಪ್ರಸ್ತಾಪವಿದೆ ಮತ್ತೆ ಪರಿಸರ !!?ಪರಿಸರ ನಾಶವಾಗುತ್ತಿದೆ.ನಾವು ಎಲ್ಲಿ ಹೋಗುವುದು? ಏನು ಮಾಡುವುದು ?ಅಯ್ಯೋನಾನು ದೂರ ಬಂದುಬಿಟ್ಟೆ. ಹೊಟ್ಟೆಗೆ ಏನು ಸಿಕ್ಕಿಲ್ಲ ನನಗೆ ತುಂಬಾ ಸುಸ್ತಾಗಿದೆ. ಈಗ ನಾನು ಹೇಗೆ ಹೋಗಲಿ?ಗೂಡು ಬಿಟ್ಟು ತುಂಬಾ ದೂರ ಬಂದು ಬಿಟ್ಟಿದ್ದೇನೆ. ನಾನು ನನ್ನ ಗೂಡಿಗೆ ಹೇಗೆ ಹೋಗಲಿ? ಕಾಗೆಯಿಂದ ಹೇಗೆ ತಪ್ಪಿಸಿಕೊಳ್ಳಲಿ? ನಾನು ಹೇಗಾದರು ತಪ್ಪಿಸಿಕೊಂಡು ನಿಧಾನವಾಗಿ ಹೋಗಲೇಬೇಕು ಹೋಗುತ್ತೇನೆ. ಆದರೆ ನಾನು ಹೋಗುವವರೆಗೂ ನಾವಿದ್ದ ಮರ ಕಡಿಯದೇ ಇರಲಿ. ಬೀಳದೆ ಇರಲಿ.ನಮ್ಮ ಸಂತತಿ ಅಳಿಯಬಾರದು! ಉಳಿಯಬೇಕು. ಓ !ದೇವರೇ; ಓ ದೇವರೇ ನಮ್ಮನ್ನು ರಕ್ಷಿಸು!!.

*********

About The Author

Leave a Reply

You cannot copy content of this page

Scroll to Top