ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Shallow Focus Photo Of Woman Smiling With Face Paint

ಎ.ಹೇಮಗಂಗಾ

ಎಲ್ಲ ಜಂಜಡಗಳ ಮರೆಸುವ ಮಾಯೆಯಿದೆ ನಿನ್ನ ನಗುವಿನಲ್ಲಿ
ಎಲ್ಲ ಒತ್ತಡಗಳ ಶೂನ್ಯವಾಗಿಸುವ ಕಲೆಯಿದೆ ನಿನ್ನ ನಗುವಿನಲ್ಲಿ

ನನಗೆಂದೇ ದೈವ ಬುವಿಗೆ ಕಳಿಸಿದ ಕೊಡುಗೆ ನೀನು ಮಗುವೇ…
ಎಲ್ಲ ಚಿಂತೆಗಳ ಇಲ್ಲವಾಗಿಸುವ ಮೋಡಿಯಿದೆ ನಿನ್ನ ನಗುವಿನಲ್ಲಿ

ಕಾಲದ ಪರಿವೆಯಿಲ್ಲದೇ ಕಾದೆ ಬರಿದಾದ ಮಡಿಲು ತುಂಬಲೆಂದು
ಎಲ್ಲೆಡೆಯೂ ಮುದ ಹರಡುವ ಮುಗ್ಧತೆಯಿದೆ ನಿನ್ನ ನಗುವಿನಲ್ಲಿ

ಹೆಣ್ತನಕೆ ಹಿರಿಮೆ ತಂದ ತಾಯ್ತನದ ಭಾಗ್ಯ ನನ್ನದಾಗಿದೆ ಇಂದು
ಅಶಾಂತಿಯ ತೊಡೆವ ಶಾಂತಿಯ ನೆಲೆಯಿದೆ ನಿನ್ನ ನಗುವಿನಲ್ಲಿ

ಕಿವಿಗಳ ತಣಿಸುತಿವೆ ನಿನ್ನ ಮೃದು ಮಧುರ ತೊದಲು ನುಡಿಗಳು
ಬಳಲಿದ ಜೀವಕೆ ಬಲ ನೀಡುವ ಚೈತನ್ಯವಿದೆ ನಿನ್ನ ನಗುವಿನಲ್ಲಿ

ಇನ್ನೆಂದೂ ನಾ ಏಕಾಂಗಿಯಲ್ಲ ನಿನ್ನೊಡನಾಟ ನಲಿವು ತಂದಿರಲು
ಸಂಕಷ್ಟಗಳ ಇರುಳು ಕಳೆದು ಬೆಳಕು ಮೂಡಿದೆ ನಿನ್ನ ನಗುವಿನಲ್ಲಿ

ಸಿರಿಸಂಪತ್ತೆಲ್ಲವೂ ಗೌಣವಾಗಿದೆ ಅಮೂಲ್ಯ ನಿಧಿಯೇ ನೀನಾಗಿರೆ
ಆ ಸ್ವರ್ಗವನೇ ಧರೆಗಿಳಿಸಿದ ಚಮತ್ಕಾರವಿದೆ ನಿನ್ನ ನಗುವಿನಲ್ಲಿ

*************************

About The Author

1 thought on “ಕಾವ್ಯಯಾನ”

  1. Dr. Jayappa Honnali

    ತುಂಬಾ ಚನ್ನಾಗಿದೆ ಗಜಲ್… ಶರಣಾರ್ಥಿ ಕವಯಿತ್ರಿ..! ಆತ್ಮಪೂರ್ವಕ ಅಭಿನಂದನೆಗಳು ತಮಗೆ..!

Leave a Reply

You cannot copy content of this page

Scroll to Top