ಕಾವ್ಯಯಾನ
ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ ಮಾತ್ತೆಲ್ಲವೂ ಮುಗಿದು ಎರಡೂ ಬದಿಯಿಂದ ಬರಿದೇ ಮತ್ತೆ ಎಂಬ ಶಬ್ಧ ಪುನರಾವರ್ತನೆಯಾಗುವ ವಿಕ್ಷಿಪ್ತ ಹೊತ್ತಲ್ಲಿ ನಾನು ನಿಟ್ಟುಸಿರಿಡುತ್ತ ಮಾತು ಮುಗಿಸುವ ಮಾತನಾಡುವಾಗಲೇ ಅತ್ತ ಕಡೆಯಿಂದ ತೇಲಿ ಬರುತ್ತದೆ ‘ಈ ದಿಗ್ಬಂಧನವೆಲ್ಲ ಮುಗಿದು ಸಿಗುವುದಾದರೂ ಯಾವಾಗ ನೀನು ಒಮ್ಮೆ ನನ್ನತೋಳಿಗೆ ? ಅದೆಷ್ಟು ತಿಂಗಳು ಕಾಯಬೇಕು ನಾನು , ನಿನ್ನದೊಂದು ಮೈಮರೆಸುವ ಅಪ್ಪುಗೆಗೆ ನಶೆಯೇರಿಸುವ ಮುತ್ತಿಗೆ?’ ಮುಗಿಯುತ್ತ ಬಂದ ಮಾತುಗಳಲ್ಲೀಗ ತುಳುಕುತಿದೆ ಹೊಸ ಹರೆಯ ದೂರದಲ್ಲೆಲ್ಲೋ ಕೂಗುವ ಕೋಗಿಲೆ ಅನುರಣಿಸಿ ಇಬ್ಬರ ಫೋನಿನಲ್ಲೂ ಜೊತೆಗಿರುವ ಭರವಸೆ ತುಂಬುತಿದೆ ———– ದಿಗ್ಭಂದನ ಮುಗಿಯುವಾಗ ನಾಗಾಲೋಟದಿಂದ ಓಡುತ್ತಿದ್ದ ದಿನಗಳೀಗ ಬಸವನಹುಳದಂತೆ ತೆವಳುತಿದೆ ನಿಮಿಷಗಳೆಲ್ಲ ಗಂಟೆಗಳಾಗಿ ಸೆಕೆಂಡುಗಳೂ ಇನ್ನೇನು ಗಂಟೆಗಳಾಗುವ ಈ ದುರಂಧರ ಸಮಯದಲ್ಲಿ ಇಬ್ಬರ ಮುಖದಲ್ಲೂ ಪ್ರತಿಫಲಿಸುವ ಪೇಲವ ನಗೆಗೆ ಅಂತರ ಮುರಿಯುವ ಶಕ್ತಿಯಿಲ್ಲ ದೇಶ ದೇಶಗಳಾದಿಯಾಗಿ ರಾಜ್ಯ, ಜಿಲ್ಲೆ ತಾಲೂಕು ಗ್ರಾಮಗಳ ಮಾತು ಬಿಡಿ ಶಹರ, ಹಳ್ಳಿಗಳ ಒಂದೊಂದು ಗಲ್ಲಿ, ಓಣಿಯೂ ದಿಗ್ಬಂಧನ ಹಾಕಿಸಿಕೊಂಡು ಜೈಲಿನಲ್ಲಿರುವ ಏಕಾಂಗಿ ಕೈದಿಯಂತಾಗಿ ವಿಲವಿಲನೆ ಒದ್ದಾಡುತ್ತಿರುವಾಗ ನಮ್ಮದೇನು ಹೆಚ್ಚುಗಾರಿಕೆಯಿಲ್ಲ ಬಿಡು ಅತ್ತ ತಿರುಗಿದರೂ ಕಿರುಗುಡುವ ಜೋಡಿಮಂಚ ಇತ್ತ ತಿರುಗಿದರೂ ಸದ್ದು ಮಾಡುವುದನು ಕೇಳಿಯೂ ಒಂದೊಂದು ತುದಿಗೆ ಒಬ್ಬೊಬ್ಬರು ನಿಟ್ಟುಸಿರಿಡುತ್ತಲೇ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಅರಿವಿದೆ ನಮ್ಮಿಬ್ಬರಿಗೂ ಮುಂಜಾನೆ ಬೇಗನೆದ್ದು ಚಹಾಕ್ಕೆ ನೀರಿಡುವ ಮೊದಲೇ ಗೀಜರ್’ನ ಬಟನ್ ಒತ್ತಿ ಎಲ್ಲಕ್ಕಿಂತ ಮೊದಲು ಆಗಿಬಿಡಲಿ ಸ್ನಾನವೇ ಎಂದು ಗೊಣಗಿ ತಲೆಗೆರೆದುಕೊಂಡು, ಹಣೆಗೆ ಬಿಂದಿ ಇಡಲು ಕನ್ನಡಿ ಎದುರು ನಿಂತಾಗಲೇ ಕಾಣುತ್ತದೆ ಅಂತರ ಮುಗಿದ ಸೂಚನೆಗೆ ಇನ್ನೂ ಹಾಸಿಗೆ ಬಿಟ್ಟೇಳದ ನಿನ್ನ ಮುಖದಲ್ಲಿ ಅರಳುವ ಮುಗುಳ್ನಗೆ **********









