ನೀನೀಗ ಇದ್ದಿದ್ದರೆ ಚೈತ್ರಾ ಶಿವಯೋಗಿಮಠ “ನೀನೀಗ ಇದ್ದಿದ್ದರೆ” ಆ ಕಲ್ಪನೆಯೇ ಚಂದ ಬಹುಶಃ ಹೋಗುತ್ತಿದ್ದೆವು ಗಿರಿ-ಕಣಿವೆಗಳ ಮೇಲೆ ಹತ್ತಿಳಿಯಲು!, ಹೂವಿಂದ ಹೂವಿಗೆ ಹಾರುವ ಬಣ್ಣದ ಚಿಟ್ಟೆಗಳ ಹಿಡಿಯಲು, ಓಡುವ ನದಿಯ ಬೆನ್ನುಹತ್ತಲು, ಹಿಮ ಪರ್ವತಗಳ ಮೇಲೇರಿ ಹಿಮದ ಬೊಂಬೆಯ ಮಾಡಿ ನಲಿಯಲು.. ನೀನೀಗ ಇದ್ದಿದ್ದರೆ ಬಹುಶಃ ನನ್ನೆಲ್ಲ ಕ್ಷಣಗಳು ಅಪ್ಪನೆಂಬ ಮಂತ್ರ ಪಠಣವೇ! ಹೊಸ ಪುಸ್ತಕಗಳೋದುವ ನನ್ನ ನೆಚ್ಚಿನ ಸಹಪಾಠಿಯಾಗುತ್ತಿದ್ದೆ ಬಂದ ಹೊಸ ಸಿನಿಮಾಗಳ ನನ್ನ ಖಾಸಗಿ ವಿಮರ್ಶಕನಾಗುತ್ತಿದ್ದೆ! ಎಲ್ಲ ಪ್ರಚಲಿತ ವಿಷಯಗಳ ಮೆಚ್ಚಿನ ವಿಶ್ಲೇಷಕನಾಗುತ್ತಿದ್ದೆ! ನೀನೀಗ ಇದ್ದಿದ್ದರೆ ಬಹುಶಃ ಪ್ರತಿ ಸಂದೇಹಗಳಿಗೂ ನನ್ನ ನಡೆದಾಡುವ ಶಬ್ದಕೋಶ, ನುಡಿ ಕೋಶ, ಜ್ಞಾನ ಭಂಡಾರವೇ, ಗೂಗಲ್ ಗಿಂತ ಆಪ್ತ ಶೋಧಕ ನೀನೇ ಆಗಿರುತ್ತಿದ್ದೆ ಅಪ್ಪ! ನೀನೀಗ ಇದ್ದಿದ್ದರೆ ಬಹುಶಃ ನನ್ನ ಮಗುವಿಗೆ ಅತ್ಯುತ್ತಮ ಸ್ನೇಹಿತನಾಗಿರುತ್ತಿದ್ದೆ ಅದರೆಲ್ಲ ಆಟಪಾಠಗಳ ಅಚ್ಚುಮೆಚ್ಚಿನ ಸಹವರ್ತಿ ನೀನೇ ಆಗಿರುತ್ತಿದ್ದಿ ಅಪ್ಪ! ಅಮ್ಮನ ಪ್ರೀತಿಯ ಲಾಲನೆಯೊಂದಿಗೆ ನಿನ್ನ ವಾತ್ಸಲ್ಯದ ಪಾಲನೆ! ನೀನೀಗ ಇದ್ದಿದ್ದರೆ “ನೀನೀಗ ಇದ್ದಿದ್ದರೆ” ಎಂದು ಹೇಳುವ ಪ್ರಮೇಯವೇ ಇರುತ್ತಿರಲಿಲ್ಲ ಅಪ್ಪ!! ***********