ಕಾವ್ಯಯಾನ
ಮುಖ ಪುಸ್ತಕ ಗೌರಿ.ಚಂದ್ರಕೇಸರಿ ಮುಖ ಪುಸ್ತಕ ತೆರೆದರೆ ನಿತ್ಯ ಹತ್ತಾರು ರಿಕ್ವೆಸ್ಟುಗಳು ಕನ್ಫರ್ಮ್ ಮಾಡುವ ಎಂದರೆ ಮನಸು ಬುದ್ಧಿ ಹೇಳುತ್ತದೆ ಸ್ನೇಹದ ಅರಿಕೆ ಇಟ್ಟವರ ಕಥೆ ಹೇಳುತ್ತವೆ ಅವರ ಪೋಸ್ಟು ಲೈಕು, ಕಮೆಂಟುಗಳು ಅವೇ ಹಳಸಲು ಜೋಕುಗಳು ಫಾರ್ವರ್ಡ್ ಮೆಸೇಜುಗಳು ಯಾರೋ ಹೆಣೆದ ವಿಶ್ಶುಗಳು ಬೇಡವೆಂದರೂ ಬೆರಳು ತಾಗಿ ಬಿಡುತ್ತವೆ ಪುಟ್ಟ ನೀಲಿಯ ಬಾಕ್ಸಿಗೆ ಅಷ್ಟರಲ್ಲಿ ಬಂದು ಬೀಳುತ್ತದೆ ಒಂದು ‘ಹಾಯ್’ ನನ್ನ ಮೆಸೆಂಜರಿಗೆ ಇದು ಬೇಕಿತ್ತಾ ಎಂದು ಕೇಳುತ್ತದೆ ಮನಸು ಮೊಬೈಲ್ ಬೆಳಕು ಬೀರಿದಾಗಲೆಲ್ಲ ಗುಡ್ ಮಾರ್ನಿಂಗ್, ಗುಡ್ ನೈಟುಗಳು ಟೀ,ಕಾಫಿ,ಊಟ ಆಯಿತಾ? ಎಂಬ ಕಿರಿ ಕಿರಿಗಳು ಮನಸು ರೋಸಿ ಹೋಗುತ್ತದೆ ಮೆಸೆಂಜರಿನ ಕುತ್ತಿಗೆಯನ್ನು ಒತ್ತಿ ಹಿಡಿಯುತ್ತೇನೆ ಆಗ ಅರೆ ಸ್ಕ್ರೀನ್ ಮೇಲೆೆ ಕಸದ ಬುಟ್ಟಿ ಎಳೆದೊಯ್ದು ಅಲ್ಲಿ ನೂಕಿ ಬಿಡುತ್ತೇನೆ ಹಸಿದು ರಚ್ಚೆ ಹಿಡಿದ ಮೊಬೈಲ್ ಬಾಯಿಗೆ ಚಾರ್ಜರ್ ಸಿಕ್ಕಿಸಿ ಬಾಲ್ಕನಿಗೆ ಬಂದರೆ ಆಕಾಶದಲ್ಲಿ ರುಜು ಹಾಕುತ್ತ ಹೊರಟ ಬಾನಾಡಿಗಳು ಕುಪ್ಪಳಿಸುತ್ತಿರುವ ಅಳಿಲುಗಳು ಮಧು ಹೀರುತ್ತಿರುವ ದುಂಬಿಗಳು ಗಾಳಿಯಲ್ಲಿ ಗುಳ್ಳೆಗಳನ್ನು ಬಿಡುತ್ತ ನಿಂತ ಪುಟ್ಟಿ ಮನಸು ಆಗ ಮಗುವಾಗಿ ಬಿಡುತ್ತದೆ. *********









