ಕಾವ್ಯಯಾನ
ಬಾಬಾಸಾಹೇಬ ತಾವು ದೇವರಾದರೆ! ಡಿ. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ ನೀ ದೇವರಾದರೆ ಮತ್ತೆ ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ ನಾಲಿಗೆ ಸೀಳಿ ಬಗೆದಂತೆ ಕನಸು ಬೀಳುತ್ತದೆ. ಅದಕ್ಕಾಗಿ ಅಂಬೇಡ್ಕರ್ ದೇವರಾಗಬೇಡ,ದೊರೆಯಾಗಬೇಡ, ಗುರುವಾಗು,ಮಾರ್ಗದರ್ಶಿಯಾಗು,ನಮಗೆ ತತ್ವ ಜ್ಞಾನಿಯಾಗು ಅಂಬೇಡ್ಕರ್ ನೀ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ********





