ಕಾವ್ಯಯಾನ
ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ ಬೆಳೆಯಲಾರೆ ಬೀಗಲಾರೆ ತೂಗಲಾರೆ ತೊನೆಯಲಾರೆ ಹೂತು ಹಣ್ಣಾಗಬೇಕೆಂದವಳು ಚಾಚಿ ನೆರಳಾಗಬೇಕೆಂದವಳು ಇಂತು ನಿಂತಿದ್ದೇನೆ ವಾಮನಳಾಗಿ ಸುಡುವ ದೈತ್ಯ ನೆರಳುಗಳ ನಡುವೆ ಇದೆಂಥ ಬದುಕ ಕೊಟ್ಟಿರಿ ನನಗೆ ಓ ನೆತ್ತರು ನೀರಾದವರೆ! ಇನ್ನಿರಲಾರೆ ಕುಲಾವಿ ಕಟ್ಟಿಕೊಂಡು ಸಾವಿನ ಈ ತೊಟ್ಟಿಲಲಿ ಹಸಿರಾದರೂ ಹೊನ್ನಲ್ಲ ನೆರಳಿಲ್ಲ ಗೂಡಿಲ್ಲ ಸರ್ಕಸ್ಸಿನ ಜೋಕರನಂತೆ ನನ್ನ ಮೈಯ ಪೆಟ್ಟುಗಳೆಲ್ಲ ನಿಮ್ಮ ಮೋಜಿನ ಸರಕು ಮೈ ಚಾಚಿ ಮಲಗಲೂ ಮರ್ಜಿ ಕಾಯಬೇಕು ಪುರುಷ ಹುನ್ನಾರಗಳಿಗೆಂದು ಪ್ರಕೃತಿಯೆಷ್ಟು ಬಲಿಯಾಗಬೇಕೊ ಇನ್ನೂ ಓ ನೆತ್ತರು ನೀರಾದವರೆ ಇನ್ನಾದರೂ ಕರಗಿ ಹರಿಯಿರಿ ನಮ್ಮಂತೆ ಉಸುರಿ ಹಸುರಿ ನೆರಳಾಗಲು ಕಲಿಯಿರಿ ನಿಂತ ನೆಲವನು ಯಾರೂ ಕಸಿಯಲಾಗದು ಅದೋ ನೋಡಿ! ಬೀಳುತಿದೆ ನನ್ನ ಬೀಜ ಈ ನೆಲದಲಿ ಬಿದ್ದು ಮೊಳತೇ ತೀರುವುದು ಮುಗಿಲಗಲ ಮಿಗೆಯಗಲ ಇನ್ನು ನಿಮ್ಮ ಕಣ್ಣಿಗೆ ಬೀಳದ ಅಂತರಿಕ್ಷದ ಒಂದು ಚುಕ್ಕೆ ಮಾತ್ರ ನಾನು. *******





