ಕಾವ್ಯಯಾನ
ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು ಕನಸು ನಿಮ್ಮದೇ ಮಗು ದಿಢೀರನೇ ಬಾಗಿಲು ಒದ್ದು ಕಟ್ಟಿದ “ಉಚ್ಚೆ ” ನುಗ್ಗಿಸಿ ಹಿಂಡಿದ ನಿಮ್ಮ ಮುಖದ ಬೆವರಲ್ಲಿ ಬೆರೆಸಿ ಉಪ್ಪೊಳಗೆ ಉಪ್ಪಾದಂತೆ. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾವು ಬಡವರು ಕತ್ತಲೆಯ ಕಂಬಳಿಯನ್ನು ಹಾಸಿ ಹೊದ್ದು ಮಕ್ಕಳಿಗೂ ಹೊದಿಸಿದವರು ಖೋಟಾ ಬೌದ್ಧಿಕತೆಯ ಬಿಟ್ಟಿ ಬೆಳಕಿನಲ್ಲಿ ಹೇಳ ಹೆಸರಿಲ್ಲದೆ ಕೊಚ್ಚಿ ಹೋದವರು.. ಖುಲ್ಲಾ ಆಗಿರುವ ಅಟ್ಟದಲ್ಲಿ ಮರ್ಯಾದೆಗೆಟ್ಟು ಆಟವಾಡುತ್ತಿರುವ ಇಲಿಗಳ ಸದ್ದು ಬಂದರೂ ಬರಬಹುದು ತಿಂದು ತೇಗುವುದಕ್ಕೆ ದಾಸೀಮಯ್ಯನ ಇನ್ನೊಂದು ಬೆಕ್ಕು ಕದ್ದು… ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ… ! *******









