ಕಾವ್ಯಯಾನ
ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ ಹಿತವಾಗುತ್ತಿಲ್ಲ ನನಗೆ ಗೋರ್ಕಲ್ಲ ಮೇಲೆ ಮಳೆ ಸುರಿದು ನಿಷ್ಪ್ರಯೋಜಕವಾಗಿದೆ ಗೆಳೆಯ ಐಹಿಕದ ಯಾವುದೂ ಬೇಡ ದೂರದ ಬೆಳಕೊಂದ ಅರಸಿ ಹೊರಟಿಹೆ ಈಗ ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಿಷ್ಟದ ಬದುಕು ಸನಿಹವಾಗಿದೆ ಗೆಳೆಯ ಹೋಗಬೇಕೆಂದಿರುವೆ ಜಾತಿಮತ ಲಿಂಗಭೇದ ತೂರಿ ನೀತಿನಿಯಮಗಳಾಚೆ ಸ್ವಚ್ಛಂದವಾಗಿ ನಿತ್ಯ ತೇಜದಿ ಪ್ರಜ್ವಲಿಸುವ ತಾರೆಯಾಗುವ ಹಂಬಲವಾಗಿದೆ ಗೆಳೆಯ *******









